ಗುರುವಾರ , ನವೆಂಬರ್ 21, 2019
27 °C
ತಂತ್ರಾಂಶ ಬಳಕೆ ನೆಪದಲ್ಲಿ ವಿದ್ಯಾರ್ಥಿಗಳ ಹಣ ಲೂಟಿಯ ಆರೋಪ

ದುಬಾರಿ ಹಣ ಖಂಡಿಸಿ ಎಬಿವಿಪಿ ಪ್ರತಿಭಟನೆ

Published:
Updated:
Prajavani

ವಿಜಯಪುರ: ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಎಲೆಕ್ಟ್ರಾನಿಕ್ ಡಾಕ್ಯುಮೆಂಟ್ ಜನರೇಷನ್‌ ಸಿಸ್ಟ್‌ಂ (ಇಡಿಜಿಎಸ್‌) ತಂತ್ರಾಂಶ ಬಳಕೆ ನೆಪದಲ್ಲಿ ವಿದ್ಯಾರ್ಥಿಗಳ ಹಣವನ್ನು ಲೂಟಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಕಾರ್ಯಕರ್ತರು ಹಾಗೂ ಕಾಲೇಜು ವಿದ್ಯಾರ್ಥಿಗಳು ನಗರದ ಗಾಂಧಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ಮಾಡಿದರು.

ಎಬಿವಿಪಿ ವಿಭಾಗ ಸಂಚಾಲಕ ಸಚಿನ್ ಕುಳಗೇರಿ ಮಾತನಾಡಿ, ‘ಶಿಕ್ಷಣವು ಸರ್ವರಿಗೆ ಸಿಗಬೇಕು, ಅದು ಮಾರಾಟದ ವಸ್ತುವಲ್ಲ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಹೀಗಿರುವಾಗ ಸರ್ಕಾರವು ವಿದ್ಯಾರ್ಥಿಗಳ ಅಂಕ ಪಟ್ಟಿಯಿಂದ ಹಣ ಮಾಡಲು ಮುಂದಾಗಿರುವುದನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ’ ಎಂದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸೇರಿದಂತೆ ಉನ್ನತ ಶಿಕ್ಷಣ ಇಲಾಖೆಯ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಅಂಕಪಟ್ಟಿ ತಯಾರಿಸುವ ವ್ಯವಸ್ಥೆ ಇದೆಯೇ ಅಥವಾ ಮತ್ತೊಂದು ಸಂಸ್ಥೆಗೆ ತಯಾರಿಕೆಯನ್ನು ಹೊರಗುತ್ತಿಗೆ ನೀಡಲಾಗಿದೆಯೇ ಎಂಬುದನ್ನು ತಿಳಿಸಬೇಕು’ ಎಂದು ಆಗ್ರಹಿಸಿದರು.

ತಾಲ್ಲೂಕು ಸಂಚಾಲಕ ನಿಂಗಣ್ಣ ಮನಗೂಳಿ ಮಾತನಾಡಿ, ವಿಶ್ವವಿದ್ಯಾಲಯಗಳಲ್ಲಿ ತಂತ್ರಜ್ಞಾನದ ಬಳಕೆಯನ್ನು ಎಬಿವಿಪಿ ಸ್ವಾಗತಿಸುತ್ತದೆ. ಆದರೆ, ಇದರ ಹೆಸರಿನಲ್ಲಿ ಪ್ರತಿ ಅಂಕಪಟ್ಟಿಗೆ ₹156 ಪಡೆಯುತ್ತಿರುವುದನ್ನು ಖಂಡಿಸುತ್ತದೆ’ ಎಂದು ಹೇಳಿದರು.

ನಗರ ಕಾರ್ಯದರ್ಶಿ ಐಶ್ವರ್ಯ ಕುಲಕರ್ಣಿ ಮಾತನಾಡಿದರು. ತಾಲ್ಲೂಕು ಸಹ ಸಂಚಾಲಕ ವಿನೋದ ಮಣ್ಣೊಡ್ಡರ, ಬಸವರಾಜ ವಾಲೀಕಾರ, ಚೇತನ ಮಠ, ಮಾಳವಿಕಾ ಗುಗ್ಗರಿ, ಕಾವೇರಿ ಪ್ಯಾಟಿ, ಅಕ್ಷಯ ಯಾದವಾಡ, ಸಿದ್ದು ಪತ್ತಾರ, ಮಹಾಂತೇಶ ಕಂಬಾರ, ಸಂತೋಷ ದೊಡಮನಿ, ನಿತಿನ್ ಸೊಲ್ಲಾಪುರ, ಶ್ರೀಶೈಲ ಬಿರಾದಾರ, ಸಿದ್ದು ಉಪ್ಪಾರ, ಕಾಂತೇಶ, ಪ್ರಮೋದ ಪಾಟೀಲ, ಸಚಿನ್ ಚವ್ಹಾಣ ಇದ್ದರು.

ಪ್ರತಿಕ್ರಿಯಿಸಿ (+)