‘ಸ್ಮಾರ್ಟ್‌ಸಿಟಿ: ಬಳಕೆಯಾಗದ ₹ 600 ಕೋಟಿ’

7
ಅಧಿಕಾರಿಗಳು, ಸಾರ್ವಜನಿಕರ ಸಭೆ ಕರೆದು ಯೋಜನೆ ಆರಂಭಕ್ಕೆ ಕ್ರಮ: ಈಶ್ವರಪ್ಪ

‘ಸ್ಮಾರ್ಟ್‌ಸಿಟಿ: ಬಳಕೆಯಾಗದ ₹ 600 ಕೋಟಿ’

Published:
Updated:

ಶಿವಮೊಗ್ಗ: ‘ಸ್ಮಾರ್ಟ್‌ಸಿಟಿ’ ಯೋಜನೆಗೆ ಮೂರು ವರ್ಷಗಳಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ₹ 600 ಕೋಟಿ ನೀಡಿವೆ. ಈ ಹಣವನ್ನು ನಗರದ ಸರ್ವತೋಮುಖ ಅಭಿವೃದ್ಧಿಗೆ ಸದ್ಬಳಕೆ ಮಾಡಲಾಗುವುದು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಭರವಸೆ ನೀಡಿದರು.

ಕೇಂದ್ರ ಹಾಗೂ ರಾಜ್ಯ ಪ್ರತಿ ವರ್ಷ ತಲಾ ₹ 100 ಕೋಟಿ ನೀಡುತ್ತಿವೆ. ಮೂರು ವರ್ಷ ಅನುದಾನ ಬಂದರೂ, ಕಾಮಗಾರಿ ಆರಂಭಿಸಿಲ್ಲ. ಉಳಿದ ಎರಡು ವರ್ಷ ಅನುದಾನ ಸೇರಿದರೆ ₹ 1 ಸಾವಿರ ಕೋಟಿ ಆಗುತ್ತದೆ. ಇದನ್ನು ಬಳಸಿಕೊಂಡರೆ ನಗರದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳ ರೂಪುರೇಷೆ ಇನ್ನೂ ಪೂರ್ಣಗೊಂಡಿಲ್ಲ. ಈ ಕುರಿತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ಯುಜಿಡಿ ಕಾಮಗಾರಿ: ನಗರದಲ್ಲಿ ಅಪೂರ್ಣಗೊಂಡಿರುವ ಯುಜಿಡಿ ಕಾಮಗಾರಿ ಕೈಗೆತ್ತಿಕೊಂಡಿದ್ದ ಮೂವರು ಗುತ್ತಿಗೆದಾರರು ಬದಲಾಗಿದ್ದಾರೆ. ಈಗ ಇರುವ ಗುತ್ತಿಗೆದಾರರೂ ಪೂರ್ಣಗೊಳಿಸಿಲ್ಲ. ಅದಕ್ಕಾಗಿ ಹೆಚ್ಚು ಒತ್ತು ನೀಡುವಂತೆ ಮನವಿ ಮಾಡಲಾಗಿದೆ. ಸಚಿವರ ಗಮನಕ್ಕೆ ತರಲಾಗಿದೆ ಎಂದರು.

ಜಿಲ್ಲೆಯ ಕೈಗಾರಿಕೆಗಳ ಅಭಿವೃದ್ಧಿಗೆ ವಿಮಾನ ನಿಲ್ದಾಣದ ಆವಶ್ಯಕತೆ ಇದೆ. ಕಾಮಗಾರಿ ಪೂರ್ಣಗೊಂಡರೆ ಹೊಸ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ. ಉದ್ಯೋಗ ಸೃಷ್ಟಿಯಾಗುತ್ತದೆ. ವಿಮಾನ ನಿಲ್ದಾಣ ಆರಂಭಕ್ಕೆ ಬಿಜೆಪಿ ಸರ್ಕಾರ ಕ್ರಮ ಕೈಗೊಂಡಿತ್ತು. ಅದನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದು ಖಚಿತಪಡಿಸಿದರು.

ವಸತಿ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ₹ 5 ಲಕ್ಷ ವೆಚ್ಚದಲ್ಲಿ 20X30 ವಿಸ್ತೀರ್ಣದಲ್ಲಿ ಮನೆ ಕಟ್ಟಿಕೊಡುತ್ತಿದೆ. ಕೇಂದ್ರ ₹ 1.70 ಲಕ್ಷ, ರಾಜ್ಯ ಸರ್ಕಾರ ₹ 1.50 ಲಕ್ಷ ನೀಡಲಿದೆ. ಒಟ್ಟು ₹ 3.20 ಲಕ್ಷ ಸಬ್ಸಿಡಿ ಸಿಗಲಿದೆ. ₹ 1 ಲಕ್ಷ ಬ್ಯಾಂಕ್ ಸಾಲ ನೀಡುತ್ತದೆ ಎಂದರು.

ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಮುಖಂಡರಾದ ದೇವದಾಸ್ ನಾಯ್ಕ್, ಡಿ.ಎಸ್. ಅರುಣ್, ಬಿ.ಆರ್. ಮಧುಸೂದನ್, ಎಸ್. ಜ್ಞಾನೇಶ್ವರ್, ಎನ್.ಜಿ. ನಾಗರಾಜ್, ಅನಿತಾ ರವಿಶಂಕರ್, ರತ್ನಾಕರ ಶಣೈ, ಹಿರಣ್ಣಯ್ಯ, ಕೆ.ವಿ. ಅಣ್ಣಪ್ಪ ಉಪಸ್ಥಿತರಿದ್ದರು.

ಶಾಸಕರ ಕಚೇರಿ ಆರಂಭ

ಹಿಂದಿನ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು ಇದ್ದ ಶಿವಪ್ಪನಾಯಕ ಮಾರುಕಟ್ಟೆಯ ಆವರಣದ ಕಟ್ಟಡದಲ್ಲೇ ನೂತನ ಶಾಸಕ ಈಶ್ವರಪ್ಪ ಅವರ ಕಚೇರಿಗೆ ವ್ಯವಸ್ಥೆ ಮಾಡಲಾಗಿದೆ. ಜೂನ್ 21ರಂದು ಬೆಳಿಗ್ಗೆ 10.30ಕ್ಕೆ ಈ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಯಲಿದೆ. ಸಾರ್ವಜನಿಕರಿಗೂ ಕುಂದು, ಕೊರತೆ ಹೇಳಬಹುದು.

ಕಾಂಗ್ರೆಸ್ಸಿಗರಿಂದಲೇ ಕಾಂಗ್ರೆಸ್ ಮುಕ್ತ

ಬೆಂಗಳೂರಿನ ಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಕುತಂತ್ರ ರಾಜಕಾರಣ ಮಾಡಿದೆ. ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ವರಿಷ್ಠರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ಸಿಗರೇ ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಮಾಡಲು ತೊಡಗಿದ್ದಾರೆ ಎಂದು ಈಶ್ವರಪ್ಪ ಕುಹಕವಾಡಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸಕರ್ಾರದಲ್ಲಿ ಭಿನ್ನಮತೀಯ ಚಟುವಟಿಕೆ ಆರಂಭವಾಗಿವೆ. ಯಾವುದೇ ಷರತ್ತು ಇಲ್ಲದೇ ಬೆಂಬಲ ನೀಡಿದ್ದ ಕಾಂಗ್ರೆಸ್ ಈಗ ಕುತಂತ್ರ ರಾಜಕಾರಣ ಆರಂಭಿಸಿದೆ ಎಂದು ಕುಟುಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry