ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪ್ಪ ಚಿಂತನೆಗಳ ಸಾಕಾರಕ್ಕೆ ಸಹಕರಿಸಿ

ಸೊರಬ ಪಟ್ಟಣದ ಬಂಗಾರಧಾಮದಲ್ಲಿ ಗೀತಾ ಶಿವರಾಜ್ ಕುಮಾರ್ ಮನವಿ
Last Updated 18 ಜೂನ್ 2018, 13:21 IST
ಅಕ್ಷರ ಗಾತ್ರ

ಸೊರಬ: ರಾಜಕಾರಣ ತಮಗೇನು ಹೊಸತಲ್ಲ.  40 ವರ್ಷಗಳಿಂದ ತಮ್ಮ ತಂದೆ ಬಂಗಾರಪ್ಪ ಅವರೊಂದಿಗಿದ್ದು, ಅವರ ಗರಡಿಯಲ್ಲಿ ಒಂದಿಷ್ಟು ಅಳಿಲು ಸೇವೆ ಮಾಡಿ ಅನುಭವ ಹೊಂದಿರುವುದಾಗಿ ಶಿವಮೊಗ್ಗ ಜೆಡಿಎಸ್ ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ನುಡಿದರು.

ಭಾನುವಾರ ಪಟ್ಟಣದ ದಿ.ಎಸ್ ಬಂಗಾರಪ್ಪ ಅವರ ಸಮಾಧಿ ಸ್ಥಳಕ್ಕೆ ಅಪಾರ ಅಭಿಮಾನಿಗಳೊಂದಿಗೆ ಆಗಮಿಸಿ ಸಮಾಧಿಗೆ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಮಾಜಿ ಮುಖ್ಯಮಂತ್ರಿ ದಿ.ಎಸ್ ಬಂಗಾರಪ್ಪ ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರು  ಮತ್ತಷ್ಟು ರಾಜಕೀಯದಲ್ಲಿ ಮಾಡ ಬೇಕಿಗಿದ್ದ ಬಡವರ ಪರ ಕೆಲಸವನ್ನು ಈಡೇರಿಸಲು ನಾನು ಶಿವಮೊಗ್ಗ ಲೋಕಸಭಾ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಜಿಲ್ಲೆಯ ಮತದಾರರು ಈ ಬಾರಿ ತಮಗೆ ಹೆಚ್ಚಿನ ಬಹುಮತದಿಂದ ಜಯಗಳಿಸಿ ಕೊಡುತ್ತಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ನಾನು ನಮ್ಮ ತಂದೆ ಬಂಗಾರಪ್ಪ ಅವರ ಜೊತೆ 45 ವರ್ಷದ ರಾಜಕೀಯ ಜೀವನದಲ್ಲಿ ಅನೇಕ ಅನುಭವಗಳನ್ನು ಪಡೆದುಕೊಂಡಿದ್ದು, ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿ ಕೊಳ್ಳಲು ಈ ನಿರ್ಧಾರ ತೆಗೆದು ಕೊಂಡಿದ್ದೇನೆ ಎಂದ ಅವರು, ಶಿವಮೊಗ್ಗ ಕ್ಷೇತ್ರ ಸಮಾಜವಾದಿ ಹೋರಾಟಕ್ಕೆ ಹೆಸರು ಪಡೆದಿದ್ದು ಜಿಲ್ಲೆಯ ಮತದಾರರು ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ನನಗೆ ತಮ್ಮ ಬೆಂಬಲವನ್ನು ಸೂಚಿಸಲಿದ್ದಾರೆ’ ಎನ್ನುವ ನಂಬಿಕೆ ಇದೆ ಎಂದು ತಿಳಿಸಿದರು.

ನಟ ಶಿವರಾಜ್ ಕುಮಾರ್ ಮಾತನಾಡಿ, ಬಂಗಾರಪ್ಪ ಅವರು ರಾಜ್ಯ ಕಂಡ ಧೀಮಂತ ನಾಯಕ. ಯಾವುದೇ ಒಂದು ಸಮುದಾಯಕ್ಕೆ ಸೇರಿದವರಲ್ಲ. ಅದೇ ತಂದೆಯ ನೆರಳಿನಲ್ಲಿ ಬೆಳೆದಿರುವ ಗೀತಾ ಶೀವರಾಜ್ ಕುಮಾರ್ ಅವರು, ಸಾಮಾಜಿಕ ಕಾಳಜಿ ಹೊಂದಿದವರು. ತಂದೆಯ ಸ್ಥಾನವನ್ನು ತುಂಬಲು ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ರಾಜಕೀಯವಾಗಿ ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ತಾವು ಪತಿಯಾಗಿ ಮತ್ತು ಬಂಗಾರಪ್ಪ ಅಭಿಮಾನಿಯಾಗಿ ಬೆಂಬಲಿಸುವುದಾಗಿ ತಿಳಿಸಿದ ಅವರು, ಸೋಮವಾರ ನಾಮಪತ್ರ ಸಲ್ಲಿಸಿಕೆ ನಂತರ 5-6 ದಿವಸ ಕ್ಷೇತ್ರದಾದ್ಯಂತ ಗೀತಾ ಶೀವರಾಜ್ ಕುಮಾರ್ ಅವರ ಪರವಾಗಿ ಪ್ರಚಾರದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.

ಜಿಲ್ಲೆಯಾದಾದ್ಯಂತ ಬಂಗಾರಪ್ಪ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೀತಾ ಶಿವರಾಜ್ ಕುಮಾರ್ ಅವರ ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದರು.

ಶಾಸಕ ಮಧು ಬಂಗಾರಪ್ಪ ಮಾತನಾಡಿ, ಶಿವಮೊಗ್ಗ ಕ್ಷೇತ್ರದಿಂದ ಈ ಬಾರಿ ವಿಶೇಷವಾಗಿ ಮಹಿಳಾ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಅವರನ್ನು ಕಣಕ್ಕಿಳಿಸುವ ಮೂಲಕ ಮಹಿಳೆಯರಿಗೆ ಪ್ರಾತಿನಿಧ್ಯವನ್ನು ನೀಡಲಾಗಿದೆ. ಈಗಾಗಲೇ ಜಿಲ್ಲೆಯಾದಾದ್ಯಂತ ಜೆಡಿಎಸ್ ಪರ ಅಲೆುದ್ದು, ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ತವಕದಲ್ಲಿ ಮತದಾರ ಪ್ರಭುಗಳು ಉತ್ಸುಕರಾಗಿದ್ದಾರೆ ಎಂದು ಹೆಮ್ಮೆಯಿಂದ ನುಡಿದ ಅವರು, ರಾಜ್ಯ ಜೆಡಿಎಸ್ ಮುಖಂಡರುಗಳು ಹಾಗೂ ಸಾವಿರಾರು ಬೆಂಬಲಿಗರೊಂದಿಗೆ ಮೆರವಣಿಗೆ ಸೋಮವಾರ ಬೆಳಿಗ್ಗೆ 10ಕ್ಕೆ ಶಿವಮೊಗ್ಗ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಮೆರವಣಿಗೆ ನಡೆಸಿ, ನಂತರ ಜಿಲ್ಲಾಧಿಕಾರಿ  ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ನಾಮಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ, ಮಹಿಳಾ ಘಟಕದ ಅಧ್ಯಕ್ಷೆ ಶೇಖರಮ್ಮ, ವಕ್ತಾರ ಎಂ,ಡಿ.ಶೇಖರ್, ಸಯ್ಯದ್ ಶಬ್ಬೀರ್, ವಿ,ಪಿ.ಬಳಿಗಾರ್, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಪ್ರಶಾಂತ ಮೇಸ್ತ್ರಿ, ಸದಸ್ಯ ಡಿ,ಆರ್.ಶ್ರೀಧರ್, ಎಸ್.ಆರ್.ಕುಮಾರಸ್ವಾಮಿ, ಸಯ್ಯದ್ ಅತಿಕ್, ಮಂಚಿ ಸೋಮಪ್ಪ, ಸಣ್‌ಬೈಲ್ ಪರುಶುರಾಮ, ಫಯಾಜ್ ಅಹ್ಮದ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT