‘ಸೈಕಲ್’ ಏರಿದ ಮಕ್ಕಳ ರಂಗ ಪಯಣ

7
ಪ್ರವೀಣ್ ಎಸ್‌. ಹಾಲ್ಮತ್ತೂರು ನಿರ್ದೇಶನದಲ್ಲಿ ಶಿವಮೊಗ್ಗದ ವಿದ್ಯಾರ್ಥಿಗಳ ತಾಲೀಮು

‘ಸೈಕಲ್’ ಏರಿದ ಮಕ್ಕಳ ರಂಗ ಪಯಣ

Published:
Updated:
‘ಸೈಕಲ್’ ಏರಿದ ಮಕ್ಕಳ ರಂಗ ಪಯಣ

ಶಿವಮೊಗ್ಗ: ಬಹುದಿನಗಳ ನಂತರ ಶಿವಮೊಗ್ಗದಲ್ಲಿ ಮತ್ತೆ ಮಕ್ಕಳ ರಂಗ ಕಲರವ ಶುರುವಾಗಿದೆ. ಪ್ರವೀಣ್ ಎಸ್‌. ಹಾಲ್ಮತ್ತೂರು ನಿರ್ದೇಶನದಲ್ಲಿ ‘ಸೈಕಲ್’ ಏರಿದ ಮಕ್ಕಳು ರಂಗ ಪಯಣಕ್ಕೆ ಸಿದ್ಧರಾಗಿದ್ದಾರೆ.

ಪ್ರತಿ ವರ್ಷ ರಂಗಾಯಣ ಆಯೋಜಿಸುವ ಬೇಸಿಗೆ ಶಿಬಿರ ಹೊರತುಪಡಿಸಿದರೆ, ಕೆಲವು ಶಾಲೆಗಳು ಮಾತ್ರ ಮಕ್ಕಳ ರಂಗ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಿವೆ. ಈಗ ಸರ್ಕಾರವೇ ಮಕ್ಕಳ ರಂಗ ಚಟುವಟಿಕೆ ಪ್ರೋತ್ಸಾಹಿಸಲು ವೇದಿಕೆ ರೂಪಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಾವಿದರು ಸಂಸ್ಥೆಯ ಸಹಕಾರದಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ 5ರಿಂದ 9ನೇ ತರಗತಿವರೆಗಿನ 19 ಮಕ್ಕಳು ಸೇರಿ ‘ಸೈಕಲ್’ ನಾಟಕದ ತಾಲೀಮು ನಡೆಸುತ್ತಿದ್ದಾರೆ. ದೇಶೀಯ ವಿದ್ಯಾ ಸಂಸ್ಥೆಯ ರಂಗ ಮಂದಿರ ನಿತ್ಯದ ತಾಲೀಮಿಗೆ ವೇದಿಕೆ ಒದಗಿಸಿ ಕೊಟ್ಟಿದೆ.

ರಂಗ ಚಟವಟಿಕೆಯ ಮೂಲಕ ಪ್ರಸ್ತುತ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅರಿವು ಮೂಡಿಸುವ ಕೆಲಸವೂ ಸದ್ದಿಲ್ಲದೆ ನಡೆಯುತ್ತಿದೆ. ಮಹಮದ್‌ ಅಲಿ ರಚನೆಯ ‘ಸೈಕಲ್’ ಇಂತಹ ಕಥಾವಸ್ತು ಒಳಗೊಂಡಿದೆ.

ಅಲೆಮಾರಿ ಜೀವನ ನಡೆಸುವ, ಪ್ರಸ್ತುತ ಅವಸಾನದ ಅಂಚಿನಲ್ಲಿ ಇರುವ ಹಾವಾಡಿಗ ಜನಾಂಗದ ಪುಟ್ಟ ಹುಡುಗ ಯಂಕ್ಟ ಕನುಸಗಳ ಬೆನ್ನೇರಿ ಪಯಣ ಬೆಳೆಸುವ, ಅಂತಹ ಕನಸು ನನಸಾಗಿಸಿಕೊಳ್ಳಲು ಪಡುವ ಕಷ್ಟ, ಪಡಿಪಾಟಲು ಮೂಲಕ ನಾಟಕ ಅನಾವರಣಗೊಳ್ಳುತ್ತದೆ.

ಸೈಕಲ್ ಸವಾರಿ ಮಾಡಬೇಕು ಮತ್ತು ಅಧಿಕಾರಿಯಾಗಬೇಕು ಎನ್ನುವುದು ಯಂಕ್ಟನ ಕನಸು. ಈ ಪುಟ್ಟ ಹುಡುಗ ತನ್ನ ಕನಸುಗಳನ್ನು ನನಸಾಗಿಸಿಕೊಳ್ಳಲು ಹಲವು ಕಷ್ಟಗಳನ್ನು ಎದುರಿಸುತ್ತಾನೆ. ಊರಿನ ಹಿರಿಯರು, ಆತನ ಕುಟುಂಬ ನೀಡುವ ಸಹಕಾರ, ಪ್ರಾಣಿ, ಪಕ್ಷಿ ಮತ್ತು ಪರಿಸರದೊಂದಿಗೆ ಆತನ ಕುಟುಂಬಕ್ಕೆ ಇರುವ ಸಂಬಂಧ, ಸಹಕಾರ ಮನೋಭಾವ ಸಾಮಾಜಿಕ ಕಾಳಜಿ ನಾಟಕದ ಮೂಲಕ ಸೊಗಸಾಗಿ ಕಟ್ಟಿಕೊಡಲಾಗಿದೆ. ಸೈಕಲ್ ಎಂಬ ವಸ್ತುವಿನ ಬದುಕಿನ ಪಯಣ ಶಾಲೆ ಕಟ್ಟಿಸುವುದರೊಂದಿಗೆ ಮುಕ್ತಾಯವಾಗುತ್ತದೆ.

40 ನಾಟಕಗಳಿಗೆ ಅವಕಾಶ: ರಾಜ್ಯದಲ್ಲಿ ಮಕ್ಕಳ ಪ್ರತಿಭೆ ಪ್ರೋತ್ಸಾಹಿಸುವ ಯೋಜನೆ ಅಡಿ ಈ ಬಾರಿ 40 ನಾಟಕಗಳ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಅಂತಿಮವಾಗಿ ಉತ್ತಮ 10 ನಾಟಕಗಳನ್ನು ಆಯ್ಕೆ ಮಾಡಲಾಗುತ್ತದೆ. ಬೇರೆ ಬೇರೆ ಜಿಲ್ಲೆಗಳಲ್ಲೂ ನಾಟಕ

ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ‘ಸೈಕಲ್’ ನಾಟಕವೂ ರಾಜ್ಯದ 10 ಕಡೆ ಪ್ರದರ್ಶನ ಕಾಣಲಿದೆ.

ನಿರ್ದೇಶಕರ ಸುತ್ತ: ‘ಸೈಕಲ್’ ನಿರ್ದೇಶಿಸಿರುವ ಪ್ರವೀಣ್ ಕೊಪ್ಪ ತಾಲ್ಲೂಕಿನ ಹಾಲ್ಮತ್ತೂರಿನವರು. ದಶಕಗಳಿಂದ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 20ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುವ ಜತೆಗೆ, ನಿರ್ದೇಶಿಸಿದ್ದಾರೆ. ನಮ್ಮ ಹಳ್ಳಿ ಥಿಯೇಟರ್ ಎಂಬ ನಾಟಕ ತಂಡದ ಮೂಲಕ ರಂಗಭೂಮಿ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.

ದೇವರಾಜ್ ನಾಯ್ಕ ಅವರು ಸಹ ನಿರ್ದೇಶಕರು. ನಾಟಕಕ್ಕೆ ಉಮೇಶ್ ಆಚಾರ್ಯ ಸಂಗೀತವಿದೆ. ನೃತ್ಯ ಚನ್ನೇಶ್ ಆಚಾರ್ಯ, ಶ್ರೀನಿವಾಸ್ ಭಟ್‌ ಪುರಪ್ಪೆಮನೆ ಅವರ ಯಕ್ಷ ನಡೆ ಇದ್ದರೆ, ಸುಂದರೇಶ್ ಎಸ್‌. ಅವರು ರಂಗಸಜ್ಜಿಕೆಯ ಹೊಣೆ ಹೊತ್ತಿದ್ದಾರೆ. ಸಾಸ್ವೆಹಳ್ಳಿ ಸತೀಶ್ ಪ್ರಸಾಧನ, ಸುಜಾತಾ ಎಸ್‌. ಅವರು ಮಕ್ಕಳಿಗೆ ವಸ್ತ್ರ ವಿನ್ಯಾಸ ಮಾಡಲಿದ್ದಾರೆ.

‘ಸರ್ಕಾರದ ಪ್ರಯೋಜಕತ್ವದಲ್ಲಿ ಇದೇ ಮೊದಲ ಬಾರಿ ಮಕ್ಕಳಿಗಾಗಿಯೇ ರಾಜ್ಯಮಟ್ಟದಲ್ಲಿ ರಂಗ ಚಟವಟಿಕೆ ಹಮ್ಮಿಕೊಳ್ಳಲಾಗಿದೆ. 2017–18ರ ಬಜೆಟ್‌ನಲ್ಲೇ ಇದಕ್ಕೆ ಹಣ ಮೀಸಲಿರಿಸಲಾಗಿತ್ತು. ಈಗ ಅದು ಕಾರ್ಯಗತವಾಗಿದೆ. ಮಕ್ಕಳಲ್ಲಿ ರಂಗಾಸಕ್ತಿ ಮೂಡಿಸಲು ಇದು ಮಹತ್ವದ ಯೋಜನೆ’ ಎಂದು ಬಣ್ಣಿಸುತ್ತಾರೆ ನಾಟಕ ತಂಡಗಳ ಆಯ್ಕೆಯ ರಾಜ್ಯ ಸಮಿತಿ ಸದಸ್ಯ ಡಾ.ಸಾಸ್ವೆಹಳ್ಳಿ ಸತೀಶ್.

ಜೂನ್ 15ರಂದು ಸಂಜೆ 6.45ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಾಟಕದ ಮೊದಲ ಪ್ರದರ್ಶನ ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಪ್ರವೇಶವಿದೆ. ಮಾಹಿತಿಗೆ: 98445 18866, 98444 67071, 94481 38183 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry