ಮಳೆಯ ನಡುವೆಯೂ ಉತ್ತಮ ಮತದಾನ

7
ಶಿವಮೊಗ್ಗ: ಶಿಕ್ಷಕರ ಕ್ಷೇತ್ರಕ್ಕೆ ಶೇ 82.80, ಪದವೀಧರ ಕ್ಷೇತ್ರಕ್ಕೆ ಶೇ 74.98 ಮತದಾನ

ಮಳೆಯ ನಡುವೆಯೂ ಉತ್ತಮ ಮತದಾನ

Published:
Updated:

ಶಿವಮೊಗ್ಗ: ಜಿಲ್ಲೆಯಾದ್ಯಂತ ಶುಕ್ರವಾರ ನಡೆದ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.

ಈ ಬಾರಿ ಜಿಲ್ಲೆಯಲ್ಲಿ ಎರಡು ಕ್ಷೇತ್ರದ ಚುನಾವಣೆಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಉತ್ತಮ ಮತದಾನ ನಡೆದಿದೆ. ಮತದಾರರ ಅನುಕೂಲಕ್ಕಾಗಿ ಈ ಬಾರಿ ಜಿಲ್ಲೆಯ ವಿವಿಧೆಡೆ 32 ಶಿಕ್ಷಕರ ಕ್ಷೇತ್ರ ಹಾಗೂ 32 ಪದವೀಧರ ಕ್ಷೇತ್ರದ ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿತ್ತು. ಅಲ್ಲದೇ ನೌಕರ ಮತದಾರರಿಗೆ ಸಾಂದರ್ಭಿಕ ರಜೆ ಇದ್ದುದ್ದರಿಂದ ಉತ್ತಮ ಮತದಾನ ನಡೆಯಿತು. ಕೆಲವೆಡೆ ಮತದಾರರು ಮಳೆಯನ್ನು ಲೆಕ್ಕಿಸದೇ ಬಂದು ಮತ ಚಲಾಯಿಸಿದರು. ಕೆಲವೆಡೆ ಗಣ್ಯರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬೆಳಿಗ್ಗೆಯಿಂದಲೇ ಕೆಲವು ಮತಗಟ್ಟೆಯಲ್ಲಿ ಉದ್ದನೆಯ ಸರದಿ ಸಾಲು ಕಂಡು ಬಂದರೆ ಇನ್ನು ಕೆಲವು ಮತಗಟ್ಟೆಗಳಲ್ಲಿ ಮಂದಗತಿಯಲ್ಲಿ ಮತದಾನ ನಡೆಯುತ್ತಿತ್ತು. ಮುಂಜಾನೆಯಿಂದಲೇ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕೆಲವೆಡೆ ಮತದಾರರು ಮತಗಟ್ಟೆಗಳಿಗೆ ಹೋಗುವುದಕ್ಕೆ ಹಿಂದೇಟು ಹಾಕಿದರು.

ಜಿಲ್ಲೆಯಾದ್ಯಂತ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಪದವೀಧರ ಕ್ಷೇತ್ರದಲ್ಲಿ ಶೇ 41.78 ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಶೇ 51.79 ಮತದಾನ ನಡೆಯಿತು. ಮಧ್ಯಾಹ್ನ 3 ಗಂಟೆಗೆ ಪದವೀಧರ ಕ್ಷೇತ್ರಕ್ಕೆ ಶೇ 56.91 ಹಾಗೂ ಶಿಕ್ಷಕರ ಕ್ಷೇತ್ರಕ್ಕೆ 63.95 ರಷ್ಟು ಮತದಾನ ನಡೆಯಿತು. ಜಿಲ್ಲೆಯಲ್ಲಿ ಶಿಕ್ಷಕರ ಕ್ಷೇತ್ರಕ್ಕೆ ಶೇ 82.80 ಪದವೀಧರ ಕ್ಷೇತ್ರಕ್ಕೆ ಶೇ 74.98 ಮತದಾನ ನಡೆಯಿತು. ಈ ಬಾರಿ ನೈರುತ್ಯ ಹಾಗೂ ಪದವೀಧರ ಕ್ಷೇತ್ರದಿಂದ ಒಟ್ಟು 20 ಅಭ್ಯರ್ಥಿಗಳು ಕಣದಲ್ಲಿದ್ದು, ಪದವೀಧರ ಕ್ಷೇತ್ರಕ್ಕೆ ಜಿಲ್ಲೆಯ 27,043 ಹಾಗೂ ಶಿಕ್ಷಕರ ಕ್ಷೇತ್ರಕ್ಕೆ 4960 ಮಂದಿ ಮತ ಚಲಾಯಿಸುವ ಅವಕಾಶ ಪಡೆದಿದ್ದರು. ಅದರಲ್ಲಿ ಪದವೀಧರ ಕ್ಷೇತ್ರಕ್ಕೆ 20,277 ಮಂದಿ ಮತ ಚಲಾಯಿಸಿದರು. ಶಿಕ್ಷಕರ ಕ್ಷೇತ್ರಕ್ಕೆ 4,107 ಮಂದಿ ಮತಚಲಾಯಿಸಿದರು.

ಇದೇ ಮೊದಲ ಬಾರಿಗೆ ಮತ ಪತ್ರದಲ್ಲಿ ಅಭ್ಯರ್ಥಿಗಳ ಹೆಸರಿನ ಕೊನೆಯಲ್ಲಿ ನೋಟಾಕ್ಕೂ ಅವಕಾಶ ಮಾಡಿಕೊಡಲಾಗಿತ್ತು. ಪದವೀಧರರಿಗೆ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿ ಸೇರಿ ನಾಲ್ವರು ಸಿಬ್ಬಂದಿ ಕಾರ್ಯ ನಿರ್ವಹಿಸಿದರು. ಜತೆಗೆ 4 ಮಂದಿ ಪೊಲೀಸ್ ಸಿಬ್ಬಂದಿ ಭದ್ರತೆಗೆಂದು ನಿಯೋಜನೆಗೊಂಡಿದ್ದರು. ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್‌ ಅವರು ನಗರದ ಮಿಳಘಟ್ಟ, ನವುಲೆ ಸೇರಿದಂತೆ ವಿವಿಧ ಮತಗಟ್ಟೆಗಳಿಗೆ ಖುದ್ದಾಗಿ ಭೇಟಿ ನೀಡಿ ಮತದಾನ ಪ್ರಕ್ರಿಯೆಗಳನ್ನು ಪರಿಶೀಲಿಸಿದರು. ಜಿಲ್ಲೆಯಾದ್ಯಂತ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.

ಗಣ್ಯರಿಂದ ಮತದಾನ: ಪದವೀಧರ ಕ್ಷೇತ್ರದ ಪ್ರಬಲ ಅಭ್ಯರ್ಥಿಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಶಿವಮೊಗ್ಗದಲ್ಲಿ ಮತ ಚಲಾಯಿಸಿದರು. ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್‌ ನಗರದ ಮಿಳಘಟ್ಟ ಸರ್ಕಾರಿ ಶಾಲೆಯಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಮತ ಚಲಾಯಿಸಿದರು. ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಪಿ. ದಿನೇಶ್‌ ಶಿವಮೊಗ್ಗ ವಿನೋಬನಗರ ಡಿವಿಎಸ್‌ ಪ್ರೌಢಶಾಲೆಯಲ್ಲಿ ಮತ ಚಲಾಯಿಸಿದರು. ಶಾಸಕ ಕೆ.ಎಸ್‌. ಈಶ್ವರಪ್ಪ ನವುಲೆ ಸರ್ಕಾರಿ ಶಾಲೆಯಲ್ಲಿ ಹಾಗೂ ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ನಗರದ ಬಾಲರಾಜ್ ಅರಸ್ ರಸ್ತೆಯ ಲೋಕೋಪಯೋಗಿ ಇಲಾಖೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry