ಬುಧವಾರ, ಜೂನ್ 16, 2021
27 °C
ಹಿರಿಯ ರೈತ ಮುಖಂಡ ಕಡಿದಾಳು ಶಾಮಣ್ಣ ವಿಷಾದ

ಉದ್ದೇಶ ಮರೆತ ಮತದಾರ, ಜನಪ್ರತಿನಿಧಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀರ್ಥಹಳ್ಳಿ: ಯಾವ ಉದ್ದೇಶಕ್ಕೆ ಓಟು ಕೊಡುತ್ತೇವೆ. ಆಯ್ಕೆಯಾದವರ ಜವಾಬ್ದಾರಿ ಏನು? ಎಂಬುದು  ಗೊತ್ತಿಲ್ಲದೇ ಇರುವುದು ದೊಡ್ಡ ದುರಂತ ಎಂದು ಹಿರಿಯ ರೈತ ಮುಖಂಡ ಕಡಿದಾಳು ಶಾಮಣ್ಣ ವಿಷಾದ ವ್ಯಕ್ತಪಡಿಸಿದರು.ಗುರುವಾರ ಪಟ್ಟಣದ ಆಮ್‌ ಆದ್ಮಿ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ಆಗ ಕಾಂಗ್ರೆಸ್‌ ವಿಸರ್ಜಿಸಿ ಜನರಿಗೆ ಬೇಕಾದ ಪಕ್ಷ ಹುಟ್ಟು ಹಾಕಿದ್ದರೆ  ಅದು ಆಮ್‌ ಆದ್ಮಿ  ಪಕ್ಷದ ತರವೇ ಇರುತ್ತಿತ್ತು ಎಂದರು.ಗಾಂಧಿ ಹುಟ್ಟುಹಾಕಿದ ಕಾಂಗ್ರೆಸ್‌ ಎಂದು ಹೇಳಿಕೊಳ್ಳತ್ತಾ, ಸ್ವಾತಂತ್ರ್ಯ ಬಂದು 68 ವರ್ಷ ಕಳೆದರೂ, ಕೂತರೆ ಏಳಲೂ ಆಗದವರು, ಎದ್ದರೆ ಕೂರಲೂ ಆಗದವರು ಈಗಲೂ ಅರ್ಜಿ ಹಾಕುತ್ತಲೇ ಇದ್ದಾರೆ ಎಂದು ಕಾಂಗ್ರೆಸ್‌ ಪಕ್ಷವನ್ನು ಲೇವಡಿ ಮಾಡಿದರು.ಸಂಸತ್ತಿಗೆ ಹೋದವರು ಮೂರು ಕಾಸಿನ ಕೆಲಸ ಮಾಡಿಲ್ಲ. ಬಸ್‌ಸ್ಟ್ಯಾಂಡ್‌ ಕಟ್ಟಿಸಿ ಹೆಸರು ಹಾಕಿಸಿದರೆ ಸಾಕೇ? ಮಾತೃ ಭಾಷೆಯಲ್ಲಿ 4ನೇ ತರಗತಿವರೆಗೆ ಶಿಕ್ಷಣ ನೀಡಬೇಕು ಎಂಬುದು ಸರಳ ವಿಚಾರ. ಇದನ್ನು ನಮ್ಮ ಸಂಸತ್‌ ಸದಸ್ಯರು ತಿಳಿಯಬೇಕು. ಕಾನೂನಿಗೆ ತಿದ್ದು ಪಡಿ ತರಬೇಕು. ಜೆ.ಎಚ್‌.ಪಟೇಲರು ಸಂಸತ್ತಲ್ಲಿ ಕನ್ನಡದಲ್ಲಿ ಮಾತನಾಡಿದರು.  ಹಾಗೆ ಮಾತನಾಡಬಹುದು ಎಂಬುದು ಅವರಿಗೆ ಗೊತ್ತಿತ್ತು. ಅಂತಹ ತಿಳಿವಳಿಕೆ ಇರುವ ಸಂಸತ್‌ ಸದಸ್ಯರ ಸಂಖ್ಯೆ ಈಗ ಇಲ್ಲವಾಗಿದೆ ಎಂದರು.ಶಿವಮೊಗ್ಗ ಕ್ಷೇತ್ರದಲ್ಲಿ ರೈತ ಸಂಘ ಆಮ್‌ ಆದ್ಮಿ ಜೊತೆ ಗುರುತಿಸಿಕೊಂಡು ಅಭ್ಯರ್ಥಿ ಕಲ್ಲಹಳ್ಳ ಶ್ರೀಧರ್‌ ಅವರನ್ನು ಗೆಲ್ಲಿಸುವ ಪ್ರಯತ್ನ ನಡೆಸಲಿದೆ. ನಾವು ಯಾರನ್ನು, ಯಾಕೆ ಕಳುಹಿಸುತ್ತಿದ್ದೇವೆ ಎಂಬುದನ್ನು ತಿಳಿದಿರಬೇಕು. ನಾಮಪತ್ರ ಸಲ್ಲಿಸಿದ ನಂತರ ರೈತ ಸಂಘ ಸಮರೋಪಾದಿಯಲ್ಲಿ ಕೆಲಸ ಮಾಡಲಿದೆ. ಶಾಸನ ಸಭೆಗೆ 10–20 ಜನ ರೈತ ಸಂಘದಿಂದ ಹೋಗದೇ ಇದ್ದರೆ ರೈತ ಕುಲ ನಾಶವಾಗುತ್ತದೆ. ಕೇವಲ ಹೋರಾಟಕ್ಕೆ ಮಾತ್ರ ಸೀಮಿತವಾಗಿರದೇ ರಾಜಕೀಯ ಶಕ್ತಿಯಾಗಿ ಇಂದು ಪ್ರಗತಿಪರ ಸಂಘಟನೆಗಳು ಬೆಳೆಯಬೇಕಾಗಿದೆ ಎಂದು ಶಾಮಣ್ಣ ನುಡಿದರು.ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಕಲ್ಲಹಳ್ಳ ಶ್ರೀಧರ್‌ ಮಾತನಾಡಿ, ಭಾರತ ಬಡ ದೇಶ ಅಲ್ಲ. 24 ಗಂಟೆ ನಿದ್ದೆಗೆಟ್ಟು ದುಡಿಯಬೇಕಾದ ಸ್ಥಿತಿ ಬಹುಸಂಖ್ಯಾತರದ್ದಾಗಿದೆ. ಜನರು ಸತ್ವ ಕಳೆದುಕೊಂಡು ಕುಸಿದು ಹೋಗುವ ರೀತಿ ಇದೆ. ಇದನ್ನು ಹೇಗೆ ಸುಧಾರಿಸಬೇಕು ಎಂಬುದು ನಮ್ಮ ಮುಂದಿದೆ. ಜನರು ಆಮ್‌ ಆದ್ಮಿ ಕಡೆ ಏಕೆ ಕಣ್ಣು ತೆರೆದು ನೋಡುತ್ತಿದ್ದಾರೆ ಎಂದರೆ ಇಲ್ಲಿ ಜನರು ಮುಂದೆ ಹೇಗೆ ಬದುಕಬೇಕು ಎಂಬುದೇ ಆಗಿದೆ . ಇದು ಎಲ್ಲರ ಜವಾಬ್ದಾರಿ. ಮುಂದಿನ ತಲೆಮಾರಿಗೆ ಕಟ್ಟಿಕೊಡುವ ಹೊಣೆಗಾರಿಕೆ ಇದೆ. ಇದನ್ನು ಆಮ್‌ ಆದ್ಮಿ ಮಾಡಲಿದೆ ಎಂದರು.ಕಾಂಗ್ರೆಸ್‌ ಆತ್ಮಾವಲೋಕನ ಮಾಡಿಕೊಳ್ಳುವ ಘಟ್ಟದಲ್ಲಿದೆ. ಆದರೆ, ಬಿಜೆಪಿ ಆತ್ಮಾವಲೋಕನದ ಯಾವ ಅಂಶವನ್ನೂ ಇಟ್ಟಿಲ್ಲ. ಇದು ಬಹಳ ಅಪಾಯಕಾರಿ. ಜನರು ನಮ್ಮ ಪರವಾಗಿದ್ದಾರೆ. ನಮ್ಮ ಆಲೋಚನೆಗಳನ್ನು ಸ್ವೀಕರಿಸುತ್ತಾರೆ. ಮಾರ್ಚ್‌ 22ರಂದು ಶನಿವಾರ ನಾಮಪತ್ರ ಸಲ್ಲಿಸುವುದಾಗಿ ಶ್ರೀಧರ್‌  ಹೇಳಿದರು.ತಾಲ್ಲೂಕು ಕಚೇರಿ ಭ್ರಷ್ಟಾಚಾರದ ಕೂಪ ಆಗಿದೆ. ಚುನಾವಣೆಗೆ ಸಂಬಂಧಿಸಿದ ಮಾಹಿತಿ ಕೂಡಾ ಸಿಗುತ್ತಿಲ್ಲ. ಅಭ್ಯರ್ಥಿ ಮೂಲಕ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಪಕ್ಷದ ತಾಲ್ಲೂಕು ಸಂಚಾಲಕ ನೆಂಪೆ ದೇವರಾಜ್‌ ಹೇಳಿದರು.

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ  10 ಜನರ ತಂಡದ ‘ಯಂಗ್‌ ಬೆಟಾಲಿಯನ್‌’ ಗೋಡ್‌್ಸ ಆಟೊ ಮೂಲಕ ಜನಜಾಗೃತಿ ಮೂಡಿಸಲಿದೆ ಎಂದು ನಿಶ್ಚಲ್‌ ಜಾದೂಗಾರ್‌ ತಿಳಿಸಿದರು.ಮುಖಂಡರಾದ ಎಸ್‌.ಟಿ.ದೇವರಾಜ್‌, ವಾಟಗೋಡು ಸುರೇಶ್‌, ಸುಚಿತ ಅತ್ತಿಗದ್ದೆ, ಅರ್ಚನಾ ಮಾತನಾಡಿದರು. ವೇದಿಕೆಯಲ್ಲಿ ಮುಖಂಡರಾದ ಕೋಡ್ಲು ವೆಂಕಟೇಶ್‌, ಖಾಸಿಂ ಸಾಬ್‌, ಡಾ.ಎ.ಎನ್‌.ನಾಗರಾಜ್‌, ಕೃಷ್ಣಪ್ರಸನ್ನ, ಗುರುರಾಜ್‌ ಉಪಸ್ಥಿತರಿದ್ದರು. ಸೌಳಿ ನಾಗರಾಜ್‌ ಕಾರ್ಯಕ್ರಮ ನಿರೂಪಿಸಿದರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.