ಮಂಗಳವಾರ, ಜೂನ್ 22, 2021
23 °C

ಜಾಹೀರಾತು ಪ್ರಚಾರಕ್ಕೆ ಅನುಮತಿ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಲೋಕಸಭಾ ಚುನಾವಣೆ ಪ್ರಚಾರಕ್ಕೆ ಆಕಾಶವಾಣಿ, ಕೇಬಲ್‌ ಟಿವಿ, ವಿವಿಧ ವಿದ್ಯುನ್ಮಾನ ಮಾಧ್ಯಮಗಳು ಹಾಗೂ ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಅಭ್ಯರ್ಥಿಗಳು ಆ ಪ್ರಚಾರ ಸಾಮಗ್ರಿಗಳಿಗೆ ಪೂರ್ವಾನುಮತಿ ಪಡೆಯುವುದು ಕಡ್ಡಾಯ.ಅಲ್ಲದೆ ಪ್ರಚಾರ ಸಾಮಗ್ರಿಗಳಾದ ಕರಪತ್ರ, ಟೋಪಿ, ಬ್ಯಾನರ್, ಕ್ಷೇತ್ರ ಮಟ್ಟದಲ್ಲಿ ವಿಡಿಯೋ ಚಿತ್ರ ಪ್ರದರ್ಶನ, ಧ್ವನಿ ವರ್ಧಕಗಳ ಮೂಲಕ ಬಳಸುವ ಆಡಿಯೋಗಳು ಒಳಗೊಂಡಂತೆ ಎಲ್ಲ ಪ್ರಚಾರ ಸಾಮಗ್ರಿಗಳಿಗೆ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ (ಎಂಸಿಎಂಸಿ)ಯ ಅನುಮತಿ ಪಡೆಯಬೇಕು ಎಂದು ಈ ಸಮಿತಿಯ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ. ಶಿವಕುಮಾರ ತಿಳಿಸಿದ್ದಾರೆ.ನಿಗದಿತ ಅರ್ಜಿ ನಮೂನೆಯೊಂದಿಗೆ ಪ್ರಚಾರ ಸಾಮಗ್ರಿಗಳ ವಿವರ, ಸಂಖ್ಯೆ, ವೆಚ್ಚದ ಮಾಹಿತಿಯನ್ನು ಸಮಿತಿಗೆ ಸಲ್ಲಿಸಿ ಪೂರ್ವಾನುಮತಿಯ ನಂತರ ಪ್ರಚಾರ ಸಾಮಗ್ರಿಗಳನ್ನು ಬಳಸಬೇಕು ಎಂದಿದ್ದಾರೆ.ಜಿಲ್ಲಾ ಎಂ.ಸಿ.ಎಂ.ಸಿ. ಸಮಿತಿಯು ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿಗಳ ಕಚೇರಿಯ ಮೊದಲ ಮಹಡಿಯಲ್ಲಿ ಇರುವ ಜಿಲ್ಲಾ ಪಂಚಾಯಿತಿ ಸದಸ್ಯರ ವಿಶ್ರಾಂತಿ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ರಿತ್ವಿಕ್ ಪಾಂಡೆ ಮೇಲುಸ್ತ್ತುವಾರಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಕೆ.ಬಿ.ಶಿವಕುಮಾರ, ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ಕ್ಷೇತ್ರ ಪ್ರಚಾರ ಅಧಿಕಾರಿ ಶಿವಯೋಗಿ ಮೇಸ್ತ್ರಿ, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಓಂಕಾರ ಕಾಕಡೆ ಈ ಸಮಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.‘ಕಾಸಿಗಾಗಿ ಸುದ್ದಿ, ಏಕಮುಖವಾಗಿ ಒಬ್ಬ ಅಭ್ಯರ್ಥಿಯ ಪರ ಬಿತ್ತರವಾಗುವ ಸುದ್ದಿ, ಅನುಮತಿ ಇಲ್ಲದೇ ಪ್ರಕಟ ವಾಗುವ ಜಾಹೀರಾತುಗಳ ಕುರಿತಂತೆ ಸಮಿತಿ ತೀವ್ರ ನಿಗಾವಹಿಸಿದೆ. ವಿದ್ಯುನ್ಮಾನ ಮಾಧ್ಯಮ ಗಳಲ್ಲಿ ಬಿತ್ತರವಾಗುವ ವಿಜಾಪುರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣಾ ಸುದ್ದಿಗಳ ಬಗ್ಗೆ ಸತತ ನಿಗಾವಹಿಸಿದ್ದು, ಧ್ವನಿ ಮುದ್ರಣ ಮತ್ತು ವಿಡಿಯೋ ಮುದ್ರಣ ಗಳ ವ್ಯವಸ್ಥೆ ಸಹ ಮಾಡಲಾಗಿದೆ. ಆಕಾಶವಾಣಿಯಲ್ಲಿ ಬಿತ್ತರವಾಗುವ ಸುದ್ದಿಗಳ ಕುರಿತು ತೀವ್ರ  ನಿಗಾ ವಹಿಸಿದೆ’ ಎಂದು ಶಿವಕುಮಾರ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.