ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣನ ಒಲಿಸಲು ಭಕ್ತಿ, ಜ್ಞಾನ, ವೈರಾಗ್ಯ ಅಗತ್ಯ

Last Updated 19 ಜನವರಿ 2018, 7:01 IST
ಅಕ್ಷರ ಗಾತ್ರ

ಉಡುಪಿ: ಶ್ರೀಕೃಷ್ಣನನ್ನು ಕಟ್ಟಿ ಹಾಕಬೇಕಾದರೆ ಮೂರು ದಾರಗಳು ಅವಶ್ಯಕ. ಭಕ್ತಿ, ಜ್ಞಾನ, ವೈರಾಗ್ಯ ಎಂಬ ದಾರಗಳಿಂದ ಕೃಷ್ಣನನ್ನು ಕಟ್ಟಿ, ಒಲಿಸಿಕೊಳ್ಳಬಹುದು ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.

ಉಡುಪಿಯ ರಾಜಾಂಗಣದಲ್ಲಿ ಗುರುವಾರ ಬೆಳಿಗ್ಗೆ ನಡೆದ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ಪರ್ಯಾಯ ದರ್ಬಾರ್‌ನಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ‘ದೇವರ ಬಗ್ಗೆ ಜ್ಞಾನ, ಸಂಪತ್ತಿನ ಮೇಲೆ ಭಕ್ತಿ, ಸಂಸಾರರಲ್ಲಿ ವೈರಾಗ್ಯ ಇರಬೇಕು. ಆದರೆ ಇಂದು ಅವು ಅದಲು ಬದಲಾಗಿವೆ. ಸಂಪತ್ತಿನಲ್ಲಿ ಜ್ಞಾನ, ಸಂಸಾರದಲ್ಲಿ ಭಕ್ತಿ, ದೇವರಲ್ಲಿ ವೈರಾಗ್ಯ ಬೆಳೆಯುತ್ತಿದೆ. ಹೀಗಾದರೆ ಕೃಷ್ಣನನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.

‘ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಅಚಲವಾದ ಭಕ್ತಿಯಿಂದ ಕಟ್ಟಿ ಹಾಕಿದರು. ಅವರ ಹಾಕಿದ ದಾರಿಯನ್ನೇ ನಾವು ಮುನ್ನಡೆಯುತ್ತಿದ್ದೇವೆ. ನಾಲ್ಕು ಬಾರಿ ಪರ್ಯಾಯ ಪೀಠಾರೋಹಣ ಮಾಡಿದವರನ್ನು ‘ಯತಿಕುಲ ಚಕ್ರವರ್ತಿ’ ಎಂದು ಕರೆಯಲಾಗುತ್ತದೆ. ನಾನು ಐದು ಬಾರಿ ಪರ್ಯಾಯ ನಡೆಸಿದ್ದೇನೆ. ಆದರೆ, ನಾನು ಯಾವುದೇ ಚಕ್ರವರ್ತಿಯಲ್ಲ. ಪರ್ಯಾಯ ಚಕ್ರದಲ್ಲಿ ನಾನೂ ಒಬ್ಬ ಅಷ್ಟೇ’ ಎಂದರು.

ಬೀಗುವುದಿಲ್ಲ: ‘ಇದು ನನ್ನ ಪಾಲಿಗೆ ಎರಡನೇ ಪರ್ಯಾಯ. ಆದರೆ, ನಾನು ಬೀಗುವ ಹಾಗಿಲ್ಲ. ಯಾಕೆಂದರೆ ನಮ್ಮ ಜತೆ ಐದು ಬಾರಿ ಪರ್ಯಾಯ ಮುಗಿಸಿರುವ ಯತಿಶ್ರೇಷ್ಠರಾದ ಪೇಜಾವರ ಶ್ರೀಗಳು ಇದ್ದಾರೆ. ಅವರು ಕೃಷ್ಣನನ್ನು ಮುಟ್ಟಿದ ನಂತರ ನನಗೆ ಸೇವೆ ಮಾಡುವ ಸೌಭಾಗ್ಯ ಸಿಕ್ಕರುವುದಕ್ಕೆ ಬೀಗುತ್ತೇನೆ’ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದರು.

‘ವಾದಿರಾಜರು 4 ಪರ್ಯಾಯವನ್ನು ಪೂರೈಸಿದ್ದರು. ಆದರೆ, ಪೇಜಾವರ ಶ್ರೀಗಳು ಐದನೇ ಪರ್ಯಾಯವನ್ನು ಯಶಸ್ವಿಯಾಗಿ ಮುಗಿಸಿದ್ದು, ವಾದಿರಾಜರೇ ಇವರ ಮೂಲಕ 5ನೇ ಬಾರಿ ಮಾಡಿಸಿದ್ದಾರೆ. ವಿಶ್ವೇಶತೀರ್ಥ ಶ್ರೀಗಳು ಇಂದಿನಿಂದ ಮತ್ತೆ ದೇಶದಾದ್ಯಂತ ಮಿಂಚಿನ ಸಂಚಾರ ಆರಂಭಿಸಲಿದ್ದಾರೆ. ಜನಸಾಮಾನ್ಯ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಅವರದು. ಅವರ ಮಾರ್ಗದರ್ಶನ, ಎಲ್ಲರ ಸಹಕಾರ ಪಡೆದು ಮುಂದುವರಿಯುತ್ತೇವೆ’ ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ‘ಕೃಷ್ಣನ ಸೇವೆಯ ಪರ್ಯಾಯದಿಂದ ಪೀಠಾವರೋಹಣ ಮಾಡಿರುವ ಪೇಜಾವರ ಶ್ರೀಗಳು, ಜನತಾ ಜನಾರ್ದನನ ಸೇವೆಯ ಪರ್ಯಾಯ ಆರಂಭಿಸಿದ್ದಾರೆ. ಜನರ ಸೇವೆ ಕೂಡಾ ದೇವರ ಸೇವೆಯಷ್ಟೇ ಪುಣ್ಯದ ಕೆಲಸ’ ಎಂದು ಬಣ್ಣಿಸಿದರು.

ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಮಾತನಾಡಿ, ‘ವಿದ್ಯಾಧೀಶತೀರ್ಥ ಸ್ವಾಮೀಜಿ ಅವರ ಮೂಲಕ ಉಡುಪಿಯಲ್ಲಿ ರಾಮದೇವರ ಪರ್ಯಾಯ ಆರಂಭವಾಗಿದೆ. ಅವರ ಕೃಷ್ಣಮಠದ ಗರ್ಭಗುಡಿಗೆ ಸ್ವರ್ಣಹೊದಿಕೆ, ನಿತ್ಯ ಲಕ್ಷತುಳಸಿ ಅರ್ಚನೆ, ಅಖಂಡ ಭಜನೆ ಮೂಲಕ ದೊಡ್ಡ ಸಾಹಸಕ್ಕೆ ಕೈಹಾಕಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಶಿರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿ, ಸೋದೆಮಠದ ವಿಶ್ವವಲ್ಲಭತೀರ್ಥ ಸ್ವಾಮೀಜಿ ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಅದಮಾರು ಮಠದ ಕಿರಿಯ ಯತಿ ಈಶಪ್ರಿಯತೀರ್ಥ ಸ್ವಾಮೀಜಿ ಮಾತನಾಡಿ, ಪಲಿಮಾರು ಸ್ವಾಮೀಜಿ ಅವರು ಹಾಕಿಕೊಂಡ ಹಲವು ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಗೈರಾಗಿದ್ದರು.

ಆಯುರ್ವೇದ ಔಷಧಿಗೆ ತುಳಸಿ ಬಳಕೆ

ಪಲಿಮಾರು ವಿದ್ಯಾಧೀಶತೀರ್ಥ ಸ್ವಾಮೀಜಿ ಅವರು ಈ ಪರ್ಯಾಯ ಅವಧಿಯಲ್ಲಿ ನಿತ್ಯ ಲಕ್ಷ ತುಳಸಿ ಅರ್ಚನೆಗೆ ಸಂಕಲ್ಪ ಮಾಡಿದ್ದು, ಅರ್ಚನೆಯಾದ ತುಳಸಿಯನ್ನು ಸದುಪಯೋಗದ ಹೊಣೆಯನ್ನು ನಾನು ಹೊರುತ್ತೇನೆ. ಎಲ್ಲ ತುಳಸಿಯನ್ನು ಧರ್ಮಸ್ಥಳದ ಆಯುರ್ವೇದ ಕಾಲೇಜಿಗೆ ಕೊಂಡೊಯ್ದು ಅದರಿಂದ ರಸ ತೆಗೆದು ಔಷಧ ತಯಾರಿಸಲು ಪ್ರಯತ್ನಿಸಲಾಗುವುದು ಎಂದು ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

* * 

ಪರ್ಯಾಯ ಸಮಾರಂಭಕ್ಕೆ ಮುಖ್ಯಮಂತ್ರಿಗೆ ಆಹ್ವಾನ ನೀಡಲಾಗಿತ್ತು. ಅವರು ಬರುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದೆವು. ಯಾರೋ ಅವರನ್ನು ತಡೆಯುತ್ತಿದ್ದಾರೆ.
ವಿದ್ಯಾಧೀಶ ತೀರ್ಥ ಸ್ವಾಮೀಜಿ
ಪರ್ಯಾಯ ಪಲಿಮಾರು ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT