ಸೋಮವಾರ, ಮಾರ್ಚ್ 8, 2021
22 °C
ಅದಮ್ಯ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡ ಚುನಾಯಿತ ಜನಪ್ರತಿನಿಧಿ ಮತದಾರರು

ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ; ಶೇ 99.07 ಮತದಾನ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಬಿಜಾಪುರ ದ್ವಿಸದಸ್ಯ ವಿಧಾನ ಪರಿಷತ್‌ನ ತೆರವಾದ ಒಂದು ಕ್ಷೇತ್ರಕ್ಕೆ ಗುರುವಾರ ನಡೆದ ಉಪ ಚುನಾವಣೆಯಲ್ಲಿ ಶೇ 99.07ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 8187 ಮತದಾರರು ಮತದಾನದ ಹಕ್ಕು ಹೊಂದಿದ್ದು, ಇದರಲ್ಲಿ 3940 ಪುರುಷ ಮತದಾರರು, 4171 ಮಹಿಳಾ ಮತದಾರರು ಸೇರಿದಂತೆ ಒಟ್ಟು 8111 ಮಂದಿ ತಮ್ಮ ಹಕ್ಕು ಚಲಾಯಿಸಿರುವುದು ವಿಶೇಷ.

ಈ ಹಿಂದಿನ ಚುನಾವಣೆಯ ಮತದಾನದ ಪ್ರಮಾಣ ಗಮನಿಸಿದರೆ, ಈ ಬಾರಿ ಕೊಂಚ ಕಡಿಮೆಯಾಗಿರುವುದು ಚುನಾವಣಾ ಆಯೋಗದ ಅಂಕಿ–ಅಂಶಗಳಲ್ಲಿ ದಾಖಲಾಗಿದೆ. 2015ರ ಡಿಸೆಂಬರ್‌ 27ರಂದು ನಡೆದಿದ್ದ ಚುನಾವಣೆಯಲ್ಲಿ ಶೇ 99.80ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. 8086 ಮತದಾರರಲ್ಲಿ 8070 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಬೆಳಿಗ್ಗೆ 8ಕ್ಕೆ ಮತದಾನ ಪ್ರಕ್ರಿಯೆ ಆರಂಭಗೊಂಡಿತು. 10 ಗಂಟೆಯೊಳಗೆ ಅಷ್ಟೇನು ಬಿರುಸು ಪಡೆದಿರಲಿಲ್ಲ. ಕೇವಲ ಶೇ 9.16ರಷ್ಟು ಮತದಾನವಾಗಿತ್ತು. ನಂತರ ಮತ ಚಲಾವಣೆ ತೀವ್ರಗೊಂಡಿತು. ತಂಡೋಪ ತಂಡವಾಗಿ 38 ಮತಗಟ್ಟೆಗಳಿಗೂ ಗ್ರಾಮ ಪಂಚಾಯ್ತಿ ಸದಸ್ಯರು ವಾಹನಗಳಲ್ಲಿ ಬಂದು ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತರು. ಇದರ ಪರಿಣಾಮ ಮತದಾನದ ಶೇಕಡಾವಾರು ಪ್ರಮಾಣವೂ ಹೆಚ್ಚಿತು. ಮಧ್ಯಾಹ್ನ 12ರೊಳಗೆ ಶೇ 55.40ರಷ್ಟು ಮತ ಚಲಾವಣೆಗೊಂಡಿದ್ದವು.

ಹೋಬಳಿ ಕೇಂದ್ರಗಳಲ್ಲಿ ಮತಗಟ್ಟೆ ಸ್ಥಾಪಿಸಿದ್ದರಿಂದ ತಮ್ಮೂರುಗಳಿಂದ ಗ್ರಾಮ ಪಂಚಾಯ್ತಿ ಸದಸ್ಯರು ಒಟ್ಟಾಗಿ ಮತದಾನಕ್ಕೆ ಬರುವುದು ಸ್ವಲ್ಪ ತಡವಾಗಿತ್ತು. ಬೆಳಿಗ್ಗೆ 10ರ ಬಳಿಕ ಚುರುಕುಗೊಂಡ ಮತದಾನ ಪ್ರಕ್ರಿಯೆ ಮಧ್ಯಾಹ್ನ 2ರೊಳಗೆ ಬಹುತೇಕ ಪೂರ್ಣಗೊಂಡಿತ್ತು. ಈ ಅವಧಿಯಲ್ಲಿ ಶೇ 90.84ರಷ್ಟು ಮತಗಳು ಚಲಾವಣೆಗೊಂಡಿದ್ದು ವಿಶೇಷ.

ಮತದಾನಕ್ಕೆ ನಿಗದಿ ಪಡಿಸಿದ್ದ ಸಂಜೆ 4ರೊಳಗೆ ಶೇ 99.07ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 0.93ರಷ್ಟು ಮತದಾರರು ಮಾತ್ರ ಮತದಾನದಲ್ಲಿ ಭಾಗಿಯಾಗಿಲ್ಲ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಉತ್ಸಾಹ

ಅವಳಿ ಜಿಲ್ಲೆಯ ಶಾಸಕರು, ಸಂಸದರು ಉತ್ಸಾಹದಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ವಿಜಯಪುರ ಜಿಲ್ಲಾ ಪಂಚಾಯ್ತಿ ಕಚೇರಿ ಮುಂಭಾಗ ಬಿಜೆಪಿಗರ ದಂಡೇ ನೆರೆದಿತ್ತು. ಮುಂಜಾನೆ ಎಂ.ಬಿ.ಪಾಟೀಲ ಮತ ಚಲಾಯಿಸಲು ಮತಗಟ್ಟೆಗೆ ಬಂದ ಸಂದರ್ಭವಷ್ಟೇ ಕಾಂಗ್ರೆಸ್ಸಿಗರ ಪಾರಮ್ಯವಿತ್ತು. ನಂತರ ಬಿಜೆಪಿ ಮುಖಂಡರೇ ಸ್ಥಳದಲ್ಲಿ ಠಿಕಾಣಿ ಹೂಡಿ, ಅಂತಿಮ ಕ್ಷಣದಲ್ಲೂ ಮತದಾರರ ಮನವೊಲಿಸುವ ಕಸರತ್ತು ನಡೆಸಿದರು.

ಆರಂಭದಲ್ಲಿ ಮತಗಟ್ಟೆಯೊಳಗೆ ಮತ ಚಲಾಯಿಸುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲು ಅವಕಾಶ ನೀಡಿದ್ದ ಮತಗಟ್ಟೆ ಅಧಿಕಾರಿಗಳು, ಶಾಸಕರ ಮತ ಚಲಾವಣೆ ಬಳಿಕ ಉಳಿದವರಿಗೆ ಈ ಅವಕಾಶವನ್ನೇ ಕೊಡಲಿಲ್ಲ. ಮತಗಟ್ಟೆ ಕೊಠಡಿಯೊಳಗೆ ಪ್ರವೇಶಿಸುವ ಮುನ್ನವೇ ಪ್ರವೇಶದ್ವಾರದಲ್ಲೇ ಪೊಲೀಸರು ಮೊಬೈಲ್‌ ಹೊರಗಿಡಿಸಿದರು. ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರೂ ಅವಕಾಶ ನೀಡಲಿಲ್ಲ. ಅನಿವಾರ್ಯವಾಗಿ ಮತದಾರರು ಒಟ್ಟಾಗಿ ತಮ್ಮ ಪರಿಚಿತರಿಗೆ ಮೊಬೈಲ್‌ಕೊಟ್ಟು ಮತಗಟ್ಟೆ ಪ್ರವೇಶಿಸಿದರು.

ಮತ ಚಲಾಯಿಸದ ಸಚಿವರು..!

ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಅವಳಿ ಜಿಲ್ಲೆಯ ಉಸ್ತುವಾರಿ ಸಚಿವರು ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುವುದರಿಂದ ವಂಚಿತರಾದರು.

ಸಿದ್ದರಾಮಯ್ಯ ವಿದೇಶ ಪ್ರವಾಸದಲ್ಲಿರುವುದರಿಂದ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಇದೇ ರೀತಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ, ಸಿಂದಗಿ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಜೆಡಿಎಸ್‌ ಶಾಸಕ ಎಂ.ಸಿ.ಮನಗೂಳಿ ಇಸ್ರೇಲ್‌ ಪ್ರವಾಸದಲ್ಲಿರುವುದರಿಂದ ಮತ ಚಲಾಯಿಸಿಲ್ಲ.

ಬಸವನಬಾಗೇವಾಡಿ ಶಾಸಕ, ನೆರೆಯ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಎಸ್‌.ಪಾಟೀಲ ಸಹ ಮತ ಚಲಾಯಿಸಿಲ್ಲ. ಸಚಿವ ಸಂಪುಟದ ತುರ್ತು ಸಭೆಯಿದ್ದುದರಿಂದ ಮತದಾನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ಸಚಿವರ ಆಪ್ತ ವಲಯ ಸ್ಪಷ್ಟಪಡಿಸಿದೆ.

ಗಂಡ್‌ ಹಡೆಯಲಿಲ್ಲ; ನಮ್ಗ ತಲುಪಿಲ್ಲ..!

‘ಮೊದಲಿನಿಂದಲೂ ನಾವು ಗಂಡ್‌ ಹಡೆಯುತ್ತೇವೆ ಎಂದು ಹೇಳಿಕೊಂಡೇ ಎಲ್ಲೆಡೆ ಪ್ರಚಾರ ನಡೆಸಿದ್ದೆವು. ಅದರಂತೆ ಮತದಾರರು ಉತ್ಸುಕರಾಗಿದ್ದರು. ಆದರೆ ಗಂಡ್‌ ಹಡೆಯಲೇ ಇಲ್ಲಾ..!’ ಇದು ವಿಜಯಪುರ ಮಹಾನಗರ ಪಾಲಿಕೆಯ ಕಾಂಗ್ರೆಸ್‌ ಸದಸ್ಯರ ಮಾರ್ಮಿಕ ನುಡಿ.

‘ಮತದಾನಕ್ಕೂ ಮುನ್ನವೇ ಅರ್ಧ ತೊಲಿ ಬಂಗಾರ ಕೊಡ್ತೀವಿ ಅಂಥ ಹೇಳಿದ್ವೀ. ಆದರೆ ಕೊನೆ ಕ್ಷಣದಲ್ಲಿ ಈ ಯೋಜನೆ ಕೈಬಿಟ್ಟು, ಬರಿ ದುಡ್ಡು ಕೊಟ್ವಿ’ ಎಂದು ಅವರೇ ತಮ್ಮ ಮಾತಿನ ಮಾರ್ಮಿಕತೆಯನ್ನು ಬಿಚ್ಚಿಟ್ಟರು.

‘ಇಂಡಿ ತಾಲ್ಲೂಕಿನ ತಾಂಬಾ ಸೇರಿದಂತೆ ವಿವಿಧೆಡೆ, ವಿಜಯಪುರ ತಾಲ್ಲೂಕಿನ ನಾಗಠಾಣ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೂ ಬಿಜೆಪಿ ಅಭ್ಯರ್ಥಿಯ ಹಣ ನಮ್ಗೆ ತಲುಪಿಲ್ಲ. ಕಾಂಗ್ರೆಸದ್ದು ಮಾತ್ರ ತಲುಪಿದೆ’ ಎಂಬ ಅಸಮಾಧಾನದ ನುಡಿಯೂ ಕೇಳಿ ಬಂತು.

ಅನುಮತಿ ಕೊಟ್ರೇ ಹೋಗ್ತೀನಿ...

ವಿಜಯಪುರ ಜಿ.ಪಂ. ಕಚೇರಿಯಲ್ಲಿದ್ದ ಮತಗಟ್ಟೆಗೆ ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ಜತೆ ಬಂದ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಸರತಿ ಸಾಲಿನಲ್ಲಿ ನಿಂತರು. ಈ ಸಂದರ್ಭ ತಮಗಿಂತ ಮುಂದಿದ್ದ ಗ್ರಾಮ ಪಂಚಾಯ್ತಿ ಸದಸ್ಯರನ್ನುದ್ದೇಶಿಸಿ ‘ಊರಿಗೆ ಹೋಗ್ಬೇಕಿದೆ. ನೀವ್ ಅನುಮತಿ ಕೊಟ್ರೇ ಮಾತ್ರ ಒಳಗೋಗಿ ಒಂದು ಮತ ಹಾಕಿ ಹೋಗ್ತೀನಿ’ ಎಂದು ವಿನಂತಿಸಿಕೊಂಡರು. ಇದಕ್ಕೆ ಪಾಳಿಯಲ್ಲಿದ್ದ ಮತದಾರರು ಅವಕಾಶ ಮಾಡಿಕೊಟ್ರು.

ಮತ ಚಲಾಯಿಸಿದ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಜಿಗಜಿಣಗಿ, ‘ನಾನು ನಮ್ಮ ಶಹಾಪುರ ಒಟ್ಟಿಗೆ ಹೋಗಿ ನಮ್ಮ ಅಭ್ಯರ್ಥಿ ಗೂಳಪ್ಪಣ್ಣಗೆ ವೋಟ್‌ ಹಾಕಿವಿ’ ಎಂದು ಹೇಳಿದರು.

ಮತಗಟ್ಟೆಗೆ ತಂಡೋಪ ತಂಡವಾಗಿ ಆಯಾ ಗ್ರಾಮ ಪಂಚಾಯ್ತಿ ಸದಸ್ಯರನ್ನು ಒಟ್ಟಿಗೆ ಕರೆ ತಂದಿದ್ದ ಆಯಾ ಪಂಚಾಯ್ತಿ ಮುಖಂಡರು, ಕೊನೆ ಕ್ಷಣದಲ್ಲೂ ಯಾರಿಗೆ ಮತ ಹಾಕಬೇಕು ಎಂದು ನಿರ್ದೇಶನ ನೀಡುತ್ತಿದ್ದುದು ಗೋಚರಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.