ಎಂ.ಇಡಿ ಶಿಕ್ಷಣಕ್ಕೆ ಶೇ 50 ಶುಲ್ಕ ಕಡಿತ

7
ವಿದ್ಯಾರ್ಥಿಗಳನ್ನು ಸೆಳೆಯಲು ಕುವೆಂಪು ವಿವಿಯಿಂದ ಮಹತ್ವದ ನಿರ್ಧಾರ

ಎಂ.ಇಡಿ ಶಿಕ್ಷಣಕ್ಕೆ ಶೇ 50 ಶುಲ್ಕ ಕಡಿತ

Published:
Updated:
ಕುವೆಂಪು ವಿಶ್ವವಿದ್ಯಾಲಯದ ಕ್ಯಾಂಪಸ್

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯವು ಶಿಕ್ಷಣ ಅಧ್ಯಯನ ವಿಭಾಗದ (ಎಂ.ಇಡಿ) ಅಸ್ತಿತ್ವ ಉಳಿಸಲು ಹಾಗೂ ವಿದ್ಯಾರ್ಥಿಗಳನ್ನು ಸೆಳೆಯಲು ಇದೇ ಮೊದಲ ಬಾರಿಗೆ ಶೇ 50ರಷ್ಟು ಪ್ರವೇಶ ಶುಲ್ಕ ಕಡಿತಗೊಳಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ.

ಶಿಕ್ಷಣ ಅಧ್ಯಯನವು ಮೇಲ್ವಿಚಾರಣೆ, ನಾಯಕತ್ವ ಗುಣ, ಸಮಾಲೋಚನೆ ಹೀಗೆ ಜೀವನದ ಎಲ್ಲಾ ಆಯಾಮಗಳನ್ನು ಕಲಿಸುವುದರಿಂದ ಸಾಕಷ್ಟು ಪ್ರಾಮುಖ್ಯ ಪಡೆದುಕೊಂಡಿತ್ತು. ಕುವೆಂಪು ವಿಶ್ವವಿದ್ಯಾಲಯದಲ್ಲಿಯೂ ಈ ಹಿಂದೆ ಇದ್ದ 35ರಿಂದ 40 ಸೀಟ್‌ಗಳಿಗೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬರುತ್ತಿದ್ದವು. ಆ ನಂತರದಲ್ಲಿ ಸರ್ಕಾರದ ಕೆಲವು ನಿಯಮಗಳಿಂದಾಗಿ ವಿದ್ಯಾರ್ಥಿಗಳು ಶಿಕ್ಷಣ ಅಧ್ಯಯನ ವಿಭಾಗಕ್ಕೆ ಪ್ರವೇಶ ಪಡೆಯುವ ಆಸಕ್ತಿಯನ್ನೇ ಕಳೆದುಕೊಂಡರು.

ಪ್ರಸ್ತಕ ಸಾಲಿನಲ್ಲಿ ಇರುವ ಗರಿಷ್ಠ 50 ಸೀಟುಗಳಲ್ಲಿ ಕೇವಲ 15 ವಿದ್ಯಾರ್ಥಿಗಳಷ್ಟೇ ಪ್ರವೇಶ ಪಡೆದಿದ್ದಾರೆ. ಐದಾರು ವರ್ಷಗಳಿಂದ ಈ ಸಂಖ್ಯೆ ಏರುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ಈ ವಿಭಾಗ ಮುಚ್ಚುವ ಎಲ್ಲಾ ಸಾಧ್ಯತೆಯಿತ್ತು. ಇದನ್ನು ಮನಗಂಡ ಕುವೆಂಪು ವಿಶ್ವವಿದ್ಯಾಲಯವು ಎಂ.ಇಡಿ ವಿಭಾಗಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ಶೇ 50ರಷ್ಟು ಕಡಿತಗೊಳಿಸಿದೆ. ಇತ್ತೀಚೆಗೆ ನಡೆದ ಶೈಕ್ಷಣಿಕ ಸಭೆಯಲ್ಲಿ ಈ ತೀರ್ಮಾನ ಕೈಗೊಂಡು ಎಂ.ಇಡಿ ಕೋರ್ಸ್ ಶುಲ್ಕವನ್ನು ₹  44,000ರಿಂದ ₹ 22,000ಕ್ಕೆ ಇಳಿಸಿದೆ.

ಸಂಖ್ಯೆ ಹೆಚ್ಚುವ ವಿಶ್ವಾಸ:

ಕುವೆಂಪು ವಿಶ್ವವಿದ್ಯಾಲಯದ ಶುಲ್ಕ ಕಡಿತ ನಿರ್ಧಾರದಿಂದ ಸಾಮಾನ್ಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಬಿ.ಇಡಿ ಮುಗಿಸಿದ ಎರಡು ವರ್ಷದ ವಿದ್ಯಾರ್ಥಿಗಳು ಈ ಬಾರಿ ಎಂ.ಇಡಿ.ಗೆ ಸೇರುವ ಸಾಧ್ಯತೆಯಿದೆ. ಹೀಗಾಗಿ ಈ ಬಾರಿ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯುವ ವಿಶ್ವಾಸವಿದೆ ಎನ್ನುತ್ತಾರೆ ಇಲ್ಲಿನ ಅಧ್ಯಾಪಕರು.

ದೂರ ಸರಿಯಲು ಕಾರಣ:

ಎಂ.ಇಡಿ ಮುಗಿಸಿದ ವಿದ್ಯಾರ್ಥಿಗಳು ಕೇವಲ ಬಿ.ಇಡಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರಾಗುವ ಅವಕಾಶವಿದೆ. ಆದರೆ ನೇಮಕಾತಿ ವಿಳಂಬ, 2 ವರ್ಷ ವ್ಯಾಸಂಗ ಹೀಗೆ ಸರ್ಕಾರದ ಕೆಲವು ನಿಯಮಗಳಿಂದಾಗಿ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಹಿಂದೇಟು ಹಾಕಿದರು. ಇದರಿಂದ ರಾಜ್ಯದಲ್ಲಿನ ಶೇ 90ರಷ್ಟು ಬಿ.ಇಡಿ ಕಾಲೇಜುಗಳು ಅಸ್ತಿತ್ವ ಕಳೆದುಕೊಂಡವು. ಈ ಕಾಲೇಜುಗಳು ಮುಚ್ಚಿದ ಮೇಲೆ ಎಂ.ಇಡಿ ವ್ಯಾಸಂಗ ಮಾಡಿ ಪ್ರಯೋಜನವಾದರೂ ಏನು ಎಂಬ ನಿಲುವಿಗೆ ವಿದ್ಯಾರ್ಥಿಗಳು ಬಂದರು. ಅಲ್ಲದೇ ಬಡ್ತಿ ಸೇರಿ ಶಿಕ್ಷಣ ಇಲಾಖೆಯ ಯಾವುದೇ ಹುದ್ದೆಗಳಿಗೂ ಎಂ.ಇಡಿ ಪರಿಗಣನೆಗೆ ಬರುವುದಿಲ್ಲ. ಇದರಿಂದ ಸಹಜವಾಗಿ ವಿದ್ಯಾರ್ಥಿಗಳು ಎಂ.ಇಡಿ ಶಿಕ್ಷಣದಿಂದ ದೂರ ಸರಿಯುತ್ತಿದ್ದಾರೆ. ಶೀಘ್ರವೇ ಸರ್ಕಾರ ಬಿ.ಇಡಿ ಹಾಗೂ ಎಂ.ಇಡಿ ಅಧ್ಯಯನಕ್ಕೆ ಮರುಜೀವ ನೀಡಬೇಕು ಎನ್ನುತ್ತಾರೆ ಹಿರಿಯ ವಿದ್ಯಾರ್ಥಿ ಸಿ.ನಾಗರಾಜ್‌.

ಏನು ಮಾಡಬಹುದು:

ಈ ಬಗ್ಗೆ ಕುವೆಂಪು ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಜಗನ್ನಾಥ ಕೆ. ಡಾಂಗೆ ಪ್ರತಿಕ್ರಿಯಿಸಿ, ‘ಸರ್ಕಾರದ ಮಟ್ಟದಲ್ಲಿ ಕೆಲವು ಮಹತ್ತರವಾದ ನಿರ್ಧಾರಗಳನ್ನು ತೆಗೆದುಕೊಂಡಾಗ ಎಂ.ಇಡಿ ಶಿಕ್ಷಣಕ್ಕೆ ಶಕ್ತಿ ನೀಡಬಹುದು. ಮುಖ್ಯವಾಗಿ ಎಂ.ಇಡಿ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಮೇಲ್ವಿಚಾರಣೆ, ನಾಯಕತ್ವ ಗುಣ, ಸಮಾಲೋಚನೆ ಹೀಗೆ ಜೀವನದ ಎಲ್ಲಾ ಆಯಾಮಗಳನ್ನು ಕಲಿಸುವುದರಿಂದ ನವೋದಯ, ಮೊರಾರ್ಜಿ ದೇಸಾಯಿ ವಸತಿಶಾಲೆ, ಪ್ರೌಢಶಾಲೆ, ಪಿಯು ಪ್ರಾಂಶುಪಾಲರ ನೇಮಕ, ನಿಲಯಗಳ ಮೇಲ್ವಿಚಾರಕರ ನೇಮಕ ಹಾಗೂ ಉದ್ಯೋಗ ಬಡ್ತಿಯಲ್ಲಿ ಎಂ.ಇಡಿಯನ್ನು ಪರಿಗಣಿಸಬೇಕು. ಆಗ ಸಹಜವಾಗಿ ಉದ್ಯೋಗಗಳು ಸೃಷ್ಟಿಯಾಗಿ ವಿದ್ಯಾರ್ಥಿಗಳು ಎಂ.ಇಡಿ ಕಡೆಗೆ ಆಸಕ್ತಿ ಬೆಳೆಸಿಕೊಳ್ಳುತ್ತಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !