ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆರೆ ಹಬ್ಬಕ್ಕೆ’ ಸಾಕ್ಷಿಯಾದ ಗ್ರಾಮಸ್ಥರು

ಬಂಗಾರಮ್ಮನ ಕೆರೆ ಹೂಳೆತ್ತಲು ಸಹಕರಿಸಿದವರಿಗೆ ಸನ್ಮಾನ
Last Updated 5 ಮೇ 2019, 15:09 IST
ಅಕ್ಷರ ಗಾತ್ರ

ಸಾಗರ: ಊರಿಗೊಂದು ವನ, ಊರಿಗೊಂದು ಕೆರೆ ಎಂಬುದು ಸಮೃದ್ಧತೆಯ ಸಂಕೇತವಾಗಿದೆ. ಕೆರೆಗಳಿಗೆ ಪುನಶ್ಚೇತನ ನೀಡುವುದರಿಂದ ಅದರಲ್ಲಿ ಭಾಗಿಯಾದವರ ಮನಸ್ಸು ತಿಳಿಯಾಗುತ್ತದೆ ಎಂದು ಕರ್ಣಾಟಕ ಬ್ಯಾಂಕ್‌ನ ಪ್ರಧಾನ ಕಚೇರಿಯ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಹೇಳಿದರು.

ತಾಲ್ಲೂಕಿನ ಚಿಪ್ಪಳಿ-ಲಿಂಗದಹಳ್ಳಿ ಗ್ರಾಮದಲ್ಲಿ ಸ್ವಾನ್ ಎಂಡು ಮ್ಯಾನ್, ತಾಲ್ಲೂಕು ಜೀವಜಲ ಕಾರ್ಯಪಡೆ, ಕರ್ಣಾಟಕ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಬಂಗಾರಮ್ಮನ ಕೆರೆಯ ಹೂಳೆತ್ತುವ ಕಾರ್ಯ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ‘ಕೆರೆ ಹಬ್ಬ’ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆಳದಿ ಅರಸರ ಕಾಲದಲ್ಲಿ ನಿರ್ಮಾಣವಾಗಿದ್ದ ಬಂಗಾರಮ್ಮನ ಕೆರೆಯಲ್ಲಿ ಹೂಳು ತುಂಬಿ ಇತಿಹಾಸ ಅದರಲ್ಲಿ ಮುಚ್ಚಿ ಹೋಗಿತ್ತು. ಸರ್ಕಾರದ ನೆರವಿಲ್ಲದೆ ಕೆರೆಯ ಹೂಳೆತ್ತುವ ಮೂಲಕ ಕೆಸರಿನಲ್ಲಿ ಹುದುಗಿದ್ದ ಇತಿಹಾಸವನ್ನು ಮರು ಸೃಷ್ಟಿಸುವ ಮೂಲಕ ಗ್ರಾಮಸ್ಥರು ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ ಎಂದು ಬಣ್ಣಿಸಿದರು.

ಬಂಗಾರಮ್ಮನ ಕೆರೆಯ ಹೂಳೆತ್ತುವ ಕೆಲಸದಲ್ಲಿ ರಾಜಕೀಯ ಉದ್ದೇಶವಿಲ್ಲ, ಸ್ಥಳೀಯರ ಸಹಭಾಗಿತ್ವವಿದೆ ಎಂಬುದನ್ನು ಖಚಿತಪಡಿಸಿಕೊಂಡೇ ಕರ್ಣಾಟಕ ಬ್ಯಾಂಕ್‌ನಿಂದ ಆರ್ಥಿಕ ನೆರವು ನೀಡಲಾಯಿತು. ಲಾಭ ಗಳಿಕೆಯ ಜೊತೆಗೆ ಸಾಮಾಜಿಕ ಕಳಕಳಿಯನ್ನೂ ಬ್ಯಾಂಕ್ ಹೊಂದಿದೆ ಎಂದು ತಿಳಿಸಿದರು.

‘ಬ್ಯಾಂಕ್‌ಗಳಲ್ಲಿ ಅಧಿಕಾರಿಗಳಾಗಿ, ನೌಕರರಾಗಿ ಕೆಲಸ ಮಾಡುತ್ತಿರುವ ಹೆಚ್ಚಿನವರು ಗ್ರಾಮೀಣ ಹಿನ್ನೆಲೆಯವರಾಗಿದ್ದಾರೆ. ಅವರು ಹಿಂದೆ ವಾಸವಾಗಿದ್ದ ಗ್ರಾಮದ ಸ್ಥಿತಿ ಈಗ ಹೇಗಿದೆ, ಅಲ್ಲಿ ಯಾವ ಅಭಿವೃದ್ಧಿ ಕೆಲಸ ಆಗಬೇಕಿದೆ ಎಂಬುದನ್ನು ತಿಳಿದು ಸಹಾಯ ಮಾಡಬಹುದಾದ ಮಾರ್ಗಗಳ ಕುರಿತು ಯೋಚಿಸಬೇಕಿದೆ’ ಎಂದು ಕಿವಿಮಾತು ಹೇಳಿದರು.

ಯಾವುದೇ ಮನೆಯಲ್ಲಿ ವಿದ್ಯಾರ್ಥಿ ಇದ್ದು ಮನೆಗೆ ವಿದ್ಯುತ್ ಸಂಪರ್ಕ ಇಲ್ಲದಿದ್ದರೆ ಸೌರಶಕ್ತಿ ನೆರವಿನಿಂದ ಅಂತಹ ಮನೆಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ಕರ್ನಾಟಕ ಬ್ಯಾಂಕ್ ರೂಪಿಸಿದೆ. ಈಗಾಗಲೇ 350 ಮನೆಗಳಿಗೆ ಈ ಸೌಲಭ್ಯ ಕೊಟ್ಟಿದ್ದು, ಶಿವಮೊಗ್ಗ ಜಿಲ್ಲೆಯವರು ಇದರ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.

‘ಕೆರೆ ಕಟ್ಟೆ, ಝರಿ, ಕಾಲುವೆ, ನದಿ, ತೊರೆ, ಜಲಾಶಯಗಳನ್ನು ಗೌರವದಿಂದ ಕಾಣುವುದು ನಮ್ಮ ಸಂಸ್ಕೃತಿಯಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸಂಸ್ಕೃತಿ ಮರೆಯಾಗುತ್ತಿದೆ. ನಲ್ಲಿ ಎಂಬ ‘ಬ್ರಹ್ಮ ರಾಕ್ಷಸ’ ಮನೆಗಳಿಗೆ ಪ್ರವೇಶಿಸಿದ ನಂತರ ನೀರಿನ ಬೆಲೆ ತಿಳಿಯದಂತಾಗಿದೆ’ ಎಂದುಸಾಹಿತಿ ನಾ.ಡಿಸೋಜ ವಿಷಾದಿಸಿದರು.

ಮಲೆನಾಡಿನ ಈ ಪ್ರದೇಶದಲ್ಲಿ 30 ಸಾವಿರ ಕೆರೆಗಳಿತ್ತು ಎನ್ನಲಾಗಿದೆ. ಬಂಗಾರಮ್ಮನ ಕೆರೆ ಹೂಳೆತ್ತುವಾಗ 328ನೇ ಕೆರೆ ಎಂಬ ಶಾಸನ ಸಿಕ್ಕಿದೆ. ಬ್ರಿಟಿಷರ ಕಾಲದಲ್ಲಿ ಕೆರೆಗಳಿಗೆ ಸಂಖ್ಯೆ ನೀಡಿ ಅವುಗಳನ್ನು ರಕ್ಷಿಸಲಾಗುತ್ತಿತ್ತು. ನಮ್ಮದೇ ಸರ್ಕಾರ ಇರುವಾಗ ಈ ಬಗ್ಗೆ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಾನ್ ಎಂಡ್ ಮ್ಯಾನ್ ಸಂಸ್ಥೆಯ ಅಖಿಲೇಶ್ ಚಿಪ್ಪಳಿ, ‘2017ರಲ್ಲಿ ಬಂಗಾರಮ್ಮನ ಕೆರೆಯ ಹೂಳೆತ್ತುವ ಕೆಲಸ ಆರಂಭವಾಯಿತು. 2018ರ ಹೊತ್ತಿಗೆ ಈ ಕೆಲಸ ನಂಬಿದರೆ ಆಗದು ಎಂಬ ಖಿನ್ನತೆ ಮೂಡಿತ್ತು. ಕರ್ನಾಟಕ ಬ್ಯಾಂಕ್ ಆಗ ನೆರವು ನೀಡಿದ ಕಾರಣ 2019ರಲ್ಲಿ ಹೂಳೆತ್ತುವ ಕೆಲಸ ಯಶಸ್ವಿಯಾಗಿ ಮುಗಿದಿದೆ’ ಎಂದರು.

ಬಂಗಾರಮ್ಮನ ಕೆರೆ ಸಾಗರ ನಗರದ ಹೃದಯ ಭಾಗದಲ್ಲಿರುವ ಗಣಪತಿ ಕೆರೆಯ ಸರಪಳಿ ಕೆರೆಯಾಗಿದೆ. ಬಂಗಾರಮ್ಮನ ಕೆರೆ ಜೊತೆಗೆ ಉಳಿದ ಆರು ಕೆರೆಗಳ ಹೂಳೆತ್ತಿದರೆ ಗಣಪತಿ ಕೆರೆಗೆ ಜೀವಕಳೆ ಬರುತ್ತದೆ ಎಂದು ತಿಳಿಸಿದರು.

ಗಣಪತಿ ಕೆರೆ ಹಾಗೂ ಅದರ ಸರಪಳಿ ಕೆರೆಗಳಿಗೆ 21.8 ಕೋಟಿ ಲೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ. ಇದರ ಸದುಪಯೋಗ ಮಾಡಿಕೊಳ್ಳುವ ಬದಲು ಶರಾವತಿ ಹಿನ್ನೀರಿನಿಂದ ಸಾಗರ ನಗರಕ್ಕೆ ನೀರು ತರುವಂತಹ ಕೃತಕ ಮಾರ್ಗವನ್ನು ಅನುಸರಿಸಲಾಗಿದೆ. ಹೀಗೆ ಹಿನ್ನೀರಿನಿಂದ ನೀರು ತರಲು ಪ್ರತಿ ತಿಂಗಳು ವಿದ್ಯುತ್ ಇಲಾಖೆಗೆ ₹9 ಲಕ್ಷ ಬಿಲ್ ಪಾವತಿಸಬೇಕಾಗಿದೆ. ಇದನ್ನು ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಕೆರೆಯ ಹೂಳೆತ್ತಲು ಸಹಕಾರ ನೀಡಿದ ಸುರೇಶ್ ಗೌಡ, ಸುರೇಶ್ ಮಡಿವಾಳ, ಹಿಟಾಚಿ ರಮೇಶ್, ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಸ್ವಾನ್ ಆ್ಯಂಡ್ ಮ್ಯಾನ್ ಸಂಸ್ಥೆಯ ಟಿ.ವಿ. ಪಾಂಡುರಂಗ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಬ್ಯಾಂಕ್‌ನ ಅಧಿಕಾರಿ ರಾಜ್ ಕುಮಾರ್, ಗ್ರಾಮದ ಹಿರಿಯರಾದ ರಾಮಪ್ಪ ಎಲ್.ಎಚ್. ಹಾಜರಿದ್ದರು.

ಸ್ಫೂರ್ತಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಆಯಿಷಾ ಬಾನು ಸ್ವಾಗತಿಸಿದರು. ಗುರುನಂದನ ಹೊಸೂರು ವಂದಿಸಿದರು. ಅಕ್ಷರ ಎಲ್.ವಿ. ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT