ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸಂಘದಿಂದ ಕರಾಳ ದಿನಾಚರಣೆ

ರೈತ ಹುತಾತ್ಮ 11ನೇ ವರ್ಷದ ದಿನಾಚರಣೆ, ಬಾಕಿ ಬೆಳೆ ವಿಮೆ, ಬೆಳೆ ಪರಿಹಾರ ನೀಡುವಂತೆ ಆಗ್ರಹ
Last Updated 11 ಜೂನ್ 2018, 10:13 IST
ಅಕ್ಷರ ಗಾತ್ರ

ಹಾವೇರಿ: 2008ರ ಜೂನ್ 10ರಂದು ‘ಗೋಲಿಬಾರ್‌’ ನಡೆದಿದ್ದ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಘಟನೆಯ 11ನೇ ವರ್ಷಾಚರಣೆಯನ್ನು ‘ರೈತ ಹುತಾತ್ಮ ದಿನ ಮತ್ತು ಕರಾಳ ದಿನ’ವನ್ನಾಗಿ ಭಾನುವಾರ ರೈತರು ಆಚರಿಸಿದರು.

ಕೃಷಿ ಸಾಲ ಮನ್ನಾ ಮಾಡಬೇಕು. ಬೆಳೆ ವಿಮೆ ಹಾಗೂ ಬೆಳೆ ಪರಿಹಾರದ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ರಸ್ತೆ ತಡೆ ಹಾಗೂ ಪತ್ರ ಚಳವಳಿ ನಡೆಸಿದರು.

ಹುತಾತ್ಮರಾದ ರೈತ ಪುಟ್ಟಪ್ಪ ಹೊನ್ನತಿ ಹಾಗೂ ಸಿದ್ದಲಿಂಗಪ್ಪ ಚೂರಿ ಭಾವಚಿತ್ರ ಮತ್ತು ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ವಿ.ಕೆಂಚಳ್ಳೇರ ಮಾತನಾಡಿ, ‘ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಿಚಡಿ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ರೈತರ ಬಗ್ಗೆ ಕಿಂಚಿತ್ತು ಯೋಚನೆ ಮಾಡದೇ, ಅಧಿಕಾರಕ್ಕಾಗಿ ಕಿತ್ತಾಡಿಕೊಳ್ಳುತ್ತಿವೆ’ ಎಂದು ದೂರಿದರು.

ಬೆಳೆ ವಿಮೆ ಹಾಗೂ ಬೆಳೆ ಪರಿಹಾರದ ಬಾಕಿಯನ್ನು ಕೂಡಲೇ ನೀಡಬೇಕು. ಮುಖ್ಯಮಂತ್ರಿ ಎಚ್‌.ಡಿ,ಕುಮಾರಸ್ವಾಮಿ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ‘ನಾನು ಕಾಂಗ್ರೆಸ್‌ನ ಮುಲಾಜಿನಲ್ಲಿ ಇದ್ದೇನೆ’ ಎಂದು ಹೇಳಿಕೆ ನೀಡುವ ಮೂಲಕ ನುಣುಚಿಕೊಳ್ಳಬಾರದು ಎಂದರು.

ಒಂದು ವರ್ಷ ಅತಿವೃಷ್ಟಿ ಹಾಗೂ ಸತತ ಮೂರು ವರ್ಷಗಳ ಬರದ ಪರಿಣಾಮ ಜಿಲ್ಲೆಯ ರೈತರು ಸಂಕಷ್ಟದಲ್ಲಿ ಇದ್ದಾರೆ. ಆದರೆ, ಸರ್ಕಾರಗಳು ಕ್ಯಾರೇ ಅನ್ನುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, 2015–16ನೇ ಸಾಲಿನಲ್ಲಿ ಜಿಲ್ಲೆಗೆ ಮಂಜೂರಾದ ಒಟ್ಟು ₨ 123 ಕೋಟಿ ಬೆಳೆವಿಮೆ ಪರಿಹಾರದ ವಿತರಣೆ ಸಮರ್ಪಕವಾಗಿ ಆಗಿಲ್ಲ. ಅದು ಬ್ಯಾಂಕ್‌ನಲ್ಲಿಯೇ ಕೊಳೆಯುತ್ತಿದೆ ಎಂದು ದೂರಿದರು.

ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರೆ, ಎರಡ್ಮೂರು ಬಾರಿ ವಿಮೆ ತುಂಬಿದ ಗೊಂದಲದ ಕಾರಣ ಬೆಳೆ ವಿಮಾ ಪರಿಹಾರದ ಹಣ ಬಂದಿಲ್ಲ ಎನ್ನುತ್ತಾರೆ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಸದಾಶಿವ, ಉಪವಿಭಾಗಾಧಿಕಾರಿ ರಮೇಶ ಬಾಬು, ತಹಶೀಲ್ದಾರ್ ನವೀನ ಹುಲ್ಲೂರ ಸ್ಥಳದಲ್ಲಿ ಹಾಜರಿದ್ದು, ರೈತ ಮುಖಂಡರೊಂದಿಗೆ ಚರ್ಚಿಸಿದರು.

ಜಿಲ್ಲಾ ಘಟಕದ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಕಾರ್ಯದರ್ಶಿ ಶಿವಬಸಪ್ಪ ಗೋವಿ, ಸಂಚಾಲಕ ಮಹಮ್ಮದಗೌಸ್ ಪಾಟೀಲ, ಹಾನಗಲ್‌ ತಾಲ್ಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ, ಹಿರೇಕೆರೂರ ತಾಲ್ಲೂಕು ಘಟಕದ ಅಧ್ಯಕ್ಷ ಬಸನಗೌಡ ಗಂಗಪ್ಪನವರ ಹಾಗೂ ಜಿಲ್ಲಾ ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆಯ ಅಧ್ಯಕ್ಷರಾದ ಅಕ್ಷತಾ ಕೆ.ಸಿ. ಮಾತನಾಡಿದರು.

ರಾಣೆಬೆನ್ನೂರು ತಾಲ್ಲೂಕು ಘಟಕದ ಅಧ್ಯಕ್ಷ ಕರಬಸಪ್ಪ ಅಗಸೀಬಾಗಿಲು, ಬ್ಯಾಡಗಿ ತಾಲ್ಲೂಕು ಘಟಕದ ಅಧ್ಯಕ್ಷ ರುದ್ರಗೌಡ ಕಾಡನಗೌಡ್ರ, ಹಾವೇರಿ ತಾಲ್ಲೂಕು ಘಟಕದ ಅಧ್ಯಕ್ಷ ದಿಳ್ಳೆಪ್ಪ ಮಣ್ಣೂರ ಹಾಗೂ ಮುಖಂಡರಾದ ಮಾಲತೇಶ ಪರಪ್ಪನವರ, ಸುರೇಶ ಚಲವಾದಿ ಹಾಗೂ ದಾವಣಗೆರೆ ಆವರಗೋಳ ರುದ್ರಮುನಿಸ್ವಾಮಿ ಇದ್ದರು.

ಅಂಚೆ ಕಾರ್ಡ್ ಮೂಲಕ ಮನವಿ

ಪ್ರತಿಭಟನೆಯಲ್ಲಿ ಪಾಲ್ಗೊಂಡ ರೈತರು ಅಂಚೆ ಕಾರ್ಡ್‌ ನಲ್ಲಿ ತಮ್ಮ ಹೆಸರು, ಸಾಲದ ಮೊತ್ತ ಹಾಗೂ ಪಡೆದ ವರ್ಷ, ಬ್ಯಾಂಕ್‌ನ ವಿವರಗಳನ್ನು ಬರೆದು ಅಂಚೆ ಮೂಲಕ ಕಳುಹಿಸಿದರು.

ಬೆಳೆ ವಿಮಾ ಕಂಪೆನಿ ಅಧಿಕಾರಿಗಳ ಜೊತೆಗೆ ಚರ್ಚಿಸಿ ಜೂನ್‌ 25ರ ಒಳಗಾಗಿ ಬಾಕಿ ಬೆಳೆವಿಮೆ ಕೊಡಿಸದಿದ್ದರೆ, ಎಲ್ಲ ತಾಲ್ಲೂಕು ಕೃಷಿ ಇಲಾಖೆಗಳಿಗೆ ಬೀಗ ಹಾಕಲಾಗುವುದು
- ರಾಮಣ್ಣ ವಿ.ಕೆಂಚಳ್ಳೇರ, ಅಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT