ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಮತದಾರರ ಮೇಲೆ ಹೆಚ್ಚಿನ ಜವಾಬ್ದಾರಿ: ಬಿಎಸ್ ವೈ

Last Updated 18 ಜೂನ್ 2018, 13:21 IST
ಅಕ್ಷರ ಗಾತ್ರ

ಸಾಗರ: ಲೋಕಸಭಾ ಚುನಾವಣೆ ಯಲ್ಲಿ ಸಮರ್ಥ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಾದ ಮಹತ್ವದ ಜವಾಬ್ದಾರಿ ಯುವಜನರ ಮೇಲೆ ಇದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಬಿಜೆಪಿಯ ಯುವ ಮೋರ್ಚಾದ ಘಟಕ ಸೋಮವಾರ ಏರ್ಪಡಿಸಿದ್ದ ‘ಯುವ ಸಮ್ಮಿಲನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಜನರು ಅನ್ಯಾಯದ ವಿರುದ್ಧ ಸಿಡಿದೇಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. 

ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆ ಮಾಡಬೇಕು ಎಂಬ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಬಿಜೆಪಿ ರೂಪಿಸಲಿದೆ. ಹಿಂದಿನ ದಿನಗಳಲ್ಲಿ ಸಂಸತ್ ಸದಸ್ಯರನ್ನು ಭೇಟಿ ಮಾಡುವುದು ಎಂದರೆ ಚಂದ್ರನ ದರ್ಶನ ಮಾಡಿದಷ್ಟೆ ಕಷ್ಟದ ಕೆಲಸವಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗಬೇಕು ಎಂಬ ಹಂಬಲವೇನೂ ಇಲ್ಲ. ಈ ಹಿಂದೆ ಕೇಂದ್ರದಲ್ಲಿ ಎನ್‌ಡಿಎ ಅಧಿಕಾರದಲ್ಲಿ ಇದ್ದಾಗಲೇ ಆ ಅವಕಾಶ ಬಂದಿತ್ತು. ಆದರೆ ಅದನ್ನು ನಿರಾಕರಿಸಿ ಕರ್ನಾಟಕ ದಲ್ಲಿ ಪಕ್ಷವನ್ನು ಸಂಘಟಿಸುವ ಕೆಲಸಕ್ಕೆ ಮುಂದಾಗಿದ್ದೆ ಎಂಬುದನ್ನು ಅವರು ನೆನಪಿಸಿಕೊಂಡರು.

ಮೇಘಾ ಭಟ್‌, ಶ್ರೀಕರ ಭಟ್ ಮಾತನಾಡಿದರು. ಬಿಜೆಪಿ ಮುಖಂಡರಾದ ಬಿ.ಆರ್. ಜಯಂತ್, ಭಾರತಿ ಶೆಟ್ಟಿ, ಆರ್.ಕೆ. ಸಿದ್ದರಾಮಣ್ಣ, ಚೇತನ್‌ರಾಜ್‌ ಕಣ್ಣೂರು, ರಾಜು ಮಡಿವಾಳ, ಎಲ್.ವಿ.ಅಕ್ಷರ, ಸುನೀಲ್‌ ಫರ್ನಾಂಡಿಸ್‌, ಕೆ.ಪಿ. ಪುರುಷೋತ್ತಮ್‌,  ಯು.ಎಚ್.ರಾಮಪ್ಪ ಇದ್ದರು.

ಬಿಜೆಪಿ ರಾಷ್ಟ್ರೀಯ ವರಿಷ್ಠರ ಒತ್ತಾಸೆಯಂತೆ  ಸ್ಪರ್ಧೆ
ಸಾಗರ: ‘ಬಿಜೆಪಿಯ ರಾಷ್ಟ್ರೀಯ ನಾಯಕರ ಒತ್ತಾಸೆಯಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೇನೆ. ನನ್ನ ಗಮನ ಯಾವತ್ತಿದ್ದರೂ ಕರ್ನಾಟಕದ ರಾಜಕಾರಣದ ಕಡೆಗೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವವರೆಗೂ ವಿಶ್ರಮಿಸುವುದಿಲ್ಲ’ ಎಂದು ಬಿಜೆಪಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಪಕ್ಷ ಕಟ್ಟಿ ಅದರ ತಪ್ಪಿನ ಫಲವನ್ನು ಅನುಭವಿಸಿ ಮರಳಿ ಬಿಜೆಪಿಗೆ ಬಂದಿದ್ದೇನೆ. ದೇಶದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯವಿಲ್ಲ ಎಂಬ ಅರಿವಾಗಿದೆ. ನಾನು ಹೊಸ ಪಕ್ಷ ಕಟ್ಟಿದ್ದರಿಂದಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ದೊರಕುವಂತಾಯಿತು ಎಂದರು.

ಯಡಿಯೂರಪ್ಪ ಅವರನ್ನು ನಂಬಿ ಹಿಂಬಾಲಿಸಿದವರಿಗೆ ಅನ್ಯಾಯವಾಗಿದೆ ಎಂದು ಧನಂಜಯ್‌ಕುಮಾರ್‌ ಅವರು ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಧನಂಜಯ್‌ಕುಮಾರ್‌ ಮಾತಿನಲ್ಲಿ ಸ್ವಲ್ಪಮಟ್ಟಿನ ಸತ್ಯಾಂಶವಿದೆ. ಆದರೆ, ಅವರು ಅವಸರದ ನಿರ್ಧಾರ ತೋರುತ್ತಿದ್ದಾರೆ. ಅವರನ್ನು ಮರಳಿ ಬಿಜೆಪಿಗೆ ಕರೆ ತರುವ ಪ್ರಯತ್ನ ಮಾಡ ಲಾಗುವುದು ಎಂದು ಹೇಳಿದರು. 

ಅರವಿಂದ್ ಕೇಜ್ರಿವಾಲ್‌ ಕರ್ನಾಟಕದ ಬಿಜೆಪಿ ಹಾಗೂ ಕಾಂಗ್ರೆಸ್‌ನ ಪ್ರಮುಖ ಮುಖಂಡರನ್ನು ಭ್ರಷ್ಟರ ಪಟ್ಟಿಗೆ ಸೇರಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ಕೆಟ್ಟವರು ಎನ್ನುವ ರೀತಿಯಲ್ಲಿ ಕೇಜ್ರಿವಾಲ್‌ ಮಾತನಾಡುತ್ತಿದ್ದಾರೆ. ಈ ಬಗ್ಗೆ ಜನರೇ ತೀರ್ಮಾನಿಸುತ್ತಾರೆ. ಕೇಜ್ರಿವಾಲ್ ಶಿವಮೊಗ್ಗ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡುವುದನ್ನು ನಾನು ಸ್ವಾಗತಿಸುತ್ತೇನೆ ಎಂದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT