ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟನೆಗಳು ಸುಮ್ಮನಿದ್ದರೆ ಏನೂ ಆಗದು; ಜನರಿಗೆ ಗಲಭೆ ಬೇಕಾಗಿಲ್ಲ: ರಾಮಲಿಂಗಾರೆಡ್ಡಿ

Last Updated 12 ಜನವರಿ 2018, 6:05 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದ 29 ಜಿಲ್ಲೆಗಳಲ್ಲಿ ಇರದೇ ಇರುವ ಕೋಮು ಸಂಘರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಹೆಚ್ಚಾಗಿದೆ. ಇದಕ್ಕೆ ಕೋಮುವಾದಿ ಸಂಘಟನೆಗಳೇ ಕಾರಣ. ಜನರಿಗೆ ಇದಾವುದೂ ಬೇಕಾಗಿಲ್ಲ. ಸಂಘಟನೆಗಳು ಸುಮ್ಮನಿದ್ದರೆ, ಇಂತಹ ಘಟನೆಗಳೂ ನಡೆಯುವುದಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮ್ಮನಿರದೇ ಇದ್ದರೆ, ಈ ಸಂಘಟನೆಗಳ ವಿರುದ್ಧ ಜನರೇ ರೊಚ್ಚಿಗೇಳಲಿದ್ದಾರೆ ಎಂದು ಎಚ್ಚರಿಸಿದರು.

ನಿಷೇಧ ಮಾಡುವುದಾದರೆ, ಎರಡೂ ಕಡೆಗಳ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಪಿಎಫ್ಐ, ಎಸ್ಡಿಪಿಐ ಒಂದೆಡೆಯಾದರೆ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರೂ 9 ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಮುಖ್ಯಮಂತ್ರಿ ಪ್ರವಾಸದಲ್ಲಿದ್ದು, ಅವರು ಮರಳಿದ ನಂತರ ಈ ಕುರಿತು‌ ವಿಸ್ತೃತ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಮೂಡಿಗೆರೆಯ ಧನ್ಯಶ್ರೀ ಪ್ರಕರಣದಲ್ಲಿ ಬಿಜೆಪಿಯವರ ದ್ವಂದ್ವ ನಿಲುವು ಬಯಲಾಗಿದೆ. ಮೇಸ್ತ ಪ್ರಕರಣದಲ್ಲಿ ನಮ್ಮ ಕಾರ್ಯಕರ್ತನ ಕೊಲೆ ಅಗಿದೆ ಎಂದು ಬೊಬ್ಬೆ ಇಟ್ಟವರು, ಅವರದ್ದೆ ಪಕ್ಷದ ಮುಖಂಡ‌ ಮಾಡಿರುವ ಅಪರಾಧವನ್ನು ಖಂಡಿಸುವುದಕ್ಕೂ ಹೋಗಿಲ್ಲ ಎಂದು‌ ಟೀಕಿಸಿದರು.

ಬಿಜೆಪಿಯವರು ಸ್ವಾತಂತ್ರ್ಯ ಚಳವಳಿಯಲ್ಲಿ‌ ಭಾಗವಹಿಸಿಲ್ಲ. ಜೈಲೂ ಸೇರಿಲ್ಲ. ಪಾಪ ಅದಕ್ಕಾಗಿ ಈಗ ಜೈಲ್ ಭರೋ ಚಳವಳಿ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ‌ ಪ್ರತಿಭಟಿಸುವ ಹಕ್ಕು ಎಲ್ಲರಿಗೆ ಇದೆ. ಆದರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಪೊಲೀಸರು ಒಳ್ಳೆಯ ಕೆಲಸ‌ ಮಾಡಿದ್ದಾರೆ.‌ ಮೂರೂ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT