ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿನ್‌ ಹೆಸ್ರು ದೊಡ್ಡಪ್ಪ ಆಗ್ಬೇಕಿತ್ತು ಅಂದಿದ್ರು ರಾಜಣ್ಣ!

Last Updated 11 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಕಲಾದೇವಿ ಒಲಿಯಬೇಕಾದರೆ ಅದೃಷ್ಟ ಇರಬೇಕು. ನಾಲ್ಕನೇ ತರಗತಿ ಓದಿದ ನನಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಂದು ಸಣ್ಣ ಹೆಸರು ದಾಖಲಿಸುವ ಅವಕಾಶ ಸಿಕ್ಕಿರುವುದು ಪುಣ್ಯ. 72 ವರ್ಷಗಳಿಂದ ಸಿನಿಮಾ ಪೋಸ್ಟರ್‌ಗಳನ್ನು ಬರೆಯುವ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ‘ಪೋಸ್ಟರ್‌ ಚಿನ್ನಪ್ಪ’ ಎಂದೇ ಜನ ಕರೆಯೋದು.

ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸಿನಿಮಾಗಳಿಗೆ ಪೋಸ್ಟರ್‌ ಬರೆದಿದ್ದೇನೆ. ಅಮಿತಾಭ್ ಬಚ್ಚನ್‌, ರಾಜೇಶ್‌ ಖನ್ನಾ, ರಾಜ್‌ಕಪೂರ್‌, ಧರ್ಮೇಂದ್ರ, ದಿಲೀಪ್ ಕುಮಾರ್‌, ದೇವಾನಂದ್‌ ಅವರ ಚಿತ್ರಗಳನ್ನೂ ಬರೆದಿದ್ದೇನೆ. ಈಗ ಕೆಲವರ ಹೆಸರು, ಸಿನಿಮಾ ಹೆಸರು ನೆನಪಾಗ್ತಿಲ್ಲ. ರಜನಿಕಾಂತ್‌ ನನ್ನನ್ನು ಕರೆದು ಮಾತಾಡಿಸೋರು. ಈಗ ನನ್ನ ನೆನಪು ಇದೆಯೋ ಇಲ್ವೋ ಗೊತ್ತಿಲ್ಲ.

ಕನಕಪುರದ ಕೊಳಗಂಡನಹಳ್ಳಿ ನನ್ನೂರು. 1937ರ ಫೆಬ್ರುವರಿ 15ರಂದು ಇಲ್ಲೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಾನು ಹುಟ್ಟಿದ್ದು. ತಂದೆ ಕಾಕಯ್ಯ, ತಾಯಿ ಮಾದಮ್ಮ. ನಾನು ಚಿಕ್ಕವನಿದ್ದಾಗಲೇ ತಂದೆಗೆ ಏನೋ ಸಮಸ್ಯೆಯಾಗಿ ಬೆಂಗಳೂರಿಗೆ ಬಂದುಬಿಟ್ರಂತೆ. ಲಾಲ್‌ಬಾಗ್‌ ಬಳಿಯ ಸಿದ್ದಾಪುರದಲ್ಲಿ ಬಾಡಿಗೆ ಮನೆಯಲ್ಲಿದ್ವಿ. ನಾನು ಓದಿದ್ದು ಸಿದ್ದಾಪುರದ ಸರ್ಕಾರಿ ಶಾಲೆಯಲ್ಲಿ. ನಾಲ್ಕನೇ ತರಗತಿಯಲ್ಲಿರುವಾಗ ತಂದೆ ತೀರ್ಕೊಂಡು ಭಾರೀ ಬಡತನ ಅನುಭವಿಸಿದ್ವಿ. ಆಗ, ‘ಓದು ಸಾಕು ಮಗನೇ ಎಲ್ಲಾದರೂ ದುಡಿಯಲು ಹೋಗು’ ಎಂದು ನಮ್‌ ತಾಯಿ ಹೇಳಿದ್ರು. ಓದು ನಿಲ್ಲಿಸಿ ಕೆಲಸ ಹುಡುಕ್ತಿದ್ದಾಗ ಸೀನು ಎಂಬ ಪೋಸ್ಟರ್‌ ಕಲಾವಿದರ ಹತ್ರ ಯಾರೋ ಸೇರಿಸಿದ್ರು.

ಆಗ ನನಗಿನ್ನೂ 9 ವರ್ಷ. ಅಷ್ಟು ಸಣ್ಣ ಹುಡುಗನಾದ್ರೂ ಅವರು ನನಗೆ ಬಹಳ ಟಾರ್ಚರ್‌ ಕೊಡ್ತಿದ್ರು. ಹೇಳಿದ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸದೇ ಇದ್ರೆ ಸಮಾ ಹೊಡೀತಿದ್ರು. ಅವರ ಪ್ರಕಾರ ಅದು ಶಿಸ್ತು. ಆರಂಭದಲ್ಲಿ ತುಂಬಾ ಬೇಜಾರಾಗ್ತಿತ್ತು. ಆ ಕೆಲಸ ಇಷ್ಟಾನೂ ಇರ್ಲಿಲ್ಲ. ಮನೆಗೆ ಹೋಗಿ ತಾಯಿಯ ಹತ್ರ ಹೇಳ್ಕೊಂಡು ಅಳ್ತಿದ್ದೆ. ‘ಸಹಿಸ್ಕೊಂಡು ಹೋಗ್ಬೇಕು ಮಗಾ, ಜೀವ್ನ ಸಾಗಿಸ್ಬೇಕಲ್ಲ’ ಅಂತ ಅವರು ಸಮಾಧಾನಪಡಿಸೋರು. ಆಗಿನ ನಮ್ಮ ಬಡತನ ಹಾಗಿತ್ತು. ಕೆಲಸಕ್ಕೆ ಸೇರಿ ಆರು ತಿಂಗಳ ನಂತರ ನನಗೆ ಪೇಂಟಿಂಗ್‌ನಲ್ಲಿ ಹಿಡಿತ ಸಿಕ್ತು. ಆಮೇಲೆ ಇಷ್ಟಪಟ್ಟು ಕೆಲಸ ಮಾಡತೊಡಗಿದೆ. ಕೆಲಸ ಮಾಡುತ್ತಿದ್ದ ಶೆಡ್‌ನಲ್ಲೇ ಮಲಗುತ್ತಿದ್ದೆ. ಹಾಗಾಗಿ ಮರುದಿನ ಮಾಡಬೇಕಾಗಿದ್ದ ಕೆಲಸಗಳನ್ನು, ಸೀನು ಮೇಷ್ಟ್ರು ಮನೆಗೆ ಹೋದ ಮೇಲೆ ಅಂದ್ರೆ ರಾತ್ರಿಯೆಲ್ಲ ಮಾಡಿ ಮುಗಿಸುತ್ತಿದ್ದೆ. ಬೆಳಿಗ್ಗೆ ಅವರಿಗೆ ಶಾಕ್ ಆಗ್ತಿತ್ತು. ಹಾಗಂತ ಅವರು ಮೆತ್ತಗಾಗುತ್ತಿರಲಿಲ್ಲ.

ಸೀನು ಮೇಷ್ಟ್ರು ಶುರುನಲ್ಲಿ ನನಗೆ 5 ರೂಪಾಯಿ ಸಂಬಳ ಕೊಡ್ತಿದ್ರು. ಯಡಿಯೂರು ಕೆರೆ ಹತ್ರದ ಅರಳಿ ಮರ ಮತ್ತು ಗಣೇಶನ ದೇವಸ್ಥಾನ ಇದೆ ನೋಡಿ, ಅಲ್ಲಿ ಆಗ ವಾರದ ಸಂತೆ ನಡೀತಿತ್ತು. ನಾನು ಮತ್ತು ನನ್ನ ತಮ್ಮ ಸಂತೆಗೆ ಹೋಗಿ ತಿಂಗಳಿಗಾಗುವಷ್ಟು ರೇಷನ್‌ ತರ್ತಿದ್ವಿ. ನಮ್ಮಮ್ಮ ಎರಡು ಗೋಣಿ ಚೀಲ ಕೊಡೋರು. ಆಗೆಲ್ಲಾ ಭಾಳ ಚೀಪು. ನಾಲ್ಕಾಣೆಗೆ ಎಂಟು ಸೇರು ರಾಗಿ, ನಾಲ್ಕಾಣೆಗೆ ನಾಲ್ಕು ಸೇರು ಅಕ್ಕಿ, ಒಂದಾಣೆಗೆ ಒಂದು ಕೆ.ಜಿ. ಕಪ್ಪು ಬೆಲ್ಲ, ರಾಗಿ ಮುದ್ದೆಗೆ ಹಾಕಲು
ನುಚ್ಚು ತರ್ತಿದ್ವಿ. ನನ್‌ ತಮ್ಮನಿಗೆ ಆಗ ನಾಲ್ಕೂವರೆ ವರ್ಷ. ಪಾಪ ಅವನಿಗೆ ಮೂಟೆ ಹೊರಕ್ಕಾಗ್ತಿರಲಿಲ್ಲ. ಹಾಗಾಗಿ ಎರಡೂ ಮೂಟೆಗಳನ್ನು ನಾನೇ ಹೊತ್ಕೊಂಡು ಸಿದ್ದಾಪುರದವರೆಗೂ ನಡ್ಕೊಂಡು ಬರ್ತಿದ್ದೆ. ಅಬ್ಬಾ... ಆಗ ಪಟ್ಟ ಕಷ್ಟಗಳನ್ನು ನೆನೆಸಿಕೊಂಡ್ರೆ ಈಗಲೂ ಕಣ್ಣೀರು ಬರುತ್ತೆ.

ನಮ್‌ ಸೀನು ಮೇಷ್ಟ್ರ ಜತೆ 15 ವರ್ಷ ಕೆಲಸ ಮಾಡಿದೆ. ಸಿನಿಮಾ ಕಲಾವಿದರ ಪೋರ್ಟ್ರೇಟ್‌ಗಳನ್ನು ಚೆನ್ನಾಗಿ ಮಾಡುವಷ್ಟು ಪಳಗಿದೆ. ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ಅಲ್ಲೇ ಉಳಿದದ್ದಕ್ಕೆ ಕಲೆ ನನ್ನ ಕೈಹಿಡಿಯಿತು. ದುರಾದೃಷ್ಟ ಅಂದುಕೊಂಡಿದ್ದುದು ಅದೃಷ್ಟವಾಗಿ ಮಾರ್ಪಾಡಾಯ್ತು. ಪೋಸ್ಟರ್‌ ಕಲಾವಿದನಾಗಿ ಬದುಕು ಕಟ್ಟಿಕೊಳ್ಳಲು ಅವರು ದಾರಿ ತೋರಿಸಿದ್ರು ಅನ್ನೋ ಕೃತಜ್ಞತಾ ಭಾವ ನನ್ನಲ್ಲಿದೆ. ಅಂದರೆ ಶಿಕ್ಷೆ ಮತ್ತು ಶಿಸ್ತಿನ ರೂಪದಲ್ಲಿ ಮೇಷ್ಟ್ರು ನನಗೆ ಬದುಕಿನ ಪಾಠವನ್ನೂ ಕಲಿಸಿದ್ರು.

ಸೀನು ಮೇಷ್ಟ್ರ ಜತೆ ಕೆಲಸ ಮಾಡುವಾಗ ಆರು ವರ್ಷ ಸಿದ್ದಾಪುರದಿಂದ ಗಾಂಧಿನಗರಕ್ಕೆ ನಡ್ಕೊಂಡು ಹೋಗ್ತಿದ್ದೆ. ಅವರೂ ನಮ್ಮನೆ ಹತ್ರಾನೇ ಇದ್ದಿದ್ರಿಂದ ಜತೆಗೇ ಹೊರಡ್ತಿದ್ವಿ. ಆದರೆ ಅವರು ಸೈಕಲ್‌ನಲ್ಲಿ ಬರೋರು. ನಾನು ಸೈಕಲ್‌ ಹಿಂದೆ ಓಡ್ಕೊಂಡು ಹೋಗ್ಬೇಕು. ಕೆಲವು ವರ್ಷ ಆದ್ಮೇಲೆ ನನ್ನ ಸಂಬಳ 15 ರೂಪಾಯಿ ಮಾಡಿದ್ರು.

ನಾನು ಸಿದ್ದಾಪುರದಲ್ಲಿದ್ದಾಗ ಒಂದು ಘಟನೆ ನಡೆಯಿತು. ವೆಂಕಟಪ್ಪ ಅನ್ನೋ ಸಾಹುಕಾರರು ಪ್ರತಿ ವರ್ಷ ಶ್ರೀರಾಮ ನವಮಿಗೆ ಸುತ್ತಮುತ್ತಲಿನ ಊರಿನೋರಿಗೆ ಊಟ ಹಾಕ್ಸೋರು. ನಾನು ಕೆಲಸಕ್ಕೆ ಚಕ್ಕರ್ ಹಾಕಿ ಅಲ್ಲಿಗೆ ಹೋಗಿದ್ದೆ. ಅಲ್ಲೊಂದು ಹಸು ಮಲಗಿತ್ತು. ಒಬ್ರು ಅಜ್ಜಿ ನನ್ನನ್ನು ಕರೆದು, ‘ಏ ಚಿನ್ನಪ್ಪ ಈ ಹಸೂನ ಸ್ವಲ್ಪ ಎದ್ದೇಳ್ಸೋ’ ಎಂದರು. ನಾನು ಹಸುವಿಗೆ ‘ಏಯ್‌’ ಅಂದೆ. ಅದು ಬೆಚ್ಚಿಬಿತ್ತೋ ಕೋಪಿಸ್ಕೊಂಡಿತೋ ಗೊತ್ತಿಲ್ಲ. ಒಮ್ಮೆಗೇ ಎದ್ದೇಳ್ತು. ನನ್ನ ಸ್ವೆಟರ್‌ ಅದರ ಕೊಂಬಿಗೆ ಸಿಕ್ಕಿಹಾಕಿಕೊಂಡಿತು. ನಂಬ್ತೀರೋ ಇಲ್ವೋ ಅದು ನನ್ನನ್ನು ಹೊತ್ಕೊಂಡು 15 ನಿಮಿಷ ಓಡಾಡಿತು. ಕೆಳಗೆ ಹಾಕಿ ಎದೆ ಹತ್ತಿರ ಕಾಲಿಟ್ಟಿತು. ಯಾರೋ ಧೈರ್ಯ ಮಾಡಿ ನನ್ನ ಸ್ವೆಟರ್‌ ಹರಿದುಹಾಕಿದ್ರು. ಹಸು ನನ್ನನ್ನು ಬಿಟ್ಟಿತು. ಅಷ್ಟು ಹೊತ್ತಿಗೆ ವಿಷ್ಯ ತಿಳಿದು ನನ್ನ ತಾಯಿನೂ ಅಲ್ಲಿಗೆ ಬಂದುಬಿಟ್ಟಿದ್ರು. ನಾನು ಸತ್ತೇ ಹೋಗಿದ್ದೀನಿ ಅಂತ ಎಲ್ರೂ ಅಂದ್ಕೊಂಡ್ರು. ಬಹುಶಃ ಶ್ರೀರಾಮನೇ ನನ್ನನ್ನು ಕಾಪಾಡಿದ. ಅವನನ್ನು ಈಗಲೂ ನಾನು ತುಂಬಾ ನಂಬ್ತೀನಿ.

1960ರಲ್ಲಿ ಸೀನು ಮೇಷ್ಟ್ರ ಹತ್ರ ಕೆಲ್ಸ ಬಿಟ್ಟು ಬೇರೆ ಕಡೆ 60 ರೂಪಾಯಿ ಸಂಬಳಕ್ಕೆ ಸೇರಿಕೊಂಡೆ. ಅದೇ ವರ್ಷ ಮುತ್ತುತಾಯಮ್ಮನೊಂದಿಗೆ ಮದುವೆನೂ ಆಯ್ತು. ಎಚ್.ಎಂ.ಟಿ.ಯಲ್ಲಿ ಕೆಲಸ ಮಾಡುತ್ತಿದ್ದ ಶಿವಸುಬ್ರಹ್ಮಣ್ಯ ಅನ್ನೋರು ನನ್ನ ಪೇಂಟಿಂಗ್‌ ನೋಡಿ, ಅದೇ ಕಂಪ್ನೀಲಿ ಮೆಷಿನ್‌ಗಳಿಗೆ ಪೇಂಟಿಂಗ್‌ ಮಾಡುವ ಕೆಲಸ ಕೊಡಿಸಿದ್ರು. 105 ರೂಪಾಯಿ ಸಂಬಳ ಬರ್ತಿತ್ತು. ಡ್ಯೂಟಿ ಮುಗಿದ್ಮೇಲೆ ಪೋಸ್ಟರ್‌ ಕೆಲಸ ಮುಂದುವರಿಸ್ತಿದ್ದೆ. ಬಹುಶಃ 1962ರಲ್ಲಿ ಇರಬೇಕು. ದಸರಾದಂದು ನಮ್‌ ಸೀನು ಮೇಷ್ಟ್ರನ್ನು ಭೇಟಿಯಾದೆ. ‘ಏನಯ್ಯಾ, ನಾನೊಬ್ನೇ ಕಷ್ಟಪಡ್ತಿದ್ದೀನಿ... ಸ್ವಲ್ಪ ಸಹಾಯ ಮಾಡ್ಬಾರ್ದಾ?’ ಅಂತ ಬೇಜಾರು ಮಾಡ್ಕೊಂಡ್ರು. ಮರುದಿನವೇ ಅವರಲ್ಲಿ ಕೆಲಸಕ್ಕೆ ಹೋದೆ. 300 ರೂಪಾಯಿ ಸಂಬಳ ಕೊಟ್ರು. ಆದರೆ ಅವರ ಸಿಟ್ಟನ್ನು ಸಹಿಸಿಕೊಳ್ಳಲಾಗದೆ ಮೂರ್ನಾಲ್ಕು ವರ್ಷದಲ್ಲಿ ಹೊರಬಂದೆ. ಆಮೇಲೂ ಒಬ್ಬರ ಕೈಯಲ್ಲಿ ಕೆಲಸ ಮಾಡಿದೆ.

ನಾನು ಪೋಸ್ಟರ್‌ ಬರೆಯಲು ಶುರು ಮಾಡಿದ್ದು ಬ್ಲ್ಯಾಕ್‌ ಅಂಡ್‌ ವೈಟ್‌ ಕಾಲದಲ್ಲಿ. ಕಪ್ಪು ಮತ್ತು ಬಿಳಿ ಬಣ್ಣ ಮಾತ್ರ ಬಳಸ್ಬೇಕು. ಆಗ ಪೋಸ್ಟರ್‌ಗೆ ಕೋರಾ ಬಟ್ಟೆ ಬಳಸ್ತಿದ್ದದ್ದು. ಗ್ರಾಫ್‌ ಬರೆದುಕೊಂಡು ಅದರ ಮೇಲೆ ಸ್ಕೆಚ್‌ ಹಾಕ್ತಿದ್ವಿ. ನಾಲ್ಕು ಹಂತದಲ್ಲಿ ಬಣ್ಣ ಬಳೀಬೇಕು. ಕೆಲವು ಬಣ್ಣ ಒಣಗಲು ಒಂದಿಡೀ ದಿನ ಬೇಕಿತ್ತು. ಇಡೀ ಪೋಸ್ಟರ್‌ ಸಿದ್ಧವಾಗಬೇಕಾದರೆ ಕನಿಷ್ಠ ಮೂರು ದಿನ ಬೇಕಾಗುತ್ತಿತ್ತು. ಕೈಚಳಕ ಇದ್ದರೆ ಮಾತ್ರ ಪೋಸ್ಟರ್‌ಗಳು ಜನರಿಗೆ ಮೆಚ್ಚುಗೆಯಾಗ್ತಿದ್ವು. ಪೋಸ್ಟರ್‌ಗಳನ್ನು ನೋಡಿಯೇ ಜನ ಥಿಯೇಟರ್‌ಗೆ ಹೋಗುತ್ತಿದ್ದರು. ಅದಕ್ಕೇ ನಿರ್ದೇಶಕ ಸಿದ್ದಲಿಂಗಯ್ಯ ಹೇಳ್ತಿದ್ರು– ‘ಚಿನ್ನಪ್ಪ ನಿನ್ನ ಪೋಸ್ಟರ್‌ಗಳಿಂದಲೇ ನನ್ನ ಸಿನಿಮಾಗಳು ಸೂಪರ್‌ ಹಿಟ್‌ ಆಗೋದು’ ಅಂತ.
ಆಮೇಲೆ ಕಲರ್‌ ಸಿನೆಮಾ ಬಂತು. ನಮ್ಮ ಕೆಲಸವೂ ಕಲರ್‌ ಆಯ್ತು. ದೊಡ್ಡ ಪ್ರಮಾಣದ ಕಟೌಟ್‌ ಶುರುವಾಗಿದ್ದು ರಾಜ್‌ಕುಮಾರ್ ಅವರ ‘ಭಲೇ ಜೋಡಿ’ ಸಿನಿಮಾದಿಂದ. ‘ಭೂತಯ್ಯನ ಮಗ ಅಯ್ಯು’ಗೆ ಪ್ಲೈವುಡ್‌ ಬ್ಯಾನರ್‌ ಮೊದಲ ಬಾರಿಗೆ ಬಳಕೆಯಾಯಿತು. ನಾನೇ ಬ್ಯಾನರ್‌ ಬರೆದಿದ್ದೆ. ‘ಮೇನಕಾ’ ಥಿಯೇಟರ್‌ನಲ್ಲಿ ಅದನ್ನು ಹಾಕಿದ್ರು. ಅಮಿತಾಭ್‌ ಬಚ್ಚನ್‌ ಅವರ ‘ನಮಕ್‌ ಹರಾಮ್‌’ ಚಿತ್ರಕ್ಕೂ ಪೋಸ್ಟರ್‌ ಮಾಡಿದ್ದು ನಾನೇ.

1972ರಲ್ಲಿ ಸ್ವಂತ ಗ್ಯಾಲರಿ ಶುರು ಮಾಡಿದೆ. ನನ್ನ ಮಕ್ಕಳ ಹೆಸರಿನಿಂದ ಒಂದೊಂದು ಅಕ್ಷರ ಎತ್ಕೊಂಡು ‘ರಾಜ್‌ಕಮಲ್‌ ಆರ್ಟ್ಸ್‌’ ಅಂತ ಹೆಸರಿಟ್ಟೆ. ಕೆಲಸಕ್ಕೆ ಹುಡುಗ್ರನ್ನೂ ಇಟ್ಕೊಂಡೆ. ಈಗ ಪೋರ್ಟ್ರೇಟ್‌ಗಳಿಗಿಂತ ಫ್ಲೆಕ್ಸ್‌ಗಳು ಸಾಮಾನ್ಯ. ಹೊಟ್ಟೆಪಾಡು ಅಂತ ಮಾಡ್ತೀನಿ. ಆದರೆ ಪೋರ್ಟ್ರೇಟ್‌ ಮಾಡೋದು ನಂಗೆ ತುಂಬಾ ಇಷ್ಟ. ನಮ್ಮ ಕಲೆ ಗೊತ್ತಾಗೋದು ಅದ್ರಲ್ಲೇ. ದೇವಸ್ಥಾನಗಳಿಗೆ, ಕೊಡುಗೆ ಕೊಡಲಿಕ್ಕಂತ ಇವತ್ತಿಗೂ ನನ್ನ ಕೈಲಿ ಪೇಂಟಿಂಗ್‌ ಮಾಡಿಸ್ಕೋತಾರೆ.
ನಾಲ್ವರು ಗಂಡು ಮಕ್ಕಳ ಪೈಕಿ ಇಬ್ರು ಪೋಸ್ಟರ್‌ ಕೆಲಸ ಮಾಡ್ತಾರೆ. ಗೋಪಾಲಕೃಷ್ಣ ಇದರಲ್ಲೇ ತೊಡಗಿಸಿಕೊಂಡಿದ್ದಾನೆ. ಮಹಾಲಕ್ಷ್ಮಿ ಬಡಾವಣೆಯಲ್ಲಿ ಸ್ವಂತ ಮನೆ ಮಾಡಿದ್ದೀನಿ. ಶಿಲ್ಪಿ ಒಂದು ಕಲ್ಲಿಗೆ ಸಾವಿರ ಬಾರಿ ಉಳಿಯ ಏಟು ಕೊಟ್ಟರೆ ಅದೊಂದು ಶಿಲ್ಪವಾಗುತ್ತದೆ. ನನಗೆ ಮೇಷ್ಟ್ರು ಕೊಟ್ಟ ಕಷ್ಟಗಳೇ ಒಳ್ಳೆಯ ಕಲಾವಿದನನ್ನಾಗಿ ರೂಪುಗೊಳಿಸಿದವು. ಈಗ ನನಗೆ 81. ಬದುಕು ಕೊಟ್ಟ ಕಲೆಯನ್ನು ಕೈಲಾದಷ್ಟು ದಿನ ನಡೆಸ್ಕೊಂಡು ಹೋಗ್ತೀನಿ.

ರಾಜಣ್ಣ ಶೀಲ್ಡ್‌ ಕೊಟ್ರು

‘ನಾ ನಿನ್ನ ಮರೆಯಲಾರೆ’ 100 ದಿನ ಓಡಿದಾಗ ದೊಡ್ಡ ಫಂಕ್ಷನ್‌ ಮಾಡಿದ್ರು. ಆಗ ನನ್ನನ್ನು ಪೋಸ್ಟರ್‌ ಕಲಾವಿದನಾಗಿ ಸನ್ಮಾನ ಮಾಡಿದ್ರು. ನನಗೆ ಶೀಲ್ಡ್‌ (ಪ್ರಶಸ್ತಿ ಫಲಕ) ಕೊಟ್ಟಿದ್ದು ರಾಜಣ್ಣನೇ. ‘ನಿನ್‌ ಹೆಸರೇನಪ್ಪಾ’ ಅಂತ ಕೇಳಿದ್ರು. ಚಿನ್ನಪ್ಪ ಅಂದೆ. ‘ಅಯ್ಯೋ ಇಷ್ಟಿಷ್ಟು ದೊಡ್ಡ ಕಟೌಟ್‌ ಬರೀತೀಯಾ. ನಿನ್‌ ಹೆಸರು ಚಿನ್ನಪ್ಪ ಅಂತ ಇಡಬಾರ್ದಾಗಿತ್ತು ದೊಡ್ಡಪ್ಪ ಅಂತ ಇಡಬೇಕಿತ್ತು’ ಅಂತ ಬೆನ್ನು ತಟ್ಟಿದ್ರು.

‘ಪಡುವಾರಹಳ್ಳಿ ಪಾಂಡವರು’ ಸಿನಿಮಾದ ಪೋಸ್ಟರ್‌ ಬರೆಸಲು ಪುಟ್ಟಣ್ಣ ಕಣಗಾಲ್‌ ಬಂದಿದ್ರು. ‘ಚಿನ್ನಪ್ಪ, ಈ ಫೋಟೊ ನೋಡಿ. ಪಾಂಡವರಂಗೇ ಈ ಐದೂ ಮಂದಿ ಬರ್ಬೇಕು. ಉಳಿದಂತೆ ಹೆಂಗ್‌ ಮಾಡ್ತೀರೋ ನಿಮ್ಗೆ ಬಿಟ್ಟಿದ್ದು’ ಅಂದಿದ್ರು.

(ಸಂಪರ್ಕಕ್ಕೆ: 98441 83935)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT