ಮುಚ್ಚುವ ಭೀತಿಯಲ್ಲಿ ಸ್ನಾತಕೋತ್ತರ ವಿಭಾಗ

7
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಲ್ಲಮ ಕನ್ನಡ ವಿಭಾಗದ ದುಃಸ್ಥಿತಿ

ಮುಚ್ಚುವ ಭೀತಿಯಲ್ಲಿ ಸ್ನಾತಕೋತ್ತರ ವಿಭಾಗ

Published:
Updated:
ಮುಚ್ಚುವ ಭೀತಿಯಲ್ಲಿ ಸ್ನಾತಕೋತ್ತರ ವಿಭಾಗ

ಶಿಕಾರಿಪುರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಓದಲು ಪೂರಕವಾಗಿದ್ದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಅಲ್ಲಮ ಸ್ನಾತಕೋತ್ತರ ಅಧ್ಯಯನ ವಿಭಾಗ ಮುಚ್ಚುವ ಹಂತ ತಲುಪಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ.

ತಾಲ್ಲೂಕಿನ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯಲು ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2010ರಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗವನ್ನು ಆರಂಭಿಸಲಾಗಿತ್ತು. ಸೊರಬ, ಸಾಗರ, ಹಿರೇಕೆರೂರು ತಾಲ್ಲೂಕು ಸೇರಿ ವಿವಿಧ ತಾಲ್ಲೂಕುಗಳ ನೂರಾರು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯಲು ಕಾಲೇಜಿನಲ್ಲಿ ಅವಕಾಶ ದೊರೆಯುತ್ತಿದೆ.

ಈ ಸ್ನಾತಕೋತ್ತರ ವಿಭಾಗದಲ್ಲಿ ಹಲವು ಸೌಲಭ್ಯಗಳ ಕೊರತೆ ಇದೆ. ಈ ವಿಭಾಗವನ್ನು ರದ್ದು ಮಾಡಬೇಕು ಎಂಬ ಆದೇಶ ವಿಶ್ವವಿದ್ಯಾಲಯದಿಂದ ಹೊರಬಿದ್ದಿದ್ದು, ಆದೇಶ ಕಾಲೇಜು ಪ್ರಾಂಶುಪಾಲರಿಗೆ ತಲುಪಿದೆ. ಇದರಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಕಾಲೇಜಿನ ಕನ್ನಡ ಅಧ್ಯಯನ ಸ್ನಾತಕೋತ್ತರ ವಿಭಾಗಕ್ಕೆ ಕುವೆಂಪು ವಿಶ್ವವಿದ್ಯಾಲಯ ಜಾಗೃತ ದಳದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಕಾಲೇಜಿನಲ್ಲಿ ಶೈಕ್ಷಣಿಕ ವೇಳಾಪಟ್ಟಿಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತಿಲ್ಲ. ವಿದ್ಯಾರ್ಥಿಗಳ ಹಾಜರಾತಿ ಬಗ್ಗೆ ಸೂಕ್ತ ಗಮನ ನೀಡುತ್ತಿಲ್ಲ. ಬೋಧಕ ವರ್ಗದವರು ಶೈಕ್ಷಣಿಕ ಸಂಶೋಧನೆಗೆ ಸಂಬಂಧಿಸಿದಂತೆ ಹೆಚ್ಚಿನ ಆಸಕ್ತಿ ತೋರದಿರುವುದು, ಸಂಶೋಧನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸಲು ಪ್ರಯತ್ನಿಸದಿರುವುದನ್ನೂ ಕಾಣಬಹುದು. ಬೋಧಕ ವರ್ಗದವರು ವಿಚಾರಸಂಕಿರಣಗಳಲ್ಲಿ ಭಾಗವಹಿಸಲು ಉತ್ತೇಜನ ನೀಡಿಲ್ಲ ಎಂದು ಅಧಿಕಾರಿಗಳು ವರದಿ ನೀಡಿದ್ದರು.

ಯುಜಿಸಿ, ಡಿಎಸ್‌ಟಿ, ಐಸಿಎಸ್‌ಎಸ್‌ಆರ್‌ ಮುಂತಾದ ಸಂಸ್ಥೆಗಳಿಂದ ವಿವಿಧ ಯೋಜನೆಗಳನ್ನು ಪಡೆಯಲು ಪ್ರಯತ್ನಿಸಿಲ್ಲ. ಸ್ನಾತಕೋತ್ತರ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾದ ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ನಿಗಾ ವಹಿಸಲು ಒಬ್ಬ ಅರ್ಹ ಸಂಯೋಜನಾಧಿಕಾರಿಯನ್ನು ನಿಯೋಜಿಸಿಲ್ಲ ಎಂದು ವಿಶ್ವವಿದ್ಯಾಲಯಕ್ಕೆ ಜಾಗೃತ ದಳದ ಅಧಿಕಾರಿಗಳು ವರದಿ ಸಲ್ಲಿಸಿದ್ದರು.

ಜಾಗೃತ ದಳ ನೀಡಿದ ವರದಿ ಆಧಾರದ ಮೇಲೆ ವಿಶ್ವವಿದ್ಯಾಲಯ ಕುಲಪತಿ ಅನುಮೋದನೆಯಂತೆ ಕಾಲೇಜಿನ ಸ್ನಾತಕೋತ್ತರ ಕನ್ನಡ ಪದವಿಯನ್ನು ರದ್ದುಪಡಿಸಲು ವಿಶ್ವವಿದ್ಯಾಲಯ ಕಾಲೇಜು ಅಭಿವೃದ್ಧಿ ಪರಿಷತ್‌ ನಿರ್ದೇಶಕರು ಆದೇಶಿಸಿದ್ದಾರೆ.

‘ವಿಶ್ವವಿದ್ಯಾಲಯ ಜಾಗೃತ ದಳ ಕೇಳಿದ ಸೂಕ್ತ ದಾಖಲೆಗಳನ್ನು ನೀಡುವ ಮೂಲಕ ಕನ್ನಡ ವಿಭಾಗವನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತೇವೆ’ ಎಂದು ಪ್ರಾಚಾರ್ಯ ಡಿ.ಕೆ. ಮಂಜಪ್ಪ ತಿಳಿಸಿದ್ದಾರೆ. ಪದವಿ ಕೋರ್ಸ್‌ ರದ್ದುಪಡಿಸಲು ವಿಶ್ವವಿದ್ಯಾಲಯ ನೀಡಿರುವ ಆದೇಶದಿಂದ ಪಟ್ಟಣ ಸೇರಿ ತಾಲ್ಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯಕ್ಕೆ ತೆರಳಿ ಎಲ್ಲಾ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯಲು ಸಾಧ್ಯವಾಗುವುದಿಲ್ಲ. ಸ್ಥಳೀಯವಾಗಿ ಸ್ನಾತಕೋತ್ತರ ಪದವಿ ಪಡೆಯಲು ಪೂರಕವಾಗಿದ್ದ ಈ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗವನ್ನು ರದ್ದುಪಡಿಸದೇ ಮುಂದುವರಿಸಬೇಕು. ಸ್ನಾತಕೋತ್ತರ ಅಧ್ಯಯನ ವಿಭಾಗ ಉಳಿಸಿಕೊಳ್ಳಲು ಪ್ರಾಂಶುಪಾಲರು ಹಾಗೂ ಜನಪ್ರತಿನಿಧಿಗಳು ಯತ್ನಿಸಬೇಕು ಎಂಬುದು ವಿದ್ಯಾರ್ಥಿಗಳ ಒತ್ತಾಯ.

ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ವಿಭಾಗದಲ್ಲಿ ಓದಿದ ಹಲವು ವಿದ್ಯಾರ್ಥಿಗಳು ರ‍್ಯಾಂಕ್‌ ಪಡೆದಿದ್ದಾರೆ

ಡಾ. ಕುಂಸಿ ಉಮೇಶ್, ಸಂಯೋಜಕ, ಕನ್ನಡ ಅಧ್ಯಯನ ಸ್ನಾತಕೋತ್ತರ ವಿಭಾಗ 

–ಎಚ್‌.ಎಸ್‌. ರಘು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry