ಶನಿವಾರ, ಆಗಸ್ಟ್ 24, 2019
23 °C
ಪರಿಹಾರ ಕೇಂದ್ರಕ್ಕೆ ಭೇಟಿ: ಆಹಾರ, ತರಕಾರಿ, ಧಾನ್ಯಗಳ ಪರಿಶೀಲನೆ

ನೆರೆಪೀಡಿತ ಗ್ರಾಮಗಳಿಗೆ ಕಠಾರಿಯಾ ಭೇಟಿ

Published:
Updated:
Prajavani

ಕೊಳ್ಳೇಗಾಲ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಠಾರಿಯಾ ಅವರು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹಾಗೂ ಇತರ ಅಧಿಕಾರಿಗಳೊಂದಿಗೆ ತಾಲ್ಲೂಕಿನ ಪ್ರವಾಹಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಎಡಕುರಿಯಾ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಪ್ರವಾಹ ಪರಿಸ್ಥಿತಿ ಅವಲೋಕಿಸಿದರು. ಜಲಾವೃತಗೊಂಡಿರುವ ಗ್ರಾಮ ಹಾಗೂ ಹಾನಿಗೆ ಒಳಗಾಗಿರುವ ಬೆಳೆ ವೀಕ್ಷಿಸಿದರು. ಸತ್ತೇಗಾಲದ ಅಗ್ರಹಾರದಲ್ಲಿ ಸಂತ್ರಸ್ತರಿಗಾಗಿ ತೆರೆಯಲಾಗಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಕಲ್ಪಿಸಿರುವ ಸೌಲಭ್ಯಗಳನ್ನು ಪರಿಶೀಲಿಸಿದರು.

ಹಳೆ ಅಣಗಳ್ಳಿ ಗ್ರಾಮಕ್ಕೆ  ಕೊಪ್ಪರಿಕೆ ಮೂಲಕ ಅಧಿಕಾರಿಗಳೊಂದಿಗೆ ತೆರಳಿದ ಉಸ್ತುವಾರಿ ಕಾರ್ಯದರ್ಶಿಯವರು, ನೆರೆ ಸ್ಥಿತಿಯನ್ನು ಪರಿಶೀಲನೆ ನಡೆಸಿದರು. ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. 

‘ಹಾನಿಗೆ ಒಳಗಾಗಿರುವ ಮನೆ, ಬೆಳೆ ಪರಿಹಾರವನ್ನು ಹಾನಿ ಪ್ರಮಾಣಕ್ಕೆ ಅನುಗುಣವಾಗಿ ನೀಡಬೇಕು. ಪರಿಹಾರ ವಿತರಣೆ ಕಾರ್ಯ ವಿಳಂಬವಾಗಬಾರದು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ನಷ್ಟ ಅನುಭವಿಸಿದವರಿಗೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆಯನ್ನು ಅವರು ನೀಡಿದರು.

ಕೊಳ್ಳೇಗಾಲ ಪಟ್ಟಣದ ಬಿಸಿಎಂ ಹಾಸ್ಟೆಲ್‌ನಲ್ಲಿ ತೆರೆಯಲಾಗಿರುವ ನೆರೆ ಸಂತ್ರಸ್ತ ಪರಿಹಾರ ಕೇಂದ್ರಕ್ಕೆ ಭೇಟಿ ಕೊಟ್ಟು ಮಧ್ಯಾಹ್ನದ ಊಟಕ್ಕಾಗಿ ಸಿದ್ಧಪಡಿಸಲಾಗಿದ್ದ ಆಹಾರವನ್ನು ಪರಿಶೀಲಿಸಿದರು. ಅಡುಗೆ ತಯಾರಿಗಾಗಿ ದಾಸ್ತಾನು ಮಾಡಿರುವ ತರಕಾರಿ, ಆಹಾರಧಾನ್ಯಗಳನ್ನು ಪರಿಶೀಲಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಲತಾಕುಮಾರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧಿಕಾರಿ ಅನಿತಾ ಹದ್ದಣ್ಣನವರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್ ಇತರರು ಸೇರಿದಂತೆ ಹಲವರು ಇದ್ದರು.

Post Comments (+)