ರೈಲ್ವೆ ಅಂಡರ್‌ಪಾಸ್ ನಿರ್ಮಾಣಕ್ಕೆ ವಿರೋಧ

7
ಕಾಮಗಾರಿಯಿಂದ ಜನರ ಸಂಚಾರ ಮತ್ತು ಸರಕು ಸಾಗಾಟಕ್ಕೆ ತೊಂದರೆ

ರೈಲ್ವೆ ಅಂಡರ್‌ಪಾಸ್ ನಿರ್ಮಾಣಕ್ಕೆ ವಿರೋಧ

Published:
Updated:

ತ್ಯಾಗರ್ತಿ: ಅಧಿಕಾರಿಗಳು ಸ್ಥಳ ಪರಿಶೀಲಿಸದೆ ಕಾಮಗಾರಿಗೆ ಅನುಮೋದನೆ ನೀಡಿದ ಪರಿಣಾಮ ಸಾಗರ ತಾಲ್ಲೂಕಿನ ಅಡ್ಡೇರಿ ಗ್ರಾಮದಲ್ಲಿ ನಡೆಯುತ್ತಿರುವ ರೈಲ್ವೆ ಅಂಡರ್‌ಪಾಸ್ ಕಾಮಗಾರಿಯಿಂದ  ಜನರ ಸಂಚಾರ ಮತ್ತು ಸರಕು ಸಾಗಾಟಕ್ಕೆ ತೊಂದರೆಯಾಗುತ್ತಿದೆ.

ಅಡ್ಡೇರಿ ಗ್ರಾಮದ ಗೇಟ್ ನಂ. 117ರಲ್ಲಿ ರೈಲ್ವೆ ಅಂಡರ್ ಪಾಸ್ ವ್ಯವಸ್ಥೆಗೆ ಅನರ್ಹವಾಗಿದ್ದರೂ ಅಧಿಕಾರಿಗಳು ಅವೈಜ್ಞಾನಿಕ ಸರ್ವೇಯಿಂದ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಮಳೆ ನೀರಿನಿಂದ ಅಂಡರ್ ಪಾಸ್‌ನಲ್ಲಿ 3ರಿಂದ 4 ಅಡಿಗಳಷ್ಟು ನೀರು ಶೇಖರಣೆಯಾಗುತ್ತಿದೆ.

ಈ ಸ್ಥಳದಲ್ಲಿ ನೀರಿನ ಶೇಖರಣೆಯಿಂದ ಬೋರ್‌ವೆಲ್ ಲಾರಿ, ಸರಕು ಸಾಗಣೆ ಲಾರಿ, ಬಸ್ ಇತ್ಯಾದಿ ದೊಡ್ಡ ವಾಹನಗಳು ಸಂಚಾರ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ.

ಜನರು ಸಾಗುವ ಮಾತಂತೂ ದೂರು: ರೈಲ್ವೆ ಇಲಾಖೆಯ ಅಧಿಕಾರಿಗಳು ಮೊದಲಿನ ಸಂಪರ್ಕ ರಸ್ತೆಯನ್ನು ಮುಚ್ಚುವ ಹುನ್ನಾರ ನಡೆಸಿ ಅಡ್ಡೇರಿ, ಕೆಳಗಿನಮನೆ, ಬಿಲಗುಂಜಿ, ಚಿಕ್ಕಬಿಲಗುಂಜಿ, ಬ್ಯಾಡರಕೊಪ್ಪ, ಜಂಬೂರುಮನೆ ಗ್ರಾಮದ ಜನರು ಸಂಚರಿಸದಂತೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಗರಗಳಿಗೆ ತೆರಳದಂತೆ ತೊಂದರೆಯುಂಟು ಮಾಡುತ್ತಿದ್ದಾರೆ. ₹ 1.40 ಕೋಟಿ ವೆಚ್ಚದ ಕಾಮಗಾರಿಯು ಸ್ಥಳೀಯರಿಗೆ ಸಂಕಟ ತಂದಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ನೀಡಿದ ತೆರಿಗೆ ಹಣ ಅನವಶ್ಯಕವಾಗಿ ವ್ಯಯವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಡ್ಡೇರಿ ಗ್ರಾಮದ ರೈಲ್ವೆ ಅಂಡರ್‌ಪಾಸ್ ವ್ಯವಸ್ಥೆಯು ಸಂಚಾರಕ್ಕೆ ಯೋಗ್ಯವಲ್ಲದ ಕಾರಣ ಇರುವ ರಸ್ತೆಯನ್ನು ಮುಕ್ತಗೊಳಿಸದೆ ಆ ಜಾಗದಲ್ಲಿ ಗೇಟ್ ವ್ಯವಸ್ಥೆ ಕಲ್ಪಿಸಿ ಅಧಿಕಾರಿಗಳು ರಸ್ತೆ ಮುಚ್ಚುವ ಹುನ್ನಾರ ನಡೆಸುತ್ತಿದ್ದಾರೆ. ಅದನ್ನು ಕೈಬಿಡಬೇಕು. ಅಲ್ಲದೇ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಗುತ್ತಿಗೆದಾರರ ಮೇಲೆ ರಸ್ತೆ ಮುಚ್ಚುವಂತೆ ಒತ್ತಡ ಹೇರಬಾರದು ಎಂದು ಸ್ಥಳೀಯ ಹಾಗೂ ಸುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ಪಂಚಾಯಿತಿ ಸದಸ್ಯ ಸೋಮಶೇಖರ್ ಲಾವಿಗೆರೆ ‌ಮಾತನಾಡಿ, ‘ಇದು ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಾಗಿದೆ. ಇದರಿಂದ ಸಂಚಾರಕ್ಕೆ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಈ ವ್ಯವಸ್ಥೆಯು ಪೂರ್ಣಗೊಳ್ಳುವವರೆಗೆ ಈಗ ಸಂಚರಿಸುತ್ತಿರುವ ಕಾಸ್ಪಾಡಿ- ತ್ಯಾಗರ್ತಿ ರಸ್ತೆಯ ಸಂಚಾರಕ್ಕೆ ಅಡ್ಡಿಪಡಿಸಬಾರದು’ ಎಂದು ಎಚ್ಚರಿಸಿದರು.

ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾ ಮಂಜುನಾಥ್, ಗ್ರಾಮಸ್ಥರಾದ ನರಸಿಂಹಮೂರ್ತಿ, ಅಶೋಕ್, ಗಣಪತಿ ಗೋವಿಂದ ಹೆಗಡೆ ಕೆಳಗಿನಮನೆ, ಮಂಜುನಾಥ್, ಸದಾಚಾರಿ ಗೌಡ ವೀರಾಪುರ ಹಾಗೂ ಸ್ಥಳೀಯ ಗ್ರಾಮಸ್ಥರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry