ಬುಧವಾರ, ಜೂನ್ 16, 2021
27 °C
ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ವೈ.ಎಸ್‌.ವಿ.ದತ್ತ ಅಭಿಮತ

‘ರಾಜಕಾರಣದ ಶುದ್ಧೀಕರಣಕ್ಕೆ ಗೀತಾ ಸ್ಪರ್ಧೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ರಾಜಕಾರಣದಲ್ಲಿ ಇರುವವರೆಲ್ಲರೂ ಅಪರಾಧಿ ಗಳು ಎನ್ನುವ ಸ್ಥಿತಿ ಇರುವಾಗ ರಾಜಕಾರಣದ ಶುದ್ಧೀಕರಣಕ್ಕಾಗಿ ಗೀತಾ ಶಿವರಾಜ್‌ಕುಮಾರ್ ಸ್ಪರ್ಧೆಗೆ ಇಳಿದಿದ್ದಾರೆ ಎಂದು ಶಾಸಕ ವೈ.ಎಸ್‌.ವಿ.ದತ್ತ ಅಭಿಪ್ರಾಯಪಟ್ಟರು.ನಗರದ ಹೊರವಲಯದ ಶರಾವತಿ ದಂತ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಜೆಡಿಎಸ್‌ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಸೋಮವಾರ ಅವರು ಮಾತನಾಡಿದರು.ಇಂತಹ ಮಹತ್ವದ ಉದ್ದೇಶ ಇಟ್ಟುಕೊಂಡು ರಾಜಕಾರಣಕ್ಕೆ ಬಂದಿರುವ ಗೀತಾ ಶಿವರಾಜ್‌ಕುಮಾರ್ ಕನ್ನಡತನ ಮತ್ತು ಸ್ವಾಭಿಮಾನ ಸಂಕೇತವಾಗಿದ್ದಾರೆ.  ಅವರಲ್ಲಿ ದಿ.ಬಂಗಾರಪ್ಪ ಅವರ ಹೋರಾಟದ ಗುಣ ಮತ್ತು ರಾಜ್‌ಕುಮಾರ್‌ ಕುಟುಂಬದ ಸಂಸ್ಕಾರ ಬೆರೆತಿದೆ ಎಂದು ಹೇಳಿದರು.ಜಿಲ್ಲೆಯಲ್ಲಿ ಬಿಜೆಪಿ ಕಳೆದ ಚುನಾವಣೆಯಲ್ಲಿ ಗೆದ್ದಿರುವುದರಿಂದ ಮಂಪರಿನಲ್ಲಿದೆ. ರಾಜಕೀಯ ನಿಂತ ನೀರಲ್ಲ; ಆಯಾ ಕಾಲಘಟ್ಟದಲ್ಲಿ ಬೇರೆ ಬೇರೆ ರೀತಿಯಾಗಿ ಜನ ಯೋಚಿಸುತ್ತಾರೆ. 1996ರ ರಾಜಕೀಯ ಪರಿಸ್ಥಿತಿಯೇ ಮತ್ತೊಮ್ಮೆ ಮರುಕಳಿಸುತ್ತದೆ. ಮೋದಿ ಅಲೆ ಎಲ್ಲಿಯೂ ಇಲ್ಲ. ಇದೆಲ್ಲಾ ಮೇಲ್ವರ್ಗದ ಜನರ ಸೃಷ್ಟಿ. ಅದು ನೀರಿನ ಮೇಲಿನ ಗುಳ್ಳೆ. ಅದು ಶೀಘ್ರದಲ್ಲೇ ಒಡೆದು ಹೋಗುತ್ತದೆ ಎಂದು ವ್ಯಂಗ್ಯವಾಡಿದರು.ಮಾಜಿ ಕೇಂದ್ರ ಸಚಿವ ಧನಂಜಯಕುಮಾರ್‌ ಮಾತನಾಡಿ, ಈ ಕ್ಷೇತ್ರದ ಕೆಲವರು ಈಗಾಗಲೇ ಕೇಂದ್ರದಲ್ಲಿ ಕೃಷಿ ಸಚಿವರಾಗಿದ್ದಾರೆ. ಆದರೆ, ಅವರಿಗೆ ಅವರ ಮನೆಯಲ್ಲೇ ದೊಡ್ಡ ಬೆಂಕಿ ಬೀಳುವ ಸ್ಥಿತಿ ಉದ್ಭವಿಸಿದೆ ಎನ್ನುವುದು ಗೊತ್ತಿಲ್ಲ ಎಂದು ಯಡಿಯೂರಪ್ಪ ಅವರ ಹೆಸರು ಹೇಳದೆ ಟೀಕಿಸಿದರು.ಶಿವಮೊಗ್ಗದ ಎಲ್ಲಾ ಆಸ್ತಿಯೂ ಇಬ್ಬರು ನಾಯಕರಿಗೆ ಸೇರಿವೆ. ಅಭಿವೃದ್ಧಿ ಮಾಡಲು ಸಾರ್ವಜನಿಕ ಜಾಗವೇ ಶಿವಮೊಗ್ಗದಲ್ಲಿ ಇಲ್ಲದಾಗಿದೆ ಎಂದು ವ್ಯಂಗ್ಯವಾಡಿದರು. 40 ವರ್ಷ ಸುದೀರ್ಘ ರಾಜಕೀಯ ಕ್ಷೇತ್ರದಲ್ಲಿರುವ ತಮಗೆ ಜಾತಿ ಬಲ ಇಲ್ಲ; ಹಾಗೆಯೇ, ಹಣದ ಬಲ ಇಲ್ಲ ಎನ್ನುವ ಕಾರಣಗಳಿಗಾಗಿ ಕಡೆಗಣಿಸಲಾಯಿತು. ಈಗ ದೇವೇಗೌಡರು ಕರೆದು ಟಿಕೆಟ್‌ ನೀಡಿದ್ದಾರೆ ಎಂದರು.ಸರ್ಕಾರಗಳು ವಿಫಲ: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಕ್ಷೇತ್ರದಲ್ಲಿ ಬಗರ್‌ಹುಕುಂ ರೈತರ ಸಮಸ್ಯೆ ಬಗೆಹರಿದಿಲ್ಲ. ಅಧಿಕಾರ ನಡೆಸಿದ ಕಾಂಗ್ರೆಸ್‌–ಬಿಜೆಪಿ ಈ ಸಮಸ್ಯೆ ಪರಿಹರಿಸಲು ವಿಫಲವಾಗಿವೆ ಎಂದು ವಾಗ್ದಾಳಿ

ನಡೆಸಿದರು.ಪ್ರಾಸ್ತಾವಿಕ ಮಾತನಾಡಿದ ಶಾಸಕ ಅಪ್ಪಾಜಿಗೌಡ, ಯಡಿಯೂರಪ್ಪ ಅವರಿಗೆ ತಮ್ಮ ಹೆಸರಿನಲ್ಲಿ ಮತ ಕೇಳುವ ಧೈರ್ಯವಿಲ್ಲ. ಮೋದಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಬುದ್ಧಿ ಕಲಿಸುವ ಒಂದು ಅವಕಾಶ ಜಿಲ್ಲೆಯ ಜನರಿಗೆ ಸಿಕ್ಕಿದೆ. ಅದನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು ಎಂದರು.ಸಭೆಯಲ್ಲಿ ಮಾಜಿ ಸಚಿವ ಬಂಡೆಪ್ಪಕಾಶಂಪುರ್, ಗೂಳಿಹಟ್ಟಿ ಶೇಖರ್, ಶಾಸಕರಾದ ಶಾರದಾ ಪೂರ್‍್ಯಾನಾಯ್ಕ, ಮುನಿಸ್ವಾಮಿ, ಎಚ್‌.ಎಸ್‌.ಶಿವಶಂಕರ್, ಮುಖಂಡರಾದ ಸ್ವರ್ಣಪ್ರಭಾಕರ್, ಜಿ.ಮಾದಪ್ಪ, ಎಸ್‌.ಎಲ್‌.ಭೋಜೇಗೌಡ, ಎಂ.ಶ್ರೀಕಾಂತ್‌ ಮತ್ತಿತರರು

ಉಪಸ್ಥಿತರಿದ್ದರು. ತ್ಯಾಗರಾಜ್ ಸ್ವಾಗತಿಸಿದರು. ಮಂಜುನಾಥ್ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.