ಗದ್ದೆಮನೆ ಗ್ರಾಮದ ಪರಿಸರ ಕಾವಲುಗಾರ

7

ಗದ್ದೆಮನೆ ಗ್ರಾಮದ ಪರಿಸರ ಕಾವಲುಗಾರ

Published:
Updated:
ಗದ್ದೆಮನೆ ಗ್ರಾಮದ ಪರಿಸರ ಕಾವಲುಗಾರ

ಸಾಗರ: ಈ ರೈತ ಓದಿರುವುದು ಒಂಬತ್ತನೇ ಇಯತ್ತೆಯವರೆಗೆ ಮಾತ್ರ. ಅವರಿಗೆ ಪರಿಸರ, ವಿಜ್ಞಾನ, ಜೀವ ವೈವಿಧ್ಯ, ಹವಾಮಾನ ವೈಪರೀತ್ಯದಂತ ಪರಿಭಾಷೆಗಳ ಪರಿಚಯ ಇಲ್ಲ. ಆದರೆ‌, ನಿಜ ಅರ್ಥದಲ್ಲಿ ಕೃಷಿಯೊಂದಿಗೆ ಪರಿಸರವನ್ನು ಕಾಯುತ್ತಿರುವ ಅಪರೂಪದ ರೈತ.

ಸಾಗರದಿಂದ 7 ಕಿ.ಮೀ.ದೂರದಲ್ಲಿರುವ ಗದ್ದೆಮನೆ ಗ್ರಾಮಕ್ಕೆ ತೆರಳಿದರೆ ಅಪ್ಪಟ ಮಲೆನಾಡಿನ ಶೈಲಿಯಲ್ಲಿರುವ ರೈತ ರೇಣುಕೇಶ್ ನಾಯ್ಕ್ ಅವರ ಮನೆ ಸಿಗುತ್ತದೆ. ಮನೆಗೆ ಹೊಂದಿಕೊಂಡಂತೆ ಮೂರು ಎಕರೆ ಕೃಷಿಭೂಮಿಯಲ್ಲಿ ಅವರು ತಮಗರಿವಿಲ್ಲದಂತೆ ಪರಿಸರ ಸಂರಕ್ಷಣೆ ಕಾರ್ಯವನ್ನು ಜತನದಿಂದ ನಡೆಸಿಕೊಂಡು ಬರುತ್ತಿದ್ದಾರೆ.

ಮಲೆನಾಡಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಲ್ಲೆಂದರಲ್ಲಿ ಕಾಡು ಕಡಿದು ಕೃಷಿ ಮಾಡುವ ಹಪಾಹಪಿತನ ಹೆಚ್ಚುತ್ತಿದೆ. ಒಂದಿಂಚೂ ಜಾಗವನ್ನು ಬಿಡದೆ ರಾಶಿ ರಾಶಿ ರಾಸಾಯನಿಕ ಸುರಿದು ಹೆಚ್ಚು ಬೆಳೆ ತೆಗೆಯಬೇಕು ಎಂಬ ಧಾವಂತ ಆವರಿಸಿದೆ. ಇಂತಹ ಸನ್ನಿವೇಶದಲ್ಲಿ ತಮ್ಮ ಕೃಷಿಭೂಮಿಯಲ್ಲಿ ವ್ಯಾಪಕವಾಗಿ ಗಗನದೆತ್ತರಕ್ಕೆ ಬೆಳೆದಿರುವ ಮರಗಳನ್ನು ಉಳಿಸಿಕೊಂಡೇ ಕೃಷಿ ಮಾಡುತ್ತಿರುವುದು ರೇಣುಕೇಶ್ ನಾಯ್ಕ್ ಅವರ ವೈಶಿಷ್ಯ.

ರೇಣುಕೇಶ್ ಅವರ ಕೃಷಿಭೂಮಿಯಲ್ಲಿ ಅವರೊಂದಿಗೆ ಒಂದು ಸುತ್ತು ಹೋಗಿಬಂದರೆ ಹತ್ತಾರು ಜಾತಿಯ ನೂರೆಂಟು ಮರಗಳು, ಔಷಧೀಯ  ಸಸ್ಯಗಳ ಪರಿಚಯ ಆಗುತ್ತದೆ. ಒಂದೊಂದು ಗಿಡದ ಬಳಿ ನಿಂತು ರೇಣುಕೇಶ್ ಅವರು ಅವುಗಳ ವಿಶೇಷತೆಯ ಬಗ್ಗೆ ಚಿಕ್ಕ ಉಪನ್ಯಾಸವನ್ನೇ ತಮ್ಮದೇ ಭಾಷೆಯಲ್ಲಿ ನೀಡುತ್ತಾರೆ.

‘ನೋಡಿ ನಮ್ಮ ತಂದೆ ಕಾಲದಿಂದ ಕೈಕಡಕನ ಮರ ನಮ್ಮ ಮನೆ ಪಕ್ಕದಲ್ಲೆ ಇದೆ. ಕೆಲಸ ಮಾಡುವಾಗ ಕತ್ತಿ ಅಥವಾ ಇತರ ಆಯುಧದಿಂದ ಗಾಯವಾದರೆ ಈ ಮರದ ಎಲೆಯನ್ನು ಹುರಿದು ಪುಡಿ ಮಾಡಿ ಗಾಯಕ್ಕೆ ಹಚ್ಚಿದರೆ ಔಷಧಿಯೇ ಬೇಕಿಲ್ಲ. ಅದೇ ರೀತಿ ಜಾನುವಾರಿಗೆ ಮೂಳೆ ಬಿಟ್ಟರೆ ಸೀರಗತ್ತಿ ಬಳ್ಳಿ ಔಷಧಿ ಹಚ್ಚಿದರೆ ಸಾಕು’ ಎಂದು ಪಕ್ಕಾ ನಾಟಿ ವೈದ್ಯರಂತೆ ರೇಣುಕೇಶ್ ವಿವರಿಸುತ್ತಾರೆ.

‘ಇವತ್ತಿನ ವೈಜ್ಞಾನಿಕ ಸಂಶೋಧನೆಗಳು ಮನುಷ್ಯನ ಲಾಭವನ್ನು ಮಾತ್ರ ಕೇಂದ್ರೀಕರಿಸಿದೆ. ಇದರ ವ್ಯಾಪ್ತಿಯಲ್ಲಿ ಮರ, ಗಿಡ, ಪ್ರಾಣಿ, ಪಶು, ಪಕ್ಷಿ ಬರುವುದೇ ಇಲ್ಲ. ಹಾಗಾಗಿಯೇ ನಮ್ಮ ಸುತ್ತಮುತ್ತಲಿನ ಪರಿಸರ ಹಾಳಾಗಿದೆ’ ಎಂದು ರೇಣುಕೇಶ್ ಈಚಿನ ವಿದ್ಯಮಾನಗಳ ಹಿಂದಿರುವ ಸರಳ ಸತ್ಯವನ್ನು ಬಿಚ್ಚಿಡುತ್ತಾರೆ.

‘ನಿರ್ದಿಷ್ಟವಾಗಿ ಒಂದು ಬೆಳೆ ಬೆಳೆದರೆ ರೈತರಿಗೆ ನಷ್ಟವಾಗುವುದಿಲ್ಲ. ಹೆಚ್ಚು ಬೆಲೆ ಬರುತ್ತದೆ ಎಂದು ನಮ್ಮ ಪ್ರದೇಶಕ್ಕೆ ಹೊಂದಾಣಿಕೆಯಾಗದ ಬೆಳೆಗಳನ್ನು ಬೆಳೆಯಲು ಹೋಗಿ ರೈತರು ಕಷ್ಟಕ್ಕೆ ಸಿಲುಕುತ್ತಿದ್ದಾರೆ’ ಎಂದು ರೇಣುಕೇಶ್ ವಿವರಿಸುತ್ತಾರೆ.

ಕೃಷಿಭೂಮಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಕಾಡನ್ನು ಉಳಿಸಿಕೊಂಡಿರುವುದರಿಂದ ಅನೇಕ ಪ್ರಾಣಿಗಳು ಬಂದರೂ ಅದನ್ನು ಬೇಟೆಯಾಡಬೇಕು ಎಂಬ ಪ್ರವೃತ್ತಿಯನ್ನು ರೇಣುಕೇಶ್ ಯಾವತ್ತೂ ತೋರಿಲ್ಲ. ಪ್ರಾಣಿ, ಪಕ್ಷಿಗಳು ಇದ್ದರೆ ಮಾತ್ರ ಕೃಷಿ ಉಳಿಯಲು ಸಾಧ್ಯ ಎಂಬ ವಿವೇಕ ಅವರ ಬದುಕಿನಲ್ಲಿ ಹಾಸುಹೊಕ್ಕಾಗಿದೆ.

ತಮ್ಮ ಕೃಷಿಭೂಮಿಯ ನಡುವೆಯೇ ಇಂಗುಗುಂಡಿ ನಿರ್ಮಿಸುವ ಮೂಲಕ ಜಲ ಸಂರಕ್ಷಣೆ ಕಾಯಕದಲ್ಲೂ ರೇಣುಕೇಶ್ ತೊಡಗಿದ್ದಾರೆ. ಹೀಗೆ ಪರಿಸರ ಸಂರಕ್ಷಣೆ ಕುರಿತು ಯಾವುದೇ ಭಾಷಣ ಮಾಡದೆ, ಘೋಷಣೆ ಕೂಗದೇ  ಸಹಜ ಎನ್ನುವಂತೆ ಪರಿಸರವನ್ನು ಕಾಯುತ್ತಿರುವ ಹೆಗ್ಗಳಿಕೆ ರೇಣುಕೇಶ್ ಅವರದ್ದು.

–ಎಂ.ರಾಘವೇಂದ್ರ‌

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry