ಶನಿವಾರ, ಜೂನ್ 19, 2021
21 °C

ಉಳಿಯಲಿದೆಯೇ ಕಾಂಗ್ರೆಸ್‌ ಮತ ಗಳಿಕೆ ಪ್ರಮಾಣ?

ಪ್ರಜಾವಾಣಿ ವಾರ್ತೆ/ ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

ವಿಜಾಪುರ: 2013ರಲ್ಲಿ ನಡೆದ ವಿಧಾನಸಭೆ ಚುನಾವಣೆ ಜಿಲ್ಲೆಯ ಕಾಂಗ್ರೆಸ್‌ಗೆ ಬಂಪರ್‌ ಕೊಡುಗೆ ನೀಡಿತ್ತು. ಒಟ್ಟಾರೆ ಎಂಟು ಸ್ಥಾನಗಳ ಪೈಕಿ ಏಳರಲ್ಲಿ ಜಯಸಾಧಿಸಿ ಆ ಪಕ್ಷ ಪ್ರಾಬಲ್ಯ ಮೆರೆಯಿತು. ಬಿಜೆಪಿ ನಾಲ್ಕು ಸ್ಥಾನಗಳನ್ನು ಕಳೆದುಕೊಂಡು ಒಂದಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದರೆ, ಜೆಡಿಎಸ್‌ ಶೇ.23.57ರಷ್ಟು ಮತ ಪಡೆದು ಅದ್ಭುತ ಸಾಧನೆ ಮಾಡಿದರೂ ಖಾತೆ ತೆರೆಯುವಲ್ಲಿ ವಿಫಲವಾಯಿತು.ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ವಿಜಾಪುರ ನಗರ, ಬಬಲೇಶ್ವರ, ಇಂಡಿ, ನಾಗಠಾಣ, ಬಸವನ ಬಾಗೇವಾಡಿ, ಮುದ್ದೇಬಿಹಾಳ, ದೇವರ ಹಿಪ್ಪರಗಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಸಿಂದಗಿಯಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ಜಯ ಸಾಧಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಈ ಎಂಟೂ ಕ್ಷೇತ್ರಗಳಲ್ಲಿ ಚಲಾವಣೆಯಾದ ಒಟ್ಟು ಮತಗಳ ಮೂರನೇ ಒಂದು ಭಾಗದಷ್ಟು ಮತವನ್ನು ಕಾಂಗ್ರೆಸ್‌ ಪಡೆದಿತ್ತು. ಬಿಜೆಪಿ ಕೇವಲ ಶೇ.17.07ರಷ್ಟು ಮತದಾರರನ್ನು ಮಾತ್ರ ಸೆಳೆಯಲು ಯಶಸ್ವಿಯಾಗಿತ್ತು.ಬಿಜೆಪಿ, ಕೆಜೆಪಿ ಮತ್ತು ಬಿಎಸ್‌ಆರ್‌  ಕಾಂಗ್ರೆಸ್‌ ಮೂರೂ ಪಕ್ಷಗಳು ಸೇರಿ ಒಟ್ಟು 3,06,253 ಮತಗಳನ್ನು ಪಡೆದಿದ್ದವು. ಕಾಂಗ್ರೆಸ್‌ಗೆ 3,94,793  ಮತ ಬಂದಿದ್ದವು.  ಈ ಮೂರೂ ಪಕ್ಷಗಳಿಂತ ಕಾಂಗ್ರೆಸ್‌ 88,540 ಹೆಚ್ಚುವರಿ ಮತಗಳನ್ನು ಪಡೆದಿತ್ತು.ವಿಧಾನಸಭೆಗೂ ಮುನ್ನ ಬಿಜೆಪಿ ಯಿಂದ ಸಿಡಿದು ಸ್ವತಂತ್ರ ಅಸ್ತಿತ್ವ ರೂಪಿಸಿ ಕೊಂಡಿದ್ದ ಕೆಜೆಪಿ, ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಒಟ್ಟು ಚಲಾವಣೆ ಯಾದ ಮತಗಳಲ್ಲಿ ಶೇ 11.89ರಷ್ಟು ಮತಗಳನ್ನು ಕೆಜೆಪಿ ಪಡೆದಿತ್ತು. ಇದು ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣ ವಾಗದಿದ್ದರೂ, ಆ ಪಕ್ಷದ ಮತ ಗಳಿಕೆಯ ಪ್ರಮಾಣವನ್ನು ಗಣನೀಯವಾಗಿ ಕುಗ್ಗಿಸಿತ್ತು.ಒಡೆದು ಹೋಳಾಗಿದ್ದ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಬಿಜೆಪಿಯಲ್ಲಿ ವಿಲೀನವಾಗಿದೆ. ಬಡವ ಶ್ರಮಿಕ ರೈತರ (ಬಿಎಸ್‌ಆರ್‌) ಕಾಂಗ್ರೆಸ್‌ ಪಕ್ಷದ ಸಂಸ್ಥಾಪಕ ಬಿ. ಶ್ರೀರಾಮುಲು ಅವರೂ ಇತ್ತೀಚಿಗಷ್ಟೇ ಬಿಜೆಪಿಗೆ  ಸೇರಿದ್ದಾರೆ. ತಾಂತ್ರಿಕ ಕಾರಣಗಳಿಗಾಗಿ ಈ ಪಕ್ಷ ಇನ್ನೂ ಅಧಿಕೃತವಾಗಿ ಬಿಜೆಪಿ ಜತೆ ವಿಲೀನವಾಗಿಲ್ಲ. ಹೀಗಾಗಿ ಈ ಮೂರೂ ಪಕ್ಷಗಳು ಒಂದಾಗಿರುವುದು ಜಿಲ್ಲೆಯಲ್ಲಿ ಈ ಬಾರಿ ಲೋಕಸಭೆ ಚುನಾವಣೆಗೆ ಬಿಜೆಪಿಗೆ ವರವಾಗಲಿ ದೆಯೇ? ಎಂಬ ಲೆಕ್ಕಾಚಾರ ಶುರುವಾಗಿದೆ.ದೇವರ ಹಿಪ್ಪರಗಿ ಕ್ಷೇತ್ರದಲ್ಲಿ ಮಾತ್ರ ಕೆಜೆಪಿಯಿಂದಾಗಿ ಬಿಜೆಪಿ ಅಭ್ಯರ್ಥಿ ಸೋಲು ಅನುಭವಿಸಿದರು. ಅಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ನ ಎ.ಎಸ್‌. ಪಾಟೀಲ ನಡಹಳ್ಳಿ ಅವರು 36,231 ಮತ ಪಡೆದಿದ್ದರು.  ಬಿಜೆಪಿ ಮತ್ತು ಕೆಜೆಪಿ ಅಭ್ಯರ್ಥಿಗಳು ಒಟ್ಟಾರೆ 52,842 ಮತಗಳನ್ನು ಪಡೆದಿದ್ದರು. ಕೆಜೆಪಿಯ ರಾಜುಗೌಡ ಬಿ.ಪಾಟೀಲ 24,707 ಮತಗಳನ್ನು ಪಡೆದು, ಬಿಜೆಪಿಯ ಸೋಮನಗೌಡ ಪಾಟೀಲ ಸಾಸನೂರ (ಅವರು ಪಡೆದ ಮತ 28,135) ಅವರ ಸೋಲಿಗೆ ಕಾರಣರಾಗಿದ್ದರು.ಬಸವನ ಬಾಗೇವಾಡಿಯಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ ವಿರುದ್ಧ ಕೆಜೆಪಿಯ ಸಂಗರಾಜ ದೇಸಾಯಿ 9.834, ಆಗಿನ ನಾಗಠಾಣದ ಹಾಲಿ ಶಾಸಕ ವಿಠ್ಠಲ ಕಟಕಧೋಂಡ ಕೆಜೆಪಿಯಿಂದ ಸ್ಪರ್ಧಿಸಿ 24,104 ಮತ ಪಡೆದಿದ್ದರು. ಕೆಜೆಪಿಗೆ ಹೋಲಿಸಿದರೆ ಬಿಎಸ್‌ಆರ್‌ ಕಾಂಗ್ರೆಸ್‌ ನದ್ದು ಕಳಪೆ ಸಾಧನೆ. ಆ ಪಕ್ಷ ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ತ್ತಾದರೂ ಒಟ್ಟಾರೆ ಕೇವಲ 12,980 ಮತಗಳನ್ನಷ್ಟೇ ಪಡೆಯಿತು. ಬಿಎಸ್‌ಪಿ 7,154 ಹಾಗೂ ಪಕ್ಷೇತರರು 87,164 ಮತಗಳನ್ನು ಪಡೆದು ಕೊಂಡಿದ್ದರು.‘ಬಿಜೆಪಿ–ಕೆಜೆಪಿ–ಬಿಎಸ್‌ಆರ್‌ ಪಕ್ಷಗಳು ವಿಭಜನೆಯಾಗಿದ್ದರಿಂದ ನಮ್ಮ ಮತಗಳು ಹರಿದು ಹಂಚಿ ಹೋಗಿದ್ದವು. ಮೇಲಾಗಿ ನಮಗೆ ಪಾಠ ಕಲಿಸಲು ಕೆಲ ಮತದಾರರು ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದರು. ಈಗ ನಾವೆಲ್ಲ ಒಟ್ಟಾಗಿದ್ದೇವೆ. ನಮ್ಮ ಮತಗಳಿಗೆ ಪ್ರಮಾಣ ಹೆಚ್ಚಲಿದೆ’ ಎಂಬುದು ಬಿಜೆಪಿಯ ಎಣಿಕೆ.‘ಈ ಮೂರೂ ಪಕ್ಷಗಳ ಮತ ಗಳಿಕೆಯ ಪ್ರಮಾಣ ಶೇ.30.24ರಷ್ಟು ಮಾತ್ರ. ನಾವು ಆ ಮೂರೂ ಪಕ್ಷಗಳಿಗಿಂತ ಶೇ 8.75ರಷ್ಟು ಹೆಚ್ಚು ಮತ ಪಡೆದಿದ್ದೆವು. ಈಗಲೂ ಅದು ಮುಂದುವರೆಯುತ್ತದೆ’ ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರ. ಈ ಚುನಾವಣೆಯಲ್ಲಿ ಯಾರ ಲೆಕ್ಕ ಸರಿಯಾಗಲಿದೆ ಎಂಬುದೇ ಈಗಿರುವ ಪ್ರಶ್ನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.