ಭಾನುವಾರ, ಅಕ್ಟೋಬರ್ 20, 2019
25 °C
ಐದು ಸ್ತಬ್ಧಚಿತ್ರಗಳು, 20 ಕಲಾ ತಂಡಗಳ ಭಾಗಿ, ಕಣ್ತುಂಬಿಕೊಂಡ ಜನ

ಕಳೆ ಕಟ್ಟಿದ ಮೆರವಣಿಗೆ

Published:
Updated:
Prajavani

ಚಾಮರಾಜನಗರ: ಜಿಲ್ಲಾ ದಸರಾ ಮಹೋತ್ಸವದ ಅಧಿಕೃತ ಉದ್ಘಾಟನೆಗೂ ಮುನ್ನ ನಡೆದ ಮೆರವಣಿಗೆ ಜನರನ್ನು ಆಕರ್ಷಿಸಿತು. 

20 ಕಲಾ ತಂಡಗಳು, ಐದು ಸ್ತಬ್ಧಚಿತ್ರಗಳು ಬೃಹತ್‌ ಮೆರವಣಿಗೆಗೆ ಮೆರುಗು ನೀಡಿದವು. ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಸಿ.ಎಸ್‌.ನಿರಂಜನ್‌ಕುಮಾರ್‌ ಅವರು ಮೆರವಣಿಗೆಯಲ್ಲೇ ಸಾಗಿ ಗಮನಸೆಳೆದರು. 

ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಇಬ್ಬರು ಶಾಸಕರು, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಎಸ್‌.ಮಹೇಶ್‌, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎಚ್‌.ನಾರಾಯಣರಾವ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. 

ಅದ್ಧೂರಿ ಮೆರವಣಿಗೆ: ಗೊರವರ ಕುಣಿತ, ಬೀಸು ಕಂಸಾಳೆ, ಟಿಬೆನ್ನರ ನೃತ್ಯ, ದೊಣ್ಣೆ ವರಸೆ, ನಂದಿ ಕಂಬ, ಹುಲಿವೇಷ, ಗೊರುಕನ ನೃತ್ಯ, ನಾದಸ್ವರ, ನಗಾರಿ, ವೀರಗಾಸೆ, ಡೊಳ್ಳು ಕುಣಿತ, ಸುಗ್ಗಿ ಕುಣಿತ, ಗುಬ್ಬಿಹಾಲೆ ನೃತ್ಯ, ಸೋಮನ ಕುಣಿತ, ಕೊಂಬು ಕಹಳೆ, ತಮಟೆ, ಗಾರುಡಿಗೊಂಬೆ ಸೇರಿದಂತೆ 20 ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಗಮನಸೆಳೆದವು. 

ಜಿಲ್ಲಾಡಳಿತ ಭವನದಿಂದ ಹೊರಟ ಮೆರವಣಿಗೆ, ಸಂತೇಮರಹಳ್ಳಿವೃತ್ತ, ಪೇಟೆ ಬೀದಿ, ಗುಂಡ್ಲುಪೇಟೆ ವೃತ್ತ, ಭುವನೇಶ್ವರಿ ವೃತ್ತದ ಮೂಲಕ ಚಾಮರಾಜೇಶ್ವರ ದೇವಸ್ಥಾನ ತಲುಪಿತು. ಮೆರವಣಿಗೆಯುದ್ಧಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಕಟ್ಟಡಗಳಲ್ಲಿ ನಿಂತ ಜನರು ಮೆರವಣಿಗೆಯನ್ನು ಕಣ್ತುಂಬಿಕೊಂಡರು. 

ಕಳೆದ ವರ್ಷದ ಮೆರವಣಿಗೆಯಲ್ಲಿ 13 ಕಲಾತಂಡಗಳು ಭಾಗವಹಿಸಿದ್ದವು. ಸ್ತಬ್ಧಚಿತ್ರಗಳು ಇರಲಿಲ್ಲ. ಈ ಬಾರಿ ಜಿಲ್ಲಾಡಳಿತ ಹೆಚ್ಚು ಶ್ರಮಹಾಕಿ ಹೆಚ್ಚಿನ ಕಲಾತಂಡಗಳು ಭಾಗವಹಿಸುವಂತೆ ಮಾಡಿತ್ತು.

ಸ್ತಬ್ಧಚಿತ್ರಗಳ ಮೂಲಕ ಜಾಗೃತಿ

ಜಿಲ್ಲಾ ಪಂಚಾಯಿತಿ, ನಗರಸಭೆ, ಕೃಷಿ ಸೇರಿದಂತೆ ರೈತರಿಗೆ ಸಂಬಂಧಿಸಿದ ವಿವಿಧ ಇಲಾಖೆಗಳು, ಅರಣ್ಯ ಇಲಾಖೆ (ಮಲೆಮಹದೇಶ್ವರ ವನ್ಯಜೀವಿ ವಿಭಾಗ) ಮತ್ತು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ (ಸೆಸ್ಕ್‌) ಐದು ಸ್ತಬ್ಧಚಿತ್ರಗಳು ಮೆರವಣಿಗೆಯನ್ನು ಇನ್ನಷ್ಟು ಆಕರ್ಷಕವನ್ನಾಗಿಸಿದವು. 

ಜಿಲ್ಲಾ ಪಂಚಾಯಿತಿಯ ಸ್ತಬ್ಧಚಿತ್ರ ಪ್ಲಾಸ್ಟಿಕ್‌ ನಿಷೇಧದ ಸಂದೇಶ ಸಾರಿದರೆ, ನಗರಸಭೆಯು ತನ್ನ ಸ್ತಬ್ಧಚಿತ್ರದಲ್ಲಿ ಒಳಚರಂಡಿ ಸಂಪರ್ಕ ಮಾಡಿಸುವ ಬಗ್ಗೆ ಜಾಗೃತಿ ಮೂಡಿಸಿತು. ಕೃಷಿ, ಪಶುಸಂಗೋಪನೆ, ತೋಟಗಾರಿಕೆ ಮತ್ತು ಮೀನುಗಾರಿಕೆ ಇಲಾಖೆಗಳು ಜಂಟಿಯಾಗಿ ಒಂದು ಸ್ತಬ್ಧಚಿತ್ರವನ್ನು ನಿರ್ಮಿಸಿದ್ದು, ರೈತ ದಸರಾ ಹಾಗೂ ಇಲಾಖೆಗಳ ಕಾರ್ಯಕ್ರಮ‌ಗಳ ಮಾಹಿತಿಗಳನ್ನು ನೀಡಿತ್ತು. ಜಾಗತಿಕ ತಾಪಮಾನ ಏರಿಕೆಯಿಂದ ಆಗುತ್ತಿರುವ ತೊಂದರೆ ಹಾಗೂ ಅದರ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅಗತ್ಯದ ಬಗ್ಗೆ ಅರಣ್ಯ ಇಲಾಖೆ ತನ್ನ ಸ್ತಬ್ಧಚಿತ್ರದಲ್ಲಿ ಸಂದೇಶ ರವಾನಿಸಿತು. ಸೆಸ್ಕ್‌ನ ಜಾಗೃತಿ ರಥವು ಒಡಿಶಾದಲ್ಲಿ ಚಂಡಮಾರುತ ಅಪ್ಪಳಿಸಿದ ನಂತರ ಸಿಬ್ಬಂದಿ ನಡೆಸಿದ ಪರಿಹಾರ ಕಾರ್ಯದ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಹಾಗೂ ಇಲಾಖೆಯ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿತು. 

ಸ್ತಬ್ಧಚಿತ್ರಗಳ ಜೊತೆಗೆ ಆಯಾ ಇಲಾಖೆಗಳ ಸಿಬ್ಬಂದಿಯೂ ಹೆಜ್ಜೆ ಹಾಕಿದರು. 

Post Comments (+)