ವಿಜಯಪುರ ಜಿಲ್ಲೆ: 8 ವರ್ಷಗಳಲ್ಲಿ 3.15 ಲಕ್ಷ ನವ ಸಾಕ್ಷರರು..!

7
ಜಿಲ್ಲೆಯ ಸಾಕ್ಷರತಾ ಪ್ರಮಾಣ 67.20%; ವಿಶ್ವ ಸಾಕ್ಷರತಾ ದಿನಾಚರಣೆ

ವಿಜಯಪುರ ಜಿಲ್ಲೆ: 8 ವರ್ಷಗಳಲ್ಲಿ 3.15 ಲಕ್ಷ ನವ ಸಾಕ್ಷರರು..!

Published:
Updated:

ವಿಜಯಪುರ: ವಯಸ್ಕರ ಶಿಕ್ಷಣ ಇಲಾಖೆಯ ವಿವಿಧ ಕಾರ್ಯಕ್ರಮಗಳಡಿ, 2011ರಿಂದೀಚೆಗೆ ಜಿಲ್ಲೆಯ ವ್ಯಾಪ್ತಿಯಲ್ಲಿ 3.15 ಲಕ್ಷ ಜನರು ನವ ಸಾಕ್ಷರರಾಗಿದ್ದಾರೆ. ಇನ್ನೂ ಲಕ್ಷ, ಲಕ್ಷ ಸಂಖ್ಯೆಯ ಜನಸಮೂಹ ಅಕ್ಷರ ಕಲಿಯಲು ಚಾತಕ ಹಕ್ಕಿಗಳಂತೆ ಕಾದಿದ್ದಾರೆ.

2011ರ ಜನಗಣತಿ ಪ್ರಕಾರ ಜಿಲ್ಲೆಯ ಸಾಕ್ಷರತಾ ಪ್ರಮಾಣ 67.20%ರಷ್ಟಿದೆ. 21,77,331 ಜನರಲ್ಲಿ 12,48,268 ಮಂದಿ ಮಾತ್ರ ಅಕ್ಷರಸ್ಥರಿದ್ದಾರೆ ಎಂಬುದನ್ನು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಅಂಕಿ–ಅಂಶಗಳು ದೃಢಪಡಿಸುತ್ತವೆ.

‘ದೇಶದ ಪ್ರತಿಯೊಬ್ಬ ಪ್ರಜೆಯೂ ಸಾಕ್ಷರರಾಗಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2010ರಲ್ಲಿ ಜಾರಿಗೊಳಿಸಿದ ‘ಸಾಕ್ಷರ ಭಾರತ’ ಯೋಜನೆ ಮೂರು ಹಂತಗಳಲ್ಲಿ ಜಿಲ್ಲೆಯಲ್ಲಿ ಅನುಷ್ಠಾನಗೊಂಡ ಫಲವಾಗಿ 3.15 ಲಕ್ಷ ನವ ಸಾಕ್ಷರರು ಅಕ್ಷರ ಕಲಿತರು. ಓದು–ಬರಹದ ಮಹತ್ವವನ್ನು ಅರಿತರು’ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎ.ಬಿ.ಅಲ್ಲಾಪುರ ತಿಳಿಸಿದರು.

‘ಸಾಕ್ಷರ ಭಾರತ್‌ ಯೋಜನೆಯ ಮೊದಲ ಹಂತಕ್ಕೆ ಜಿಲ್ಲೆಯಲ್ಲಿ 2011ರಲ್ಲಿ ಚಾಲನೆ ಸಿಕ್ಕಿತು. ನಿಗದಿ ಪಡಿಸಿದ ಗುರಿಯಂತೆ 1.23 ಲಕ್ಷ ನಿರಕ್ಷರಿಗಳಿಗೆ 12,300 ಸ್ವಯಂಸೇವಕರು ತಮ್ಮೂರುಗಳಲ್ಲಿ ಸ್ವ ಇಚ್ಚೆಯಿಂದ ತಮ್ಮ ಮನೆ, ದೇಗುಲ, ಸಮುದಾಯ ಭವನಗಳಲ್ಲಿ ಸಂಜೆ, ರಾತ್ರಿಯ ವೇಳೆ ವಯಸ್ಕರ ಶಿಕ್ಷಣ ಪದ್ಧತಿಯಡಿ ವರ್ಣಮಾಲೆಯ ಬದಲು ಪದಗಳನ್ನು ಬಳಸಿ ಶಿಕ್ಷಣ ಕಲಿಸಿದರು.

2013ರಲ್ಲಿ ಎರಡನೇ ಹಂತಕ್ಕೆ ಚಾಲನೆ ಸಿಕ್ಕಿತು. ಈ ಸಮಯ 7627 ಸ್ವಯಂಸೇವಕರು 76270 ಜನರಿಗೆ ಅಕ್ಷರ ಕಲಿಸಿದರು. 10 ಜನರಿಗೆ ಒಬ್ಬರಂತೆ ಸ್ವಯಂಸೇವಕರು ಕರ್ತವ್ಯ ನಿರ್ವಹಿಸಿ, ಎಲ್ಲರನ್ನೂ ಸಾಕ್ಷರರನ್ನಾಗಿಸಿದರು. ನವ ಸಾಕ್ಷರರು ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಖುಷಿಯಿಂದ ಬೀಗಿದರು.

ಕೊನೆಯ ಮೂರನೇ ಹಂತ 2014ರಲ್ಲಿ ಆರಂಭಗೊಂಡಿತು. 11000 ಸ್ವಯಂ ಸೇವಕರು 1.11 ಲಕ್ಷ ಜನರಿಗೆ ಅಕ್ಷರಾಭ್ಯಾಸ ಮಾಡಿಸಿ, ಓದು ಬರಹ ಕಲಿಸಿದರು. ಕೇಂದ್ರದ ಈ ಯೋಜನೆ 2016ರ ಮಾರ್ಚ್‌ಗೆ ಪೂರ್ಣಗೊಂಡಿತು’ ಎಂದು ಈ ಹಿಂದೆ ಈ ಯೋಜನೆಯಲ್ಲಿ ಕೆಲಸ ಮಾಡಿದ್ದ ಪುಟ್ಟಸ್ವಾಮಿಗೌಡ ಜಿಲ್ಲಾ ಕಚೇರಿಗೆ ಭೇಟಿ ನೀಡಿದ್ದ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ರಾಜ್ಯ ಸರ್ಕಾರ 2017–18ರಲ್ಲಿ ಮೂಲ ಸಾಕ್ಷರತಾ ಯೋಜನೆ ಅನುಷ್ಠಾನಗೊಳಿಸಿತು. ಈ ಯೋಜನೆಯಡಿ ಅನುದಾನ ಸಮರ್ಪಕವಾಗಿ ದೊರಕದಿದ್ದರಿಂದ 4970 ಜನರಷ್ಟೇ ಸಾಕ್ಷರರಾದರು. 2018–19ನೇ ಸಾಲಿನಲ್ಲೂ ಯೋಜನೆ ಜಾರಿಗೊಂಡಿದೆ.

ಕಾರ್ಯಕ್ರಮ ಅಧಿಕಾರಿ ಟಿ.ಎ.ಬಗಲಿ ತರಬೇತಿಗಾಗಿ ಬೆಂಗಳೂರಿಗೆ ಹೋಗಿದ್ದಾರೆ. ಈ ತಿಂಗಳಾಂತ್ಯದಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು. ಈ ವರ್ಷದ ಗುರಿ 3975 ಜನರನ್ನು ನವ ಸಾಕ್ಷರರನ್ನಾಗಿಸುವುದಿದೆ’ ಎಂದು ಇಲಾಖೆಯ ಹೆಸರು ಬಹಿರಂಗಪಡಿಸಲಿಚ್ಚಿಸದ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !