ಆಧಾರ್ ನಿರ್ವಹಣೆಗೆ ಬ್ಯಾಂಕ್‌ಗಳ ಸರ್ಕಸ್!

7
ಶಿವಮೊಗ್ಗ, ಭದ್ರಾವತಿ ಹೊರತುಪಡಿಸಿ ಉಳಿದ ಭಾಗಗಳಲ್ಲಿ ನಿತ್ಯವೂ ತಾಂತ್ರಿಕ ಸಮಸ್ಯೆ

ಆಧಾರ್ ನಿರ್ವಹಣೆಗೆ ಬ್ಯಾಂಕ್‌ಗಳ ಸರ್ಕಸ್!

Published:
Updated:

ಶಿವಮೊಗ್ಗ: ಆಧಾರ್‌ ಕಾರ್ಡ್‌ ನಿರ್ವಹಣೆಯ ಜವಾಬ್ದಾರಿಯನ್ನು ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳಿಗೆ ನೀಡಿದರೂ, ತಾಂತ್ರಿಕ ಸಮಸ್ಯೆಯ ಕಾರಣ ಸೌಲಭ್ಯ ಪಡೆಯಲು ಜನರು ಇಂದಿಗೂ ಪರದಾಡುವ ಸ್ಥಿತಿಗೆ ಮುಕ್ತಿ ದೊರೆತಿಲ್ಲ.

ಕೇಂದ್ರ ಸರ್ಕಾರ ಈ ಕೆಲಸ ಮಾಡಲು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಅವಕಾಶ ನೀಡಿದ್ದು, ಅದಕ್ಕಾಗಿ 7 ತಾಲ್ಲೂಕುಗಳ ವಿವಿಧ ಬ್ಯಾಂಕ್‌ಗಳ 23 ಶಾಖೆಗಳಲ್ಲಿ ಪ್ರತ್ಯೇಕ ಕೌಂಟರ್‌ ತೆರೆಯಲಾಗಿದೆ. ಸಾರ್ವಜನಿಕರು ಅಲ್ಲಿ ಅರ್ಜಿ ಸಲ್ಲಿಸಿ, ಆಧಾರ್ ಕಾರ್ಡ್‌ ಪಡೆಯಬಹುದು. ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಕಾರ್ಡ್ ಅಂಚೆ ಮೂಲಕ ಜನರ ಮನೆ ಬಾಗಿಲಿಗೆ ತಲುಪಲಿದೆ.

ಈಗಾಗಲೇ ಕಾರ್ಡ್ ಪಡೆದವರು ಅದರಲ್ಲಿ ಯಾವುದೇ ತಿದ್ದುಪಡಿ ಬೇಕಿದ್ದರೂ, ಪುನರ್ ಅರ್ಜಿ ಸಲ್ಲಿಸಬಹುದು. ಅದಕ್ಕೆ ₹ 25 ಶುಲ್ಕ ತೆರಬೇಕಾಗುತ್ತದೆ. ಹೊಸದಾಗಿ ಕಾರ್ಡ್ ಪಡೆಯಲು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಬ್ಯಾಂಕ್‌ಗಳು ನೀಡುವ ಸೇವೆಗೆ ಪ್ರತಿಫಲವಾಗಿ ಕೇಂದ್ರ ಸರ್ಕಾರ ಹಣ ಭರಿಸಲಿದೆ.

ಜಿಲ್ಲೆಯ ವಿವಿಧ ಬ್ಯಾಂಕ್‌ಗಳ 23 ಶಾಖೆಗಳಲ್ಲಿ ಈ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಶಿವಮೊಗ್ಗ ತಾಲ್ಲೂಕಿನಲ್ಲಿ 6, ಭದ್ರಾವತಿ, ಸಾಗರ ತಾಲ್ಲೂಕಿನಲ್ಲಿ 5, ಶಿಕಾರಿಪುರದಲ್ಲಿ 3, ತೀರ್ಥಹಳ್ಳಿಯಲ್ಲಿ 2, ಸೊರಬ ಹಾಗೂ ಹೊಸನಗರದಲ್ಲಿ ತಲಾ ಒಂದು ಬ್ಯಾಂಕ್‌ಗಳು ಈ ಸೇವೆ ಒದಗಿಸಲಿವೆ.

ಶಿವಮೊಗ್ಗ: ಕೆನರಾ ಬ್ಯಾಂಕ್, ಎಪಿಎಂಸಿ ಶಾಖೆ, ಸಿಂಡಿಕೇಟ್ ಬ್ಯಾಂಕ್, ದುರ್ಗಿಗುಡಿ ಶಾಖೆ, ಕಾರ್ಪೊರೇಷನ್ ಬ್ಯಾಂಕ್, ಗೋಪಾಲಗೌಡ ಬಡಾವಣೆ, ವಿಜಯಾ ಬ್ಯಾಂಕ್, ಸಂಗೊಳ್ಳಿ ರಾಯಣ್ಣ ರಸ್ತೆ, ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ, ಬಿ.ಎಚ್. ರಸ್ತೆ, ಕರ್ನಾಟಕ ಬ್ಯಾಂಕ್, ಸವಳಂಗ ರಸ್ತೆ.

ಭದ್ರಾವತಿ: ಕೆನರಾ ಬ್ಯಾಂಕ್, ಬಿ.ಎಚ್‌. ರಸ್ತೆ. ಸಿಂಡಿಕೇಟ್ ಬ್ಯಾಂಕ್, ದುರ್ಗಿಗುಡಿ. ಕಾರ್ಪೋರೇಷನ್ ಬ್ಯಾಂಕ್, ಬಿ.ಎಚ್. ರಸ್ತೆ. ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ, ನ್ಯೂ ಟೌನ್. ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್, ಕಲ್ಯಾಳ್.

ಸಾಗರ: ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಬಿ.ಎಚ್. ರಸ್ತೆ. ಸ್ಟೇಟ್‌ ಬ್ಯಾಂಕ್ ಆಫ್‌ ಇಡಿಯಾ, ಅಶೋಕ ರಸ್ತೆ. ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್, ಹಾವಿನಹಳ್ಳಿ.

ಶಿಕಾರಿಪುರ: ಕೆನರಾ ಬ್ಯಾಂಕ್, ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್, ಶಿಕಾರಿಪುರ ಪಟ್ಟಣ.

ತೀರ್ಥಹಳ್ಳಿ: ಕೆನರಾ ಬ್ಯಾಂಕ್, ವಿಜಯಾ ಬ್ಯಾಂಕ್, ತೀರ್ಥಹಳ್ಳಿ ಪಟ್ಟಣ.

ಸೊರಬ: ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್, ಆನವಟ್ಟಿ.

ಹೊಸನಗರ: ಕೆನರಾ ಬ್ಯಾಂಕ್, ಹೊಸನಗರ ಪಟ್ಟಣ.

ಖಾಸಗಿ ಸಂಸ್ಥೆಗಳ ಲೋಪ: ಕಾರ್ಡ್ ನಿರ್ವಹಣೆಯ ಜವಾಬ್ದಾರಿ ಈ ಹಿಂದೆ ಹಲವು ಸರ್ಕಾರೇತರ ಸಂಸ್ಥೆಗಳಿಗೆ ವಹಿಸಲಾಗಿತ್ತು. ಆದರೆ, ಕೆಲವು ಭಾಗಗಳಲ್ಲಿ ನಕಲಿ ಕಾರ್ಡ್‌ಗಳು ಪತ್ತೆಯಾಗಿದ್ದವು. ನಿಗದಿಗಿಂತ ಹೆಚ್ಚು ಶುಲ್ಕ ಪಡೆಯುತ್ತಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಬೇರೆ ದೇಶಗಳ ನಿರಾಶ್ರಿತರೂ ಸುಲಭವಾಗಿ ಆಧಾರ್ ಕಾರ್ಡ್ ಪಡೆಯಲು ಆರಂಭಿಸಿದ್ದು ದೇಶದ ಭದ್ರತೆಗೆ ಸವಾಲಾಗಿತ್ತು. ಹಾಗಾಗಿ, ನಿರ್ವಹಣೆಯ ಜವಾಬ್ದಾರಿ ಬದಲಿಸಲು ಕೇಂದ್ರ ಸರ್ಕಾರ ದೃಢ ನಿರ್ಧಾರ ತೆಗೆದುಕೊಂಡಿತ್ತು.

ಕಾರ್ಡ್ ನಿರ್ವಹಣೆಯ ಜವಾಬ್ದಾರಿ ನಿರ್ವಹಿಸುತ್ತಿದ್ದ ಸರ್ಕಾರೇತರ ಸಂಸ್ಥೆಗಳಿಗೆ ಸರ್ಕಾರಿ ಕಚೇರಿಗಳಲ್ಲೇ ಸ್ಥಳ ನೀಡಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸುವ ಕುರಿತು ಚರ್ಚೆ ನಡೆದಿತ್ತು. ಆದರೆ, ಆಧಾರ್ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿರುವ ಕಾರಣ ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಅವಕಾಶ ನೀಡುವ ಕುರಿತು ಕೇಂದ್ರ ಹಿಂದೇಟು ಹಾಕಿತ್ತು. ಈ ಎಲ್ಲ ಬೆಳವಣಿಗೆಗಳ ಪರಿಣಾಮ ಬ್ಯಾಂಕ್‌ಗಳಿಗೆ ಕಳೆದ ಮಾರ್ಚ್‌ನಿಂದಲೇ ಹೊಸ ಜವಾಬ್ದಾರಿ ನೀಡಲಾಗಿದೆ.

ಗ್ರಾಮೀಣ ಭಾಗದಲ್ಲಿ ತಾಂತ್ರಿಕ ಸಮಸ್ಯೆ

ಶಿವಮೊಗ್ಗ, ಭದ್ರಾವತಿ ಶಾಖೆಗಳನ್ನು ಹೊರತು ಪಡಿಸಿದರೆ ಉಳಿದ ತಾಲ್ಲೂಕುಗಳಲ್ಲಿ ಆಧಾರ ನಿರ್ವಹಣೆಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಸಮರ್ಪಕ ನೆಟ್‌ವರ್ಕ್‌ ದೊರೆಯದ ಕಾರಣ ಒಂದು ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಲು ಅರ್ಧ ತಾಸು ಕಾಯಬೇಕಾದ ಅನಿವಾರ್ಯತೆ ಇದೆ.

‘ತಾಂತ್ರಿಕ ಸಮಸ್ಯೆ ಬಗೆಹರಿಸಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ, ಎರಡು ತಿಂಗಳಾದರೂ ಸಮಸ್ಯೆ ಬಗೆಹರಿದಿಲ್ಲ. ಹಾಗಾಗಿ, ಪ್ರಕ್ರಿಯೆ ವಿಳಂಬವಾಗುತ್ತಿದೆ. ಗ್ರಾಹಕರು ಅನಗತ್ಯವಾಗಿ ಕಾಯುವಂತಾಗಿದೆ’ ಎನ್ನುತ್ತಾರೆ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸೊಲೊಮನ್ ಮೆಂಜೆಸ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry