ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಕೇಂದ್ರ ಬಜೆಟ್‌ನತ್ತ ಅಡಿಕೆ ಬೆಳೆಗಾರರ ಚಿತ್ತ

ಪ್ರಸ್ತುತ ಧಾರಣೆ ಕ್ವಿಂಟಲ್‌ಗೆ ₹35 ಸಾವಿರದಿಂದ ₹37 ಸಾವಿರ
Last Updated 3 ಜುಲೈ 2019, 10:37 IST
ಅಕ್ಷರ ಗಾತ್ರ

ಶಿವಮೊಗ್ಗ: ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಯ ಧಾರಣೆ ಹಲವು ವರ್ಷಗಳಿಂದ ಏರಿಳಿತದಲ್ಲೇ ಸಾಗುತ್ತಿದೆ. ಸ್ಥಿರತೆಗೆ ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಅನುಕೂಲಕರ ನಿರ್ಧಾರ ಪ್ರಕಟಿಸಬಹುದು ಎಂಬ ನಿರೀಕ್ಷೆ ಬೆಳೆಗಾರರಲ್ಲಿ ಗರಿಗೆದರಿದೆ.

ಐದು ವರ್ಷಗಳ ಹಿಂದೆ ಮಲೆನಾಡಿನ ಗುಣಮಟ್ಟದ ಕೆಂಪಡಿಕೆ ಧಾರಣೆ ಕ್ವಿಂಟಲ್‌ಗೆ ₹1 ಲಕ್ಷದ ಗಡಿ ಮುಟ್ಟಿತ್ತು. ಹಿಂದೆಂದೂ ಕಾಣದ ಇಂತಹ ಏರಿಕೆ ಮೇಲು ನೋಟಕ್ಕೆ ರೈತರ ಬದುಕು ಹಸನು ಮಾಡಿದೆ ಎಂದುಕೊಂಡರೂ, ಧಾರಣೆ ಹೆಚ್ಚಾಗುವ ಕಾಲಕ್ಕೆ ಶೇ 90ರಷ್ಟು ರೈತರು ಅಡಿಕೆ ಮಾರಾಟ ಮಾಡಿದ್ದರು. ಇದರಿಂದ ನಿಜವಾದ ಲಾಭ ದೊರೆತಿದ್ದು ಮಧ್ಯವರ್ತಿಗಳಿಗೆ. ಐದಾರು ತಿಂಗಳು ಹೀಗೆ ಹಾವು–ಏಣಿ ಆಟವಾಡುತ್ತಾ ಮತ್ತೆ ಧಾರಣೆ ಕೆಳಗಿಳಿದಿತ್ತು.

ಅಡಿಕೆ ಧಾರಣೆ ₹1 ಲಕ್ಷ ಮುಟ್ಟಿದ ನಂತರ ಎಚ್ಚೆತ್ತುಕೊಂಡ ಬೆಳೆಗಾರರು ಮೊದಲಿನಂತೆ ಆಯಾ ವರ್ಷವೇ ಅಡಿಕೆ ಮಾರಾಟ ಮಾಡದೆ ಸಂಗ್ರಹಿಸಿಟ್ಟುಕೊಂಡು ದರ ಏರಿಕೆ ಸಮಯದಲ್ಲಿ ಮಾರಾಟ ಮಾಡಲು ತೊಡಗಿದ್ದಾರೆ. ಆದರೆ, ಅಡಿಕೆ ಧಾರಣೆಯ ಅನಿಶ್ವಿತತೆ ಪರಿಣಾಮ ಬಹುತೇಕ ರೈತರು ಎರಡು ಮೂರು ವರ್ಷವಾದರೂ ಅಡಿಕೆ ಮಾರಾಟ ಮಾಡುತ್ತಿಲ್ಲ. ಪ್ರಸ್ತುತ ಧಾರಣೆ ಕ್ವಿಂಟಲ್‌ಗೆ ₹35 ಸಾವಿರದಿಂದ ₹37 ಸಾವಿರ ಮಧ್ಯೆ ತೂಗಾಡುತ್ತಿದೆ.

ಬೆಂಬಲ ಬೆಲೆ ಘೋಷಣೆ:

ಅಡಿಕೆ ಬೆಲೆ ಗಗನಕ್ಕೇರಿ, ಪಾತಾಳ ಕಂಡ ನಂತರ ಬೆಳೆಗಾರರ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಮೂರು ವರ್ಷಗಳ ಹಿಂದೆ ಅಡಿಕೆಗೆ ಬೆಂಬಲ ಬೆಲೆ ಘೋಷಿಸಿತ್ತು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಳೆಯುವ ಅಡಿಕೆಯನ್ನು ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆ ಅಡಿ ಖರೀದಿಸಲು ಹಸಿರು ನಿಶಾನೆ ತೋರಿತ್ತು. ಮಧ್ಯವರ್ತಿಗಳಿಗೆ ಅವಕಾಶ ನೀಡದೇ ರಾಜ್ಯದ ಅಡಿಕೆ ಸಹಕಾರ ಸಂಘಗಳ ಮೂಲಕ ನೇರವಾಗಿ ಅಡಿಕೆ ಖರೀದಿಸಲು ಅವಕಾಶ ಕಲ್ಪಿಸಲಾಗಿತ್ತು. ರಾಜ್ಯ ಸರ್ಕಾರಕ್ಕೆ ಖರೀದಿಯ ಮೇಲುಸ್ತುವಾರಿ ನೀಡಲಾಗಿತ್ತು. ಕೆಂಪು ಅಡಿಕೆಗೆ ಕ್ವಿಂಟಲ್‌ಗೆ ₹27 ಸಾವಿರ ಹಾಗೂ ಚಾಲಿ ಅಡಿಕೆಗೆ ₹25,100 ಬೆಂಬಲ ಬೆಲೆ ನಿಗದಿ ಮಾಡಿತ್ತು.

ಅಡಿಕೆ ಖರೀದಿಗೆ ಕಾಲಮಿತಿ, ಖರೀದಿ ಮಿತಿ 40 ಸಾವಿರ ಟನ್‌ಗೆ ನಿಗದಿ ಮಾಡಿದ್ದ ಪರಿಣಾಮ ಅಡಿಕೆ ಮಾರಾಟ ಸಹಕಾರ ಸಂಘಗಳು ಉತ್ಸಾಹ ತೋರಲಿಲ್ಲ. ರಾಜ್ಯ ಸರ್ಕಾರವೂ ತನ್ನ ಪಾಲಿನ ಹಣ ಬಿಡುಗಡೆ ಮಾಡಲಿಲ್ಲ. ಇದರಿಂದ ಬೆಂಬಲ ಬೆಲೆ ಯೋಜನೆ ನನೆಗಿದಿಗೆ ಬಿದ್ದಿತ್ತು. ಕೊನೆಗೆ ಬೆಂಬಲ ಬೆಲೆಗಿಂತ ಧಾರಣೆ ಮೇಲೇರಿದ ಪರಿಣಾಮ ಬೆಳೆಗಾರರೂ ಸುಮ್ಮನಾಗಿದ್ದರು.

ದೇಶದಲ್ಲಿ ಬೆಳೆಯುವ ಅಡಿಕೆಯಲ್ಲಿ ರಾಜ್ಯದ ಪ್ರಮಾಣ ಶೇ 60ರಷ್ಟಿದೆ. ರಾಜ್ಯದಲ್ಲಿ ಪ್ರತಿ ವರ್ಷ 4 ಲಕ್ಷ ಟನ್‌ ಅಡಿಕೆ ಉತ್ಪಾದಿಸಲಾಗುತ್ತಿದೆ. ಕೇರಳದಲ್ಲಿ 30–50 ಸಾವಿರ ಟನ್‌, ಗೋವಾದಲ್ಲಿ 6–8 ಸಾವಿರ ಟನ್‌, ಅಸ್ಸಾಂನಲ್ಲಿ 20–25 ಸಾವಿರ ಟನ್‌ ಹಾಗೂ ಮಹಾರಾಷ್ಟ್ರ ಸೇರಿದಂತೆ ಇತರೆ ಕೆಲವು ರಾಜ್ಯಗಳಲ್ಲಿ ಅಲ್ಪ ಪ್ರಮಾಣದ ಅಡಿಕೆ ಬೆಳೆಯಲಾಗುತ್ತದೆ.

ರಾಜ್ಯದಲ್ಲಿ ಶಿವಮೊಗ್ಗ, ದಾವಣಗೆರೆ, ಉತ್ತರ ಕನ್ನಡದಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯಲಾಗುತ್ತದೆ. ಉಳಿದಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಕೆಲ ಭಾಗಗಳಲ್ಲಿ ಅಡಿಕೆ ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಬೆಳೆಯುವ ಶೇ 60ಕ್ಕೂ ಹೆಚ್ಚು ಅಡಿಕೆ ದಾವಣಗೆರೆ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಬೆಳೆಯಲಾಗುತ್ತದೆ.

ಶಿವಮೊಗ್ಗದ ಮ್ಯಾಮ್‌ಕೋಸ್‌ನಲ್ಲೇ ಪ್ರತಿ ವರ್ಷ 18ರಿಂದ 20 ಸಾವಿರ ಟನ್‌ ಅಡಿಕೆ ಖರೀದಿಸಲಾಗುತ್ತದೆ. ಇತರೆ ಸಂಸ್ಥೆಗಳೂ ಸಾಕಷ್ಟು ಪ್ರಮಾಣದ ಅಡಿಕೆ ಖರೀದಿಸುತ್ತವೆ.

‘ಅಡಿಕೆಗೆ ನಿಗದಿ ಮಾಡುವ ಬೆಂಬಲ ಬೆಲೆ ಕ್ವಿಂಟಲ್‌ಗೆ ಕನಿಷ್ಠ ₹50 ಸಾವಿರ ಇರಬೇಕು. ಅಕ್ಟೋಬರ್‌ನಿಂದ ಮಾರ್ಚ್‌ವರೆಗೂ ಖರೀದಿ ಅವಧಿ ನಿಗದಿ ಮಾಡಬೇಕು. ಬರಗಾಲದ ಈ ಸನ್ನಿವೇಶದಲ್ಲಿ ತೋಟ ಉಳಸಿಕೊಳ್ಳಲು ಜನರು ಹರಸಾಹಸ ಪಡುತ್ತಿದ್ದಾರೆ. ಸಾಕಷ್ಟು ಹಣ ವೆಚ್ಚ ಮಾಡುತ್ತಿದ್ದಾರೆ. ಜತೆಗೆ, ಹಲವು ರೋಗಳಿಗೆ ಸಿಲುಕಿ ಅಡಿಕೆ ಆವಕ ಕಡಿಮೆಯಾಗಿದೆ. ಇದರಿಂದ ಅಡಿಕೆ ಬೆಳೆಗಾರರು ನಷ್ಟಕ್ಕೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಸಂರಕ್ಷಣೆಗೆ ಧಾವಿಸಬೇಕು’ ಎನ್ನುತ್ತಾರೆ ರೈತ ಮುಖಂಡ ಎಚ್‌.ಆರ್.ಬಸವರಾಜಪ್ಪ.

ಅಡಿಕೆ ಧಾರಣೆ ಕ್ವಿಂಟಲ್‌ಗೆ ₹ 1 ಲಕ್ಷ ಮುಟ್ಟಿ ಬಂದ ನಂತರ ಅಡಿಕೆ ಬೆಳೆ ಕ್ಷೇತ್ರ ಗಣನೀಯವಾಗಿ ಹೆಚ್ಚಳವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 5 ವರ್ಷಗಳ ಹಿಂದೆ 26 ಸಾವಿರ ಹೆಕ್ಟೇರ್ ಇದ್ದ ಅಡಿಕೆ ಬೆಳೆ ಕ್ಷೇತ್ರ ಇಂದು 80 ಸಾವಿರ ಹೆಕ್ಟೇರ್ ದಾಟಿದೆ. ದಟ್ಟ ಅರಣ್ಯ ಪ್ರದೇಶಗಳ ಮಧ್ಯದಲ್ಲೂ ಹೊಸ ಅಡಿಕೆ ಮರಗಳು ತಲೆಎತ್ತಿವೆ. ಜಲಮೂಲಗಳೇ ಇಲ್ಲದ ಗುಡ್ಡಗಳಲ್ಲೂ ಅಂತರ್ಜಲದ ಮೇಲೆ ಅವಲಂಬಿತವಾಗಿ ಅಡಿಕೆ ಸಸಿಗಳನ್ನು ಬೆಳೆಸಲಾಗಿದೆ. ನೆರೆಯ ದಾವಣಗೆರೆ ಜಿಲ್ಲೆಯಲ್ಲಿ 48 ಸಾವಿರ ಹೆಕ್ಟೇರ್‌ ಅಡಿಕೆ ಪ್ರದೇಶವಿದೆ. ಚನ್ನಗಿರಿ ತಾಲ್ಲೂಕಿನಲ್ಲೇ 36 ಸಾವಿರ ಹೆಕ್ಟೇರ್ ಅಡಿಕೆ ಕ್ಷೇತ್ರವಿದೆ. ಈ ಭಾಗದ ಬಹುತೇಕ ತೋಟಗಳು ಕೊಳವೆಬಾವಿಯ ಅಂತರ್ಜಲ ಅವಲಂಬಿಸಿವೆ.

ಆಮದು ಸುಂಕ ಹೆಚ್ಚಳದ ನಿರೀಕ್ಷೆ:

ಹಿಂದೆ ಕೇಂದ್ರ ಸರ್ಕಾರ ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಸುಪ್ರಿಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿತ್ತು. ಅದನ್ನು ಹಿಂದಕ್ಕೆ ಪಡೆಯುತ್ತದೆ. ವಿದೇಶದ ಕಡಿಮೆ ಗುಣಮಟ್ಟದ ಅಗ್ಗದ ಬೆಲೆಯ ಅಡಿಕೆ ಭಾರತಕ್ಕೆ ತರುವುದಕ್ಕೆ ಕಡಿವಾಣ ಹಾಕಬೇಕಿ, ಆಮದು ಸುಂಕ ಹೆಚ್ಚಿಸುತ್ತದೆ ಎನ್ನುವ ನಂಬಿಕೆ ಅಡಿಕೆ ಬೆಳೆಗಾರರು ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT