ಭೀಮಾ ತೀರದ ನೆತ್ತರಿಗೆ ಪೊಲೀಸರ ನಂಟು?

6
ಬೆಚ್ಚಿಬಿದ್ದ ಗಡಿಭಾಗದ ಜನರು; ಉತ್ತರವಿಲ್ಲದೇ ಕಾಡುತ್ತಿರುವ ನೂರೆಂಟು ಪ್ರಶ್ನೆಗಳು...

ಭೀಮಾ ತೀರದ ನೆತ್ತರಿಗೆ ಪೊಲೀಸರ ನಂಟು?

Published:
Updated:
ಭೀಮಾ ತೀರದ ನೆತ್ತರಿಗೆ ಪೊಲೀಸರ ನಂಟು?

ವಿಜಯಪುರ: ಈಚೆಗಿನ ದಶಕಗಳ ಜಿಲ್ಲಾ ಪೊಲೀಸ್ ಇತಿಹಾಸದಲ್ಲಿ, ಕೊಲೆ ಪ್ರಕರಣವೊಂದರಲ್ಲಿ ಮೊದಲ ಬಾರಿಗೆ ಪೊಲೀಸ್‌ ಸಿಬ್ಬಂದಿಯ ಬಂಧನವಾಗಿರುವುದು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ವಿಶ್ವಾಸಾರ್ಹತೆಯ ಪ್ರಶ್ನೆ ಎಲ್ಲೆಡೆ ಕಾಡುತ್ತಿದೆ. ಜತೆಗೆ ಆತಂಕವನ್ನು ಸೃಷ್ಟಿಸಿದೆ.

ಭೀಮಾ ತೀರದಲ್ಲಿ ವೈಷಮ್ಯದಿಂದ ನೆತ್ತರು ಹರಿಯುವುದಕ್ಕೆ ಆರೇಳು ದಶಕಗಳ ಐತಿಹ್ಯವಿದೆ. ಇಂಡಿ, ಚಡಚಣ, ಸಿಂದಗಿ, ಆಲಮೇಲ, ದೇವಣಗಾಂವ ಭಾಗದಲ್ಲಿ ವೈಯಕ್ತಿಕ ಸಂಘರ್ಷ ತಾರ್ಕಿಕ ಅಂತ್ಯ ತಲುಪಿ, ಗುಂಪುಗಳ ನಡುವಿನ ತಿಕ್ಕಾಟದಿಂದ ಪರಸ್ಪರ ಕೊಲೆಗೈಯುವುದು ಈ ಹಿಂದೆ ನಿರಂತರವಾಗಿತ್ತು. ಈಗಲೂ ಆಗಾಗ್ಗೆ ಇದು ಮರುಕಳಿಸುತ್ತಿದೆ.

ಪಾತಕ ಲೋಕದ ಹಿಡಿತಕ್ಕಾಗಿ ಗುಂಪುಗಳು ಸೃಷ್ಟಿಯಾಗಿ ತಮ್ಮೊಳಗೆ ಹೊಡೆದು ಕೊಳ್ಳುವುದು, ಪರಸ್ಪರರ ಬೆಂಬಲಿಗರನ್ನು ಸೇಡು, ವೈಷ್ಯಮ್ಯಕ್ಕಾಗಿ ಕೊಲೆಗೈಯುವುದು ಸಹಜವಾಗಿತ್ತು. ಇದಕ್ಕೆ ಪೂರಕವಾಗಿ ಅಕ್ರಮ ಶಸ್ತ್ರಾಸ್ತ್ರ ದಂಧೆ ಎಗ್ಗಿಲ್ಲದೆ ನಡೆದಿತ್ತು.

ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಅಪರಾಧ ಜಗತ್ತು ಸಹ ತನ್ನ ಪಾತಕ ಲೋಕದ ಚಟುವಟಿಕೆಗಳ ಸ್ವರೂಪವನ್ನು ಬದಲಿಸಿಕೊಂಡಿದೆ. ಈಚೆಗಿನ ದಿನಗಳಲ್ಲಿ ಮರಳು ಮಾಫಿಯಾ, ಹಣಕ್ಕಾಗಿ ಸುಪಾರಿ ಪಡೆದು ಕೊಲೆ ಎಸಗುವುದು, ಪ್ರಾಬಲ್ಯಕ್ಕಾಗಿ ಬಡಿದಾಟ, ಈಚೆಗೆ ರಾಜಕಾರಣವನ್ನೂ ಪ್ರವೇಶಿಸಿ, ಇಡೀ ವ್ಯವಸ್ಥೆಯ ಬುನಾದಿಯನ್ನೇ ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಹವಣಿಸುತ್ತಿತ್ತು. ಇದಕ್ಕೆ ಪೂರಕವಾಗಿ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಜಾಲ ಭೀಮಾ ತೀರದಿಂದ ರಾಜ್ಯದ ಎಲ್ಲೆಡೆ ಬೇರು ಬಿಟ್ಟಿದೆ.

ಭೀಮಾ ತೀರದ ಅಪರಾಧ ಜಗತ್ತು ಒಂದೆಡೆ ಗುಂಪುಗಳ ಕಾದಾಟಕ್ಕೆ ಸಾಕ್ಷಿಯಾಗಿದ್ದರೆ; ಇನ್ನೊಂದೆಡೆ ಕುಟುಂಬ ವೈಷಮ್ಯಕ್ಕೆ ಸಿಲುಕಿತ್ತು. ಪರಸ್ಪರ ಅವರೇ ಕಚ್ಚಾಡುತ್ತಿದ್ದರೇ ಹೊರತು, ಸಾರ್ವಜನಿಕರ ತಂಟೆಗೆ ಬರುತ್ತಿರಲಿಲ್ಲ. ಪೊಲೀಸರು ಪಾತಕ ಲೋಕದ ವೈಷಮ್ಯದೊಳಗೆ ಸಿಲುಕಿರಲಿಲ್ಲ.

ಕೆಲ ಪೊಲೀಸ್ ಅಧಿಕಾರಿಗಳು ಭೀಮಾ ತೀರದ ರೌಡಿ ಶೀಟರ್‌ಗಳೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದರೂ; ಸಾಕ್ಷ್ಯಗಳಿಲ್ಲದೇ ಎಲ್ಲವನ್ನೂ ಸೂಕ್ಷ್ಮವಾಗಿ ನಿಭಾಯಿಸುತ್ತಿದ್ದರು. ಇದೇ ಮೊದಲ ಬಾರಿಗೆ ಈ ಹಿಂದೆ ಚಡಚಣ ಪೊಲೀಸ್‌ ಠಾಣೆಯ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗೋಪಾಲ ಹಳ್ಳೂರ ಗಂಗಾಧರ ಚಡಚಣನ ನಿಗೂಢ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವುದು ಪೊಲೀಸ್‌ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ದಿಗ್ಭ್ರಮೆ ಮೂಡಿಸಿದೆ. ಬಿಸಿ ಬಿಸಿ ಚರ್ಚೆಗೆ ಆಹಾರವಾಗಿದೆ.

ದೇಶಭಕ್ತರಲ್ಲ... ‘ಪಿಎಸ್‌ಐ ಗೋಪಾಲ ಹಳ್ಳೂರ ಎನ್‌ಕೌಂಟರ್‌ನಲ್ಲಿ ಕೊಂದಿದ್ದು ದೇಶಭಕ್ತನನ್ನಲ್ಲ. ಆದರೆ ಅದರ ಹಿಂದಿದ್ದ ಉದ್ದೇಶ ಯಾರೂ ಒಪ್ಪುವಂತಹದ್ದಲ್ಲ. ಸಮಾಜ ಕಂಟಕರನ್ನು ಸದೆ ಬಡಿಯಲು ಮುಂದಾಗಬೇಕೇ ಹೊರತು, ಎದುರಾಳಿ ಗುಂಪಿನ ಜತೆ ಶಾಮೀಲಾಗಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಗಂಗಾಧರನನ್ನು ಬಂಧಿಸಿದ ಪೊಲೀಸರು ಎದುರಾಳಿ ಗುಂಪಿಗೆ ಒಪ್ಪಿಸಿದ್ದಾರೆ ಎಂಬುದು ಘೋರ ಅಪರಾಧ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲಿಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು.

‘ಈ ಪ್ರಕರಣದಲ್ಲಿ ಪಿಎಸ್‌ಐಗೆ ಆ ಭಾಗದ ಕೆಲ ಅಧಿಕಾರಿಗಳು ಬೆಂಬಲ ನೀಡಿದ್ದರಿಂದಲೇ ಈ ಕೃತ್ಯ ನಡೆದಿದೆ. ಖಾಕಿ ತೊಟ್ಟು ಏನು ಮಾಡಿದರೂ ನಡೆಯುತ್ತೆ ಎಂಬ ಹುಂಬ ಮನೋಭಾವದಿಂದ ವರ್ತಿಸುವವರಿಗೆ, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು. ಆಗಲೇ ವ್ಯವಸ್ಥೆಯ ಮೇಲೆ ಜನರ ವಿಶ್ವಾಸ ಹೆಚ್ಚುತ್ತದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಐಜಿಪಿಗೆ ಹ್ಯಾಟ್ಸ್‌ಆಫ್‌: ‘ಉತ್ತರ ವಲಯ ಐಜಿಪಿ ಅಲೋಕ್‌ಕುಮಾರ್‌ಗೆ ಮೊದಲು ಹ್ಯಾಟ್ಸ್‌ ಆಫ್‌ ಹೇಳಬೇಕು. ಇಲಾಖೆಯೊಳಗೆ ನಡೆದ ತಪ್ಪನ್ನು ನಿಸ್ಪಕ್ಷಪಾತವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ಬಂಧನಕ್ಕೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಪೊಲೀಸ್‌ ವ್ಯವಸ್ಥೆ ಸುಧಾರಿಸಲು ಮುಂದಾಗಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕಿದೆ’ ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ತಿಳಿಸಿದರು.

‘ಧರ್ಮರಾಜ ಚಡಚಣನ ಎನ್‌ಕೌಂಟರ್‌ ನಡೆದ ದಿನವೇ ಆಗಿನ ಪೊಲೀಸ್ ವರಿಷ್ಠಾಧಿಕಾರಿ ಜತೆ ಚರ್ಚಿಸಿ, ಇಂತಹ ಘಟನೆ ನಡೆದ ಸಂದರ್ಭ ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರಗಳಂತೆ ಯಾವ್ಯಾವ ಕ್ರಮ ತೆಗೆದುಕೊಳ್ಳಬೇಕಿತ್ತು. ಎಲ್ಲವನ್ನೂ ಪಾಲಿಸಿದೆವು. ಅದರಂತೆ ಮ್ಯಾಜಿಸ್ಟಿರಿಯಲ್ ತನಿಖೆಗೂ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೆವು. ಈ ವರದಿ ಇನ್ನೂ ಬರಬೇಕಿದೆಯಷ್ಟೇ. ಕೆಳ ಹಂತದ ಅಧಿಕಾರಿಗಳು ಆಮಿಷಕ್ಕೆ ಬಲಿಯಾಗಿ ಇಂತಹ ಕೃತ್ಯ ಎಸಗಿದರೆ, ನಾವೂ ಯಾರನ್ನು ನಂಬಿ ಕೆಲಸ ಮಾಡಬೇಕು ಎಂಬುದೇ ತೋಚದಾಗಿದೆ’ ಎಂದರು.

ಕುಟುಂಬ ವೈಷಮ್ಯಕ್ಕೆ ಪಿಎಸ್‌ಐ ದಾಳ..!

ಆರು ದಶಕಗಳ ಹಿಂದೆ ಭೈರಗೊಂಡ–ಚಡಚಣ ಕುಟುಂಬಗಳ ನಡುವೆ ಹೆಣ್ಣಿಗಾಗಿ ಆರಂಭಗೊಂಡ ಹಣಾಹಣಿ, ಎರಡೂ ಕಡೆಯ ಹಲವರನ್ನು ಬಲಿ ಪಡೆದರೂ ತಣ್ಣಗಾಗಿಲ್ಲ. ಇದೀಗ ಧರ್ಮರಾಜ, ಗಂಗಾಧರ ಚಡಚಣ ಸಹೋದರರ ಕೊಲೆ ಪ್ರಕರಣ ಪಿಎಸ್‌ಐ ಗೋಪಾಲ ಹಳ್ಳೂರ ಕೊರಳಿಗೆ ಸುತ್ತಿಕೊಂಡಿದೆ.

ಇದರ ಬೆನ್ನಿಗೆ ಸಾರ್ವಜನಿಕ ವಲಯದಲ್ಲಿ ನೂರೆಂಟು ಪ್ರಶ್ನೆಗಳು ಕೇಳಿ ಬರುತ್ತಿವೆ. ಪೊಲೀಸರು ತನಿಖೆಯ ಮಾಹಿತಿಯ ಗುಟ್ಟನ್ನು ಬಿಟ್ಟುಕೊಡುತ್ತಿಲ್ಲ. ಅಂತೆ–ಕಂತೆಗಳ ಸುದ್ದಿಯೇ ಎಲ್ಲೆಡೆ ಹರಿದಾಡುತ್ತಿದೆ. ಧರ್ಮರಾಜ ಚಡಚಣನ ಎನ್‌ಕೌಂಟರ್‌ ನಕಲಿ ಎಂಬ ಮಾತು ಕೇಳಿ ಬರುತ್ತಿವೆ. ಗಂಗಾಧರನ ಹತ್ಯೆ ಬಗ್ಗೆಯೂ ಉತ್ತರವಿಲ್ಲದ ಹಲ ಪ್ರಶ್ನೆಗಳು ಎಲ್ಲೆಡೆ ಚರ್ಚೆಗೀಡಾಗುತ್ತಿವೆ.

ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಗಂಗಾಧರ ಚಡಚಣ ಹೇಗೆ ನಾಪತ್ತೆಯಾದ? ಹೇಗೆ ಕೊಲೆಯಾದ ಎಂಬ ಪ್ರಶ್ನೆಗಳಿಗೆ ಉತ್ತರ ದೊರಕದಾಗಿದೆ. ಚಡಚಣ–ಕೊಂಕಣಗಾಂವ್ ನಡುವೆ ಕೇವಲ ನಾಲ್ಕು ಕಿ.ಮೀ. ಅಂತರ. ಇಷ್ಟು ದೂರದಲ್ಲಿ ಸಾಕಷ್ಟು ವಿದ್ಯಮಾನ ನಡೆದಿದೆ. ಇನ್ಮುಂದೆ ಯಾವ ವಿಷಯದಲ್ಲಿ ಪೊಲೀಸರನ್ನು ನಂಬಬೇಕು ಎಂಬ ಪ್ರಶ್ನೆ ಚಡಚಣ ಭಾಗದ ಸಾರ್ವಜನಿಕರಿಂದ ಕೇಳಿ ಬರುತ್ತಿವೆ.

‘ಗೋಪಾಲ ಹಳ್ಳೂರ ಕಾಂಗ್ರೆಸ್‌ ಮುಖಂಡ, ಮರಳು ಮಾಫಿಯಾ ಡಾನ್‌ ಮಹದೇವ ಭೈರಗೊಂಡ ಜತೆ ಶಾಮೀಲಾಗಿ ನಕಲಿ ಎನ್‌ಕೌಂಟರ್‌ ನಡೆಸಿ ಧರ್ಮರಾಜ ಚಡಚಣನನ್ನು ಗುಂಡಿಕ್ಕಿ ಹತ್ಯೆಗೈದರೆ, ಈತನ ಸಹೋದರ ಗಂಗಾಧರ ಚಡಚಣನನ್ನು ಎದುರಾಳಿ ಪಾಳೆಯದ ಹಣಮಂತ ಪೂಜಾರಿ ತಂಡದ ವಶಕ್ಕೆ ಒಪ್ಪಿಸಿದ್ದರು’ ಎಂಬ ದೂರು ಧರ್ಮರಾಜ ಚಡಚಣನ ಸಹಚರ ಜಗದೇವ ಬಿರಾದಾರ ಅವರದ್ದು.

ಧರ್ಮರಾಜ ಚಡಚಣನ ತಾಯಿ ವಿಮಲಾಬಾಯಿ ಚಡಚಣ ಸಹ ಎನ್‌ಕೌಂಟರ್‌ ನಡೆದ ದಿನವೇ ಕೊಲೆಯ ಅನುಮಾನ ವ್ಯಕ್ತಪಡಿಸಿದ್ದರು. ‘ಒಂದೆರೆಡು ದಿನಗಳಲ್ಲಿ ಗಂಗಾಧರ ನಾಪತ್ತೆಯಾಗಿದ್ದಾನೆ. ಪೊಲೀಸರ ಸಹಕಾರದಿಂದಲೇ ಮಹಾದೇವ ಭೈರಗೊಂಡ ನನ್ನ ಮಗನನ್ನು ಕೊಲೆ ಮಾಡಿಸಿದ್ದಾನೆ’ ಎಂದು ದೂರಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಗಂಗಾಧರ ಚಡಚಣನ ಕೊಲೆ ಎಸಗಿರುವುದಾಗಿ ಬಂಧಿತ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಪೊಲೀಸರ ಪಾತ್ರದ ಕುರಿತು ಸಿಐಡಿ ವಿಸ್ತೃತ ತನಿಖೆ ನಡೆಸಲಿದೆ

- ನಿಕ್ಕಂ ಪ್ರಕಾಶ್ ಅಮೃತ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry