25 ಬಾರಿ ಭರ್ತಿಯಾದ ಜಲಾಶಯ

7
54 ವರ್ಷಗಳಿಂದ ನಿರಂತರ ವಿದ್ಯುತ್ ಉತ್ಪಾದನೆ* 19 ಬಾರಿ ರೇಡಿಯಲ್ ಗೇಟ್ ತೆರೆದು ನೀರು ಬಿಡುಗಡೆ

25 ಬಾರಿ ಭರ್ತಿಯಾದ ಜಲಾಶಯ

Published:
Updated:
Deccan Herald

ಕಾರ್ಗಲ್: ನಾಡಿಗೆ ಬೆಳಕು ನೀಡುವ ಮಹತ್ತರ ಉದ್ದೇಶದಿಂದ ಆಧುನಿಕ ಶೈಲಿಯಲ್ಲಿ 1964ರಲ್ಲಿ ನಿರ್ಮಾಣಗೊಂಡ ಲಿಂಗನಮಕ್ಕಿ ಜಲಾಶಯ 25ನೇ ಬಾರಿ ಭರ್ತಿಯಾಗಿದೆ. 54 ವರ್ಷಗಳಿಂದ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿರುವ ಜಲಾಶಯದಲ್ಲಿ 19 ಬಾರಿ ರೇಡಿಯಲ್ ಗೇಟ್‌ಗಳ ಮೂಲಕ ನೀರು ಹೊರ ಬಿಡಲಾಗಿದೆ.

ಶುಕ್ರವಾರ ಜಲಾಶಯದಿಂದ 50 ಸಾವಿರ ಕ್ಯುಸೆಕ್ ನೀರನ್ನು 11 ಗೇಟುಗಳ ಮೂಲಕ ನದಿ ಪಾತ್ರಕ್ಕೆ ಹರಿಸಲಾಗುತ್ತಿದ್ದು, ಜಲಾಶಯದ ಮಟ್ಟ 1,818 ಅಡಿಗೆ ಕಾಯ್ದುಕೊಳ್ಳಲಾಗಿದೆ.

156 ಟಿಎಂಸಿ ಅಡಿ ನೀರು ಗರಿಷ್ಠ ಪ್ರಮಾಣದಲ್ಲಿ ಸಂಗ್ರಹ ಸಾಮರ್ಥ್ಯವಿದ್ದು, ಅಷ್ಟೂ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಲು ಸಾಧ್ಯವಿದೆ. ಸಮುದ್ರ ಮಟ್ಟದಿಂದ 1,819 ಅಡಿ ಎತ್ತರದವರೆಗೆ ಗರಿಷ್ಠ ನೀರು ಸಂಗ್ರಹಿಸಲು ಸಾಧ್ಯವಿರುವ ಅಣೆಕಟ್ಟೆಯ ಉದ್ದ 2.74 ಕಿ.ಮೀ ಇದ್ದು, ಎತ್ತರ 201 ಅಡಿ ಮತ್ತು 1,991 ಚ.ಕಿಮೀ ವ್ಯಾಪ್ತಿಯ ಜಲಾಯನಯನ ಪ್ರದೇಶ ಹೊಂದಿದೆ.

1970ರಲ್ಲಿ 92 ಟಿಎಂಸಿ ಅಡಿ ನೀರು ಜಲಾಶಯದಿಂದ ಹೊರ ಹರಿದಿರುವುದು ಅತ್ಯಧಿಕ ಹೊರ ಹರಿವಿನ ದಾಖಲೆಯಾಗಿ ಉಳಿದಿದೆ. 1968ರಲ್ಲಿ 4,989ಮಿ.ಮೀ ಮಳೆ ಸುರಿದಿರುವುದು ಜಲಾನಯನ ಪ್ರದೇಶದ ಅತ್ಯಧಿಕ ಮಳೆಯ ಸಾಕ್ಷಿಯಾಗಿ ಉಳಿದಿದೆ. ಕೇವಲ 1 ಗಂಟೆಯೊಳಗೆ ಈ ಬಾರಿ 2.50 ಲಕ್ಷ ಕ್ಯುಸೆಕ್ ನೀರು ಹರಿದು ಬಂದಿರುವುದು ಒಳಹರಿವಿನ ಸಾರ್ವಕಾಲಿಕ ದಾಖಲೆಯಾಗಿದೆ.

11 ರೇಡಿಯಲ್ ಗೇಟ್ ಮತ್ತು 2 ಸ್ಲ್ಯೂಸ್ ಗೇಟ್ ಹೊಂದಿರುವ ಅಣೆಕಟ್ಟೆ 1.65ಕಿ.ಮೀ ಉದ್ಧದ ಸೋರಿಕೆ ನೀರಿನ ಸಂಗ್ರಹಾಗಾರದ ಗ್ಯಾಲರಿಯನ್ನು ಹೊಂದಿದೆ. ಸುರಕ್ಷತೆ ಮತ್ತು ಗೇಟ್ ನಿರ್ವಹಣೆಯಲ್ಲಿ ರಾಜ್ಯದ ಪ್ರಥಮ ಶ್ರೇಣಿಯ ಜಲಾಶಯ ಎಂಬ ಹಿರಿಮೆ ಲಿಂಗನಮಕ್ಕಿ ಅಣೆಕಟ್ಟೆ ಹೊಂದಿದೆ ಎಂದು ಕೆಪಿಸಿ ಮುಖ್ಯ ಎಂಜಿನಿಯರ್ ಆನಂದ ಜಿ. ಕುಲಕರ್ಣಿ ತಿಳಿಸಿದರು.

* * *

11 ಗೇಟ್‌ ತೆರೆದು - 50 ಸಾವಿರ ಕ್ಯುಸೆಕ್ ನೀರು ಬಿಡುಗಡೆ
156 ಟಿಎಂಸಿ ಅಡಿ - ಗರಿಷ್ಠ ಸಂಗ್ರಹ ಸಾಮರ್ಥ್ಯ
2.50 ಲಕ್ಷ ಕ್ಯುಸೆಕ್‌ - ಈ ಬಾರಿ ಒಂದೇ ಗಂಟೆಯಲ್ಲಿ ಬಂದ ಒಳಹರಿವು

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !