ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಸೇವೆಗಾಗಿ ರಾಜಕೀಯ ಪ್ರವೇಶ

ನೆನಪಿನ ಬುತ್ತಿ ಬಿಚ್ಚಿಟ್ಟ ಶಾಸಕ ಎಚ್‌.ಡಿ.ರೇವಣ್ಣ
Last Updated 31 ಮಾರ್ಚ್ 2018, 9:59 IST
ಅಕ್ಷರ ಗಾತ್ರ

ಹೊಳೆನರಸೀಪುರ: ‘ತಂದೆ ಎಚ್‌.ಡಿ.ದೇವೇಗೌಡರು ಸಚಿವರಾಗಿದ್ದಾಗ ಜನರು ಸಮಸ್ಯೆ ಹೇಳಿಕೊಂಡು ಬರುತ್ತಿದ್ದರು. ಆಗಲೇ ಬಡಜನರ ಸೇವೆ ಮಾಡಲು ನಿರ್ಧರಿಸಿ ರಾಜಕೀಯ ಪ್ರವೇಶ ಮಾಡಿದೆ..’ಹಳೆಯ ನೆನಪುಗಳೊಂದಿಗೆ ಮಾತಿಗಿಳಿದರು ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್‌.ಡಿ.ರೇವಣ್ಣ. ದೇವೇಗೌಡ ಅವರು ಪ್ರತಿನಿಧಿಸುತ್ತಿದ್ದರು ಎಂಬ ಕಾರಣಕ್ಕೆ ಈ ಕ್ಷೇತ್ರ ಗಮನ ಸೆಳೆದಿತ್ತು.ಚಿಕ್ಕ ವಯಸ್ಸಿನಲ್ಲಿಯೇ ಶಾಸನಸಭೆ ಪ್ರವೇಶಿಸಿದ ಇವರಿಗೆ ಮುಂಬರುವ ವಿಧಾನಸಭೆ 6ನೇ ಚುನಾವಣೆಯಾಗಿದೆ. ಸುದೀರ್ಘವಾದ ತಮ್ಮ ರಾಜಕೀಯ ಪಯಣದಲ್ಲಿ ಸೋಲು, ಗೆಲುವು ಕಂಡಿದ್ದಾರೆ. ಇದೀಗ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

‘ತುರ್ತು ಪರಿಸ್ಥಿತಿ ವೇಳೆ ತಂದೆ ಜೈಲಿಗೆ ಹೋದರು. ಬೆಂಗಳೂರಿನಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಅರ್ಧಕ್ಕೆ ಮೊಟಕುಗೊಳಿಸಿ ಊರಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡೆ. ಪಡುವಲಹಿಪ್ಪೆಯಲ್ಲಿ 12 ಎಕರೆ ಜಮೀನನಲ್ಲಿ ಕಬ್ಬು ಬೆಳೆಯಲು ಆರಂಭಿಸಿದೆ. 600–700 ಟನ್‌ ಕಬ್ಬು ಬೆಳೆದು ಬೇಲೂರು, ಪಾಂಡವಪುರ, ಚುಂಚನಕಟ್ಟೆ ಸಕ್ಕರೆ ಕಾರ್ಖಾನೆಗಳಿಗೆ ಪೂರೈಸಿದೆ. 1980ರಲ್ಲಿ ದೊಡ್ಡಹಳ್ಳಿ ಗೋಲಿಬಾರ್‌ ನಡೆಯಿತು. ಆಗ ಹತ್ತು ಸಾವಿರ ಜನರೊಂದಿಗೆ ಹಾಸನದಲ್ಲಿ ಧರಣಿ ನಡೆಸಿದೆ’ ಎಂದು ಅವರು ನೆನಪಿಸಿಕೊಂಡರು.

‘1985ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾದೆ. ಅದಕ್ಕೂ ಮುನ್ನ ಪಡುವಲಹಿಪ್ಪೆ ಹಾಲಿನ ಡೇರಿ ಅಧ್ಯಕ್ಷನಾದೆ. 1994ರಲ್ಲಿ ಹಾಸನ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಹಾಮೂಲ್‌) ಅಧ್ಯಕ್ಷನಾಗಿ ಆಯ್ಕೆಯಾದೆ. ಸತತ 24 ವರ್ಷ ಅವಿರೋಧವಾಗಿ ಆಯ್ಕೆಯಾಗುತ್ತಾ ಬಂದಿದ್ದೇನೆ. ರಾಜಕೀಯದಲ್ಲಿ ಅಷ್ಟು ಆಸಕ್ತಿ ಇರಲಿಲ್ಲ. ಜನರ ಕಷ್ಟ ನೋಡಿ ಮನಸ್ಸು ಬದಲಾಯಿತು’ ಎಂದು ಹೇಳಿದರು.

‘1994ರಲ್ಲಿ ಪುಟ್ಟಸ್ವಾಮಿ ಗೌಡರ ವಿರುದ್ಧ ಸ್ಪರ್ಧಿಸಲು ಯಾರೂ ಆಸಕ್ತಿ ತೋರಲಿಲ್ಲ. ಜನರ ಒತ್ತಾಯಕ್ಕೆ ಮಣಿದು ಅನಿವಾರ್ಯವಾಗಿ ಸ್ಪರ್ಧಿಸಬೇಕಾಯಿತು. 1996ರಲ್ಲಿ ಗೌಡರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರಧಾನಿ ಹುದ್ದೆ ಅಲಂಕರಿಸಿದರು. ಆಗ ಪಟೇಲ್‌ ಸಂಪುಟದಲ್ಲಿ ನನಗೆ ಮೊದಲ ಬಾರಿಗೆ ವಸತಿ ಖಾತೆ ನೀಡಲಾಯಿತು’ ಎಂದು ವಿವರಿಸಿದರು.

‘ತಂದೆ ವಿರೋಧ ಪಕ್ಷದ ನಾಯಕರಾ ಗಿದ್ದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕಲಾಪ ವೀಕ್ಷಿಸುತ್ತಿದ್ದೆ. ಅವರು ಯಾವುದೇ ವಿಷಯ ಇದ್ದರೂ ಸುದೀರ್ಘವಾಗಿ ದಾಖಲೆಗಳೊಂದಿಗೆ ಮಾತನಾಡುತ್ತಿದ್ದರು. ಮುಖ್ಯಮಂತ್ರಿ ಯಾಗಿದ್ದ ದೇವರಾಜು ಅರಸು, ‘ಗೌಡ್ರೆ ಇಂದು ಯಾವ ವಿಷಯ ತೆಗೆದುಕೊಂಡು ಬಂದಿದ್ದೀರಾ’ ಎಂದು ಕೇಳುತ್ತಿದ್ದರು. ಆ ಘಟನೆ ಮರೆಯಲು ಆಗುವುದಿಲ್ಲ’ ಎಂದು ವಿಧಾನಸಭೆ ಪ್ರವೇಶಿಸಿದ ಘಟನೆಯನ್ನು ಮೆಲುಕು ಹಾಕಿದರು.

ಹ್ಯಾಟ್ರಿಕ್‌ ಗೆಲುವು...

ರೇವಣ್ಣ ಅವರ ತಂದೆ ಎಚ್‌.ಡಿ.ದೇವೇಗೌಡರು 1962ರಿಂದ 1985ರವರೆಗೆ ಸತತ ಆರು ಬಾರಿ ಹೊಳೆನರಸೀಪುರ ಕ್ಷೇತ್ರದಿಂದ ಆರಿಸಿ ಬಂದಿದ್ದರು. 1989ರ ಚುನಾವಣೆಯಲ್ಲಿ ಅವರು ಪರಾಭವಗೊಂಡಿದ್ದರು. 1994ರಲ್ಲಿ ರಾಮನಗರದಿಂದ ದೇವೇಗೌಡ ಅವರು ಸ್ಪರ್ಧೆ ಮಾಡಿದ ಹಿನ್ನೆಲೆಯಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ರೇವಣ್ಣ ಕಣಕ್ಕಿಳಿದರು. ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದರು. 2004ರಿಂದ 2013ರವರೆಗೆ ರೇವಣ್ಣ ಗೆಲುವು ಪಡೆದಿದ್ದಾರೆ. ಅಂದಿನಿಂದ ಈ ಕ್ಷೇತ್ರ ಅವರ ಸ್ವಕ್ಷೇತ್ರವಾಗಿದೆ.

ರಾಜಕೀಯದಲ್ಲಿ ರೇವಣ್ಣ ಹೆಜ್ಜೆಗಳು

1994 ಜನತಾದಳ ಗೆಲುವು

1999 ಜನತಾ ದಳ ಸೋಲು

2004 ಜೆಡಿಎಸ್‌ ಗೆಲುವು

2008 ಜೆಡಿಎಸ್‌ ಗೆಲುವು

2013 ಜೆಡಿಎಸ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT