ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಂಗಾರಪ್ಪ ಕುಟುಂಬ ದೀವರ ಋಣದಲ್ಲಿದೆ’

ಮಧು ಬಂಗಾರಪ್ಪಗೆ ಸೋದರ ಕುಮಾರ್‌ ಬಂಗಾರಪ್ಪ ತಿರುಗೇಟು
Last Updated 18 ಜೂನ್ 2018, 13:21 IST
ಅಕ್ಷರ ಗಾತ್ರ

ಶಿವಮೊಗ್ಗ: ದೀವರ ಸಮಾಜ, ಬಂಗಾರಪ್ಪ ಕುಟುಂಬದ ಋಣದಲ್ಲಿ ಇಲ್ಲ; ಬಂಗಾರಪ್ಪ ಕುಟುಂಬ, ದೀವರ ಸಮಾಜದ ಋಣದಲ್ಲಿದೆ ಎಂದು ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಹೇಳಿದರು.

ಮಧು ಬಂಗಾರಪ್ಪಗೆ ಇತಿಹಾಸ ಗೊತ್ತಿಲ್ಲ; ಕೆಟ್ಟ ಹಾದಿಯಲ್ಲಿ ಈಗ ಯಶಸ್ಸು ಕಂಡಿದ್ದಾರೆ. ಯಾರು? ಯಾವ ಋಣದಲ್ಲಿದ್ದಾರೆಂಬ ಕನಿಷ್ಠ ತಿಳಿವಳಿಕೆಯೂ ಅವರಿಗಿಲ್ಲ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಈಚೆಗೆ ನಡೆದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ  ದೀವರ ಸಮಾಜ ಬಂಗಾರಪ್ಪ ಅವರ ಋಣದಲ್ಲಿದೆ ಎಂಬ ಶಾಸಕ ಮಧು ಬಂಗಾರಪ್ಪ ಅವರ ಮಾತಿಗೆ, ಕುಮಾರ್‌ ಬಂಗಾರಪ್ಪ ತಿರುಗೇಟು ನೀಡಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಮಧು ಬಂಗಾರಪ್ಪ ಘೋಷಿಸಿದ್ದಾರೆ. ಇದು ಜೆಡಿಎಸ್‌ಗೆ ಅವಮಾನ. ಇವರು ದೇವೇಗೌಡರಿಗಿಂತ ದೊಡ್ಡ ನಾಯಕರೇ ಎಂದು ಪ್ರಶ್ನಿಸಿದರು. ಮಧು ಬಂಗಾರಪ್ಪ ತಮ್ಮ  ಭಾಷೆಯನ್ನು ಸರಿಪಡಿಸಿಕೊಳ್ಳ ಬೇಕು. ರಾಜಕಾರಣದಲ್ಲೂ ವೈರಿಗಳನ್ನೂ ಗೌರವದಿಂದ ಕಾಣಬೇಕೆಂಬ ಸಂಸ್ಕೃತಿ ಇದೆ. ತಂದೆಯ ಅನುಕಂಪ, ತಾಯಿಯ ಅನಾರೋಗ್ಯವನ್ನು ರಾಜಕೀಯಕ್ಕೆ ಬಳಸುವ ಕೀಳುಮಟ್ಟಕ್ಕೆ ಅವರು ಇಳಿಯಬಾರದು ಎಂದು ಕುಮಾರ್ ಬಂಗಾರಪ್ಪ ತಾಕೀತು ಮಾಡಿದರು.

ಜೆಡಿಎಸ್ ಅಭ್ಯರ್ಥಿಯಾಗಿ ಅಪ್ಪನ ಆಸೆ ಈಡೇರಿಸುವೆ ಎಂಬ ಗೀತಾ ಶಿವರಾಜ್‌ಕುಮಾರ್‌ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಕುಮಾರ್ ಬಂಗಾರಪ್ಪ, ‘ಗೀತಾ ಅವರು ಕಾಂಗ್ರೆಸ್‌ನಿಂದ ನಿಂತು ಈ ಮಾತು ಹೇಳಿದ್ದರೆ ಸರಿಯಾಗುತ್ತಿತ್ತು. ಬಂಗಾರಪ್ಪಗೆ ಕಾಂಗ್ರೆಸ್‌ ಎಲ್ಲವನ್ನೂ ನೀಡಿದೆ. ಜೆಡಿಎಸ್‌, ಬಂಗಾರಪ್ಪಗೆ ಮೊದಲಿನಿಂದಲೂ ಮೋಸ ಮಾಡಿದೆ’ ಎಂದು ಆರೋಪಿಸಿದರು.

ತಮ್ಮ ಸ್ಪರ್ಧೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಉಳಿಸುವುದಕ್ಕಷ್ಟೇ; ಇದರಲ್ಲಿ ಪ್ರತಿಷ್ಠೆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದ ಅವರು, ಕಳೆದ ಚುನಾವಣೆಯಲ್ಲಿ ಟಿಕೆಟ್‌ ಹಂಚಿಕೆಯ ಗೊಂದಲದಿಂದ ಶಿಕಾರಿಪುರ, ಭದ್ರಾವತಿಯನ್ನು ಕಾಂಗ್ರೆಸ್‌ ಕಳೆದುಕೊಳ್ಳಲಾಯಿತು. ಈಗ ಅದು ಆಗಬಾರದು ಎಂದರು.

ಪಕ್ಷದ ಮುಂದೆ ವಿಧಾನ ಪರಿಷತ್‌ಗೆ ತಮ್ಮನ್ನು ನೇಮಕ ಮಾಡಿ ಎಂದು ಯಾವುದೇ ಬೇಡಿಕೆ ಇಟ್ಟಿಲ್ಲ. ಬ್ಯಾಕ್‌ ಡೋರ್‌ ಎಂಟ್ರಿ ಎಂದಿಗೂ ಇಲ್ಲ. ಅಂತಹ ರಾಜಕಾರಣವನ್ನು ಬಂಗಾರಪ್ಪ ನಮಗೆ ಕಲಿಸಿಕೊಟ್ಟಿಲ್ಲ ಎಂದು ತೀಕ್ಷ್ಣವಾಗಿ ನುಡಿದರು. ಒಂದೇ ಕುಟುಂಬದ ಇಬ್ಬರಿಗೆ ಟಿಕೆಟ್ ನೀಡಿದರೆ ಮತ ಹಂಚಿಕೆಯಾಗಿ ಬಿಜೆಪಿ ಅಭ್ಯರ್ಥಿ ಬಿ.ಎಸ್‌.ಯಡಿಯೂರಪ್ಪಗೆ ಅನುಕೂಲವಾಗುವುದಿಲ್ಲವೇ ಎಂಬ ಮಾಧ್ಯಮಗಳ ಪ್ರಶ್ನೆಗೆ, ‘ಅಂತಹ ಪ್ರಶ್ನೆ ಉದ್ಭವಿಸುವುದಿಲ್ಲ; ಯಡಿಯೂರಪ್ಪ ಈಗಾಗಲೇ ಅವರಿಗೆ ಅವರೇ ಆಹಾರವಾಗಿದ್ದಾರೆ’ ಎಂದು ಸೂಚ್ಯವಾಗಿ ನುಡಿದರು.

ಟಿಕೆಟ್‌ ತಪ್ಪಿಸಿದ್ದು ಹಿರಿಯ ನಾಯಕರು: ‘ತಮಗೆ ಟಿಕೆಟ್ ತಪ್ಪಿಸಿದ್ದು ಕಾಂಗ್ರೆಸ್‌ನ ಒಬ್ಬ ಹಿರಿಯ ನಾಯಕರು. ಸಮಯ ಬಂದಾಗ ಅವರ ಹೆಸರು ಬಹಿರಂಗ ಪಡಿಸುತ್ತೇನೆ’ ಎಂದು ಕುಮಾರ್‌ ಬಂಗಾರಪ್ಪ ಹೇಳಿದರು.

ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರ ಗಮನಕ್ಕೆ ಈ ವಿಷಯ ಬಂದಿತ್ತೇ? ಎಂಬ ಪ್ರಶ್ನೆಗೆ, ‘ತಿಮ್ಮಪ್ಪ ಅವರು ಹಿರಿಯರು. ಅವರು ಈಗ ಸಭಾಧ್ಯಕ್ಷರು; ಅವರ ಬಗ್ಗೆ ಮಾತನಾಡುವುದು ಸರಿ ಅಲ್ಲ. ಅವರಿಗೂ ಈ ಹಿಂದೆ ಸ್ಪರ್ಧಿಸುವ ವಿಷಯ ತಿಳಿಸಿದ್ದೆ. ಸ್ಪರ್ಧೆ ಮಾಡು ಎಂದು ಹೇಳಿದ್ದರು’ ಎಂದರು.

‘ಪಕ್ಷ ಬಿಡಬೇಡಿ; ಹೈಕಮಾಂಡ್‌ ಭೇಟಿ ಮಾಡಿ’
ಸುದ್ದಿಗೋಷ್ಠಿಗೂ ಮೊದಲು ಶರಾವತಿ ನಗರದ ತಮ್ಮ ನಿವಾಸದಲ್ಲಿ ಕುಮಾರ್‌ ಬಂಗಾರಪ್ಪ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಪಾರ ಬೆಂಬಲಿಗರ ಸಭೆ ನಡೆಸಿದರು.

ಸಭೆಯಲ್ಲಿದ್ದ ಮುಖಂಡರೆಲ್ಲರೂ, ಯಾವುದೇ ಕಾರಣಕ್ಕೂ ತಾವು ಕಾಂಗ್ರೆಸ್‌ ಬಿಡುವ ನಿರ್ಧಾರ ಕೈಗೊಳ್ಳಬೇಡಿ. ಕೊನೆ ಸಲ ಹೈಕಮಾಂಡ್‌ ಭೇಟಿ ಮಾಡಿ, ತದನಂತರ ಮುಂದಿನ ನಿರ್ಧಾರ ಕೈಗೊಳ್ಳಿ ಎಂದು ಮನವಿ ಮಾಡಿದರು.

ಸಭೆಯಲ್ಲಿ ಪ್ರಮುಖವಾಗಿ ಮಾಜಿ ಶಾಸಕ ಡಾ.ಜಿ.ಡಿ. ನಾರಾಯಣಪ್ಪ, ಜಿ.ಪಂ.ಸದಸ್ಯೆ ಲಿಲಿತಾ ನಾರಾಯಣ, ಮುಖಂಡರಾದ ತಬಲಿ ಬಂಗಾರಪ್ಪ, ಶಿವಾನಂದಪ್ಪ, ಗೋಣಿ ಮಾಲತೇಶ್, ಮಲ್ಲಿಕಾರ್ಜುನ್‌ ಗುತ್ತೇರ್, ಕೆ.ಮಂಜಪ್ಪ, ಮಹೇಶ್‌ ಹುಲ್ಮಾರ್, ಇಕ್ಕೇರಿ ರಮೇಶ್‌, ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಕೆ.ಜಿ.ನವಾಬ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT