ಹಿಪ್ಪುನೇರಳೆ: ಸಮಗ್ರ ಪೋಷಕಾಂಶಗಳ ನಿರ್ವಹಣೆ ಕ್ಷೇತ್ರೋತ್ಸವ

7

ಹಿಪ್ಪುನೇರಳೆ: ಸಮಗ್ರ ಪೋಷಕಾಂಶಗಳ ನಿರ್ವಹಣೆ ಕ್ಷೇತ್ರೋತ್ಸವ

Published:
Updated:
Deccan Herald

ರಾಮನಗರ: ತಾಲ್ಲೂಕಿನ ಅಚ್ಚಲು ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಿಪ್ಪುನೇರಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕೇಂದ್ರದ ವಿಜ್ಞಾನಿ ಪ್ರೀತು ಮಾತನಾಡಿ, ಹಿಪ್ಪುನೇರಳೆ ಬೆಳೆಯಲ್ಲಿ ಪ್ರತೀ ವರ್ಷ ಒಂದು ಮತ್ತು ಮೂರನೇ ಕಟಾವಾದ ನಂತರ ಸಾವಯವ ಗೊಬ್ಬರದ ಜೊತೆ ಜೈವಿಕ ಗೊಬ್ಬರಗಳಾದ ಅಜಿಟೋಬ್ಯಾಕ್ಟರ್, ರಂಜಕ ಕರಗಿಸುವ ಸೂಕ್ಷ್ಮಾಣು ಜೀವಿ (vam) ಬಳಸಬೇಕು. ಇದರಿಂದ ಸಸ್ಯಗಳಿಗೆ ವಾತಾವರಣದಿಂದ ಸಾರಜನಕವನ್ನು ಹೀರಿ ಒದಗಿಸಲು ಮತ್ತು ಸಸ್ಯಗಳಿಂದ ಹೀರಿಕೊಳ್ಳುವ ರೂಪದಲ್ಲಿ ರಂಜಕವನ್ನು ಪರಿವರ್ತಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಕೆಲವು ಉಪಯುಕ್ತ ಪದಾರ್ಥಗಳನ್ನು ಉತ್ಪಾದಿಸಿ ಸದೃಢ ಬೇರುಗಳ ಬೆಳವಣಿಗೆ ಮತ್ತು ಗುಣಮಟ್ಟದ ಎಲೆಗಳ ಬೆಳವಣಿಗೆಗೆ ಉತ್ತೇಜನಕಾರಿಯಾಗಿದೆ ಎಂದು ತಿಳಿಸಿದರು.

ರೇಷ್ಮೆ ಇಲಾಖೆಯ ಉಪನಿರ್ದೇಶಕ ಮಹೇಂದ್ರ ಕುಮಾರ್ ಮಾತನಾಡಿ ಹಿಪ್ಪುನೇರಳೆಯಲ್ಲಿ ನೂತನ ಬೇಸಾಯ ಪದ್ಧತಿಗಳು, ರೇಷ್ಮೆಹುಳು ಸಾಕಾಣಿಕೆ ಆಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದರು. ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸುಬ್ರಮಣ್ಯ ಮಾತನಾಡಿ, ಚಾಕಿ ರೇಷ್ಮೆಹುಳು ಸಾಕಾಣಿಕೆಯನ್ನು ಸ್ವಂತವಾಗಿ ತಾವೇ ಮಾಡಲು ಹಾಗೂ ನರ್ಸರಿಗಳನ್ನು ಮಾಡಲು ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ಸಿರಿಕೇರ್‌ ಸಿಬ್ಬಂದಿ ಗೋವಿಂದರಾಜು ಮಾತನಾಡಿ, ಸೋಂಕು ನಿವಾರಣೆಗೆ ಮತ್ತು ಹಿಪ್ಪುನೇರಳೆಗೆ ಅಗತ್ಯವಿರುವ ಲಘುಪೋಷಕಾಂಶಗಳ ಮಿಶ್ರಣದ ಬಗ್ಗೆ ಮತ್ತು ಉಪಯೋಗಿಸುವ ವಿಧಾನದ ಬಗ್ಗೆ ತಿಳಿಸಿದರು.

ಸಮತೋಲನ ಪೋಷಕಾಂಶ, ಜೈವಿಕ ಗೊಬ್ಬರ ಬಳಸಿ ಹಿಪ್ಪುನೇರಳೆ ಬೆಳೆದ ರೈತ ಆನಂದ್ ತಮ್ಮ ಅನುಭವವನ್ನು ಹಂಚಿಕೊಂಡರು. ರೇಷ್ಮೆ ಇಲಾಖೆಯ ಕ್ಷೇತ್ರ ಸಹಾಯಕ ತಿಮ್ಮೇಗೌಡ, ರೈತರಾದ ಶಿವಣ್ಣ, ಹೊನ್ನಯ್ಯ, ಮನು ಮತ್ತು ರೇಷ್ಮೆ ಬೆಳೆಗಾರರ ಸ್ವಸಹಾಯ ಸಂಘದ ಸದಸ್ಯರು ಪಾಲ್ಗೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !