ಗುರುವಾರ , ಡಿಸೆಂಬರ್ 12, 2019
16 °C
ಮುಂಗಾರು ವಿಫಲ; ತೊಗರಿ ಬೆಳೆಗಾರರಿಗೆ ತಪ್ಪದ ಆರ್ಥಿಕ ಹೊಡೆತ

ಬಾರದ ಮಳೆ : 1.64 ಲಕ್ಷ ಹೆಕ್ಟೇರ್‌ನಲ್ಲಿ ಬಾಡುತ್ತಿದೆ ಬೆಳೆ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ:  ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಜಿಲ್ಲೆಯ ವ್ಯಾಪ್ತಿಯಲ್ಲಿ ವಿಫಲಗೊಂಡಿದೆ. ಸಕಾಲಕ್ಕೆ ಮಳೆ ಸುರಿಯದಿದ್ದರಿಂದ ಬಿತ್ತಿದ್ದ 3.42 ಲಕ್ಷ ಹೆಕ್ಟೇರ್‌ನಲ್ಲಿ, ಮಳೆಯಾಶ್ರಿತ ಪ್ರದೇಶದಲ್ಲಿನ 1.64 ಲಕ್ಷ ಹೆಕ್ಟೇರ್‌ನಲ್ಲಿರುವ ಬೆಳೆಗಳು ಬಾಡಲಾರಂಭಿಸಿವೆ.

ಆರಂಭದಿಂದಲೂ ಮುಂಗಾರು ಆಶಾದಾಯಕವಾಗಿಲ್ಲ. ಜಿಲ್ಲೆಯ 4.30 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ 80% ಬಿತ್ತನೆಯಾಗಿತ್ತು. ಇದೀಗ ತೇವಾಂಶ ಕೊರತೆಯಿಂದ, ಒಣ ಹವೆ ಮುಂದುವರೆದಿದ್ದು, ಬೆಳವಣಿಗೆ ಕುಂಠಿತಗೊಂಡಿದೆ. ಇದು ರೈತ ಸಮೂಹಕ್ಕೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ.

‘ಜಿಲ್ಲೆಯಲ್ಲಿ 2.13 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆಯಾಗಿತ್ತು. ಈ ವೇಳೆಗೆ ಸಾಧಾರಣ ಎಂದರೇ ಮೂರರಿಂದ ನಾಲ್ಕು ಅಡಿ ಎತ್ತರದ ಬೆಳೆಯಿರಬೇಕಿತ್ತು. ಬಂಪರ್‌ ಎಂದರೇ ಐದು ಅಡಿ ಎತ್ತರದ ತೊಗರಿ ಗಿಡಗಳಿರಬೇಕಿತ್ತು. ಹೂವಿನ ಕುಸುರಿ ಆರಂಭಗೊಳ್ಳಬೇಕಿತ್ತು.

ಆದರೆ ಸಕಾಲಕ್ಕೆ ಮಳೆಯಾಗದಿದ್ದರಿಂದ, ಮಳೆಯಾಶ್ರಿತ 1.42 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಸೂಕ್ತ ಬೆಳವಣಿಗೆಯಾಗದೆ ಕುಂಠಿತಗೊಂಡಿದೆ. ಕೆಲವೆಡೆ ಒಂದು ಅಡಿ ಎತ್ತರವೂ ಬೆಳೆದಿಲ್ಲ. ಇದೀಗ ಮಳೆ ಸುರಿದರೂ ಈ ಬೆಳೆಯಿಂದ ಏನು ಸಿಗಲ್ಲ. ಉಳಿದ ಬೆಳೆಗೆ ಕೊಂಚ ಅನುಕೂಲಕಾರಿಯಾಗಲಿದೆಯಷ್ಟೇ. ನಿರೀಕ್ಷಿತ ಇಳುವರಿ ಸಿಗಲ್ಲ’ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘3800 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದ ಹೆಸರು, 3000 ಹೆಕ್ಟೇರ್‌ ಪ್ರದೇಶದಲ್ಲಿ ತೇವಾಂಶ ಕೊರತೆಯಿಂದ ಈಗಾಗಲೇ ಸಂಪೂರ್ಣ ಹಾನಿಗೀಡಾಗಿದೆ. 17000 ಹೆಕ್ಟೇರ್‌ನಲ್ಲಿದ್ದ ಸಜ್ಜೆ 9700, 5000 ಹೆಕ್ಟೇರ್‌ ಶೇಂಗಾದಲ್ಲಿ 3300, 3800 ಹೆಕ್ಟೇರ್‌ ಸೂರ್ಯಕಾಂತಿಯಲ್ಲಿ 2400, 3900 ಹೆಕ್ಟೇರ್‌ನ ಮೆಕ್ಕೆಜೋಳದಲ್ಲಿ 3000 ಹೆಕ್ಟೇರ್‌ನಲ್ಲಿ ಬೆಳೆ ಬಾಡುತ್ತಿವೆ. ಈ ವಾರದಲ್ಲಿ ಮಳೆಯಾಗದಿದ್ದರೆ ಸಂಪೂರ್ಣ ಹಾನಿಗೊಳಗಾಗಲಿವೆ. ಉಳಿದ ಪ್ರದೇಶದಲ್ಲಿರುವ ಬೆಳೆಗಳಿಂದಲೂ ನಿರೀಕ್ಷಿತ ಇಳುವರಿ ದೊರಕಲ್ಲ’ ಎಂದು ಅವರು ಮಾಹಿತಿ ನೀಡಿದರು.

‘ಜೂನ್‌ನಿಂದ ಆಗಸ್ಟ್‌ವರೆಗೆ ಮಳೆಯಾಗದಿದ್ದರೆ ಮುಂಗಾರು ವಿಫಲಗೊಳ್ಳುವುದು ಸಹಜ. 2015ರ ಬಳಿಕ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ವರ್ಷ ಕಡಿಮೆ ಪ್ರಮಾಣದ ಮಳೆ ಸುರಿದಿದೆ. ಜೂನ್‌ನಲ್ಲಿ ವಾಡಿಕೆ ಮಳೆ 9.5 ಸೆಂ.ಮೀ ಇದ್ದರೆ 7.5 ಸೆಂ.ಮೀ ಸುರಿದಿದೆ. ಜುಲೈನಲ್ಲಿ ಸಂಪೂರ್ಣ ಕ್ಷೀಣಿಸಿದೆ. 9.2 ಸೆಂ.ಮೀ. ವಾಡಿಕೆಗೆ ಕೇವಲ 2.9 ಸೆಂ.ಮೀ ಸುರಿದಿದೆ. ಇದು ಬೆಳೆಗೆ ಹೊಡೆತ ನೀಡಿದೆ. ಇನ್ನೂ ಆಗಸ್ಟ್‌ನಲ್ಲಿ 9.1 ಸೆಂ.ಮೀ ವಾಡಿಕೆ ಮಳೆಗೆ ಇದೂವರೆಗೂ 3.2 ಸೆಂ.ಮೀ. ಮಳೆ ಸುರಿದಿದೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು