ಬುಧವಾರ, ನವೆಂಬರ್ 13, 2019
23 °C

ವಿಷದ ಸೊಪ್ಪು ತಿಂದು 181 ಕುರಿಗಳ ಸಾವು

Published:
Updated:
Prajavani

ನ್ಯಾಮತಿ: ತಾಲ್ಲೂಕಿನ ಜಯನಗರ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಬೆಳಗಾವಿ ಜಿಲ್ಲೆಯ ವಾಳಕಿ ಗ್ರಾಮದ ಕುರಿಗಾಹಿ ನವಲಪ್ಪ ಮಧಾಳೆ ಅವರಿಗೆ ಸೇರಿದ್ದ 181 ಕುರಿಗಳು ವಿಷದ ಸೊಪ್ಪು ತಿಂದು ಮೃತಪಟ್ಟಿವೆ.

ಬುಧವಾರ ರಾತ್ರಿ 43 ಕುರಿಗಳು, ಗುರುವಾರ 63 ಕುರಿಗಳು ಮೃತಪಟ್ಟಿದ್ದವು. ಹೀಗಾಗಿ ಕುರಿಗಾಹಿಗಳು ಸ್ಥಳ ಬದಲಾವಣೆ ಮಾಡಿ ಶಿಕಾರಿಪುರ ತಾಲ್ಲೂಕಿನ ಹಾರೋಗೊಪ್ಪ ಗ್ರಾಮಕ್ಕೆ ಹೋಗಿದ್ದರು. ಆದರೆ, ಅಲ್ಲಿಯೂ ಶುಕ್ರವಾರ 75 ಕುರಿಗಳು ಸಾವನ್ನಪ್ಪಿವೆ. 

ಚಿನ್ನಿಕಟ್ಟೆ ಪಶು ವೈದ್ಯಾಧಿಕಾರಿ ಡಾ.ಬಿ. ಸುರೇಶ್‌, ‘ಕುರಿಗಳ ಅನಾರೋಗ್ಯದ ಬಗ್ಗೆ ಮಾಹಿತಿ ಬಂದ ತಕ್ಷಣ 20 ಕುರಿಗಳಿಗೆ ಚಿಕಿತ್ಸೆ ನೀಡಿದರೂ ಅವುಗಳ ಸಾವಿನ ಸಂಖ್ಯೆ ಹೆಚ್ಚಾಯಿತು. ಅರಣ್ಯದಲ್ಲಿ ಬೆಳೆದ ಯಾವುದೋ ವಿಷದ ಸೊಪ್ಪು ಸೇವನೆ ಮಾಡಿರುವುದೇ ಇದಕ್ಕೆ ಕಾರಣವಾಗಿರಬಹುದು. ಮೃತಪಟ್ಟ ಕುರಿಗಳ ಕರುಳು, ಶ್ವಾಸಕೋಶ, ಹೃದಯ ಮತ್ತು ಕಿಡ್ನಿಯ ಮಾದರಿಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಕೂಡಲೇ ಸರ್ಕಾರದಿಂದ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಪಶು ಸಂಗೋಪನಾ ಇಲಾಖೆಯ ಶಿವಮೊಗ್ಗದ ತಜ್ಞ ವೈದ್ಯರ ತಂಡ ಮತ್ತು ದಾವಣಗೆರೆ ಪ್ರಾದೇಶಿಕ ಸಂಶೋಧನಾ ಅಧಿಕಾರಿ ನಾಗರಾಜ ಅವರು ಹಾರೋಗೊಪ್ಪ ಗ್ರಾಮಕ್ಕೆ ಭೇಟಿ ನೀಡಿ ಕುರಿಗಾಹಿಗಳಿಗೆ ಧೈರ್ಯ ತುಂಬಿದರು’ ಎಂದು ಕುರಿಗಳ ಮಾಲೀಕ ನವಲಪ್ಪ ಮಧಾಳೆ ಅವರ ಅಳಿಯ ಮಾರುತಿ ತಿಳಿಸಿದರು.

ಪ್ರತಿಕ್ರಿಯಿಸಿ (+)