ಭೂಗರ್ಭ ಜಲ ವಿದ್ಯುತ್ ಪ್ರಯೋಗಕ್ಕೆ ವಿರೋಧ

7
ಶರಾವತಿ ಕಣಿವೆ ಪ್ರದೇಶದ ಜೀವ ವೈವಿಧ್ಯಕ್ಕೆ ಕುತ್ತು: ವೃಕ್ಷಲಕ್ಷ ಆಂದೋಲನ ಕಳವಳ

ಭೂಗರ್ಭ ಜಲ ವಿದ್ಯುತ್ ಪ್ರಯೋಗಕ್ಕೆ ವಿರೋಧ

Published:
Updated:
ಭೂಗರ್ಭ ಜಲ ವಿದ್ಯುತ್ ಪ್ರಯೋಗಕ್ಕೆ ವಿರೋಧ

ಶಿವಮೊಗ್ಗ: ಶರಾವತಿ ಭೂಗರ್ಭ ಜಲ ವಿದ್ಯುತ್ ಯೋಜನೆಗಾಗಿ ಡ್ರಿಲ್ಲಿಂಗ್ ಮಾಡಿ, ಪರಿಸರ ಪರಿಣಾಮ ವರದಿ ಸಿದ್ಧಪಡಿಸಲು ಅರಣ್ಯ ಇಲಾಖೆ ಅನುಮತಿ ನೀಡಬಾರದು ಎಂದು ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಆಗ್ರಹಿಸಿದರು.

‘ನವದೆಹಲಿಯ ಖಾಸಗಿ ಸಂಸ್ಥೆಗೆ ವಿವರವಾದ ಯೋಜನಾ ವರದಿ ತಯಾರಿಸಲು ಕರ್ನಾಟಕ ಪವರ್‌ ಕಾರ್ಪೋರೇಷನ್ ಗುತ್ತಿಗೆ ನೀಡಿದೆ. ಅದೇ ಸಂಸ್ಥೆ ಈಗ ಪರಿಸರ ಪರಿಣಾಮ ವರದಿ ತಯಾರಿಸಲು ಮುಂದಾಗಿದೆ. ಈಗಾಗಲೇ ಸರ್ವೆ ನಡೆಸಲು ಸಿದ್ಧತೆ ನಡೆದಿದೆ. ಡ್ರಿಲ್ಲಿಂಗ್ ಮಾಡುಲು 15 ಸ್ಥಳ ಗುರುತಿಸಲಾಗಿದೆ. ಸ್ಫೋಟಕ ಬಳಸಲು ಅರಣ್ಯ ಇಲಾಖೆ ಅನುಮತಿ ಕೇಳಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಶರಾವತಿ ಕಣಿವೆಯ ಜೋಗ, ಮಾವಿನಗುಂಡಿ, ಗೇರುಸೊಪ್ಪಾ, ಹೆನ್ನಿ, ಪಡನಬೈಲು, ತಳಕಳಲೆ, ಬಿದರೂರು ಮತ್ತಿತರ ಬೆಟ್ಟ-ಗುಡ್ಡ ಪ್ರದೇಶಗಳಿಗೆ ವಿಜ್ಞಾನಿಗಳಾದ ಡಾ.ಟಿ.ವಿ. ರಾಮಚಂದ್ರ, ಡಾ.ಕೇಶವ ಎಚ್. ಕೊರ್ಸೆ, ಡಾ. ಸುಭಾಸ ಚಂದ್ರನ್, ಜೀವ ವೈವಿಧ್ಯ ಅಧ್ಯಯನಕಾರ ರಮೇಶ ಕಾನಗೋಡ, ಕೆ. ಗಣಪತಿ, ಅನೆಗೊಳಿ ಸುಬ್ಬರಾವ್, ವಿನಯ್ ಅವರನ್ನು ಒಳಗೊಂಡ ವೃಕ್ಷಲಕ್ಷ ತಂಡ ಭೇಟಿ ನೀಡಿ, ಅಲ್ಲಿನ ಅರಣ್ಯವಾಸಿಗಳ ಜತೆ ಮಾತುಕತೆ ನಡೆಸಿದೆ. ಅರಣ್ಯ ಇಲಾಖೆಯ ಸ್ಥಳೀಯ ಸಿಬ್ಬಂದಿ ಹಾಗೂ ಕೆಪಿಸಿ ಸಮೀಕ್ಷಾ ವಿಭಾಗದ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ. ಮಾಹಿತಿ ಸಂಗ್ರಹಿಸಲಾಗಿದೆ’

ಎಂದರು.

‘ಶರಾವತಿ ಕಣಿವೆಯ ಪರಿಸರಧಾರಣ ಸಾಮರ್ಥ್ಯ ಮುಗಿದಿದೆ. ಹೊಸ ಯೋಜನೆಗಳು ಶರಾವತಿ ಕಣಿವೆಯ ವನ್ಯ ಜೀವಿ. ಅರಣ್ಯದ ಮೇಲೆ ನೇರ ದುಷ್ಪರಿಣಾಮ ಬೀರುತ್ತವೆ. ಹಾಗಾಗಿ, ಅನುಮತಿ ನೀಡಬಾರದು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ, ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ತಜ್ಞರ ತಂಡದ ವಿವರವಾದ ವರದಿ ಶೀಘ್ರ ಅರಣ್ಯ ಇಲಾಖೆಗೆ ನೀಡಲಾಗುವುದು. ಶಿವಮೊಗ್ಗ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಈ ಕುರಿತು ಎಚ್ಚರ ವಹಿಸಬೇಕು. ಅಕ್ರಮವಾಗಿ ಶರಾವತಿ ಕಣಿವೆಯಲ್ಲಿ ಡ್ರಿಲ್ಲಿಂಗ್ ಮಾಡದಂತೆ ನಿರ್ಬಂಧಿಸಬೇಕು’ ಎಂದು ಒತ್ತಾಯಿಸಿದರು.

‘ಶರಾವತಿ ಕಣಿವೆ ಉಳಿಸಿ ಅಭಿಯಾನ ಈಗಾಗಲೇ ಆರಂಭವಾಗಿದೆ. ಭೂಗರ್ಭ ಯೋಜನೆ ಆರಂಭವಾದರೆ ಶರಾವತಿ ಕಣಿವೆ ಪ್ರದೇಶದಲ್ಲಿ ಸುಮಾರು 800 ಎಕರೆ ಅರಣ್ಯ ನಾಶವಾಗಲಿದೆ. 15 ಕಿ.ಮೀ ಉದ್ದ 10 ಮೀ ಅಗಲದ ನಾಲೆ ನಿರ್ಮಾಣಕ್ಕಾಗಿ 140 ಎಕರೆ ಅರಣ್ಯ, ಪವರ್‌ಹೌಸ್‌ ನಿರ್ಮಾಣಕ್ಕಾಗಿ 60 ಎಕರೆ ನಾಶವಾಗಲಿದೆ. ಈ ಎಲ್ಲ ಕಾಮಗಾರಿ ಅನುಷ್ಠಾನಕ್ಕಾಗಿ ದಟ್ಟ ಅರಣ್ಯದಲ್ಲಿ ಸುಮಾರು 20 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕಾಗಿ 110 ಎಕರೆ ಅರಣ್ಯ ತೆರವು ಮಾಡಬೇಕಿದೆ. 60 ಕಿ.ಮೀ ಉದ್ದದ ಬೃಹತ್ ತಂತಿ ಮಾರ್ಗ ಅಳವಡಿಸಲು 490 ಎಕರೆ ಅರಣ್ಯ ನಾಶವಾಗಲಿದೆ’ ಎಂದು ಎಚ್ಚರಿಸಿದರು.

ವೆಚ್ಚದಾಯಕ:  2000 ಮೆಗಾ ವಾಟ್‌ ಜಲವಿದ್ಯುತ್ ಉತ್ಪಾದನೆ ಸಾಧ್ಯವಾಗುವುದು ದಿನಕ್ಕೆ 6 ತಾಸು ಮಾತ್ರ. ಇದು ಬಹಳ ವೆಚ್ಚದಾಯಕ ಯೋಜನೆ. ಇದಕ್ಕಿಂತ ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯಲ್ಲಿ ಸೌರಶಕ್ತಿ ಸ್ಥಾವರ ಸ್ಥಾಪನೆ ಮಾಡಬೇಕು ಎಂದು ಇಂಧನ ತಜ್ಞ ಡಾ. ಶಂಕರ ಶರ್ಮಾ ಅಭಿಪ್ರಾಯ ಪಟ್ಟಿದ್ದಾರೆ ಎಂದು

ಗಮನಸೆಳೆದರು.

ಅಮೂಲ್ಯ ಜೀವ ಸಂಕುಲ: ‘ಶರಾವತಿ ಕಣಿವೆ ರಾಂಪತ್ರೆ, ಜಡ್ಡಿ, ಕತ್ತಲೆಕಾನು, ಕೊಡಚಾದ್ರಿ, ಸಿಂಗಲಿಕ, ಬೆತ್ತ, ಸಿಸ್ಟೋರಾ ಶರಾವತಿ ಯನ್ಸಿಸ್ ಎಂಬ ಮೀನುಜಾತಿ, ಫಿಲಾಟಸ್ ನೀಲನೇತ್ರ ಎಂಬ ಕಪ್ಪೆ ಜಾತಿ, ಮರ ಅರಿಶಿಣ, ಸೀತಾ ಅಶೋಕ ಸೇರಿದಂತೆ ಅಮೂಲ್ಯ ಜೀವ ಸಂಕುಲ ಹೊಂದಿದೆ’ ಎಂದರು.

‘ಶರಾವತಿ ಅಭಯಾರಣ್ಯ, ಕಣಿವೆಯ ರೈತರು, ಅರಣ್ಯವಾಸಿಗಳು ಹಲವು ಜ್ವಲಂತ ಸಮಸ್ಯೆ ಎದುರಿಸುತ್ತಿದ್ದಾರೆ. ಮುಳುಗಡೆ ಸಮಸ್ಯೆ, ವಿದ್ಯುತ್ ಸಂಪರ್ಕ ಸೇರಿದಂತೆ ವನ್ಯ ಜೀವಿಗಳಿಂದ ಆಗಿರುವ ಬೆಳೆ ಹಾನಿ ಸೇರಿದಂತೆ ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ಶರಾವತಿ ಕಣಿವೆಯಲ್ಲಿ ಹೊಸ ಜಲವಿದ್ಯುತ್ ಯೋಜನೆ ಕೈಬಿಡಬೇಕು’ ಎಂದು ಕೋರಿದರು. ಪರಿಸರ ತಜ್ಞ ಪ್ರೊ.ಬಿ.ಎಂ. ಕುಮಾರಸ್ವಾಮಿ, ಜಗದೀಶ್ ನಾರಗೋಡು, ಸಾಗರದ ಕೆ. ವೆಂಕಟೇಶ್ ಇದ್ದರು.

ವನ್ಯ ಜೀವಿಗಳ ಕಾರಿಡಾರ್ ಇಬ್ಭಾಗ

ಗೇರುಸೊಪ್ಪಾದಿಂದ 500 ಮೀ ಎತ್ತರಕ್ಕೆ ನೀರು ಪಂಪ್ ಮಾಡಿ, ಪವರ್‌ ಗೌಸ್‌ಗೆ ತರಬೇಕು. ನಂತರ ತಲಕಳಲೆ ಜಲಾಶಯಕ್ಕೆ ನಾಲೆ ಮೂಲಕ ನೀರು ಹರಿಸಬೇಕು. ರಸ್ತೆ, ನಾಲೆ ನಿರ್ಮಾಣದ ಪರಿಣಾಮ ಶರಾವತಿ ಕಣಿವೆ ಇಬ್ಭಾಗವಾಗುತ್ತದೆ. ವನ್ಯಜೀವಿಗಳ ಕಾರಿಡಾರ್ ತುಂಡಾಗಲಿದೆ. ಕಾರ್ಗಲ್‌ನಿಂದ ಕಾನೂರು, ಕೋಗಾರ್‌ವರೆಗೆ, ಮಾವಿನಗುಂಡಿಯಿಂದ ಗೇರುಸೊಪ್ಪವರೆಗೆ ವನ್ಯ ಜೀವಿಗಳು ಅತಂತ್ರವಾಗಲಿವೆ ಎಂದು ಅನಂತ ಹೆಗಡೆ ಆಶೀಸರ ಕಳವಳ ವ್ಯಕ್ತಪಡಿಸಿದರು.

**

ಜೋಗದ ಜೋಗಿಮಠದ (ಸೀತಾ ಕಟ್ಟೆ ಸೇತುವೆ) ಬಳಿ ಸರ್ವ ಋತು ಜಲಪಾತಕ್ಕಾಗಿ ಆಣೆಕಟ್ಟು ನಿರ್ಮಿಸಲು ಮುಂದಾದರೆ ಹೋರಾಟ ಹಮ್ಮಿಕೊಳ್ಳಲಾಗುವುದು

- ಅನಂತ ಹೆಗಡೆ ಆಶೀಸರ, ಅಧ್ಯಕ್ಷ, ವೃಕ್ಷ ಲಕ್ಷ ಆಂದೋಲನ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry