ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವರ್ಷಗಳಲ್ಲಿ 9 ಆನೆಗಳ ಸಾವು

ಶೆಟ್ಟಿಹಳ್ಳಿ ಅಭಯಾರಣ್ಯ ಪ್ರದೇಶದ ಸಕ್ರೆಬೈಲ್‌ ಆನೆ ಬಿಡಾರ l 1964ರಲ್ಲಿ ಸ್ಥಾಪನೆಯಾಗಿದ್ದ ಬಿಡಾರ
Last Updated 29 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಶೆಟ್ಟಿಹಳ್ಳಿ ಅಭಯಾರಣ್ಯ ಪ್ರದೇಶದ ಸಕ್ರೆಬೈಲು ಆನೆ ಬಿಡಾರದಲ್ಲಿ ಎರಡು ವರ್ಷಗಳ ಅವಧಿಯಲ್ಲಿ 9 ಆನೆಗಳು ಮೃತಪಟ್ಟಿವೆ.

ವಯೋಸಹಜ ಕಾರಣಕ್ಕೆ ಎರಡು ಆನೆಗಳು ಮೃತಪಟ್ಟಿದ್ದರೆ, ಸೋಂಕು, ಆರೋಗ್ಯ ಸಮಸ್ಯೆ, ಪರಸ್ಪರ ಕಾದಾಡಿಕೊಂಡು ಉಳಿದ ಆನೆಗಳು ಮೃತಪಟ್ಟಿವೆ. ಅವುಗಳಲ್ಲಿ ಮೂರು ಮರಿ ಆನೆಗಳು. ಸಾಕಾನೆಗಳಿಗೆ ಹುಟ್ಟಿದ ಮರಿ, ಕಾರ್ಯಾಚರಣೆಯಲ್ಲಿ ಸಿಕ್ಕ ಮರಿಗಳ ಮಧ್ಯೆ ಹಲವು ಬಾರಿ ಕಾದಾಟ
ನಡೆದಿವೆ.

ಪ್ರಸಕ್ತ ವರ್ಷವೇ 4 ಸಾವು ಕಂಡಿವೆ. ಬಿಡಾರದಲ್ಲಿ ಆಶ್ರಯ ಪಡೆದಿದ್ದ ಇಂದಿರಾ, ಕಪಿಲ ವಯೋಸಹಜವಾಗಿ ಮೃತಪಟ್ಟರೆ, ನ್ಯೂ ಟಸ್ಕರ್, ರಾಜೇಂದ್ರ, ಭೀಮ, ನಾಗಣ್ಣ ಯೌವನಾವಸ್ಥೆಯಲ್ಲಿ ಹಾಗೂ ಭಾರತಿ, ಶಾರದಾ, ಬಾಲಾಜಿ ಬಾಲ್ಯದಲ್ಲಿಯೇ ಅಸುನೀಗಿವೆ.

ಬಿಡಾರದ ಅಧಿಕಾರಿಗಳು, ವೈದ್ಯರು ಮತ್ತು ಮಾವುತರ ನಡುವೆ ಸಮನ್ವಯದ ಕೊರತೆ ಇದೆ. ಭಾವಜೀವಿಗಳಾದ ಆನೆಗಳೊಂದಿಗೆ ಒಡನಾಟ ಹೊಂದಿರುವ ಮಾವುತರ ಸಲಹೆ ಪಡೆಯದೇ ಇರುವುದು, ಅವುಗಳಿಗೆ ನೀಡುವ ಆಹಾರದಲ್ಲಿ ಪೌಷ್ಟಿಕ ಅಂಶಗಳ ಕೊರತೆ, ಸೋಂಕಿಗೆ ಕಾರಣವಾಗುವ ಅಂಶಗಳ ಬಗ್ಗೆ ಅಧಿಕಾರಿಗಳು ಗಮನ ಹರಿಸದೇ ಇರುವುದು ಆನೆಗಳ ಸಾವಿಗೆ ಕಾರಣ ಎಂದು ಹೆಸರು ಹೇಳಲು ಇಚ್ಛಿಸದ ಬಿಡಾರದ ಅಧಿಕಾರಿ ವಿಶ್ಲೇಷಿಸುತ್ತಾರೆ.

ಆನೆಗಳ ತರಬೇತಿಯ ಈ ಬಿಡಾರವನ್ನು 1964ರಲ್ಲಿ ಸ್ಥಾಪಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಕಾರ್ಯಾಚರಣೆ ವೇಳೆ ಸೆರೆ ಸಿಕ್ಕ ಹಾಗೂ ರೈತರು, ಜನರಿಗೆ ಉಪಟಳ ನೀಡುವ ಆನೆಗಳನ್ನು ಹಿಡಿದು ತಂದು ಇಲ್ಲಿ ಪಳಗಿಸಲಾಗುತ್ತದೆ. ಸೂಕ್ತ ತರಬೇತಿ ನೀಡಲಾಗುತ್ತದೆ. ಪ್ರತಿ ವರ್ಷ ಆನೆಗಳ ಉತ್ಸವ ಆಯೋಜಿಸಿ, ಆನೆಗಳಿಂದಲೇ ವಿವಿಧ ಕ್ರೀಡಾ ಚಟುವಟಿಕೆ ನಡೆಸಲಾಗುತ್ತದೆ. ನಿತ್ಯವೂ ಮುಂಜಾನೆ ಆನೆಗಳಿಗೆ ಮಾವುತರು ಸ್ನಾನ ಮಾಡಿಸುವ ದೃಶ್ಯ ನೋಡಲು ಪ್ರವಾಸಿಗರ ದಂಡೇ ಬರುತ್ತದೆ.

ಅತಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವಿಸಿ, ಕಡಿಮೆ ಪ್ರಮಾಣದಲ್ಲಿ ಜೀರ್ಣಿಸಿಕೊಳ್ಳುವ ಆನೆಗಳಿಗೆ ಸೂಕ್ತ ಆರೈಕೆ ಮುಖ್ಯ. ಆರೋಗ್ಯದಲ್ಲಿ ಸಣ್ಣ ಬದಲಾವಣೆಯಾದರೂ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಬಿಡಾರದಲ್ಲಿ ಪ್ರಸ್ತುತ ಇರುವ 24 ಆನೆಗಳ ರಕ್ಷಣೆಗಾದರೂ ಎಚ್ಚರಿಕೆ ವಹಿಸಬೇಕು ಎನ್ನುವುದು ವನ್ಯ ಪ್ರಾಣಿಪ್ರಿಯರ ಒತ್ತಾಯ.

‘ಬೇರೆ ಬೇರೆ ಕಾರಣಗಳಿಂದ ಬಿಡಾರದ ಆನೆಗಳು ಮೃತಪಟ್ಟಿವೆ. ಶುಕ್ರವಾರ ಮೃತಪಟ್ಟ ಆನೆ ನಾಗಣ್ಣನ ಸಾವಿಗೆ ಕರುಳು ಸೋಂಕು ಕಾರಣ ಇರಬಹುದು. ಮರಣೋತ್ತರ ವರದಿ ಬಂದ ನಂತರ ಖಚಿತವಾಗಲಿದೆ. ಬಿಡಾರದ ಆನೆಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡಿದ್ದೇವೆ’ ಎನ್ನುತ್ತಾರೆ ವನ್ಯಜೀವಿ ವಿಭಾಗದ ಡಿಎಫ್‌ಒ ಚಂದ್ರಶೇಖರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT