‘ಕುಶಲಕರ್ಮಿಗಳಿಗೆ ಮುಂದೆ ಬೇಡಿಕೆ ಹೆಚ್ಚು’

7
ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ ಘಟಿಕೋತ್ಸವ ಕಾರ್ಯಕ್ರಮ

‘ಕುಶಲಕರ್ಮಿಗಳಿಗೆ ಮುಂದೆ ಬೇಡಿಕೆ ಹೆಚ್ಚು’

Published:
Updated:
Deccan Herald

ಬಿಡದಿ (ರಾಮನಗರ): ‘ಹೊರ ದೇಶಗಳಲ್ಲಿ ಕುಶಲಕರ್ಮಿಗಳಿಗೆ ಅವರದ್ದೇ ಆದ ಗೌರವ, ಬೇಡಿಕೆ ಇದೆ. ದೇಶದಲ್ಲಿಯೂ ಇದನ್ನು ರೂಢಿಗೆ ತರುವ ಸಲುವಾಗಿ ಕೇಂದ್ರ ಸರ್ಕಾರವು ಕೌಶಲ ವಿಕಾಸ ಮಿಶನ್‌ ಅನ್ನು ಜಾರಿಗೊಳಿಸಿದೆ ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಕೆ.ಟಿ. ಕೃಷ್ಣನ್‌ ಹೇಳಿದರು.

ಇಲ್ಲಿನ ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ ಬುಧವಾರ 2015–18ನೇ ವರ್ಷದ ವಿದ್ಯಾರ್ಥಿಗಳ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದೆ ಓದಿನಲ್ಲಿ ಹಿಂದುಳಿದವರು ಮಾತ್ರ ಐಟಿಐ, ಡಿಪ್ಲೊಮಾ ಮೊದಲಾದ ತಾಂತ್ರಿಕ ಕೋರ್ಸುಗಳಿಗೆ ಪ್ರವೇಶ ಪಡೆಯುತ್ತಿದ್ದರು. ಇಂದು ಪರಿಸ್ಥಿತಿ ಬದಲಾಗಿದೆ. ಕೇಂದ್ರ ಸರ್ಕಾರವು ಕೌಶಲಾಭಿವೃದ್ಧಿಗೆಂದೇ 2014ರಲ್ಲಿ ಪ್ರತ್ಯೇಕ ಸಚಿವಾಲಯ ತೆರೆದಿದ್ದು, ಮೇಕ್‌ ಇನ್‌ ಇಂಡಿಯಾದಂತಹ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ವಿವರಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಒಮ್ಮೆ ಕೌಶಲಾಭಿವೃದ್ಧಿ ಇಲಾಖೆಯ ಸಚಿವರು, ಅಧಿಕಾರಿಗಳನ್ನು ಒಳಗೊಂಡ ಸಭೆ ಕರೆದಿದ್ದರು. ಅಲ್ಲಿ ಅವರು ಕೇಳಿದ ಒಂದೇ ಪ್ರಶ್ನೆ ಎಂದರೆ ‘ಐಟಿಐನ ಘಟಿಕೋತ್ಸವಗಳಲ್ಲಿ ನಿಮ್ಮಲ್ಲಿ ಎಷ್ಟು ಜನ ಪಾಲ್ಗೊಂಡಿದ್ದೀರಿ’ ಎಂದು. ನಮಗೆಲ್ಲ ಐಐಟಿ ಘಟಿಕೋತ್ಸವಗಳಲ್ಲಿ ಪಾಲ್ಗೊಂಡ ಅನುಭವವಿತ್ತು. ಆದರೆ ಐಟಿಐಗಳಿಗೆ ಹೋಗಿರಲಿಲ್ಲ. ಅವರು ಕೇಳಿದಂದಿನಿಂದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದೇನೆ. ಸರ್ಕಾರವು ತಳ ಹಂತದಿಂದಲೇ ಕೌಶಲ ಶಿಕ್ಷಣ ಬಲವರ್ಧನೆಗೆ ಬದ್ಧವಾಗಿದೆ’ ಎಂದರು. ವಿದ್ಯಾರ್ಥಿಗಳು ತಮ್ಮ ಕೌಶಲ, ಕಲಿಕೆಯ ಗುಣಮಟ್ಟ ಹಾಗೂ ಮಹತ್ವಾಕಾಂಕ್ಷೆಯ ಗುರಿ ಸಾಧನೆಗೆ ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.

ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಚಿತೊ ತಾಕಿಬಾನ ಮಾತನಾಡಿ , ಪ್ರಧಾನ ಮಂತ್ರಿಗಳ ಕೌಶಲ ಭಾರತ ಹಾಗೂ ಮೇಕ್‌ ಇನ್‌ ಇಂಡಿಯಾ ಕನಸು ನನಸು ಮಾಡಲು ಶ್ರಮಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

‘ಏಕಾಗ್ರತೆ, ಜ್ಞಾನ ಮತ್ತು ಕೌಶಲ ಸಂಪಾದನೆಯಿಂದ ಏನನ್ನಾದರೂ ಸಾಧಿಸಬಹುದು. ತರಬೇತಿ ಮುಗಿಸಿದ ನಂತರ ನಿಮಗೆ ನಿಜವಾದ ಸವಾಲು ಎದುರಾಗುತ್ತದೆ. ನಿಮ್ಮ ಸ್ವಸಾಮರ್ಥ್ಯದಿಂದ ಮುನ್ನಡೆದಲ್ಲಿ ಉತ್ತಮ ಬದುಕು ರೂಪಿಸಿಕೊಳ್ಳಬಹುದು’ ಎಂದರು.

ಮೂರು ವರ್ಷ ಅವಧಿಯ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಲಾಯಿತು. ಬೆಂಗಳೂರಿನಲ್ಲಿನ ಜಪಾನ್‌ ರಾಯಬಾರಿ ಕಚೇರಿಯ ಪ್ರತಿನಿಧಿ ಟಿ. ಕಿತಗಾವ, ಟಿಕೆಎಂ ಕಂಪನಿಯ ಉಪಾಧ್ಯಕ್ಷರಾದ ಶೇಖರ್ ವಿಶ್ವನಾಥನ್‌, ಶೈಲೇಶ್‌ ಶೆಟ್ಟಿ, ವಿದ್ಯಾರ್ಥಿಗಳ ಪೋಷಕರು ಇದ್ದರು.

ಓದಿನಲ್ಲಿ ಹಿಂದುಳಿದವರಿಗೆ ಮಾತ್ರ ತಾಂತ್ರಿಕ ತರಬೇತಿ ಎಂಬ ಮನೋಭಾವ ಈಗ ಬದಲಾಗುತ್ತಿದೆ. ಕುಶಲಕರ್ಮಿಗಳಿಗೆ ಮುಂದೆ ಒಳ್ಳೆಯ ಅವಕಾಶ ಸಿಗಲಿದೆ
- ಕೆ.ಟಿ. ಕೃಷ್ಣನ್‌, ಕಾರ್ಯದರ್ಶಿ, ಕೇಂದ್ರ ಕೌಶಲಾಭಿವೃದ್ಧಿ ಸಚಿವಾಲಯ

3 - ತರಬೇತಿ ಅವಧಿಯ ವರ್ಷಗಳು
9 - ಟಿಟಿಟಿಐನಲ್ಲಿ ಈವರೆಗೆ ತರಬೇತಿ ಪಡೆದ ಒಟ್ಟು ಬ್ಯಾಚ್‌ಗಳು
52 - ಬುಧವಾರ ಘಟಿಕೋತ್ಸವದಲ್ಲಿ ಪದವಿ ಪಡೆದ ಒಂಭತ್ತನೇ ಬ್ಯಾಚ್‌ನ ವಿದ್ಯಾರ್ಥಿಗಳು
531 - ಟಿಟಿಟಿಐನಲ್ಲಿ ಈವರೆಗೆ ತರಬೇತಿ ಪಡೆದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !