‘ವಿಜಯಪುರ ಐದು ವರ್ಷದಲ್ಲಿ ಸುಂದರ ನಗರ..!’

7
ವಿವಿಧ ಇಲಾಖೆ ಅಧಿಕಾರಿಗಳ ಸಮನ್ವಯ ಸಮಿತಿ ರಚನೆ; ಶಾಸಕ ಬಸನಗೌಡ ಪಾಟೀಲ ಯತ್ನಾಳ

‘ವಿಜಯಪುರ ಐದು ವರ್ಷದಲ್ಲಿ ಸುಂದರ ನಗರ..!’

Published:
Updated:
‘ವಿಜಯಪುರ ಐದು ವರ್ಷದಲ್ಲಿ ಸುಂದರ ನಗರ..!’

ವಿಜಯಪುರ: ವರ್ಣರಂಜಿತ ವ್ಯಕ್ತಿತ್ವ, ವಿವಾದಾತ್ಮಕ ಹೇಳಿಕೆ, ಹಿಂದೂತ್ವ ಪ್ರತಿಪಾದನೆ, ಸ್ವಪಕ್ಷೀಯ ಮುಖಂಡರೊಟ್ಟಿಗಿನ ತಿಕ್ಕಾಟದಿಂದಲೇ ಖ್ಯಾತಿಯಾಗಿರುವ ಬಸನಗೌಡ ಪಾಟೀಲ ಯತ್ನಾಳ ಇದೀಗ ಎರಡನೇ ಬಾರಿಗೆ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.

ವಿಧಾನ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಯತ್ನಾಳ ತಮ್ಮ ರಾಜಕೀಯ ಭವಿಷ್ಯವನ್ನೇ ಪಣಕ್ಕಿಟ್ಟಿದ್ದರು. ಗೆಲುವಿಗಾಗಿ ತಮ್ಮ ಎದುರಾಳಿಗಳ ಮುಂದೆ ಮಂಡಿಯೂರದೆ; ವಾಚಾಮಗೋಚರ ನಿಂದಿಸಿಯೂ ವಿಜಯಿಯಾದವರು. ಮುಸ್ಲಿಮರ ಮತಗಳು ನನಗೆ ಬೇಕಿಲ್ಲ ಎನ್ನುವ ಮೂಲಕ ವಿವಾದ ಸೃಷ್ಟಿಸಿದವರು.

ನಿಷ್ಠುರವಾದಿ, ನೇರ ನುಡಿ, ಜನರ ಅಭಿಮಾನವೇ ನನ್ನ ಗೆಲುವಿನ ಗುಟ್ಟು ಎನ್ನುವ ಬಸನಗೌಡ, ವಿಜಯಪುರವನ್ನು ಸುಂದರ ನಗರವನ್ನಾಗಿ ಅಭಿವೃದ್ಧಿಪಡಿಸಿ; ಉಳಿದ ಪಟ್ಟಣ, ನಗರಿಗರು ಇದನ್ನು ಅನುಕರಿಸುವಂತೆ ಮಾಡಬೇಕು ಎಂಬ ಕನಸಿದೆ ಎನ್ನುತ್ತಾರೆ. ತಮ್ಮ ಅಭಿವೃದ್ಧಿ ಯೋಜನೆಗಳನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡಿದ್ದಾರೆ.

* ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ನೀಲನಕ್ಷೆ ಏನಿದೆ ?

ಈಗಾಗಲೇ ಅಧಿಕಾರಿಗಳ ಜತೆ ಹಲ ಸಭೆ ನಡೆಸಿದ್ದೇನೆ. ಮಾಹಿತಿ ಪಡೆದಿರುವೆ. ಸುಂದರ ನಗರ ನಿರ್ಮಾಣದ ಸಂಕಲ್ಪ ತೊಟ್ಟಿರುವೆ. ಮಹಾನಗರ ಪಾಲಿಕೆಯಲ್ಲಿ ವಾರ್ಡ್‌ಗಳಿಗೆ ಅನುದಾನ ಹಂಚಿಕೆ ಸಮರ್ಪಕವಾಗಿಲ್ಲ. ಇದನ್ನು ಸರಿಪಡಿಸಿದರೆ ಅರ್ಧ ಕೆಲಸ ಮುಗಿದಂತೆ.

ತೊರವಿಯ ನೀರಿನ ಸಮಸ್ಯೆ ಪರಿಹಾರಕ್ಕೆ ₹ 5 ಕೋಟಿ ಮೊತ್ತದ ಯೋಜನೆ ರೂಪಿಸಿರುವೆ. ₹ 5 ಕೋಟಿ ವೆಚ್ಚದಲ್ಲಿ ಕನಕದಾಸ ಬಡಾವಣೆಯಲ್ಲಿ ಅಂತರರಾಷ್ಟ್ರೀಯ ಈಜುಗೊಳ ನಿರ್ಮಾಣಕ್ಕೆ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. 24X7 ಕುಡಿಯುವ ನೀರಿನ ಯೋಜನೆ, ಯುಜಿಡಿ, ಮಾಸ್ಟರ್ ಪ್ಲಾನ್‌ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಳ್ಳುವೆ.

* ಅಭಿವೃದ್ಧಿಗಾಗಿ ಹೊಸ ಹೊಳಹುಗಳೇನು ?

ವಿಜಯಪುರದ ಅಭಿವೃದ್ಧಿಗಾಗಿ ಸಂಬಂಧಿಸಿದ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಮಿತಿ ರಚಿಸಿರುವೆ. ತಿಂಗಳಿಗೊಮ್ಮೆ ಈ ಸಮಿತಿಯ ಸಭೆ ನಡೆಸಿ ಕ್ರಮಬದ್ಧವಾಗಿ ಕಾಮಗಾರಿ ಕೈಗೊಳ್ಳುತ್ತೇವೆ. ಪದೇ ಪದೇ ರಸ್ತೆ ಅಡ್ಡೋದಕ್ಕೇ ಇನ್ಮುಂದೆ ಫುಲ್‌ಸ್ಟಾಪ್‌.

ಎರಡ್ಮೂರು ಬಡಾವಣೆಗೊಂದು ರೈತರ ಕಾಯಿಪಲ್ಲೆ ಮಾರುಕಟ್ಟೆ ನಿರ್ಮಾಣ. ಗುಡಿಸಲು ರಹಿತ ವಿಜಯಪುರ ನಗರ. ಬಡಾವಣೆಗಳಲ್ಲಿ ಎರಡು ಎಕರೆ ಖಾಲಿ ನಿವೇಶನ ಸಿಕ್ಕರೆ, ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಶಾಸಕರ ಅನುದಾನದಲ್ಲಿ ಸುಂದರ ಉದ್ಯಾನ ನಿರ್ಮಿಸಲಾಗುವುದು. ಇದರೊಳಗೆ ವಾಕಿಂಗ್‌ ಟ್ರ್ಯಾಕ್‌, ಯೋಗಾ ಪ್ಲಾಟ್, ಓಪನ್ ಜಿಮ್‌, ಶೌಚಾಲಯ ಸೇರಿದಂತೆ ಶುದ್ಧ ಕುಡಿಯುವ ನೀರೊದಗಿಸುವಿಕೆ, ಚಿಕ್ಕ ಗ್ರಂಥಾಲಯ ಒಳಗೊಂಡ ಯೋಜನೆ ಅನುಷ್ಠಾನಗೊಳಿಸುವೆ.

ಸ್ಲಂ ಸ್ವಚ್ಛಗೊಳಿಸಿ ಅದೇ ಜಾಗದಲ್ಲಿ ಎಲ್ಲ ಬಡವರಿಗೂ ಜಿ + 2 ಮಾದರಿ ಮನೆಗಳನ್ನು ವಿವಿಧ ವಸತಿ ಯೋಜನೆಯಡಿ ನಿರ್ಮಿಸುವ ಆಲೋಚನೆಯಿದೆ.

* ಪಾಲಿಕೆ ಸಶಕ್ತಿಕರಣಕ್ಕೆ ಏನು ಮಾಡ್ತೀರಿ ?

ಮುಂದಿನ ಚುನಾವಣೆಯಲ್ಲಿ ಜನರು ಉತ್ತಮರನ್ನು ಕಾರ್ಪೊರೇಟರ್‌ಗಳಾಗಿ ಆರಿಸಬೇಕಿದೆ. ಸಿಬ್ಬಂದಿ ಕೊರತೆ ಸಾಕಷ್ಟಿದೆ. ಸರ್ಕಾರದ ಮೇಲೆ ಒತ್ತಡ ಹಾಕಿ ನೇಮಕಾತಿ ನಡೆಯುವಂತೆ ನೋಡಿಕೊಳ್ಳುವೆ. ವಿಶೇಷ ಅನುದಾನ ತರಲು ಯತ್ನ ನಡೆಸುವೆ. ನೂತನ ಕಟ್ಟಡ ನಿರ್ಮಾಣಕ್ಕೆ ಶೀಘ್ರದಲ್ಲೇ ಚಾಲನೆ ನೀಡುತ್ತೇವೆ.

* ಜನರ ನಿರೀಕ್ಷೆಗೆ ಯಾವ ರೀತಿ ಸ್ಪಂದಿಸುವಿರಿ ?

ಜನರ ಬಳಿಗೆ ನಾನೇ ನೇರವಾಗಿ ಹೋಗುವೆ. ಪಾರದರ್ಶಕ ಆಡಳಿತ ನೀಡುವೆ. ಎಲ್ಲೂ ಮಧ್ಯವರ್ತಿಗಳು, ಏಜೆಂಟರಿಗೆ ಅವಕಾಶವಿಲ್ಲ. ಅರ್ಹರಿಗೆ ಎಲ್ಲ ಸರ್ಕಾರಿ ಸೌಲಭ್ಯ ಒದಗಿಸುವೆ. ಮನೆಗಳ ಹಂಚಿಕೆಯೂ ಅಷ್ಟೇ. ಯಾರಿಗೂ ಲಂಚ ಕೊಡಬೇಕಿಲ್ಲ. ನೇರವಾಗಿ ಅರ್ಜಿ ಸಲ್ಲಿಸಿದರೆ ಸಾಕು.

* ಶಾಸಕರ ಅನುದಾನದಲ್ಲಿ ಯಾವುದಕ್ಕೆ ಹೆಚ್ಚಿನ ಆದ್ಯತೆ ?

ಆಯಾ ಬಡಾವಣೆಯ ಜನರ ಅಪೇಕ್ಷೆಗೆ ತಕ್ಕಂತೆ, ಕುಡಿಯುವ ನೀರು, ಸಮುದಾಯ ಭವನ, ಶಾಲೆ, ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವೆ.

* ವಿಶೇಷ ಅನುದಾನಕ್ಕೆ ಯಾವ ಯತ್ನ ನಡೆಸುವಿರಿ ?

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವಿದೆ. ಈ ಹಿಂದೆ ನಾನು ಸಂಸದ, ಕೇಂದ್ರ ಸಚಿವನಿದ್ದ ಸಂದರ್ಭ ಸಂಸತ್ತಿನಲ್ಲಿದ್ದ ಹಲವರು ಇದೀಗ ಪ್ರಮುಖ ಖಾತೆಯ ಸಚಿವರಿದ್ದಾರೆ. ವೈಯಕ್ತಿಕ ಗೆಳೆತನ ಬಳಸಿಕೊಂಡು ಸಾಕಷ್ಟು ಅನುದಾನ ತರುವೆ. ಇದರ ಜತೆಗೆ ಮೋದಿ ಮನವೊಲಿಸಿ ವಿಜಯಪುರವನ್ನು ಸ್ಮಾರ್ಟ್‌ ಸಿಟಿ ಪಟ್ಟಿಗೆ ಸೇರಿಸಲು ಯತ್ನಿಸುವೆ.

* ಐತಿಹಾಸಿಕ ಸ್ಮಾರಕಗಳ ಅಭಿವೃದ್ಧಿಗೆ ?

ಸ್ಮಾರಕಗಳ ಸುತ್ತಲಿರುವ ಅತಿಕ್ರಮಣ ತೆರವಿಗೆ ವಿಶೇಷ ಒತ್ತು ನೀಡುವೆ. ಪ್ರವಾಸಿಗರಿಗೆ ಮೂಲ ಸೌಕರ್ಯದ ಜತೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಿ, ಆಕರ್ಷಿಸಲಾಗುವುದು.

ಕೈಗಾರಿಕೆ ಅಭಿವೃದ್ಧಿಗೆ ಏನು ಕ್ರಮ ?

ಡೆನಿಮ್‌ ಕಂಪನಿ ವಿಜಯಪುರದಲ್ಲಿ ಕಾರ್ಯಾಚರಿಸುವುದರಲ್ಲಿ ನನ್ನ ಪಾತ್ರವಿದೆ. ಕೈಗಾರಿಕೆ ಸ್ಥಾಪನೆಗೂ ಮುನ್ನ ಕೈಗಾರಿಕೋದ್ಯಮಿಗಳಿಗೆ ವಿವಿಧ ಇಲಾಖೆಗಳಲ್ಲಿನ ಕಿರುಕುಳ ತಪ್ಪಿಸುವೆ. ಮೂಲ ಸೌಕರ್ಯ ಕಲ್ಪಿಸುವೆ. ಕಾನೂನಾತ್ಮಕ ಎಲ್ಲ ಅಡೆತಡೆಗಳನ್ನು ಮಾತುಕತೆ ಮೂಲಕ ಬಗೆಹರಿಸುವೆ. ಸಕ್ಕರೆ, ಕೃಷಿ ಆಧಾರಿತ ಕೈಗಾರಿಕೆಗಳು ಸ್ಥಾಪನೆಯಾಗುವಂತೆ ಪೂರಕ ವಾತಾವರಣ ನಿರ್ಮಿಸಲಾಗುವುದು.

ದ್ರಾಕ್ಷಿ ಬೆಳೆಗಾರರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ವಿಜಯಪುರದಲ್ಲಿನ ಒಣದ್ರಾಕ್ಷಿ ಆನ್‌ಲೈನ್‌ ಟ್ರೇಡ್‌ ಸೆಂಟರ್‌ನಲ್ಲಿ ವಹಿವಾಟು ಆರಂಭಕ್ಕೆ ಚಾಲನೆ ನೀಡಲಾಗುವುದು. ಕೋಲ್ಡ್‌ ಸ್ಟೋರೇಜ್‌ಗಳ ದೊಡ್ಡ ಲಾಬಿ ತಡೆಗಟ್ಟುವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry