ವೈದ್ಯರ ಮನೆಯಲ್ಲಿ ದರೋಡೆ: ಆರೋಪಿಗಳ ಬಂಧನ

7

ವೈದ್ಯರ ಮನೆಯಲ್ಲಿ ದರೋಡೆ: ಆರೋಪಿಗಳ ಬಂಧನ

Published:
Updated:
ಪತ್ರಿಕಾಗೋಷ್ಠಿಯಲ್ಲಿ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ. ರಮೇಶ್‌ ಮಾತನಾಡಿದರು

ರಾಮನಗರ: ಚನ್ನಪಟ್ಟಣದ ಮಕ್ಕಳ ತಜ್ಞ ಡಾ. ರಾಜಣ್ಣ ಅವರ ಕ್ಲಿನಿಕ್‌ ಹಾಗೂ ಮನೆಯಲ್ಲಿ ದರೋಡೆ ಮಾಡಿದ್ದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನ ಸಂಕಲಕೆರೆ ನಿವಾಸಿ ಕಿರಣ್‌ಕುಮಾರ್, ಬೆಂಗಳೂರಿನ ಚಿಕ್ಕಕಲ್ಲಸಂದ್ರ ನಿವಾಸಿ ಕಾರ್ತೀಕ್, ಮಂಡ್ಯ ಜಿಲ್ಲೆಯ ಕಣಿವೆಕೊಪ್ಪಲು ನಿವಾಸಿಗಳಾದ ಸುನಿಲ್, ರಾಕೇಶ್‌, ಸತೀಶ ಹಾಗೂ ಚಿನಕುರಳಿ ಗ್ರಾಮದ ವಿನಯ್‌ ಬಂಧಿತರು. ಈ ಪ್ರಕರಣದಲ್ಲಿ ಇನ್ನೂ ಮೂರ್ನಾಲ್ಕು ಆರೋಪಿಗಳು ಭಾಗಿಯಾಗಿರುವ ಸಾಧ್ಯತೆ ಇದ್ದು, ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ. ರಮೇಶ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹಿನ್ನೆಲೆ: ಕಳೆದ ಜೂನ್ 22ರಂದು ರಾತ್ರಿ 10.15ರ ಸಮಯದಲ್ಲಿ ಡಾ.ರಾಜಣ್ಣ ತಮ್ಮ ಮನೆಗೆ ಹೊಂದಿಕೊಂಡಂತೆ ಇರುವ ಕ್ಲಿನಿಕ್‌ನಲ್ಲಿ ಒಬ್ಬರೇ ಇದ್ದ ಸಂದರ್ಭ ಒಟ್ಟು ನಾಲ್ಕು ಮಂದಿ ಒಳ ಪ್ರವೇಶಿಸಿದ್ದು, ಮಚ್ಚಿನಿಂದ ವೈದ್ಯರ ತಲೆಗೆ ಹಲ್ಲೆ ನಡೆಸಿ ಹಣ ಕಸಿದಿದ್ದರು. ಬಳಿಕ ಅವರನ್ನು ಮನೆಯೊಳಗೆ ಕರೆದೊಯ್ದು ₨1.5 ಲಕ್ಷ ನಗದು ಹಾಗೂ ಎಲ್‌ಇಡಿ ಟಿ.ವಿ. ದೋಚಿ ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡ ಚನ್ನಪಟ್ಟಣ ಟೌನ್ ಪೊಲೀಸರು ಇದೇ 4ರಂದು ಕಿರಣ್‌ಕುಮಾರ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಆತ ನೀಡಿದ ಮಾಹಿತಿ ಮೇರೆಗೆ ಉಳಿದವರನ್ನು ಬಂಧಿಸಲಾಯಿತು. ಆರೋಪಿಗಳಿಂದ ₨30 ಸಾವಿರ ನಗದು, ಒಂದು ಮೊಬೈಲ್‌ ಹಾಗೂ ಕೃತ್ಯಕ್ಕೆ ಬಳಸಿದ ಮಚ್ಚು ವಶ ಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.

ಆರೋಪಿಗಳ ಪತ್ತೆಗೆ ಶ್ರಮಿಸಿದ ಡಿವೈಎಸ್ಪಿ ಆರ್. ಮಂಜುನಾಥ್ , ಸರ್ಕಲ್‌ ಇನ್‌ಸ್ಪೆಕ್ಟರ್‌ ಸತೀಶ್, ನಿಸ್ತಂತು ವಿಭಾಗದ ಇನ್‌ಸ್ಪೆಕ್ಟರ್‌ ಶಿವಶಂಕರ್, ಸಬ್ ಇನ್‌ಸ್ಪೆಕ್ಟರ್‌ಗಳಾದ ಚೈತನ್ಯ , ಹೇಮಂತ್ ಕುಮಾರ್, ಭಾಸ್ಕರ್, ಶಿವಕುಮಾರ್ ಹಾಗೂ ಸಿಬ್ಬಂದಿಯನ್ನು ಅವರು ಅಭಿನಂದಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !