ಸಾರ್ವಜನಿಕರಿಗೆ ಶೀರ್‌ಕುರ್ಮಾ ವಿತರಣೆ

7
ಈದ್ ಉಲ್ ಫಿತ್ರ್ ಆಚರಣೆ

ಸಾರ್ವಜನಿಕರಿಗೆ ಶೀರ್‌ಕುರ್ಮಾ ವಿತರಣೆ

Published:
Updated:

ತಾಳಿಕೋಟೆ: ಈದ್ ಉಲ್‌ ಫಿತ್ರ್ ಆಚರಿಸುವ ಮುಸಲ್ಮಾನರು ಅಕ್ಕಪಕ್ಕದ ಮನೆಯವರು ಹಾಗೂ ಸ್ನೇಹಿತರಿಗೆ ಭರ್ಜರಿ ಭೋಜನ ಹಾಕಿಸುವುದು ಸಾಮಾನ್ಯ. ಆದರೆ, ಹಬ್ಬದ ದಿನ ರಸ್ತೆಯಲ್ಲಿ ಸಂಚರಿಸುವವರಿಗೆಲ್ಲ ತಾಲ್ಲೂಕಿನ ಮೂಕಿಹಾಳ ದರ್ಗಾದ ವತಿಯಿಂದ ಶೀರ್‌ಕುರ್ಮಾ (ಸಿಹಿ ಖಾದ್ಯ) ವಿತರಿಸಲಾಯಿತು.

ಬೆಳಿಗ್ಗೆ ಪ್ರಾರ್ಥನೆ ಮುಗಿಸಿದ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಎಚ್‌.ಪಟೇಲ್‌ ನೇತೃತ್ವದ ತಂಡ ರಸ್ತೆ ಪಕ್ಕದಲ್ಲಿಯೇ ದೊಡ್ಡ ಬೋಗೋಣಿಯಲ್ಲಿ ಶೀರ್‌ಕುರ್ಮಾ ತಯಾರಿಸಿತು.

‘ಏ ...ಡ್ರೈವರ್‌ ಅಣ್ಣಾ... ಗಾಡಿ ನಿಲ್ಸು, ಅಣ್ಣಾರ.. , ಕಾಕಾರ.., ತಡೀರಿ, ಇದನ್ನು ಕುಡೀರಿ, ನಮ್ಮ ಹಬ್ಬದ್ದು ಹಾಲಿನಾಗ ಮಾಡೀವಿ, ಪಾಯಸ್‌ ಇದ್ದಂಗ ಇರತ್ತ ,ಕುಡದು ನೋಡ್ರಿ,’ ಎಂದು ಪ್ರೀತಿಯಿಂದ ಒತ್ತಾಯಿಸಿ ಕುಡಿಸಿ ಸಂತೋಷಪಟ್ಟರು. ‘ಇಲ್ಲಪಾ ಈಗ ಕುಡದ ಬಂದೀನಿ ಬ್ಯಾಡ, ಸಾಕು’ ಎನ್ನುವವರಿಗೆಲ್ಲ, ‘ಯಾಕ್ರೀ ನಮ್ಮಲ್ಲಿ ಸ್ವಲ್ಪ ಕುಡಿಯುವುದಿಲ್ಲೇನು’ ಎಂದು ಪ್ರೀತಿಯಿಂದ ಗದರಿ ಕುಡಿಯುವಂತೆ ಮಾಡಿದರು.

ಕುಡಿದವರಿಗೆ ಧನ್ಯವಾದ ತಿಳಿಸಿ ಮತ್ತೊಂದು ವಾಹನದತ್ತ ಓಡುತ್ತಿದ್ದರು. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ದಣಿವರಿಯದೇ ಶೀರ್‌ಕುರ್ಮಾ ನೀಡಿದರು. ಮೂಕಿಹಾಳ ದರ್ಗಾ ಮಾರ್ಗವಾಗಿ ಮುದ್ದೇಬಿಹಾಳದತ್ತ ಹೋಗುವ, ತಾಳಿಕೋಟೆಯತ್ತ ಬರುವ ಎಲ್ಲ ಬಗೆಯ ವಾಹನಗಳನ್ನು ನಿಲ್ಲಿಸಿ ಪ್ರಯಾಣಿಕರಿಗೆಲ್ಲ ವಿತರಿಸಿ ಸಂತಸ ಪಟ್ಟರು.

ಗ್ರಾಮದ ಪ್ರಮುಖರಾದ ಕೆ.ಎಚ್‌.ಪಟೇಲ, ಮೋದಿನಸಾಬ ಲಾಹೋರಿ, ಕಾಶೀಂಪಟೇಲ ಜಹಾಗೀರದಾರ, ಬಾಬುಪಟೇಲ ಗುಡ್ನಾಳ, ಹುಮಾಯುನ್‌ಪಟೇಲ ಬಿರಾದಾರ, ಮಹಮ್ಮದಪಟೇಲ ಜಹಾಗೀರದಾರ, ಬಾಬುಪಟೇಲ ಮಕಾಶಿ, ಮಹಮ್ಮದಲಿ ಜಮಾದಾರ, ವಿಶ್ವನಾಥ ಗಣಾಚಾರಿ, ರಾಜಾಪಟೇಲ ಬಿರಾದಾರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry