ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

32 ಮಂದಿಗೆ ಜಾನಪದ ಲೋಕ ಪುರಸ್ಕಾರ

ಪ್ರವಾಸಿ ಜಾನಪದ ಲೋಕೋತ್ಸವ ಇಂದಿನಿಂದ
Last Updated 15 ಫೆಬ್ರುವರಿ 2019, 13:20 IST
ಅಕ್ಷರ ಗಾತ್ರ

ರಾಮನಗರ: ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಇಲ್ಲಿನ ಜಾನಪದ ಲೋಕದ ಆವರಣದಲ್ಲಿ ಇದೇ 16, 17ರಂದು ಪ್ರವಾಸಿ ಜಾನಪದ ಲೋಕೋತ್ಸವ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ ಪರಿಷತ್‌ ವತಿಯಿಂದ 32 ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

‘17ರಂದು ಸಂಜೆ 5.30ಕ್ಕೆ ಬಯಲು ರಂಗಮಂದಿರದಲ್ಲಿ ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಆದಿಚುಂಚನಗಿರಿ ಪೀಠದ ನಿರ್ಮಲಾನಂದನಾಥ ಸ್ವಾಮೀಜಿ, ಶಾಸಕಿ ಅನಿತಾ ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ. ವಿವಿಧ ದತ್ತಿ ನಿಧಿಗಳ ಅಡಿ ಈ ಪ್ರಶಸ್ತಿಗಳನ್ನು ನೀಡಲಾಗುವುದು. ₹15 ಸಾವಿರ, ₹10 ಸಾವಿರ ಹಾಗೂ ₹5 ಸಾವಿರ ನಗದು ಪುರಸ್ಕಾರವನ್ನು ಇವು ಒಳಗೊಂಡಿವೆ’ ಎಂದು ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಶಸ್ತಿ ಪುರಸ್ಕೃತರು: ಕೊಡಗು ಜಿಲ್ಲೆಯ ಸೋರೆ ಬುರುಡೆ ಜನಪದಗೀತೆ ಕಲಾವಿದ ಜೇನುಕುರುಬರ ಮರಿ, ಮೈಸೂರಿನ ಜಾನಪದ ವಿದ್ವಾಂಸ ಪಿ.ಕೆ. ರಾಜಶೇಖರ್, ತುಮಕೂರಿನ ಸೋಬಾನೆ ಹಾಡುಗಾರ್ತಿಯರಾದ ಸಣ್ಣಮ್ಮ, ಹನುಮಕ್ಕ, ಹಾಸನ ಜಿಲ್ಲೆಯ ಕಥಾಕೀರ್ತನಾಕಾರ, ಸೋಮನಕುಣಿತದ ಕಲಾವಿದ ಚೌಡಪ್ಪದಾಸ, ಕಲಬುರ್ಗಿಯ ಏಕತಾರಿ ಮತ್ತು ಹಾರ್ಮೋನಿಯಂ ಕಲಾವಿದ ಬುಗ್ಗಪ್ಪ ಮಾಸ್ಟರ್‌ ಬಿಬ್ಬಳ್ಳಿ, ಕಾಸರಗೋಡು ಜಿಲ್ಲೆಯ ಭೂತಾರಾದನೆ ಕಲಾವಿದ ಕುಟ್ಟಿ ಬಜಕೂಡ್ಲು ಅವರಿಗೆ ಪ್ರಶಸ್ತಿ ಲಭಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸಂಶೋಧಕ ಜಗದೀಶ್ಚಂದ್ರ ಅಂಚನ್‌, ಕನಕಪುರದ ನೀಲಗಾರ ಕಲಾವಿದ ಶಂಭುಲಿಂಗಯ್ಯ, ವೀರಗಾಸೆ ಕಲಾವಿದ ಗುರುಮಲ್ಲಪ್ಪ, ರಾಮನಗರದ ಜಾನಪದ ಹಾಡುಗಾರ್ತಿ ಮಾಯಮ್ಮ, ಬಳ್ಳಾರಿಯ ಡೊಳ್ಳು ಕುಣಿತ ಕಲಾವಿದ ಎಚ್‌.ಕೆ.ಕಾರಮಂಚಪ್ಪ, ವಿಜಯಪುರ ಜಿಲ್ಲೆಯ ಕರಡಿಮಜಲು ಕಲಾವಿದ ಮಲ್ಲಕಾರಿ ಸಂಗಪ್ಪ ಕಟಗೇರಿ, ಹಾಸನದ ಸಾಹಸ ಕಲಾವಿದ ಹಾಸನ ರಘು, ಬಾಗಲಕೋಟೆಯ ಭಜನೆ ಕಲಾವಿದ ಸದಾಶಿವ ಸಂಗಪ್ಪ ಯತ್ನಾಳ, ಚಿಕ್ಕಬಳ್ಳಾಪುರದ ಕೋಲಾಟಪದ ಕಲಾವಿದೆ ಸರೋಜಮ್ಮ, ಬೆಳಗಾವಿಯ ಕೃಷ್ಣಪಾರಿಜಾತ ಕಲಾವಿದ ಹಸನ್‌ಸಾಬ್‌ ಮೌಲಾಸಾಬ್‌ ನದಾಫ್‌ , ಕೊಪ್ಪಳದ ಕರಡಿಮಜಲು ಕಲಾವಿದ ರೇವಣಪ್ಪ ನಿಂಗಪ್ಪ, ಮಂಡ್ಯದ ಸೋಬಾನೆ ಹಾಡುಗಾರ್ತಿ ನಂಜಮ್ಮ ಅವರು ಪುರಸ್ಕಾರ ಪಡೆಯಲಿದ್ದಾರೆ.

ಬೀದರ್‌ನ ತತ್ವಪದಗಳ ಕಲಾವಿದ ವೀರಣ್ಣ ಕುಂಬಾರ, ಧಾರವಾಡದ ಗೀಗೀಪದ ಕಲಾವಿದ ಮಲ್ಲಯ್ಯ ಸ್ವಾಮಿ, ಮೈಸೂರಿನ ಬೀಸು ಕಂಸಾಳೆ ಕಲಾವಿದ ಎಚ್‌.ಬಿ. ಮಹಾದೇವ ಶೆಟ್ಟಿ, ಚಿತ್ರದುರ್ಗದ ಯಕ್ಷಗಾನ ಮತ್ತು ಬಯಲಾಟ ಕಲಾವಿದ ಎಸ್‌.ಒ. ಗುರುಸಿದ್ಧ ನಾಯಕ, ಯಾದಗಿರಿಯ ತತ್ವಪದ ಕಲಾವಿದ ಮುರುಗೇಶ ಹುಣಸಗಿ, ಹಾಸನದ ಚಿಟ್ಟಮೇಳದ ಕಲಾವಿದ ಕುಮಾರಯ್ಯ, ಕರಗ ನೃತ್ಯ ಕಲಾವಿದ ಶಿವಣ್ಣ, ಚಾಮರಾಜನಗರದ ಗೊರವರ ನೃತ್ಯ ಕಲಾವಿದ ಆರ್‌.ಎಂ. ಶಿವಮಲ್ಲೇಗೌಡ, ಮಹಾರಾಷ್ಟ್ರದ ಯಕ್ಷಗಾನ ಕಲಾವಿದ ಉಮೇಶ್‌ ಶೆಟ್ಟಿ, ಮಂಡ್ಯದ ಪೂಜಾ ಕುಣಿತದ ಕಲಾವಿದ ಕೆ.ಬಿ. ಸ್ವಾಮಿ, ಮೈಸೂರಿನ ಜಾನಪದ ಹಾಡುಗಾರ ಎಚ್.ಕೆ. ಪುಟ್ಟೇಗೌಡ ಅವರಿಗೆ ಪ್ರಶಸ್ತಿ ಲಭಿಸಿದೆ. ಶಿವಮೊಗ್ಗದ ಲೇಖಕ ಡಾ. ಎಸ್‌.ಎಂ. ಮುತ್ತಯ್ಯ ಅವರ ‘ಬುಡಕಟ್ಟು ಜ್ಞಾನ ಪರಂಪರೆ’ ಕೃತಿಗೆ ಲೋಕಸರಸ್ವತಿ ಗ್ರಂಥ ಪುರಸ್ಕಾರ ನೀಡಲಾಗುವುದು ಎಂದು ತಿಮ್ಮೇಗೌಡ ತಿಳಿಸಿದರು.

ವಿವಿಧ ಆಕರ್ಷಣೆ: ಲೋಕೋತ್ಸವವನ್ನು ಇದೇ 16ರಂದು ಬೆಳಿಗ್ಗೆ 10.30ಕ್ಕೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ.ಬಿ. ನಾಯಕ್‌ ಉದ್ಘಾಟಲಿಸಲಿದ್ದಾರೆ. ಕರಕುಶಲ ಮೇಳವೂ ಇದೇ ಸಂದರ್ಭ ಅನಾವರಣಗೊಳ್ಳಲಿದೆ. ಮಧ್ಯಾಹ್ನ ಜಾನಪದ ಲೋಕದ ವಿದ್ಯಾರ್ಥಿಗಳಿಂದ ‘ನನ್ನೂರು’ ನಾಟಕ ಪ್ರದರ್ಶನ ನಡೆಯಲಿದೆ.

ಎರಡೂ ದಿನಗಳಂದು ವಿವಿಧ ರಾಜ್ಯಗಳ ಕಲಾವಿದರು ಜಾನಪದ ಪ್ರದರ್ಶನಗಳ ಮೂಲಕ ರಂಜಿಸಲಿದ್ದಾರೆ. ಕೇರಳದ ಕೂಡಿಯಾಟಂ, ಮಹಾರಾಷ್ಟ್ರದ ಲಾವಣಿ, ತಮಿಳುನಾಡಿನ ತಪ್ಪಾಟಂ, ವಿಲ್ಲುಪಾಟಂ, ತೆರಕೂತು ಕಲಾವಿದರು ಪ್ರದರ್ಶನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಎರಡೂ ದಿನ ಉಚಿತ ಪ್ರವೇಶ
ಜಾನಪದ ಲೋಕದ ವ್ಯವಸ್ಥಾಪನಾ ಟ್ರಸ್ಟಿ ಆದಿತ್ಯ ನಂಜರಾಜ್‌ ಮಾತನಾಡಿ ‘ಲೋಕೋತ್ಸವದ ಎರಡೂ ದಿನಗಳಂದು ಪ್ರವಾಸಿಗರಿಗೆ ಜಾನಪದ ಲೋಕಕ್ಕೆ ಉಚಿತ ಪ್ರವೇಶ ಇರಲಿದೆ. ಬೆಂಗಳೂರು–ಮೈಸೂರು ಹೆದ್ದಾರಿಯ ಪಕ್ಕವೇ ಕಾರ್ಯಕ್ರಮ ನಡೆಯುತ್ತಿದ್ದು, ಜನರಿಗೆ ಉತ್ತಮ ಮನೋರಂಜನೆ ಸಿಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT