ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧ ಬಳಿಕ 1.5 ಟನ್ ಪ್ಲಾಸ್ಟಿಕ್ ವಶ

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ಪ್ಲಾಸ್ಟಿಕ್‌ಗೆ ಬೇಡಿಕೆ
Last Updated 30 ಅಕ್ಟೋಬರ್ 2019, 15:56 IST
ಅಕ್ಷರ ಗಾತ್ರ

ವಿಜಯಪುರ: ಒಮ್ಮೆ ಬಳಸಿ ಬಿಸಾಕುವ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಕೇಂದ್ರ ಸರ್ಕಾರ ಅ.2ರ ಗಾಂಧಿ ಜಯಂತಿಯಿಂದ ನಿಷೇಧಿಸಿದ್ದು, ಅಲ್ಲಿಂದ ಇಲ್ಲಿಯವರೆಗೆ ನಗರದಲ್ಲಿ 1.5 ಟನ್ ಪ್ಲಾಸ್ಟಿಕ್ ಅನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

2016ರಿಂದ ಇಲ್ಲಿಯವರೆಗೆ ಒಟ್ಟು 15 ಟನ್ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಶೇ 80ರಷ್ಟು ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳಿದ್ದರೆ, ಇನ್ನುಳಿದ ಶೇ 20ರಷ್ಟು ಚಮಚ, ಚಹಾ ಕಪ್, ಪ್ಲೇಟ್‌ಗಳು ಇವೆ.
ವಶಕ್ಕೆ ಪಡೆದಿರುವ ಪ್ಲಾಸ್ಟಿಕ್ ಪೈಕಿ 5 ಟನ್ ಪ್ಲಾಸ್ಟಿಕ್ ಅನ್ನು ಜೆ.ಕೆ ಸಿಮೆಂಟ್ ಕಾರ್ಖಾನೆ ತೆಗೆದುಕೊಂಡು ಹೋಗಿದೆ. ಇದಕ್ಕೆ ಪಾಲಿಕೆಗೆ ಹಣವನ್ನು ಭರಿಸಿಲ್ಲವಾದರೂ, ಸಾಗಾಣಿಕೆ ವೆಚ್ಚವನ್ನು ತಾನೇ ಭರಿಸಿದೆ. ಸದ್ಯ ಪಾಲಿಕೆ ಬಳಿ ಇನ್ನೂ 10 ಟನ್ ಪ್ಲಾಸ್ಟಿಕ್ ಇದ್ದು, ಇದನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್‌ಎಚ್‌ಎಐ)ನವರು ಪಡೆಯಲು
ಮುಂದಾಗಿದ್ದಾರೆ.

‘ಅ.2ರಿಂದ ಇಲ್ಲಿಯವರೆಗೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ದಾಳಿ ಮಾಡಲಿಲ್ಲ. ಈ ಮೊದಲಿನ ಬಳಕೆಗೆ ಹೋಲಿಸಿದರೆ ಶೇ 75 ರಷ್ಟು ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳ ಹಾವಳಿ ಕಡಿಮೆಯಾಗಿದೆ. ಆದಾಗ್ಯೂ, ಬೇಕರಿ, ಹೋಟೆಲ್‌, ಕೆಲವು ಅಂಗಡಿಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಇಲ್ಲೂ ಕೂಡ ದಾಳಿ ನಡೆಸಿ, ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಳ್ಳಲಾಗುವುದು. ಚಿಲ್ಲರೆ ವ್ಯಾಪಾರಿಗಳಿಗೆ ತಲಾ ₹500, ₹1,000ದಂತೆ ಇದುವರೆಗೆ ₹10 ಸಾವಿರ ದಂಡ ವಿಧಿಸಲಾಗಿದೆ. 2016ರಿಂದ ಇಲ್ಲಿಯವರೆಗೆ ₹5 ಲಕ್ಷ ದಂಡ ವಿಧಿಸಲಾಗಿದೆ’ ಎಂದುಪಾಲಿಕೆ ಪರಿಸರ ಎಂಜಿನಿಯರ್ ಜಗದೀಶ ಆರ್. ‘ಪ್ರಜಾವಾಣಿ’ಗೆ ತಿಳಿಸಿದರು.

‘ಚಹಾ ಕುಡಿಯಲು ಬಳಸುತ್ತಿದ್ದ ಪ್ಲಾಸ್ಟಿಕ್ ಕಪ್‌ಗಳ ಬಳಕೆಗೆ ಕಡಿವಾಣ ಬಿದ್ದಿದ್ದು, ಎಲ್ಲರೂ ಪೇಪರ್ ಕಪ್‌ಗಳನ್ನು ಬಳಸುತ್ತಿದ್ದಾರೆ. ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಕೆಲವೆಡೆ ಪೇಪರ್ ಬ್ಯಾಗ್‌, ಬಟ್ಟೆ ಚೀಲಗಳನ್ನು ಬಳಸುತ್ತಿದ್ದಾರೆ. ಜಿಲ್ಲೆಯಲ್ಲಿ ಕ್ಯಾರಿಬ್ಯಾಗ್ ಉತ್ಪಾದಿಸುವ ಘಟಕಗಳು ಇಲ್ಲ. ಆದರೆ, ಹೊರರಾಜ್ಯಗಳಿಂದ ಪ್ಲಾಸ್ಟಿಕ್ ಬರುತ್ತಿದ್ದು, ಅದಕ್ಕೆ ಕಡಿವಾಣ ಹಾಕುವ ಕೆಲಸ ನಡೆದಿದೆ’ ಎಂದು ಮಾಹಿತಿ ನೀಡಿದರು.

‘ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್‌ಎಚ್‌ಎಐ)ದವರು ಪ್ಲಾಸ್ಟಿಕ್ ತೆಗೆದುಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದು, ಡಾಂಬರೀಕರಣಕ್ಕೆ ಬಳಸುವುದಾಗಿ ಹೇಳಿದ್ದಾರೆ. ವಶಪಡಿಸಿಕೊಂಡಿರುವ ಪ್ಲಾಸ್ಟಿಕ್ ಸಂಸ್ಕರಣೆ ಸುಲಭವಾಗಿದೆ. ಆದರೆ, ಬಳಕೆ ಮಾಡಿದ ಕ್ಯಾರಿಬ್ಯಾಗ್‌ಗಳ ಸಂಸ್ಕರಣೆ ಕಷ್ಟವಾಗಿದ್ದು, ಇದಕ್ಕಾಗಿ ವಿಶೇಷ ಯಂತ್ರವೊಂದನ್ನು ಖರೀದಿಸಲಾಗಿದೆ. ಈ ಯಂತ್ರದ ಮೂಲಕ ಪ್ಲಾಸ್ಟಿಕ್ ಬಳಸಿಕೊಂಡು ‘ಪೇವರ್ಸ್’ ತಯಾರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT