ಉಪಯೋಗಕ್ಕೆ ಬಾರದ ಸುರಂಗ ಮಾರ್ಗ

7
ದಶಕದಿಂದ ನಿರ್ಲಕ್ಷ್ಯಕ್ಕೊಳಗಾದ ಬಹುವೆಚ್ಚದ ಪಾದಚಾರಿ ಮಾರ್ಗ l ಕ್ರಮಕ್ಕೆ ಸ್ಥಳೀಯರ ಒತ್ತಾಯ

ಉಪಯೋಗಕ್ಕೆ ಬಾರದ ಸುರಂಗ ಮಾರ್ಗ

Published:
Updated:

ಶಿವಮೊಗ್ಗ: ಸಂಚಾರ ದಟ್ಟಣೆ ತಗ್ಗಿಸಲು ಹಾಗೂ ಪಾದಚಾರಿಗಳಿಗೆ ಉಂಟಾಗುತ್ತಿದ್ದ ಸಮಸ್ಯೆ ತಪ್ಪಿಸುವ ಸಲುವಾಗಿ ಇಲ್ಲಿನ ಅಮೀರ್‌ ಅಹಮದ್‌ ವೃತ್ತ ಹಾಗೂ ಶಿವಪ್ಪ ನಾಯಕ ವೃತ್ತದ ಬಳಿ ಬಹುವೆಚ್ಚದಲ್ಲಿ ನಿರ್ಮಿಸಿರುವ ಸುರಂಗ ಪಾದಚಾರಿ ಮಾರ್ಗ ದಶಕದಿಂದ ನಿರ್ಲಕ್ಷಕ್ಕೊಳಗಾಗಿದೆ.

ಶಿವಮೊಗ್ಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು, ಇಲ್ಲಿನ ಬಿ.ಎಚ್‌. ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನ ಹಾಗೂ ಜನ ದಟ್ಟಣೆ ಹೆಚ್ಚು. ಅದರಲ್ಲೂ ಬಿ.ಎಚ್‌. ರಸ್ತೆ, ಅಮೀರ್‌ ಅಹಮ್ಮದ್‌ ವೃತ್ತದ ಸುತ್ತಮುತ್ತಲಿನ ಪ್ರದೇಶ ಹಾಗೂ ಗಾಂಧಿ ಬಜಾರ್‌  ಪ್ರಮುಖ ವ್ಯಾಪಾರ ಕೇಂದ್ರಗಳಾಗಿರುವುದರಿಂದ ದಿನನಿತ್ಯ ಸಾವಿರಾರು ಮಂದಿ ಬರುತ್ತಾರೆ. ಇವರೆಲ್ಲರಿಗೂ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸಂಚರಿಸುವಾಗ ರಸ್ತೆ ದಾಟಬೇಕಾದರೆ ಹರಸಾಹಸ ಪಡಬೇಕಿತ್ತು. ಮಹಿಳೆಯರು, ವೃದ್ಧರು ಜೀವ ಕೈಯಲ್ಲಿಡಿದು ಓಡಾಡುವ ಪರಿಸ್ಥಿತಿ ಇತ್ತು.

ಇದನ್ನು ಮನಗಂಡು ಈ ಭಾಗದಲ್ಲಿ ಸುರಂಗ ಪಾದಚಾರಿ ಮಾರ್ಗ ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. 2009 ರಲ್ಲಿ ₹10.65 ಕೋಟಿ ವೆಚ್ಚದಲ್ಲಿ ಎರಡು ವೃತ್ತದ ಬಳಿ ಮಾರ್ಗ ನಿರ್ಮಿಸಲಾಯಿತು. ಇದರಿಂದ ಪ್ರಯಾಣಿಕರಿಗೆ ಹಾಗೂ ಪಾದಚಾರಿಗಳಿಗೆ ಆಗುತ್ತಿದ್ದ ಸಮಸ್ಯೆ ತಪ್ಪಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ನಿರ್ಮಾಣವಾದ ದಿನದಿಂದ ಈ ವರೆಗೆ ಈ ಸುರಂಗ ಪಾದಚಾರಿ ಮಾರ್ಗ ಇದ್ದು ಇಲ್ಲದಂತಾಗಿದೆ. ಅವೈಜ್ಞಾನಿಕ ಯೋಜನೆ ಹಾಗೂ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕೋಟ್ಯಂತರ ವೆಚ್ಚದಲ್ಲಿ ನಿರ್ಮಿಸಿರುವ ಮಾರ್ಗ ಉಪಯೋಗಕ್ಕೆ ಬಾರದಂತಾಗಿದೆ.

ಬಳಕೆಗೆ ಹಿಂದೇಟು: ಮಾರ್ಗದಲ್ಲಿ ಭದ್ರತೆ, ಬೆಳಕಿನ ವ್ಯವಸ್ಥೆ, ಮಳೆ ನೀರು ಹೋಗಲು ವ್ಯವಸ್ಥೆ ಇಲ್ಲ. ರಾತ್ರಿ ವೇಳೆಯಲ್ಲಿ ಅಹಿತಕರ ಘಟನೆಗಳು, ಅಕ್ರಮ ಚಟುವಟಿಕೆ ನಡೆಯುತ್ತಿವೆ. ಇದರಿಂದ ಅನೇಕರು ಅಂಡರ್‌ ಪಾಸ್‌ ಬಳಸಲು ಹಿಂದೇಟು ಹಾಕುತ್ತಿದ್ದಾರೆ.

ಈ ಹಿಂದೆ ಮಹಾನಗರ ಪಾಲಿಕೆಯ ಮೇಯರ್‌ ಆಗಿದ್ದ ಮರಿಯಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಬೀದಿ ಬದಿಯ ವ್ಯಾಪಾರಸ್ಥರು, ತಳ್ಳುವ ಗಾಡಿ ವ್ಯಾಪಾರಿಗಳಿಗೆ ಸುರಂಗ ಪಾದಚಾರಿ ಮಾರ್ಗದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವ ಯೋಜನೆ ರೂಪಿಸಿದ್ದರು. ಆದರೆ ವ್ಯಾಪಾರಸ್ಥರು ವಿವಿಧ ಕಾರಣಗಳನ್ನು ನೀಡಿ ಇಲ್ಲಿಗೆ ಹೋಗಲು ಒಪ್ಪಲಿಲ್ಲ. ಪರಿಣಾಮ ಸುರಂಗ ಪಾದಚಾರಿ ಮಾರ್ಗಕ್ಕೆ ಮರುಜೀವ ನೀಡುವ ಕಾರ್ಯ ಅಲ್ಲಿಗೆ ನಿಂತು ಹೋಯಿತು.

ಏನು ಮಾಡಬಹುದು: ‘ಪಾದಚಾರಿ ಮಾರ್ಗ ಬಹುಪಯೋಗಿಯಾಗಿದ್ದು, ಇದು ಸದ್ಬಳಕೆಯಾಗಬೇಕಾದರೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಮಾರ್ಗ ದಿನದ 24 ಗಂಟೆಯೂ ಸೂಕ್ತ ರೀತಿಯ ಭದ್ರತೆ, ಬೆಳಕಿನ ವ್ಯವಸ್ಥೆ, ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು ಸ್ಥಳೀಯ ಸಂತೋಷ ಒತ್ತಾಯಿಸುತ್ತಾರೆ.

ಶೀಘ್ರ ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯ.

ಸುರಂಗ ಪಾದಚಾರಿ ಮಾರ್ಗ ಸಾರ್ವಜನಿಕರ ಪಾಲಿಗೆ ಇದ್ದು ಇಲ್ಲದಂತಾಗಿದೆ. ಸಂಬಂಧಪಟ್ಟವರು ಸೂಕ್ತ ರೀತಿಯ ಭದ್ರತೆ, ಬೆಳಕಿನ ವ್ಯವಸ್ಥೆ  ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು

- ರೂಬೆನ್‌, ಸ್ಥಳೀಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry