ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗೆ ಆದ್ಯತೆ

7
ಕ್ಷೇತ್ರದಲ್ಲಿದ್ದರೆ ಕೇಂದ್ರ ಸ್ಥಾನದಲ್ಲಿ ಜನಸಂಪರ್ಕ ಸಭೆ ನಡೆಸುವೆ; ಸಿಂದಗಿ ಶಾಸಕ ಎಂ.ಸಿ.ಮನಗೂಳಿ

ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗೆ ಆದ್ಯತೆ

Published:
Updated:
ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗೆ ಆದ್ಯತೆ

ವಿಜಯಪುರ: ಹ್ಯಾಟ್ರಿಕ್‌ ಸೋಲಿನ ಬಳಿಕ ಅನುಕಂಪದ ಅಲೆಯಲ್ಲಿ ಸಿಂದಗಿ ವಿಧಾನಸಭಾ ಕ್ಷೇತ್ರವನ್ನು ಒಂದೂವರೆ ದಶಕದ ಬಳಿಕ, ಎರಡನೇ ಬಾರಿಗೆ ಶಾಸಕರಾಗಿ ಪ್ರತಿನಿಧಿಸುವ ಅವಕಾಶ ಎಂ.ಸಿ.ಮನಗೂಳಿ ಅವರಿಗೆ ಸಿಕ್ಕಿದೆ.

1994ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗ ಜೆ.ಎಚ್‌. ಪಟೇಲರ ಸಂಪುಟದಲ್ಲಿ ಸಚಿವರಾಗಿದ್ದರು. ಇದೀಗ ಎರಡನೇ ಬಾರಿಗೆ ಆಯ್ಕೆಯಾಗಿದ್ದು, ಕುಮಾರಸ್ವಾಮಿ ಸಂಪುಟದಲ್ಲೂ ಸ್ಥಾನ ಪಡೆಯುವ ನಿರೀಕ್ಷೆ ಹೆಚ್ಚಿದೆ. ತಮ್ಮ ಶಾಸಕರ ಅವಧಿಯಲ್ಲಿ ಸಿಂದಗಿ ಕ್ಷೇತ್ರವನ್ನು ಯಾವ ರೀತಿ ಅಭಿವೃದ್ಧಿಗೊಳಿಸುವೆ ಎಂಬುದರ ಕುರಿತಂತೆ ಮನಗೂಳಿ ‘ಪ್ರಜಾವಾಣಿ’ ಜತೆ ತಮ್ಮ ದೂರದೃಷ್ಟಿಯ ಅಭಿವೃದ್ಧಿ ಚಿಂತನೆಯನ್ನು ಹಂಚಿಕೊಂಡಿದ್ದಾರೆ.

* ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ನೀಲನಕ್ಷೆ ಏನಿದೆ?

ಕುಡಿಯೋ ನೀರಿಗೆ ತ್ರಾಸಿದೆ. ಬಳಗಾನೂರ ಕೆರೆಗೆ ಕೃಷ್ಣೆ ತುಂಬಿಸಿ ಸಿಂದಗಿ, ಆಲಮೇಲ ಪಟ್ಟಣ ಸೇರಿದಂತೆ ಕೆಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಆದ್ಯತೆ ನೀಡುವೆ. ಸಿಂದಗಿ ಪಟ್ಟಣದಲ್ಲಿ ಹೆಣ್ಮಕ್ಕಳಿಗೆ ಶೌಚಾಲಯ ಸಮಸ್ಯೆ ಸಾಕಷ್ಟು ಕಾಡುತ್ತಿದೆ. ಸ್ಥಳೀಯ ಪುರಸಭೆ, ರಾಜ್ಯ ಸರ್ಕಾರದ ನೆರವು ಪಡೆದು, ಆದ್ಯತೆ ಮೇರೆಗೆ ಎಲ್ಲೆಡೆ ಶೌಚಾಲಯ ನಿರ್ಮಿಸುವ ಯೋಜನೆ ರೂಪಿಸಿಕೊಂಡಿರುವೆ.

* ಅಭಿವೃದ್ಧಿಗಾಗಿ ಹೊಸ ಹೊಳಹುಗಳೇನು?

ಸಿಂದಗಿ ಪಟ್ಟಣವಿದೆ. ನನ್ನ ಅವಧಿಯಲ್ಲೇ ನಗರವನ್ನಾಗಿ ಘೋಷಿಸಬೇಕು ಎಂಬ ಕನಸಿದೆ. ಅದಕ್ಕಾಗಿಯೇ ಈಗಿನಿಂದಲೇ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಮುಂದಾಗುವೆ. ಕೊಳಚೆ ನಿರ್ಮೂಲನಾ ಮಂಡಳಿ, ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮೂಲಕ ವಿಶೇಷ ಯೋಜನೆ ರೂಪಿಸುವೆ. ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವೆ. ಇದಕ್ಕೆ ಸಾಕಷ್ಟು ಅನುದಾನ ಬೇಕಿದೆ. ಮುಖ್ಯಮಂತ್ರಿ ಬಳಿ ಮನವಿ ಮಾಡಿಕೊಂಡು ಹಣ ತರುವೆ. ಪಟ್ಟಣದಲ್ಲಿ ಎಲ್ಲಿಯೂ ಒಂದೇ ಒಂದು ಉದ್ಯಾನವಿಲ್ಲ. ಸಾರ್ವಜನಿಕ ಉದ್ಯಾನ ನಿರ್ಮಿಸಿ, ಜನರಿಗೆ ಉತ್ತಮ ಪರಿಸರದ ವಾತಾವರಣ ಪರಿಚಯಿಸಬೇಕು ಎಂಬ ಮನಸ್ಸಿದೆ.

* ನೀರಾವರಿ ಕ್ಷೇತ್ರದ ಚಿತ್ರಣ?

‘ನೀರಿಲ್ಲದಿದ್ದರೇ ಏನು ಇಲ್ಲಾ; ನೀರೇ ಎಲ್ಲಾ’ ಎಂಬುದನ್ನು ಅರಿತಿರುವವನು ನಾನು. ತಾಲ್ಲೂಕಿನ ರೈತರ ಭೂಮಿಗೆ ನೀರು ಹರಿಸೋ ತನಕ ಈ ಬಾರಿ ವಿರಮಿಸಲ್ಲ. ಎಲ್ಲಾ ಕೆರೆಗಳನ್ನು ತುಂಬಲು ಯೋಜನೆ ರೂಪಿಸುವೆ. ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಚುರುಕು ಮುಟ್ಟಿಸುವೆ. ಯುಕೆಪಿ ಯೋಜನೆ ಪೂರ್ಣಗೊಳಿಸಲಿಕ್ಕಾಗಿ ವಿಶೇಷ ಅನುದಾನ ಬಿಡುಗಡೆಗೊಳಿಸಲು ಮುಂದಾಗುವೆ. ಕಾಲುವೆ ಜಾಲ ವಿಸ್ತರಣೆ, ವಿತರಣಾ ಕಾಲುವೆ, ಹೊಲಗಾಲುವೆ ನಿರ್ಮಿಸಿ, ರೈತರ ಜಮೀನಿಗೆ ನೀರು ಹರಿಸುವುದೇ ನನ್ನ ಗುರಿಯಾಗಿದೆ.

* ಹೊಸ ತಾಲ್ಲೂಕು ಕೇಂದ್ರ, ಪಟ್ಟಣ ಪಂಚಾಯಿತಿ ಸಶಕ್ತಿಕರಣಕ್ಕೆ ಏನು ಮಾಡ್ತೀರಿ?

ಆಲಮೇಲ ಪಟ್ಟಣ ಪಂಚಾಯಿತಿಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಗೊಳಿಸುವೆ. ಸ್ಥಳೀಯ ಜನಪ್ರತಿನಿಧಿಗಳ ಜತೆ ಸಭೆ ನಡೆಸಿ, ಅಭಿವೃದ್ಧಿಗಾಗಿ ಸಮಗ್ರ ಯೋಜನೆ ರೂಪಿಸುವೆ. ಆಲಮೇಲ ಪಟ್ಟಣದ ಎಲ್ಲ ಸಮಸ್ಯೆಗಳಿಗೆ ಇತಿಶ್ರೀ ಹಾಕುವೆ. ಸಿಂದಗಿಗೆ ಪರ್ಯಾಯವಾಗಿ ಪಟ್ಟಣವನ್ನು ಮುಖ್ಯ ಕೇಂದ್ರವನ್ನಾಗಿ ಅಭಿವೃದ್ಧಿಗೊಳಿಸುವೆ. ಇದರ ಜತೆಗೆ ಆಲಮೇಲ ಪಟ್ಟಣಕ್ಕೆ ತಾಲ್ಲೂಕು ಕೇಂದ್ರದ ಸ್ಥಾನಮಾನವನ್ನು ಈ ಅವಧಿಯಲ್ಲೇ ಕೊಡಿಸುವೆ.

* ಶಾಸಕರ ಅನುದಾನದಲ್ಲಿ ಯಾವುದಕ್ಕೆ ಹೆಚ್ಚಿನ ಆದ್ಯತೆ?

ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವವನು ನಾನು. ಶೈಕ್ಷಣಿಕ ರಂಗದ ಪ್ರಗತಿಗೆ ಅನುದಾನ ಮೀಸಲಿಡುವೆ. ಶೈಕ್ಷಣಿಕ ಗುಣಮಟ್ಟ ಸುಧಾರಣೆ ಜತೆಗೆ, ಶಿಥಿಲಾವಸ್ಥೆಯಲ್ಲಿರುವ ಕೊಠಡಿ, ನೂತನ ಕೊಠಡಿ ನಿರ್ಮಾಣಕ್ಕೂ ಯತ್ನಿಸುವೆ. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಶಾಸಕರ ಅನುದಾನದಲ್ಲೇ ನೆರವು ನೀಡಿ ಸಮಸ್ಯೆ ಪರಿಹರಿಸುವೆ. ಇನ್ನುಳಿದಂತೆ ಜನರ ಅಪೇಕ್ಷೆಗನುಗುಣವಾಗಿ ಮಠ–ಮಂದಿರ, ಗುಡಿ–ಗುಂಡಾರಗಳ ಬಳಿ ಸಮುದಾಯ ಭವನಕ್ಕೂ ಅನುದಾನ ಮಂಜೂರು ಮಾಡುವೆ.

* ವಿಶೇಷ ಅನುದಾನಕ್ಕೆ ಯಾವ ಯತ್ನ ನಡೆಸುವಿರಿ?

ನಮ್ಮವರೇ ಮುಖ್ಯಮಂತ್ರಿಯಿದ್ದಾರೆ. ಇದು ನಮಗೆ ಅನುಕೂಲ. ಕುಮಾರಸ್ವಾಮಿ ಜತೆ ನಿಕಟ ಬಾಂಧವ್ಯವಿದೆ. ಇದನ್ನು ಬಳಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತರುವೆ. ಕಾಂಗ್ರೆಸ್ಸಿನಲ್ಲೂ ನನಗೆ ಪರಿಚಯದವರಿದ್ದಾರೆ. ಆಯಾ ಖಾತೆಯ ಸಚಿವರ ಬಳಿ ಹೆಚ್ಚಿನ ಅನುದಾನ ಮಂಜೂರು ಮಾಡಿಸುವೆ.

* ಸಮಸ್ಯೆಗಳಿಗೆ ಯಾವ ರೀತಿ ಸ್ಪಂದಿಸುವಿರಿ?

ರೈತರ ಭೂಮಿಗೆ, ಕುಡಿಯಲು ನೀರು ಒದಗಿಸುವುದಕ್ಕೆ ಮೊದಲ ಆದ್ಯತೆ. ಇದಕ್ಕೆ ಪೂರಕವಾಗಿ ವಿದ್ಯುತ್‌ ಸಮಸ್ಯೆ ಕಾಡದಂತೆ ನೋಡಿಕೊಳ್ಳುವೆ. ಎಲ್ಲ ವರ್ಗದ ಮಕ್ಕಳ ಶೈಕ್ಷಣಿಕ ಸುಧಾರಣೆಗೆ ಆದ್ಯತೆ ನೀಡುವೆ. ಇಂದಿಗೂ ಹಲ ಹಳ್ಳಿಗಳಿಗೆ ಸಂಚಾರ ಯೋಗ್ಯ ರಸ್ತೆಯಿಲ್ಲ. ಬಸ್‌ಗಳ ಸಂಪರ್ಕವಿಲ್ಲ. ರಸ್ತೆ ಅಭಿವೃದ್ಧಿಗೊಳಿಸಿ, ಬಸ್‌ ಸಂಚಾರ ಆರಂಭಿಸುವೆ. ಜನರು ಸಮಸ್ಯೆ ಹೊತ್ತು ನನ್ನ ಬಳಿ ಬರಬೇಕಿಲ್ಲ. ನಾನೇ ಅವರ ಬಳಿ ಹೋಗುವೆ. ಮೋರಟಗಿ, ಆಲಮೇಲ, ತಾಂಬಾ, ಗೋಲಗೇರಿಯನ್ನು ಕೇಂದ್ರ ಸ್ಥಾನವನ್ನಾಗಿಸಿಕೊಳ್ಳುವೆ. ಇಲ್ಲಿಯೇ ಜನಸಂಪರ್ಕ ಸಭೆಗಳನ್ನು ನಡೆಸುವೆ. ಸ್ಥಳದಲ್ಲೇ ಆಯಾ ಸಮಸ್ಯೆಗಳಿಗೆ ಸಂಬಂಧಿಸಿದ ಅಧಿಕಾರಿಗಳಿಂದ ಪರಿಹಾರ ಕೊಡಿಸುವೆ. ಸಿಂದಗಿಯಲ್ಲಿ ಎರಡು ದಿನವಿದ್ದು, ಸಮಗ್ರ ಕಣ್ಣೋಟವಿಡುವೆ. ವಾರದಲ್ಲಿ ಉಳಿದ ಇನ್ನೊಂದು ದಿನವನ್ನು ಪ್ರವಾಸ, ಕಚೇರಿ ಕೆಲಸ, ಸಭೆಗಳಿಗೆ ಮೀಸಲಿಟ್ಟುಕೊಳ್ಳುವೆ. ಕ್ಷೇತ್ರದಲ್ಲಿದ್ದಾಗ ಈ ವೇಳಾಪಟ್ಟಿಯಂತೆ ಕೆಲಸ ನಿರ್ವಹಿಸುವೆ. ಅನಿವಾರ್ಯವಾಗಿ ಹೊರ ಹೋಗುವಾಗ ಆಯಾ ಭಾಗದ ಜನರಿಗೆ ಮಾಹಿತಿ ನೀಡುವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry