ಶುಕ್ರವಾರ, ಡಿಸೆಂಬರ್ 6, 2019
19 °C

7ನೇ ತರಗತಿ ಪಬ್ಲಿಕ್ ಪರೀಕ್ಷೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಲಮಟ್ಟಿ (ವಿಜಯಪುರ ಜಿಲ್ಲೆ): ‘ಏಳನೇ ವರ್ಗದ ವಿದಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆ ನಡೆಸುವ ನಿರ್ಧಾರವು ಶಿಕ್ಷಕ– ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿದೆ. ಇದಕ್ಕೆ ಸಂಘದ ವಿರೋಧವಿದ್ದು, ಈ ವರ್ಷದ ಮಟ್ಟಿಗೆ ಇದನ್ನು ಮುಂದೂಡಬೇಕು’ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ವಿ.ಎಂ. ನಾರಾಯಣಸ್ವಾಮಿ ಆಗ್ರಹಿಸಿದರು.

ಆಲಮಟ್ಟಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಶಿಕ್ಷಕರ ಸಂಘದ ಜತೆ ಚರ್ಚಿಸಿ ಈ ಬಗ್ಗೆ ಸರ್ಕಾರ ನಿರ್ಣಯ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಶಿಕ್ಷಕರ ವರ್ಗಾವಣೆ ಪೂರ್ಣಗೊಂಡಿದೆ. ಆದರೆ ವರ್ಗಾವಣೆಯಲ್ಲಿನ ಅವೈಜ್ಞಾನಿಕ ನಿಯಮಗಳಿಂದ ನಿಜವಾಗಿ ಯಾರಿಗೆ ವರ್ಗಾವಣೆ ಬೇಕಿತ್ತೋ, ಅವರಿಗೆ ವರ್ಗಾವಣೆ ಭಾಗ್ಯ ದೊರೆತಿಲ್ಲ’ ಎಂದರು.

‘ವಿಶೇಷವಾಗಿ ಹೈದರಾಬಾದ್‌ ಕರ್ನಾಟಕ ಭಾಗದ ಶಿಕ್ಷಕರಿಗೆ 10 ವರ್ಷಗಳ ಕಾಲ ವರ್ಗಾವಣೆ ಇಲ್ಲ ಹಾಗೂ ಶೇ20 ಖಾಲಿ ಹುದ್ದೆಯಿರುವ ತಾಲ್ಲೂಕುಗಳ ಶಿಕ್ಷಕರಿಗೆ ವರ್ಗಾವಣೆ ಇಲ್ಲ ಎಂಬ ನಿಯಮದಿಂದಾಗಿ ಈ ಬಾರಿ ವರ್ಗಾವಣೆ ಭಾಗ್ಯ ದೊರೆತಿಲ್ಲ. ವರ್ಗಾವಣೆಯಲ್ಲಿನ ಲೋಪದೋಷಗಳನ್ನು ತಿದ್ದುಪಡಿ ಮಾಡಬೇಕು. ಇರುವ ಷರತ್ತುಗಳನ್ನು ರದ್ದುಗೊಳಿಸಿ ಇದೇ ಮಾರ್ಚ್‌ನಲ್ಲಿ ಮತ್ತೊಮ್ಮೆ ವರ್ಗಾವಣೆ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆ ಹೆಚ್ಚಿದೆ. ಈ ಸಮಸ್ಯೆ ಪರಿಹರಿಸುವುದಾಗಿ ಮುಖ್ಯಮಂತ್ರಿ ಅವರು ಭರವಸೆ ನೀಡಿದ್ದರು. ಆದರೆ  ಈವರೆಗೂ ‌ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿ ಸಮಸ್ಯೆ ನಿವಾರಣೆಯಾಗಿಲ್ಲ. ಈಗಿರುವ ಶೇ 25 ರಷ್ಟು ಬಡ್ತಿ ಮೀಸಲಾತಿಯನ್ನು ಹೆಚ್ಚಿಸಬೇಕೆಂಬ ಬೇಡಿಕೆ, ಬಡ್ತಿಗೆ ನಡೆಸುವ ಪರೀಕ್ಷೆ ತೆಗೆಯಬೇಕೆಂಬ ವೃಂದ ಮತ್ತು ನೇಮಕಾತಿಗಳ ತಿದ್ದುಪಡಿಯಾಗಿಲ್ಲ. ಈ ಸಂಬಂಧ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು. ಬೇಡಿಕೆ ಈಡೇರದಿದ್ದರೆ, ರಾಜ್ಯಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ. ಗೌಡರ, ವಿ.ಕೆ.ಮಸೂತಿ, ಎಂ.ಬಿ. ರಕರೆಡ್ಡಿ, ಆರ್.ಬಿ. ಗೌಡರ, ಎಚ್.ಎಚ್. ದೊಡಮನಿ, ಆರ್.ಎ. ನದಾಫ, ಸಲೀಂ ದಡೆದ, ಎಂ.ಎಂ. ಮುಲ್ಲಾ ಇದ್ದರು.

ಪ್ರತಿಕ್ರಿಯಿಸಿ (+)