ಸೋಮವಾರ, ಮಾರ್ಚ್ 8, 2021
27 °C
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಮೇಳ ಆಯೋಜನೆ

ಬೃಹತ್ ಮೇಳ: ಯುವಜನರ ಉದ್ಯೋಗ ಕನಸು ನನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ರಾಮನಗರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶನಿವಾರ ಯುವಜನರ ದಂಡು ನೆರೆದಿತ್ತು. ಉತ್ತಮ ಭವಿಷ್ಯದ ಕನಸು ಹೊತ್ತು ಬಂದಿದ್ದ ಯುವಕ–ಯುವತಿಯರು ಅವಕಾಶ ಗಿಟ್ಟಿಸಿಕೊಂಡರು.

ಜಿಲ್ಲಾಡಳಿತದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಈ ಬೃಹತ್ ಉದ್ಯೋಗ ಮೇಳದಲ್ಲಿ ರಾಮನಗರದ ಜೊತೆಗೆ ನೆರೆ–ಹೊರೆಯ ಜಿಲ್ಲೆಗಳ ಉದ್ಯೋಗ ಆಕಾಂಕ್ಷಿಗಳು ಪಾಲ್ಗೊಂಡರು. ಎಸ್‌ಎಸ್‌ಎಲ್‌ಸಿ ಪಾಸಾದವರು, ಪದವೀಧರರು, ಡಿಪ್ಲೊಮಾ, ಐಟಿಐ ತರಬೇತಿ ಪಡೆದವರು, ಎಂಜಿನಿಯರಿಂಗ್ ಪದವೀಧರರು... ಹೀಗೆ ವಿವಿಧ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಕಂಪನಿಗಳು ಸಂದರ್ಶನ ನಡೆಸಿದವು.

ಬ್ಯಾಂಕಿಂಗ್‌ ಹಾಗೂ ಮಾರ್ಕೆಟಿಂಗ್ ಕ್ಷೇತ್ರದಲ್ಲಿನ ಕಂಪನಿಗಳು ಹೆಚ್ಚಿದ್ದು, ಅವು ಪದವೀಧರರ ಆಯ್ಕೆಗೆ ಒತ್ತು ನೀಡಿದವು. ಕೈಗಾರಿಕೆ ಆಧಾರಿತ ಕೆಲವು ಕಂಪನಿಗಳ ಪ್ರತಿನಿಧಿಗಳು ಕನಿಷ್ಠ ಶಿಕ್ಷಣ ಪಡೆದ ಅಭ್ಯರ್ಥಿಗಳಿಗೂ ಆದ್ಯತೆ ನೀಡಿದರು.

ಇನ್‍ಫೋಸಿಸ್, ಸಿಎಂಎಸ್ ಐಟಿ ಸರ್ವೀಸ್, ಆರ್ಐಐಟಿ, ಎಚ್‌ಜಿಎಸ್ಎಲ್, ಇಂಡಿಯಾ ಆಟೋಪಾರ್ಟ್ಸ್‌, ಬಿಎಸ್ಎಲ್ ಇಂಡೈ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ, ನವಭಾರತ್ ಫರ್ಟಿಲೈಸರ್ಸ್‌, ಯುರೇಕಾ ಫೋರ್ಬ್ಸ್‌, ಫ್ರೆಶ್‌ ವರ್ಲ್ಡ್‌, ಹಿಮಟ್ಸಿಂಗ್‌ ಲೈನ್ಸ್‌, ಮುತ್ತೂಟ್ ಫೈನಾನ್ಸ್‌, ಶಿಶಾಂಗ್‌ ಟೆಕ್ನಾಲಜಿಸ್‌, ಟ್ರಂಟ್‌ ಹೈಪರ್ ಮಾರ್ಕೆಟ್, ಸಿಜಿ ಲೈಫ್‌ಸ್ಟೈಲ್‌, ಹ್ಯಾಂಡ್‌ಮೇಡ್ ಫ್ಯಾಕ್ಟರಿ, ಕೆಎಫ್‌ಸಿ, ರಿಲಾನ್ಸ್ ಜುವೆಲ್ಸ್, ಕ್ಯಾಲಿಬರ್‌, ಬುಜ್‌ ವರ್ಕ್ಸ್‌, ಬರ್ಗರ್ ಕಿಂಗ್, ನಾವೆಲ್ ಗ್ರೂಪ್‌, ಟಿಕೊನಾ, ಎಜುಬ್ರಿಜ್‌ ಇಂಡಿಯಾ, ಎಲ್‌ ಅಂಡ್‌ ಟಿ ಸೇರಿದಂತೆ ವಿವಿಧ ಕಂಪನಿಗಳು ಅಭ್ಯರ್ಥಿಗಳ ಸಂದರ್ಶನ ನಡೆಸಿದವು.

ಮೇಳದಲ್ಲಿ ನಾಲ್ಕು ವಿಭಾಗ ಮಾಡಲಾಗಿದ್ದು, ಮೊದಲೆರಡು ವಿಭಾಗಳಲ್ಲಿನ ಕಂಪನಿಗಳು ಪದವೀಧರರ ಸಂದರ್ಶನ ನಡೆಸಿದವು. ಕಡೆಯ ಎರಡು ವಿಭಾಗಳಲ್ಲಿ ಐಟಿಐ, ಎಸ್‌ಎಸ್‌ಎಲ್‌ಸಿ ಮೊದಲಾದ ಶೈಕ್ಷಣಿಕ ಅರ್ಹತೆಯುಳ್ಳ ಅಭ್ಯರ್ಥಿಗಳ ಸಂದರ್ಶನ ನಡೆಯಿತು.

ಮೇಳಕ್ಕೆ ಯುವತಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಪುರುಷ ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ನೋಂದಣಿ ವ್ಯವಸ್ಥೆ ಮಾಡಲಾಗಿತ್ತು. ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಜಿಲ್ಲಾಡಳಿತವು ಕಲ್ಪಿಸಿತ್ತು. ಉದ್ಯೋಗ ಆಕಾಂಕ್ಷಿಗಳ ಜೊತೆಗೆ ಅವರ ಪೋಷಕರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.

ಸರ್ಕಾರಿ ಇಲಾಖೆಗಳೂ ಭಾಗಿ: ಜಿಲ್ಲಾ ಪಂಚಾಯಿತಿ ಸೇರಿದಂತೆ ಸರ್ಕಾರದ ಕೆಲವು ಇಲಾಖೆಗಳೂ ಮೇಳದಲ್ಲಿ ಭಾಗಿಯಾಗಿ ಗಮನ ಸೆಳೆದವು. ಅಂಗವಿಕಲರಿಗಾಗಿಯೇ ಕೆಲವು ಸಂಸ್ಥೆಗಳು ಸಂದರ್ಶನ ನಡೆಸಿದವು. ಮೈಕ್‌ ಮೂಲಕ ಆಗಾಗ್ಗೆ ಉದ್ಯೋಗ ಆಕಾಂಕ್ಷಿಗಳಿಗೆ ಸಂದರ್ಶನ ಎದುರಿಸುವ ಬಗೆಯನ್ನೂ ವಿವರಿಸಲಾಯಿತು.

ಭೇಟಿ: ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಪ್ರಭು. ವಿಶೇಷಾಧಿಕಾರಿ ಕೃಷ್ಣಪ್ಪ, ಜಿಲ್ಲಾಧಿಕಾರಿ ಕೆ. ರಾಜೇಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಉಪ ವಿಭಾಗಾಧಿಕಾರಿ ಕೃಷ್ಣಮೂರ್ತಿ, ತಹಶೀಲ್ದಾರ್‌ ಮಾರುತಿ ಪ್ರಸನ್ನ ಇದ್ದರು.
 

ಅಭಿಪ್ರಾಯಗಳು

* ಉದ್ಯೋಗ ಆಕಾಂಕ್ಷಿಗಳ ಅಗತ್ಯ ಅರಿತು ಸರ್ಕಾರವೇ ಮೇಳ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಇಲ್ಲಿನ ವ್ಯವಸ್ಥೆಗಳು ತೃಪ್ತಿ ತಂದಿದೆ
–ಅಭಿಲಾಷಾ, ಪದವೀಧರೆ

* ಒಂದೆರಡು ಕಂಪನಿಗಳು ಅಂಗವಿಕಲರಿಗೂ ಅವಕಾಶ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚು ಇರುವ ಕಾರಣ ಸಹಜವಾಗಿಯೇ ಕೆಲವು ಗೊಂದಲಗಳು ಉಂಟಾದವು. ಇನ್ನಷ್ಟು ಕಂಪನಿಗಳು ಇರಬೇಕಿತ್ತು
-ತೃಪ್ತಿ, ರಾಮನಗರ

* ವಾಣಿಜ್ಯ ಪದವಿ ಪೂರೈಸಿದ್ದು, ಉತ್ತಮ ಸಂಬಳ ನೀಡುವ ಕಂಪನಿಯ ಹುಡುಕಾಟದಲ್ಲಿ ಇದ್ದೇನೆ. ಒಂದೆರಡು ಸಂದರ್ಶನದಲ್ಲಿ ಪಾಲ್ಗೊಂಡಿದ್ದು, ಯಾರಿಂದಲೂ ಭರವಸೆ ದೊರೆತಿಲ್ಲ
–ಕಿರಣ್‌, ಪದವೀಧರ

* ಬಿ.ಕಾಂ. ಪದವಿ ಪಡೆದಿದ್ದು, ಉತ್ತಮ ನೌಕರಿ ಸಿಗುವ ಭರವಸೆಯೊಂದಿಗೆ ಮೇಳದಲ್ಲಿ ಪಾಲ್ಗೊಂಡಿದ್ದೇನೆ. ಜನಸಂದಣಿ ಹೆಚ್ಚಿರುವ ಕಾರಣ ಕೆಲವೇ ಸಂದರ್ಶನಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು
-ಶ್ವೇತಾ, ಪದವೀಧರೆ

* 3012 ಉದ್ಯೋಗ ಮೇಳದಲ್ಲಿ ನೋಂದಾಯಿಸಿಕೊಂಡ ಅಭ್ಯರ್ಥಿಗಳು

* 692 ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ವಿತರಣೆ

* 1257 ಅಭ್ಯರ್ಥಿಗಳು ಅಂತಿಮ ಹಂತದ ಸಂದರ್ಶನಕ್ಕೆ ಆಯ್ಕೆ

* 62 ಮೇಳದಲ್ಲಿ ಪಾಲ್ಗೊಂಡ ಕಂಪನಿಗಳು

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು