ಮನಗೂಳಿಗೆ ಮತ್ತೊಮ್ಮೆ ಒಲಿದ ಸಚಿವ ಸ್ಥಾನ?

7
ಸಚಿವ ಸ್ಥಾನ: ಕಾಂಗ್ರೆಸ್‌ನಲ್ಲಿ ಆಂತರಿಕ ಘೋಷಣೆ; ಬೆಂಗಳೂರಿಗೆ ದೌಡಾಯಿಸಿದ ಬೆಂಬಲಿಗ ಪಡೆ

ಮನಗೂಳಿಗೆ ಮತ್ತೊಮ್ಮೆ ಒಲಿದ ಸಚಿವ ಸ್ಥಾನ?

Published:
Updated:

ವಿಜಯಪುರ: ಸಿಂದಗಿ ಶಾಸಕ ಎಂ.ಸಿ.ಮನಗೂಳಿ ಜೆಡಿಎಸ್‌ನ ಲಿಂಗಾಯತ ಕೋಟಾದಡಿ ಸಚಿವರಾಗುವುದು ಬಹುತೇಕ ಖಚಿತವಾಗಿದೆ? ತೋಟಗಾರಿಕೆ, ರೇಷ್ಮೆ ಖಾತೆ ದೊರೆಯಬಹುದು? ಎಂಬುದು ಮೂಲಗಳಿಂದ ತಿಳಿದುಬಂದಿದೆ.

1994ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾಗಲೂ ಮನಗೂಳಿ ಜೆ.ಎಚ್‌.ಪಟೇಲರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು. ಇದೀಗ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗಲೂ ಎಚ್‌.ಡಿ.ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಪಡೆಯುವುದು ಪಕ್ಕಾ ಆಗಿದೆ.

ಸಿಂದಗಿ ಶಾಸಕ ಎಂ.ಸಿ.ಮನಗೂಳಿ ಜೆಡಿಎಸ್‌ ಅಗ್ರೇಸರ ಎಚ್‌.ಡಿ.ದೇವೇಗೌಡರನ್ನು ಭಾನುವಾರ ರಾತ್ರಿ ಭೇಟಿಯಾಗಿ ಮಾತುಕತೆ ನಡೆಸಿದ್ದು, ಸಚಿವ ಸ್ಥಾನಕ್ಕೆ ಸಮ್ಮತಿಯ ಮುದ್ರೆಯೊತ್ತಿಸಿಕೊಂಡಿದ್ದಾರೆ ಎನ್ನಲಾಗಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಬುಧವಾರ (ಜೂನ್‌ 6) ಮಧ್ಯಾಹ್ನ ಶುಭ ಮುಹೂರ್ತದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ಅಮೂಲ್ಯ ಕ್ಷಣಗಳನ್ನು ಕಣ್ತುಂಬಿಕೊಳ್ಳಲಿಕ್ಕಾಗಿ ಮನಗೂಳಿ ಪರಿವಾರದ ಐವತ್ತಕ್ಕೂ ಹೆಚ್ಚು ಮಂದಿ ಸಿಂದಗಿಯಿಂದ ಖಾಸಗಿ ಬಸ್‌ ಒಂದನ್ನು ಪೂರ್ತಿ ಒಪ್ಪಂದದ ಮೇರೆಗೆ ಪಡೆದುಕೊಂಡು, ಮಂಗಳವಾರ ರಾತ್ರಿ 8 ಗಂಟೆ ಆಸುಪಾಸಿನಲ್ಲಿ ಬೆಂಗಳೂರಿಗೆ ಪಯಣಿಸಿತು ಎಂಬುದನ್ನು ಮೂಲಗಳು ಖಚಿತ ಪಡಿಸಿವೆ.

ಮನಗೂಳಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಂಭ್ರಮದಲ್ಲಿ ಭಾಗಿಯಾಗಲಿಕ್ಕಾಗಿ, ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿರುವ ಎಂ.ಸಿ.ಮನಗೂಳಿ ಅಭಿಮಾನಿಗಳು, ಒಂದು ಸಹಸ್ರಕ್ಕೂ ಹೆಚ್ಚಿನ ಸಂಖ್ಯೆಯ ಕಟ್ಟಾ ಬೆಂಬಲಿಗರು ಮಂಗಳವಾರ ಮಧ್ಯಾಹ್ನದಿಂದಲೇ ತಮ್ಮ ವಾಹನಗಳು, ಬಸ್‌ಗಳಲ್ಲಿ ಬೆಂಗಳೂರಿನತ್ತ ತೆರಳಿದರು ಎಂದು ಉಮೇಶ ಜೋಗೂರ ತಿಳಿಸಿದರು.

‘ಕೈ’ ಪಡೆಯಲ್ಲೂ ಉತ್ಸಾಹ..!: ಸಚಿವ ಸಂಪುಟಕ್ಕೆ ‘ಕೈ’ ಪಾಳೆಯದಿಂದ ಯಾರ್‌್ಯಾರು ಸೇರ್ಪಡೆಯಾಗಬೇಕು ಎಂಬುದನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮಂಗಳವಾರ ತಡರಾತ್ರಿವರೆಗೂ ಅಂತಿಮಗೊಳಿಸದಿದ್ದರೂ; ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಬೆಂಬಲಿಗರು, ಅಭಿಮಾನಿಗಳು ತಂಡೋಪ ತಂಡವಾಗಿ ಖಾಸಗಿ ವಾಹನಗಳು, ಬಸ್‌ಗಳ ಮೂಲಕ ಮಂಗಳವಾರ ಮಧ್ಯಾಹ್ನದಿಂದ ವಿಜಯಪುರ, ಬಬಲೇಶ್ವರ, ಬಸವನ

ಬಾಗೇವಾಡಿಯಿಂದ ಉತ್ಸಾಹದಿಂದ ಹೊರಟಿದ್ದು ವಿಶೇಷವಾಗಿತ್ತು.

‘ಈ ಬಾರಿ ಶಿವಾನಂದ ಪಾಟೀಲರಿಗೆ ಸಚಿವ ಸ್ಥಾನ ಸಿಗುವುದು ನೂರಕ್ಕೆ ನೂರರಷ್ಟು ಖಚಿತ. ನಮ್ಮ ಶಾಸಕರಿಗೂ ವಿಶ್ವಾಸವಿದೆ. ಲವಲವಿಕೆಯಿಂದಿದ್ದಾರೆ. 200ಕ್ಕೂ ಹೆಚ್ಚು ಜನರ ತಂಡದೊಂದಿಗೆ ಮಂಗಳವಾರ ಮುಸ್ಸಂಜೆಯೇ ವಾಹನಗಳಲ್ಲಿ ಬೆಂಗಳೂರಿನತ್ತ ತೆರಳಿದೆವು. ಕ್ಷೇತ್ರದ ವಿವಿಧೆಡೆಯಿಂದಲೂ ಸ್ವಯಂ ಪ್ರೇರಿತರಾಗಿ ಅಭಿಮಾನಿಗಳು ತಂಡೋಪ ತಂಡವಾಗಿ ಬೆಂಗಳೂರಿಗೆ ತೆರಳುತ್ತಿದ್ದಾರೆ’ ಎಂದು ಬಸವನಬಾಗೇವಾಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ತಿಳಿಸಿದರು.

ಎಂ.ಬಿ.ಪಾಟೀಲ ಕುಟುಂಬ ವರ್ಗ, ಆಪ್ತರು, ಒಡನಾಡಿಗಳು, ಸಂಬಂಧಿಕರು, ಅಭಿಮಾನಿಗಳು, ಬೆಂಬಲಿಗರು ತಮ್ಮ ತಮ್ಮ ಖಾಸಗಿ ವಾಹನಗಳಲ್ಲಿ ಪ್ರತ್ಯೇಕ ತಂಡಗಳಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹಾಜರಾಗಲು ಬೆಂಗಳೂರಿಗೆ ಪಯಣಿಸಿದ್ದಾರೆ.

‘ನಮ್ಮ ನಾಯಕರಿಗೆ ಈಗಾಗಲೇ ಸ್ಪಷ್ಟ ಭರವಸೆ ಸಿಕ್ಕಿದೆ. ಬುಧವಾರ ಮತ್ತೊಮ್ಮೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜಭವನದೊಳಗೆ ಪ್ರವೇಶಿಸಲು ಅವಕಾಶ ಸಿಗುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಇದ್ಯಾವುದಕ್ಕೂ ಚಿಂತಿಸದೆ ರಾಜಭವನದ ಮುಂದೆ ಸಚಿವರಾಗುವ ಎಂ.ಬಿ.ಪಾಟೀಲರನ್ನು ಅಭಿನಂದಿಸಲು ವಿಜಯಪುರದಿಂದ ತೆರಳುತ್ತಿರುವೆ’ ಎಂದು ಬಬಲೇಶ್ವರ ಶಾಸಕರ ಆಪ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಜಯಪುರ ಜಿಲ್ಲೆಯಿಂದ ಯಾರೂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬುದನ್ನು ಖಚಿತ ಪಡಿಸಲು ಸಾಧ್ಯವಿಲ್ಲವಾಗಿದೆ. ಬುಧವಾರ ನಸುಕಿನ ವೇಳೆಗೆ ಚಿತ್ರಣ ಅಂತಿಮಗೊಳ್ಳಲಿದೆ. ಇಬ್ಬರೂ ಶಾಸಕರು ಸಚಿವ ಸ್ಥಾನಕ್ಕೆ ತೀವ್ರ ಲಾಬಿ ನಡೆಸಿದ್ದಾರೆ.

ಶಿವಾನಂದ ಪಾಟೀಲ ಬೆಂಗಳೂರಿನಲ್ಲೇ ಗುಟುರು ಹಾಕಿದರೆ; ಎಂ.ಬಿ.ಪಾಟೀಲ ತಮ್ಮ ಎಂದಿನ ಜಾಣ್ಮೆಯ ರಾಜಕೀಯ ನಡೆ ನಡೆಸಲಿಕ್ಕಾಗಿ ನವದೆಹಲಿಗೆ ಹೋಗಿದ್ದರು. ಯಾವ ಪಾಟೀಲರ ‘ಕೈ’ ಮೇಲಾಗಲಿದೆ ಎಂಬುದೇ ತಿಳಿಯದಾಗಿದೆ. ಇಬ್ಬರಿಗೂ ಅವಕಾಶ ಸಿಗಲಿದೆಯಾ? ತಪ್ಪಲಿದೆಯಾ? ಎಂಬುದು ಕಾಡುತ್ತಿದೆ’ ಎಂದು ಕೆಪಿಸಿಸಿಯ ಮುಖಂಡರೊಬ್ಬರು ಮಾಹಿತಿ ನೀಡಿದರು.

**

ನಮ್ಮ ಮನಗೂಳಿ ಪಕ್ಕಾ ದೇವೇಗೌಡರ ಪಾರ್ಟಿ. ಅದರ ಪ್ರತಿಫಲ ಇದೀಗ ಸಿಕ್ಕಿದೆ. ಪ್ರಮಾಣ ವಚನ ಸ್ವೀಕಾರ ಕಣ್ತುಂಬಿಕೊಳ್ಳಲು ಬೆಂಗಳೂರಿಗೆ ಹೋಗ್ತೀವಿ

ಉಮೇಶ ಜೋಗೂರ, ವರ್ತಕ, ಸಿಂದಗಿ ‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry