ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು, ಮದ್ಯಪಾನ ಸೇವನೆ: ಕಿರಿಯ ವಯಸ್ಸಿನವರ ಸಾವು ಹೆಚ್ಚು

ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ
Last Updated 31 ಮೇ 2019, 15:27 IST
ಅಕ್ಷರ ಗಾತ್ರ

ವಿಜಯಪುರ: ‘ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು, ಮದ್ಯಪಾನಸೇವನೆ ಮತ್ತು ಮಾರಾಟ ಮಾಡುವುದು ಕಾನೂನಿನ ಪ್ರಕಾರ ಶಿಕ್ಷರ್ಹವಾಗಿದ್ದು, ಇಂತಹ ಕೃತ್ಯಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿಅಧಿಕಾರಿಗಳು ಕ್ರಮ ಕೈಗೊಳ್ಳಬಹುದು’ ಎಂದು ನ್ಯಾಯಾಧೀಶ ರವೀಂದ್ರ ಕಾರಬಾರಿ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದೀಪಕ್ ಮೆಡಿಕಲ್, ಜೈನ್‌ ರತ್ನ ಯುವಕ ಪರಿಷತ್ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ‘ಕಾನೂನು ಅರಿವು ನೆರವು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತ ಸರ್ಕಾರ ಕಾಯ್ದೆಯ ಪ್ರಕಾರ ಶಾಲೆಯಿಂದ ಅಥವಾ ಇನ್ನಿತರ ಸಾರ್ವಜನಿಕ ಸ್ಥಳಗಳಾದ ಬಸ್‌ ನಿಲ್ದಾಣ, ರೈಲ್ವೆ ಸ್ಟೇಷನ್, ಸಾರ್ವಜನಿಕ ಆಸ್ಪತ್ರೆ ಇತರೆಡೆ 500 ಮೀಟರ್ ಅಂತರದಲ್ಲಿ ಯಾವುದೇ ತರಹದ ತಂಬಾಕು ಸೇವನೆ ಮತ್ತು ಮಾರಾಟ ಮಾಡುವಂತಿಲ್ಲ. ಈ ಪ್ರದೇಶಗಳ ವ್ಯಾಪ್ತಿಯಲ್ಲಿ ಮಾಡಿದರೆ ಕಾನೂನಿನ ಉಲ್ಲಂಘನೆ ಆಗಲಿದೆ’ ಎಂದು ಹೇಳಿದರು.

‘ಪ್ರಸ್ತುತ ಪುರುಷರಲ್ಲದೆ ಮಹಿಳೆಯರು ಕೂಡ ತಂಬಾಕು ಸೇವನೆ ಮಾಡುತ್ತಿದ್ದು, ಕ್ಯಾನ್ಸರ್ ಇನ್ನಿತರ ರೋಗಗಳಿಗೆ ಇಳಿವಯಸ್ಸಿನಲ್ಲೆ ತುತ್ತಾಗುತ್ತಿದ್ದಾರೆ. ಯುವ ಸಮುದಾಯವು ಈ ಕೆಟ್ಟ ಚಟಗಳಿಂದ ಹೊರ ಬಂದು ತಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವ ಜತೆಗೆ ಪರಿಸರ ಹಾನಿ ತಡೆಯಲು ಸ್ವಯಂ ಪ್ರೇರಿತವಾಗಿ ಜಾಗೃತಿ ಮೂಡಿಸಬೇಕು’ ಕಿವಿಮಾತು ಹೇಳಿದರು.

ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಲ್ಲನಗೌಡ ಬಿರಾದಾರ, ‘ಸಮೀಕ್ಷೆಗಳ ಪ್ರಕಾರ ತಂಬಾಕು ಮತ್ತು ಮದ್ಯಪಾನ ಸೇವನೆಗೆ ಹೆಚ್ಚು ಬಲಿಯಾಗುವುದು ಕಿರಿಯ ವಯಸ್ಸಿನವರಾಗಿದ್ದಾರೆ. ಮೆಟ್ರೋ ಸಿಟಿ ಹಾಗೂ ನಗರ ಪ್ರದೇಶಗಳಲ್ಲಿ ಯುವಕರಲ್ಲದೇ, ಯುವತಿಯರು ಕೂಡ ತಂಬಾಕು ವ್ಯಸನಿಗಳಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಇಲಾಖೆಯಿಂದ ಅನೇಕ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಬಿ.ಎಲ್.ಡಿ.ಇ ವೈದ್ಯಕೀಯ ವಿದ್ಯಾಲಯದ ಪ್ರೊ.ಡಾ.ವಿಕಾಸ್ ದೇಸಾಯಿ, ತಂಬಾಕು ಸೇವನೆಯಿಂದ ಉಂಟಾಗಬಹುದಾದ ದುಷ್ಪರಿಣಾಮದ ಕುರಿತು ಉಪನ್ಯಾಸ ನೀಡಿದರು. ಇದಕ್ಕೂ ಮೊದಲು ಸಿದ್ಧೇಶ್ವರ ದೇವಸ್ಥಾನದಿಂದ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಕಾರ್ಯಲಯದವರೆಗೆ ಜಾಗೃತಿ ಜಾಥಾ ನಡೆಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಮಹೇಂದ್ರ ಕಾಪಸೆ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶರಣಪ್ಪ ಕಟ್ಟಿಮನಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಎಚ್.ಖಾಸನೀಸ, ಡಾ.ಸಂಪತ್ ಗುಣಾರಿ, ಸುರೇಶ್ ಹೊಸಮನಿ, ಡಾ.ಐ,ಎಸ್.ಧಾರವಾಡಕರ, ಡಾ.ಪ್ರಕಾಶ್ ಚವ್ಹಾಣ, ವಿಜಯಕುಮಾರ, ಶ್ರೀಕಾಂತ ಪೂಜಾರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT