ಅಂಗನವಾಡಿಯಿದ್ದರೂ ಪ್ರಯೋಜನವಿಲ್ಲ..!

7
ಅಧಿಕಾರಿಗಳ ವಿರುದ್ಧ ಬಮ್ಮನಜೋಗಿ, ಬೂದಿಹಾಳ ಡೋಣ ಗ್ರಾಮಸ್ಥರ ಆಕ್ರೋಶ

ಅಂಗನವಾಡಿಯಿದ್ದರೂ ಪ್ರಯೋಜನವಿಲ್ಲ..!

Published:
Updated:
ಅಂಗನವಾಡಿಯಿದ್ದರೂ ಪ್ರಯೋಜನವಿಲ್ಲ..!

ದೇವರಹಿಪ್ಪರಗಿ: ತಾಲ್ಲೂಕಿನ ಬಮ್ಮನಜೋಗಿ, ಬೂದಿಹಾಳ ಡೋಣ ಗ್ರಾಮಗಳಲ್ಲಿ ಸುಸಜ್ಜಿತ ಅಂಗನವಾಡಿ ಕೇಂದ್ರಗಳಿದ್ದರೂ; ಕಾರ್ಯಕರ್ತೆಯರಿಲ್ಲದ ಕಾರಣ ಮಕ್ಕಳು ಕಲಿಕೆಯ ಜತೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಊರಲ್ಲಿ ಅಂಗನವಾಡಿಯಿದೆ. ಸರ್ಕಾರ ಸೌಲಭ್ಯ ಒದಗಿಸಿದೆ. ಆದರೆ ಮಕ್ಕಳಿಗೆ ಕಲಿಯುವ ಭಾಗ್ಯವಿಲ್ಲ. ಜತೆಗೆ ಯಾವೊಂದು ಸೌಲಭ್ಯವೂ ಇದೂವರೆಗೂ ಸಿಗದಾಗಿವೆ ಎಂದು ಗ್ರಾಮಸ್ಥರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಬಮ್ಮನಜೋಗಿಯಲ್ಲಿ ಅಂಗನವಾಡಿ ಕೇಂದ್ರವಿದೆ. ಆದರೆ ಇಲಾಖೆ ಇದೂವರೆಗೂ ಕಾಯಂ ಕಾರ್ಯಕರ್ತೆಯನ್ನು ನೇಮಿಸದಿರುವುದರಿಂದ ಮಕ್ಕಳಿಗೆ ಅಗತ್ಯ ಶಿಕ್ಷಣ ಸಿಗುತ್ತಿಲ್ಲ. ಮಕ್ಕಳು ಸದಾ ಕೊಠಡಿ ಹೊರಗೆ ಬೀದಿಯಲ್ಲೇ ಆಡುವಂತಾಗಿದೆ’ ಗ್ರಾಮ ಪಂಚಾಯಿತಿ ಸದಸ್ಯ ಮಲ್ಲನಗೌಡ ಬಿರಾದಾರ, ಮಲಕಪ್ಪ ಕಾಚಾಪುರ ದೂರಿದರು.

‘ನಿಯೋಜನೆಗೊಂಡಿರುವ ಕಾರ್ಯಕರ್ತೆ ಸದಾ ಗೈರಿರುತ್ತಾರೆ. ಯಾವಾಗಲಾದರೂ ಒಮ್ಮೆ ಬರುತ್ತಾರೆ. ಇದು ಮಕ್ಕಳಿಗೆ ತೊಂದರೆಯನ್ನುಂಟು ಮಾಡಿದೆ. ಆದಷ್ಟು ಶೀಘ್ರವೇ ಕಾಯಂ ಕಾರ್ಯಕರ್ತೆ ನೇಮಿಸಲು ಸಂಬಂಧಿಸಿದವರು ಮುಂದಾಗಬೇಕು’ ಎಂದು ಆಗ್ರಹಿಸಿದರು.

‘ಬೂದಿಹಾಳ ಡೋಣ ಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೆ ಅತ್ಯುತ್ತಮ ಕಟ್ಟಡವಿದೆ. ಕಲಿಯಲು ಮಕ್ಕಳು ಸಾಕಷ್ಟಿದ್ದಾರೆ. ಆದರೆ ಕಲಿಸುವವರು ಮಾತ್ರ ವಾರದಲ್ಲಿ ಮೂರು ದಿನವಷ್ಟೇ ಬರ್ತಾರೆ. ಹೀಗಾಗಿ ಇದು ಗ್ರಾಮಸ್ಥರ ಪಾಲಿಗೆ ವಿಶ್ರಾಂತಿಯ ತಾಣವಾಗಿದೆ’ ಎಂದು ಸ್ಥಳೀಯರಾದ ಶಾಂತಪ್ಪ ಸಾವಳಗಿ, ಶಂಕರ ಸಾಲೋಡಗಿ ತಿಳಿಸಿದರು.

‘ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿದರೆ ಕಾರ್ಯಕರ್ತೆ ನೇಮಕಗೊಂಡಿದ್ದಾರೆ. ಪ್ರತಿ ತಿಂಗಳು ಮಕ್ಕಳಿಗೆ ನೀಡಬೇಕಾದ ಆಹಾರ ಧಾನ್ಯ ಸೇರಿದಂತೆ ಎಲ್ಲವನ್ನೂ ವಿತರಿಸಿದ್ದೇವೆ. ಇನ್ನೊಮ್ಮೆ ಪರಿಶೀಲಿಸಿ ಎನ್ನುತ್ತಾರೆ. ಇದು ನೂರೆಂಟು ಪ್ರಶ್ನೆ ಸೃಷ್ಟಿಸಿದೆ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನಾದರೂ ಸಂಬಂಧಿಸಿದವರು ಸೂಕ್ತ ಕ್ರಮ ತೆಗೆದುಕೊಂಡು ನಮ್ಮ ಗ್ರಾಮಗಳಲ್ಲಿರುವ ಅಂಗನವಾಡಿಗಳನ್ನು ಪುನರ್ ಆರಂಭಿಸಲಿ. ನಮ್ಮ ಮಕ್ಕಳಿಗೆ ಇಲ್ಲಿ ಶಿಕ್ಷಣ ಸಿಗುವಂತಾಗಲಿ ಎಂದು ಬಮ್ಮನಜೋಗಿ ಗ್ರಾಮದ ಶರಣಗೌಡ ಬಿರಾದಾರ, ಹಸನ್ ಮುಜಾವರ, ರೇವಣಸಿದ್ದ ಯಂಕಂಚಿ, ದಯಾನಂದ ಬಿರಾದಾರ, ಸೋಮು ಹಾದಿಮನಿ, ಸಂಗು ಹಂದ್ರಾಳ, ವಿಜಯಕುಮಾರ ಮಾದರ, ಪಾರ್ವತಿ ಬಿರಾದಾರ, ಬಂಗಾರೆಮ್ಮ ಮುತ್ತಗಿ ಹಾಗೂ ಬೂದಿಹಾಳ ಡೋಣ ಗ್ರಾಮದ ಹಣಮಂತ ಬಡಿಗೇರ, ಭೀಮನಗೌಡ ಬಿರಾದಾರ, ವಿಠೋಬಾ ಹಜೇರಿ, ಮಹಾದೇವಪ್ಪ ಸಾವಳಗಿ, ಶಂಕರಪ್ಪ ಉಕ್ಕಲಿ ಅವರ ಆಗ್ರಹ.

ಬಮ್ಮನಜೋಗಿ ಕಾರ್ಯಕರ್ತೆ ಪ್ರಕರಣ ನ್ಯಾಯಾಲಯದಲ್ಲಿದೆ. ಇತ್ಯರ್ಥವಾಗುತ್ತಿದ್ದಂತೆ ಸಮಸ್ಯೆ ಪರಿಹರಿಸುತ್ತೇವೆ. ಬೂದಿಹಾಳ ಡೋಣ ಗ್ರಾಮಕ್ಕೆ ಸೋಮವಾರ ಭೇಟಿ ನೀಡುವೆ

ಜಿ.ಎಸ್.ಗುಣಾರಿ, ಸಿಡಿಪಿಓ, ಸಿಂದಗಿ

ಅಮರನಾಥ ಹಿರೇಮಠ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry