ಶನಿವಾರ, ಅಕ್ಟೋಬರ್ 19, 2019
27 °C
ಮೂರನೇ ದಿನವೂ ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು

ಪ್ರೇಕ್ಷಕರ ಮನಸೆಳೆದ ಮಿಮಿಕ್ರಿ

Published:
Updated:

ಚಾಮರಾಜನಗರ: ದಸರಾ ಅಂಗವಾಗಿ ಜಿಲ್ಲೆಯ ಮಿಮಿಕ್ರಿ ಕಲಾವಿದ ಗೋಪಿ ಹಾಗೂ ತಂಡ ನೀಡಿದ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.

ತಂಡದ ಸದಸ್ಯರು ಹಾಸ್ಯ, ಹಾಡು, ಮ್ಯಾಜಿಕ್, ಸಾಹಸ ಪ್ರದರ್ಶನವನ್ನೂ ಮಾಡಿದರು.

ಖಾಸಗಿ ಎಫ್ಎಂ ಚಾನೆಲ್ ಒಂದರಲ್ಲಿ ಪ್ರಸಾರವಾಗುವ ನಟರಾದ ಧೀರೇಂದ್ರ ಗೋಪಾಲ್, ಪ್ರಭಾಕರ್ ಹಾಗೂ ಸುಧೀರ್ ಅವರ ನಡುವಿನ ಸಂಭಾಷಣೆಯನ್ನು ಅನುಕರಿಸುತ್ತಾ ಮಾತು ಆರಂಭಿಸಿದ ಗೋಪಿ ಅವರು‌ 30 ನಿಮಿಷಗಳ ಕಾಲ ಕನ್ನಡ ಚಿತ್ರರಂಗದ ಖ್ಯಾತ ನಟರು ಹಾಗೂ ರಾಜಕೀಯ ಮುಖಂಡರ ಧ್ವನಿಗಳಲ್ಲಿ ಮಾತನಾಡಿ ಪ್ರೇಕ್ಷಕರನ್ನು ರಂಜಿಸಿದರು.

ಹಿರಿಯ ನಟರಾದ ಬಾಲಕೃಷ್ಣ, ಎನ್.ಎಸ್.ರಾವ್, ದೊಡ್ಡಣ್ಣ, ಟೆನ್ನಿಸ್ ಕೃಷ್ಣ, ಅಂಬರೀಷ್, ಡಾ.ವಿಷ್ಣುವರ್ಧನ್, ಡಾ.ರಾಜಕುಮಾರ್, ಶಂಕರ್ ನಾಗ್, ಶಿವರಾಜ್ ಕುಮಾರ್, ಉಪೇಂದ್ರ, ದರ್ಶನ್, ಸುದೀಪ್ ಹಾಗೂ ಯುವ ನಟ ಯಶ್ ಅವರ ಧ್ವನಿಗಳನ್ನು ಮಿಮಿಕ್ರಿ ಮಾಡಿ ಚಪ್ಪಾಳೆ ಗಿಟ್ಟಿಸಿದರು.

ವಿಷ್ಣುವರ್ಧನ್ ಧ್ವನಿಯಲ್ಲಿ ರೈತರ ಸಮಸ್ಯೆಗಳನ್ನು ಬಿಚ್ಚಿಟ್ಟ ಅವರು, ರೈತರ ಕಷ್ಟಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದರು.

ರಾಜಕುಮಾರ್ ಅವರ ಧ್ವನಿಯಲ್ಲಿ ಹುಟ್ಟೂರಿನ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದರು.

ನಗೆಗಡಲಲ್ಲಿ ತೇಲಿಸಿದ ರಾಜಕಾರಣಿಗಳ ಧ್ವನಿ: ಗೋಪಿ ಅವರು ರಾಜಕಾರಣಿಗಳ ಧ್ವನಿಯನ್ನು ಅನುಕರಿಸಿದ್ದು ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಯಿತು.

ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಯಡಿಯೂರಪ್ಪ, ದೇವೇಗೌಡ, ವಾಟಾಳ್ ನಾಗರಾಜ್ ಹಾಗೂ ನರೇಂದ್ರ ಮೋದಿ ಅವರ ಧ್ವನಿಗಳನ್ನು ಹೊರ ಹೊಮ್ಮಿಸುತ್ತಿದ್ದರೆ, ಪ್ರೇಕ್ಷಕರು ಚಪ್ಪಾಳೆಯ ಮಳೆಯನ್ನೇ ಹರಿಸಿದರು.

ಹಾಸ್ಯದ ಹೊನಲು: ತಂಡದ ಸದಸ್ಯ ಮೈಸೂರು ಆನಂದ್ ಅವರು ಹಾಸ್ಯದ ಹೊನಲನ್ನೇ ಹರಿಸಿದರು.

ರಾಜ್ಯದ ವಿವಿಧ ಭಾಗಗಳಲ್ಲಿರುವ ಭಾಷಾ ಶೈಲಿ, ಉಚ್ಚರಣೆಯನ್ನು ಪ್ರಸ್ತಾಪಿಸಿದ ಅವರು, ಮೈಸೂರು ಹಾಗೂ ದಕ್ಷಿಣ ಕನ್ನಡದ ಶೈಲಿಯಲ್ಲಿ ಮಾತನಾಡಿದರು. ಅಲ್ಲದೆ, ಹಿಂದಿನ ಸಿನಿಮಾ ಹಾಡು ಹಾಗೂ ಇಂದಿನ ಹಾಡುಗಳನ್ನು ವಿಡಂಬನಾತ್ಮಕವಾಗಿ ಹೋಲಿಕೆ ಮಾಡಿ ಜನರನ್ನು ನಗಿಸಿದರು. ಜಾನಪದ ಸಂಗೀತ ಹಾಗೂ ಆಧುನಿಕ ಸಂಗೀತ ಕೂಡ ಅವರ ಹಾಸ್ಯಕ್ಕೆ  ವಸ್ತುವಾಯಿತು.

ತಂಡದ ಮತ್ತೊಬ್ಬ ಸದಸ್ಯ ಮುಂಬೈನ ಬಲರಾಮ್ ಅವರು ಅಡಿಗಿಂತಲೂ ಉದ್ದದ ಎರಡು ಕತ್ತಿಗಳನ್ನು ಬಾಯೊಳಕ್ಕೆ ಹಾಕಿ ನೆರೆದಿದ್ದವರ ಮೈನವಿರೇಳಿಸಿದರು. ಮತ್ತೊಬ್ಬ ಸದಸ್ಯ ಜಗ್ಗು ಅವರು ಜಾದು ಪ್ರದರ್ಶಿಸಿದರು. ಸ್ಥಳೀಯ ಕಲಾವಿದ ಉಮ್ಮತ್ತೂರು ಬಸವರಾಜ್ ಅವರು ಕಾರ್ಯಕ್ರಮ ನಿರೂಪಿಸಿದರು.

ಜನಮೆಚ್ಚಿದ ನೃತ್ಯಗಳು
ಮೂರನೇ ದಿನವೂ ಸ್ಥಳೀಯ ಕಲಾವಿದರು ಪ್ರದರ್ಶಿಸಿದ ನೃತ್ಯ, ಗಾಯನ, ನಾಟಕಗಳು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ನೃತ್ಯಗಳು, ಕೂಡ ಪ್ರೇಕ್ಷಕರ ಗಮನಸೆಳೆಯಿತು. 

Post Comments (+)