ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀತೆಯ ಸುತರು ಕುಶಲವರು

Last Updated 31 ಜುಲೈ 2018, 11:13 IST
ಅಕ್ಷರ ಗಾತ್ರ

ರಾಮಾಯಣದ ಗಾಯನಕ್ಕೆ ವಾಲ್ಮೀಕಿ ಮನಸ್ಸು ಮಾಡಿದ್ದು ಏಕೆ?

ರಾಮಾಯಣದ ಕಾಲದಲ್ಲಿ ಬರಹ ಇನ್ನೂ ಹೆಚ್ಚಾಗಿ ಬಳಕೆಯಲ್ಲಿರಲಿಲ್ಲ ಎಂಬಂಥ ವಾದಗಳನ್ನು ಮಂಡಿಸುವವರೂ ಇದ್ದಾರೆ. ಭಾರತದಲ್ಲಿ ಬರಹ ಯಾವಾಗ ಆರಂಭವಾಯಿತು? ಯಾವ ಲಿಪಿಯಲ್ಲಿ ಬರೆಯುತ್ತಿದ್ದರು? ಯಾವುದರಿಂದ ಬರೆಯುತ್ತಿದ್ದರು? ಇಂಥ ಪ್ರಶ್ನೆಗಳನ್ನು ಸದ್ಯಕ್ಕೆ ಪಕ್ಕಕ್ಕೆ ಇಡೋಣ.

ಬರಹದ ಬಳಕೆಗೂ ರಾಮಾಯಣದ ಗಾಯನಕ್ಕೂ ನೇರ ಸಂಬಂಧವಿತ್ತು – ಎನ್ನುವುದು ಅಷ್ಟಾಗಿ ಸರಿಯಾಗದು ಎನಿಸುತ್ತದೆ. ಹೌದು, ಪ್ರಾಚೀನ ಭಾರತೀಯ ಸಂಸ್ಕೃತಿಯ ಮೂಲಸ್ರೋತ ಮೌಖಿಕ ಪರಂಪರೆ ಎಂಬುದು ನಿರ್ವಿವಾದ. ಆದರೆ ಅದಕ್ಕೆ ಕಾರಣ ಲಿಪಿಯ ಉಗಮ ಆಗಿರಲಿಲ್ಲ ಎಂದು ವಾದಿಸಲು ಹೊರಡುವುದು ತೊಡಕಾಗುತ್ತದೆ. ಈ ವಿಷಯವನ್ನು ಮುಂದೆ ನೋಡೋಣ.

ರಾಮಾಯಣವನ್ನು ಹಾಡಲು ವಾಲ್ಮೀಕಿಯ ಮನಸ್ಸು ಬಯಸಿದ್ದು ಆಕಸ್ಮಿಕ ಆಯ್ಕೆಯೇನಲ್ಲ. ಕವಿಯಾದವನು ತನ್ನ ವೈಯಕ್ತಿಕ ಭಾವನೆಗಳಿಂದ ಮನಸ್ಸನ್ನು ಬಿಡುಗಡೆಗೊಳಿಸಿಕೊಳ್ಳಬೇಕಾಗುತ್ತದೆ. ಭಾವನೆಗಳನ್ನು ಭಾವಸ್ತರಕ್ಕೆ ಏರಿಸಿ, ಅವಕ್ಕೆ ವೈಶ್ವಿಕವಾದ ರಸಾನುಭೂತಿಯನ್ನು ಕಲ್ಪಿಸಲು ಈ ಬಿಡುಗಡೆ ಅನಿವಾರ್ಯವೆನ್ನಿ! ಹಾಡು ಇಂಥದೊಂದು ಬಿಡುಗಡೆಯನ್ನು ಒದಗಿಸಬಲ್ಲದು. ನಾದದ ಈ ಲೀಲೆಯನ್ನು ಕುರಿತು ‘ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ| ನೀಡುವೆನು ರಸಿಕ! ನಿನಗೆ!’ ಎಂದ ಬೇಂದ್ರೆ ಅವರ ಹಾಡು ಇಲ್ಲಿ ನೆನಪಾಗುತ್ತದೆ. ಅರ್ಜುನ ಎತ್ತಿದ ಪ್ರಶ್ನೆಗೆ ಕೃಷ್ಣ ಕೊಡುವಂಥ ಪ್ರಶ್ನೆಗಳು ವಿಶ್ವಾತ್ಮಕಸ್ತರದ್ದು; ಎಂದರೆ ಎಲ್ಲರಿಗೂ ಸೇರಬೇಕಾದಂಥವು ಆಗಿದ್ದವು ಅವು. ಏಕೆಂದರೆ ಅರ್ಜುನನ ಪ್ರಶ್ನೆಗಳು ಎಲ್ಲರಿಗೂ ಒಂದಲ್ಲ ಒಂದು ವಿಧದಲ್ಲಿ ಕಾಡುವಂಥವೇ. ಹೀಗಾಗಿಯೇ ಕೃಷ್ಣ ಅದಕ್ಕೆ ಕೊಟ್ಟ ಉತ್ತರಗಳು ‘ಗೀತೆ’ – ‘ಹಾಡು’ ಎನಿಸಿತು. ವಾಲ್ಮೀಕಿ ಕಂಡ ದೃಶ್ಯ ಅವನ ಶೋಕಕ್ಕೆ ಕಾರಣವಾಯಿತು; ಆದರೆ ಅವನು ಶೋಕದಿಂದ ಬಿಡುಗಡೆಗೊಳಿಸಿಕೊಳ್ಳದಿದ್ದರೆ ಅದು ಕರುಣರಸದ ಅನುಭೂತಿಯನ್ನು ಒದಗಿಸುತ್ತಿರಲಿಲ್ಲವಷ್ಟೆ! ಶೋಕವು ಶ್ಲೋಕವಾದುದ್ದರಲ್ಲಿಯೇ ಈ ಸ್ವರೂಪಾಂತರದ ಸುಳಿವಿದೆ. ಹೀಗಾಗಿ ಹಾಡಿಗಿರುವ ರಸಶಕ್ತಿ ವಾಲ್ಮೀಕಿಗೆ ಚೆನ್ನಾಗಿಯೇ ಮನದಟ್ಟಾಗಿತ್ತು. ಆದುದರಿಂದಲೇ ರಾಮನ ಕಥೆ ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸಲು ಗಾಯನವನ್ನೇ ಅವನು ಆರಿಸಿಕೊಂಡ ಎನಿಸುತ್ತದೆ.

ರಾಮಾಯಣವನ್ನು ಯಾರಿಂದ ಹಾಡಿಸುವುದು ಎಂಬ ಯೋಚನೆಯಲ್ಲಿದ್ದಾಗ ವಾಲ್ಮೀಕಿಯಲ್ಲಿಗೆ ಆಗಮಿಸಿದವರು ಕುಶ–ಲವರು.

ಈ ಕುಶ–ಲವರು ಯಾರು ಎನ್ನುವುದನ್ನು ವಾಲ್ಮೀಕಿ ಆ ಸಂದರ್ಭದಲ್ಲಿ ಹೇಳಿಲ್ಲ; ಅವರ ಕಲಿಕೆ ಮತ್ತು ಆಕಾರ ಹೇಗಿತ್ತು ಎಂದಷ್ಟೆ ಹೇಳಿದ್ದಾನೆ.

ರೂಪಲಕ್ಷಣಸಂಪನ್ನೌ ಮಧುರಸ್ವರಭಾಷಿಣೌ |

ಬಿಂಬಾದಿವೋತ್ಥಿತೌ ಬಿಂಬೌ ರಾಮದೇಹಾತ್ತಥಾಪರೌ ||

‘ಆ ಅಣ್ಣತಮ್ಮಂದಿರು ರೂಪವಂತರು; ಮಧುರವಾದ ಕಂಠವುಳ್ಳವರು. ರಾಮ ಎಂಬ ಮೂಲಬಿಂಬದಿಂದ ಹೊರಹೊಮ್ಮಿದ ಪ್ರತಿಬಿಂಬದಂಥ ಆಕೃತಿಯನ್ನುಳ್ಳವರು’ ಎನ್ನುವುದು ಈ ಶ್ಲೋಕದ ಸಾರಾಂಶ.

‘ರಾಮನ ಪ್ರತಿಬಿಂಬಗಳಂತೆ ಇದ್ದವರು’ ಎಂದು ವಾಲ್ಮೀಕಿ ಇಲ್ಲಿ ಹೇಳಿರುವುದರ ಧ್ವನಿ ಏನಿದ್ದಿರಬಹುದು? ರಾಮಾಯಣದ ನಾಯಕನಿಗೂ ಅದರ ಗಾಯಕರಿಗೂ ಸಾವಯವ ಸಂಬಂಧವನ್ನು ಕಲ್ಪಿಸುವುದಷ್ಟೆ ಈ ಸಾದೃಶ್ಯದ ಉದ್ದೇಶವೆ? ಹೇಳುವುದು ಕಷ್ಟ; ಆದರೆ ಅಷ್ಟೇ ಇರಲಾರದು ಎಂದೂ ಅನಿಸದಿರದು. ಇದಕ್ಕೆ ಉತ್ತರವನ್ನು ನಾವು ‘ಉತ್ತರಕಾಂಡ’ದಲ್ಲಿ ನೋಡಬಹುದು.

ರಾಮಾಯಣದ ಅಂತಿಮ ಕಾಂಡವಾದ ‘ಉತ್ತರಕಾಂಡ’ದಲ್ಲಿ ಈ ಕುಶ–ಲವರು ಯಾರು ಎಂಬುದು ಗೊತ್ತಾಗುತ್ತದೆ. (ಆದರೆ ಉತ್ತರಕಾಂಡವೇ ಪ್ರಕ್ಷಿಪ್ತ ಎಂಬ ಅಭಿಪ್ರಾಯವಿದೆ; ಈ ಸಂಗತಿಯನ್ನು ಆನಂತರದಲ್ಲಿ ನೋಡೋಣವಾಗುತ್ತದೆ.) ಅಲ್ಲಿಯ 66ನೇ ಸರ್ಗದಲ್ಲಿ ಕುಶ–ಲವರ ಜನನವೃತ್ತಾಂತವಿದೆ.

ಸೀತೆ ಈಗಾಗಲೇ ವಾಲ್ಮೀಕಿಯ ಆಶ್ರಮದಲ್ಲಿದ್ದಾಳೆ. ಅವಳು ಈಗ ತುಂಬು ಬಸುರಿ. ಲವಣಾಸುರನನ್ನು ಸಂಹರಿಸುವುದಕ್ಕಾಗಿ ಹೊರಟಿರುವ ಶತ್ರುಘ್ನನೂ ಅದೇ ಸಮಯದಲ್ಲಿ ವಾಲ್ಮೀಕಿಯ ಆಶ್ರಮದಲ್ಲಿ ತಂಗಿದ್ದಾನೆ. ಮಧ್ಯರಾತ್ರಿ. ಸೀತೆಗೆ ಹೆರಿಗೆಯಾಗಿದೆ; ಇಬ್ಬರು ಗಂಡುಮಕ್ಕಳನ್ನು ಪ್ರಸವಿಸಿದ್ದಾಳೆ. ಕೂಡಲೇ ಈ ಸುದ್ದಿಯನ್ನು ಮುಟ್ಟಿಸಲು ಆಶ್ರಮಸ್ತ್ರೀಯರು ವಾಲ್ಮೀಕಿಯಲ್ಲಿಗೆ ಓಡಿದರು: ‘ಭಗವಾನ್‌! ರಾಮನ ಹೆಂಡತಿ ಇದ್ದಾಳಲ್ಲ, ಅವಳು ಇಬ್ಬರು ಗಂಡುಮಕ್ಕಳನ್ನು ಹೆಡೆದಿದ್ದಾಳೆ’ ಎಂದು ವರದಿ ನೀಡಿದರು. ಕೂಡಲೇ ವಾಲ್ಮೀಕಿಮಹರ್ಷಿ ಅಲ್ಲಿಗೆ ತೆರಳಿದ. ಬಾಲಚಂದ್ರನಂತೆ ಬೆಳಗುತ್ತಿದ್ದ ಆ ರಾಜಪುತ್ರರನ್ನು ನೋಡಿ ಸಂತೋಷಿಸಿದ. ಭೂತಬಾಧೆಯನ್ನೂ ರಕ್ಷೋಬಾಧೆಯನ್ನೂ ನಿವಾರಿಸಲು ಮುಂದಾಗಿ, ಒಂದು ಹಿಡಿ ದರ್ಭೆಯ ಹುಲ್ಲನ್ನು ಹಿಡಿದು, ಅದನ್ನು ಅಭಿಮಂತ್ರಿಸಿ, ಅಲ್ಲಿದ್ದ ವೃದ್ಧಸ್ತ್ರೀಯರ ಕೈಗೆ ಕೊಟ್ಟು, ಆ ಅವಳಿ–ಜವಳಿ ಕೂಸುಗಳಿಗೆ ಅದರಿಂದ ಮಾರ್ಜನ ಮಾಡಿಸಲು ಹೇಳಿದ. ‘ಅವರಲ್ಲಿ ಮೊದಲು ಜನಿಸಿದ ಮಗುವನ್ನು ಕುಶದಿಂದಲೂ ಎರಡನೆಯ ಮಗುವನ್ನು ಲವದಿಂದಲೂ ಮಾರ್ಜನ ಮಾಡಿಸಿದ್ದರಿಂದ, ಈ ಮಕ್ಕಳು ಕ್ರಮವಾಗಿ ‘ಕುಶ’, ‘ಲವ’ – ಎಂಬ ಹೆಸರನ್ನು ಹೊಂದಿ ಪ್ರಸಿದ್ಧರಾಗಲಿ’ – ಎಂದು ವಾಲ್ಮೀಕಿಮಹರ್ಷಿ ಹರಸಿದ.

ಇಲ್ಲೊಂದು ಶಾಸ್ತ್ರೀಯ ವಿವರ ಉಂಟು. ದರ್ಭೆಗಳನ್ನು ಕೈಯಲ್ಲಿ ಹಿಡಿದು ಅವನ್ನು ಮಧ್ಯಕ್ಕೆ ಸರಿಯಾಗಿ ಕತ್ತರಿಸಿದರೆ ಅವುಗಳ ‘ಅಗ್ರ’ಗಳಿರುವ ಮೇಲಿನ ಭಾಗಕ್ಕೆ ‘ಕುಶ’ (ಊನಕುಶಾನಾನಗ್ರಭಾಗಃ ಕುಶಃ ಇತ್ಯುಚ್ಯತೇ) ಎಂದೂ, ಅಗ್ರಗಳಿಲ್ಲದ ಕೆಳಭಾಗದವುಗಳಿಗೆ ‘ಲವ’ (ತೇಷಾಮಧೋಭಾಗೋ ಲವ ಇತಿ) ಎಂದೂ ಕರೆಯಲಾಗುತ್ತದೆ. ಹೀಗಾಗಿ ದರ್ಭೆಗಳ ಮೇಲಿನ ಭಾಗದಿಂದ ಮಾರ್ಜನ ಮಾಡಿಸಿಕೊಂಡ ಶಿಶುವಿಗೆ ‘ಕುಶ’ ಎಂದೂ, ಬುಡದ ಭಾಗದಿಂದ ಮಾರ್ಜನ ಮಾಡಿಸಿಕೊಂಡದ್ದಕ್ಕೆ ‘ಲವ’ ಎಂದೂ ಹೆಸರಾಯಿತು.

ಮಹಾಕವಿ ಕಾಲಿದಾಸ ಕೂಡ ಈ ಪ್ರಸಂಗವನ್ನು ಇನ್ನಷ್ಟು ಸುಂದರವಾಗಿ ಕಟ್ಟಿಕೊಟ್ಟಿದ್ದಾನೆ, ಅವನ ‘ರಘುವಂಶ’ ಮಹಾಕಾವ್ಯದಲ್ಲಿ, ಹೀಗೆ:

ಸ ತೌ ಕುಶಲವೋನ್ಮೃಷ್ಟ ಗರ್ಭಕ್ಲೇದೌ ತದಾಖ್ಯಯಾ |

ಕವಿಃ ಕುಶಲವಾವೇವ ಚಕಾರ ಕಿಲ ನಾಮತಃ ||

‘ವಾಲ್ಮೀಕಿಯು ಸೀತೆಗೆ ಒದಗಿದ ಪ್ರಸವಸಮಯದ ತೊಂದರೆಯನ್ನು ಕುಶದಿಂದಲೂ ಲವದಿಂದಲೂ ಕುಶಲದಿಂದ ಪರಿಹರಿಸಿದ. ಹೀಗಾಗಿ ಮೊದಲು ಹುಟ್ಟಿದ ಶಿಶುವಿಗೆ ‘ಕುಶ’ ಎಂದೂ, ಆನಂತರದ ಶಿಶುವಿಗೆ ‘ಲವ’ ಎಂದೂ ನಾಮಕರಣ ಮಾಡಿದರು. (‘ಲವ’ ಎನ್ನುವುದಕ್ಕೆ ‘ಹಸುವಿನ ಬಾಲದ ಕೂದಲು’ ಎಂದು ಅರ್ಥ ಎಂದೂ ಹೇಳುವುದುಂಟು.)

ಹೀಗೆ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದ ಕುಶ–ಲವರು ಕಲಿಕೆಗೆ ಸಿದ್ಧರಾದ ಕೂಡಲೇ ಅವರಿಗೆ ವಾಲ್ಮೀಕಿಯು ವೇದ–ವೇದಾಂಗಗಳನ್ನು ಕಲಿಸಿದರು. ಜೊತೆಗೆ ತನ್ನ ಕೃತಿಯಾದ ರಾಮಾಯಣದ ಗಾಯನವನ್ನೂ ಕಲಿಸಿದ (ಸ್ವಕೃತಿಂ ಗಾಪಯಾಮಾಸ ಕವಿಪ್ರಥಮಪದ್ಧತಿಮ್‌). ಹೀಗೆ ಕಲಿಸಿದ ರಾಮಾಯಣವೇ ಮುಂದಿನ ಎಲ್ಲ ಕವಿಗಳಿಗೂ ದಾರಿದೀಪವಾಯಿತು. ಅವರಿಬ್ಬರೂ ರಾಮಾಯಣಗಾನವನ್ನು ಚೆನ್ನಾಗಿ ಕಲಿತು, ಅವರ ತಾಯಿಯ ಮುಂದೆ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಅವರ ಈ ರಾಮಕಥಾಗಾಯನವನ್ನು ಕೇಳಿ ಅವಳ ವಿರಹದ ದುಃಖವನ್ನು ಒಂದಿಷ್ಟಾದರೂ ಕಡಿಮೆ ಮಾಡಿಕೊಳ್ಳುತ್ತಿದ್ದಳು. ಹೀಗೆ ಕುಶಲವರ ಆಟ–ಪಾಠಗಳು ಸಂತೋಷವನ್ನೂ, ರಾಮಾಯಣದ ಹಾಡುಗಾರಿಕೆ ಸಮಾಧಾನವನ್ನೂ ಅವಳಿಗೆ ಕೊಡುತ್ತಿದ್ದವು.

ಇಷ್ಟಕ್ಕೂ ರಾಮಾಯಣದ ನಾಯಕಿಗೆ ಒದಗಿದ ದುಃಖಕ್ಕೆ ಕಾರಣವಾದರೂ ಏನು? ಅದನ್ನು ಮುಂದೆ ನೋಡೋಣ. ಅದಕ್ಕೂ ಮೊದಲು ಹಳೆಯ ತಕರಾರರೊಂದನ್ನು ಇಲ್ಲಿ ಪ್ರಸ್ತಾವಿಸಲೇ ಬೇಕು. ‘ಉತ್ತರಕಾಂಡ’ವನ್ನು ಹಲವರು ವಿದ್ವಾಂಸರು ಪ್ರಕ್ಷಿಪ್ತ ಎಂಬುದಾಗಿ ಹೇಳಿದ್ದಾರೆ. ಮೂಲಗ್ರಂಥದಲ್ಲಿ ಇಲ್ಲದೆ ಆನಂತರದಲ್ಲಿ ಬೇರೆ ಯಾರೋ ಸೇರಿಸಿದ ಭಾಗವೇ ‘ಪ್ರಕ್ಷಿಪ್ತ’. ಈ ಪ್ರಕ್ಷಿಪ್ತದ ಬಾಧೆ ಕೇವಲ ರಾಮಾಯಣಕ್ಕೆ ಮಾತ್ರವೇ ಅಲ್ಲ, ಮಹಾಭಾರತಕ್ಕೂ ಕಾಡಿರುವ ಸಮಸ್ಯೆಯೇ ಹೌದು.

ಲವ–ಕುಶರ ಜನನ ಮುಂತಾದ ವಿವರಗಳು ಪ್ರಕ್ಷಿಪ್ತಗಳು ಹೌದೋ ಅಲ್ಲವೋ – ಇದು ಎಂದೂ ಬಗೆಹರಿಯದ ತೊಡಕುಗಳು. ಆದರೆ ಲವ–ಕುಶರ ವೃತ್ತಾಂತವು ಭಾರತೀಯ ಕಲಾಪರಂಪರೆಗೆ ನೀಡಿರುವ ಕೊಡುಗೆಗಳು ಅಪೂರ್ವವಾದುದು ಎನ್ನುವುದನ್ನು ತಳ್ಳಿಹಾಕುವಂತಿಲ್ಲ. ಪ್ರಾಚೀನ ಕಾಲದ ಕೊಡುಗೆಗೆ ಒಂದು ನಿದರ್ಶನ ಎಂದರೆ ಮಹಾಕವಿ ಭವಭೂತಿಯ ‘ಉತ್ತರರಾಮಚರಿತ’. ನಮ್ಮ ಕಾಲದ ಕೊಡುಗೆಗಳಲ್ಲಿ ಒಂದನ್ನಾಗಿ ತೆಲುಗು ಸಿನಿಮಾ ‘ಲವಕುಶ’ವನ್ನು ಇಲ್ಲಿ ಹೆಸರಿಸಬಹುದು ಎನಿಸುತ್ತದೆ.

ಏಳು ಕಾಂಡಗಳಲ್ಲಿ ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳಿವೆ ಎಂಬ ಮಾತು ಬಂದಿದೆಯಷ್ಟೆ. ಆದರೆ ಈ ಸಂಖ್ಯೆ ಇಂದು ನಮಗೆ ಲಭ್ಯವಿರುವ ರಾಮಾಯಣದೊಂದಿಗೆ ಹೊಂದಾಣಿಕೆ ಆಗುತ್ತಿಲ್ಲ. ಸಮಸ್ಯೆ ಎಲ್ಲಿ ಆರಂಭ ಆಯಿತು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT