ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ, ಅರಣ್ಯ ಭೂಮಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ

ಮಾಧ್ಯಮ ಸಂವಾದದಲ್ಲಿ ಬಿ.ಎಸ್‌.ಯಡಿಯೂರಪ್ಪ ಭರವಸೆ
Last Updated 18 ಜೂನ್ 2018, 13:21 IST
ಅಕ್ಷರ ಗಾತ್ರ

ಶಿವಮೊಗ್ಗ: ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಈಗಾಗಲೇ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಜತೆ ತಾವು ಚರ್ಚೆ ನಡೆಸಿದ್ದು, ಅಧಿಕಾರಕ್ಕೆ ಬಂದು ಮೊದಲು ಮಾಡುವ ಕೆಲಸವೇ ಸುಪ್ರೀಂಕೋರ್ಟ್‌ ಮುಂದೆ ಕೇಂದ್ರ ಸರ್ಕಾರ ಅಡಿಕೆ ನಿಷೇಧ ಕುರಿತಂತೆ ಸಲ್ಲಿಸಿರುವ ಪ್ರಮಾಣ ಪತ್ರವನ್ನು ಹಿಂದಕ್ಕೆ ಪಡೆಯುವುದಾಗಿದೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದರು.

ನಗರದ ಮಥುರಾ ಪ್ಯಾರಡೈಸ್‌ನಲ್ಲಿ ಶುಕ್ರವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

ಅಲ್ಲದೇ, ಪ್ರತ್ಯೇಕ ಕೃಷಿ ಬಜೆಟ್‌ ಮಂಡಿಸುವಂತೆಯೂ ತಾವು ಮೋದಿ ಅವರಿಗೆ ಸಲಹೆ ನೀಡಿದ್ದು, ಸಹಕಾರ ಸಂಘಗಳ ರೀತಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳೂ ರೈತರಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಜಾರಿಗೆ ತರುವಂತೆ ಸಲಹೆ ನೀಡಿರುವುದಾಗಿ ತಿಳಿಸಿದರು.

ಅರಣ್ಯ ಇಲಾಖೆ ಸಮಸ್ಯೆ ಬಗ್ಗೆಯೂ ಈಗಾಗಲೇ ತಾವು ಚರ್ಚೆ ನಡೆಸಿದ್ದು, ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.  ಭದ್ರಾವತಿ ಶಾಸಕ ಅಪ್ಪಾಜಿ ಅವರು ಅಂಕಿ–ಅಂಶಗಳನ್ನು ಇಟ್ಟುಕೊಂಡು ಸರಿಯಾಗಿ ಮಾತನಾಡಬೇಕು ಎಂದು ತಿರುಗೇಟು ನೀಡಿದ ಅವರು, ‘ನಾನು ಮುಖ್ಯಮಂತ್ರಿಯಾಗಿದ್ದಾಗ ಎಂಪಿಎಂ  ಕಾರ್ಖಾನೆಗೆ ₨152 ಕೋಟಿ ಅನುದಾನ ನೀಡಿದ್ದೆ. ಹಾಗೆಯೇ, ವಿಐಎಸ್‌ಎಲ್‌ಗೆ ₨362 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಇದೇ ಕಾರ್ಖಾನೆಗೆ ಗಣಿಯೊಂದನ್ನು ಮಂಜೂರು
ಮಾಡಿದ್ದು, ಅದು ವಿವಾದದಲ್ಲಿದ್ದು; ಬಗೆಹರಿಯಬೇಕಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾದ ಪ್ರಯತ್ನ ಮಾಡಲಾಗಿತ್ತು. ಜೈಲು ಸ್ಥಳಾಂತರಗೊಂಡರೆ ನಗರದಲ್ಲಿ ವಿಶಾಲವಾದ ಜಾಗ ಸಿಗುತ್ತದೆ. ವಿಮಾನ ನಿಲ್ದಾಣ ಆಗದಿರುವುದು ತಮಗೆ ನೋವು ತಂದಿದೆ. ಕಾಂಗ್ರೆಸ್‌ ಕೂಡ ಈ ಕಡೆ ಗಮನ ಹರಿಸಿಲ್ಲ. ಹೊರವರ್ತುಲ ರಸ್ತೆಗೆ ಯೋಜನೆ ರೂಪಿಸಿ, ಹಣವನ್ನೂ ತೆಗೆದಿಟ್ಟಿದ್ದೆ. ಆದರೆ, ಅದು ಮುಂದುವರಿಯಲೇ ಇಲ್ಲ
ಎಂದು ಬೇಸರ ವ್ಯಕ್ತಪಡಿಸಿದರು.

ಬಿ.ವೈ.ರಾಘವೇಂದ್ರ ಸಂಸತ್‌ ಸದಸ್ಯರಾಗಿ ಕ್ಷೇತ್ರದಲ್ಲಿ ಮಾಡಿದ ಕೆಲಸಗಳೂ ತಮಗೆ ಶ್ರೀರಕ್ಷೆ ಎಂದ ಯಡಿಯೂರಪ್ಪ, ಜಿಲ್ಲೆಯನ್ನು ಮಾದರಿ ಜಿಲ್ಲೆ ಮಾಡಬೇಕೆಂಬ ಕನಸಿದೆ ಎಂದರು.

ಸಂವಾದದಲ್ಲಿ ಸಂಸತ್‌ ಸದಸ್ಯ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ತು ಸದಸ್ಯ ಆರ್‌.ಕೆ.ಸಿದ್ದರಾಮಣ್ಣ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಎನ್‌.ಮಂಜುನಾಥ ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶೃಂಗೇಶ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಹೊನ್ನಾಳಿ  ಚಂದ್ರಶೇಖರ್‌ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT